Sooryavanshi: ಅರೇ! ಸೂರ್ಯವಂಶಿ ಚಿತ್ರದಲ್ಲಿ ಧೋನಿ ನಟಿಸಿದ್ದಾರಾ?; ಫ್ಯಾನ್ಸ್ ತಲೆಗೆ ಹುಳಬಿಟ್ಟ ಆ ಒಂದು ಪೋಸ್ಟ್ | Gulshan Grover shares a image with MS Dhoni from Suryavamshi sets and fans are questioned about Dhoni presence in movie


Sooryavanshi: ಅರೇ! ಸೂರ್ಯವಂಶಿ ಚಿತ್ರದಲ್ಲಿ ಧೋನಿ ನಟಿಸಿದ್ದಾರಾ?; ಫ್ಯಾನ್ಸ್ ತಲೆಗೆ ಹುಳಬಿಟ್ಟ ಆ ಒಂದು ಪೋಸ್ಟ್

ಗುಲ್ಷನ್ ಗ್ರೋವರ್ ಜೊತೆಯಲ್ಲಿ ಎಂಎಸ್ ಧೋನಿ

ಅಕ್ಷಯ್ ಕುಮಾರ್ ಹಾಗೂ ಕತ್ರಿನಾ ಕೈಫ್ ನಟನೆಯ ‘ಸೂರ್ಯವಂಶಿ’ ಚಿತ್ರ ಈಗಾಗಲೇ ಕುತೂಹಲ ಮೂಡಿಸಿದ್ದು, ನಾಳೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ರೋಹಿತ್ ಶೆಟ್ಟಿ ನಿರ್ದೇಶನದ ಈ ಚಿತ್ರ ಅವರ ಪೊಲೀಸ್ ಸರಣಿಯ ಮೂರನೇ ಚಿತ್ರವಾಗಿದೆ. ವಿಶೇಷವೆಂದರೆ ಈ ಚಿತ್ರದಲ್ಲಿ ರಣವೀರ್ ಸಿಂಗ್ ಹಾಗೂ ಅಜಯ್ ದೇವಗನ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಕುರಿತು ಬಹುದೊಡ್ಡ ನಿರೀಕ್ಷೆ ಸೃಷ್ಟಿಯಾಗಿದ್ದು, ಅಕ್ಷಯ್ ಕುಮಾರ್ ಹಾಗೂ ಕತ್ರೀನಾ ಕೈಫ್ ಕಾಂಬಿನೇಷನ್ ಹೇಗೆ ತೆರೆಯ ಮೇಲೆ ಬಂದಿರಬಹುದು ಎಂಬ ಕುತೂಹಲ ಚಿತ್ರಪ್ರೇಮಿಗಳಲ್ಲಿದೆ. ಇದೀಗ ಈ ಕುತೂಹಲಕ್ಕೆ ಇಂಬುಕೊಡುವಂತಹ ಸುದ್ದಿಯೊಂದು ಬಾಲಿವುಡ್ ಅಂಗಳದಿಂದ ಬಂದಿದೆ. ಖ್ಯಾತ ಕ್ರಿಕೆಟಿಗ ಎಂಎಸ್ ಧೋನಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆಯೇ ಎಂಬ ಪ್ರಶ್ನೆಯೊಂದು ಈಗ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಬಾಲಿವುಡ್​ನ ಖ್ಯಾತ ನಟರಲ್ಲಿ ಒಬ್ಬರಾಗಿರುವ ಗುಲ್ಷನ್ ಗ್ರೋವರ್ ಟ್ವಿಟರ್​​ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಇಷ್ಟೆಲ್ಲಾ ಕುತೂಹಲ ಮೂಡಲು ಕಾರಣವಾಗಿದೆ. ‘ಸೂರ್ಯವಂಶಿ’ ಸೆಟ್​ನಲ್ಲಿ ಮಹೇಂದ್ರ ಸಿಂಗ್ ಧೋನಿಯೊಂದಿಗೆ ಗುಲ್ಷನ್ ಗ್ರೋವರ್ ಭರ್ಜರಿ ಪೋಸ್ ನೀಡಿರುವ ಚಿತ್ರವನ್ನು ಗುಲ್ಷನ್ ಗ್ರೋವರ್ ಹಂಚಿಕೊಂಡಿದ್ದಾರೆ. ಇಷ್ಟೇ ಇದ್ದರೆ ಅಭಿಮಾನಿಗಳಿಗೆ ಕುತೂಹಲ ಹುಟ್ಟುಹಾಕುತ್ತಿತ್ತೋ ಇಲ್ಲವೋ.. ಆದರೆ ಗುಲ್ಷನ್ ಫೊಟೋಗೆ ಕ್ಯಾಪ್ಶನ್ ನೀಡಿದ್ದು ಅದರಲ್ಲಿ, ‘‘ಸೂರ್ಯವಂಶಿ ಸೆಟ್​ನಲ್ಲಿ ಸೋದರ ಧೋನಿಯೊಂದಿಗೆ. ಏನು? ಧೋನಿ ಚಿತ್ರದಲ್ಲಿ ನಟಿಸುತ್ತಿದ್ದಾರಾ ಅಥವಾ ನಮ್ಮದೇ ಸ್ಟುಡಿಯೋದಲ್ಲಿ ಚಿತ್ರೀಕರಣದಲ್ಲಿದ್ದಾರಾ?’ ಎಂದು ಬರೆದಿದ್ದಾರೆ. ಇದಕ್ಕೆ ಅಕ್ಷಯ್ ಕುಮಾರ್ ಅವರನ್ನೂ ಟ್ಯಾಗ್ ಮಾಡಲಾಗಿದೆ.

ಗುಲ್ಷನ್ ಗ್ರೋವರ್ ಹಂಚಿಕೊಂಡಿರುವ ಟ್ವೀಟ್ ಇಲ್ಲಿದೆ:

ಫೊಟೋದಲ್ಲಿ ಗುಲ್ಷನ್ ಚಿತ್ರದಲ್ಲಿರುವ ತಮ್ಮ ಪಾತ್ರದ ದಿರಿಸಿಲ್ಲಿದ್ದು, ಧೋನಿ ಮಾಮೂಲಿ ದಿರಿಸಿನಲ್ಲಿದ್ದಾರೆ. ಅದಾಗ್ಯೂ ಅಭಿಮಾನಿಗಳಿಗೆ ಈ ಪೋಸ್ಟ್ ಕುತೂಹಲ ಮೂಡಿಸಿದ್ದು, ಧೋನಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರಬಹುದೇ ಎಂಬ ಅನುಮಾನ ಮೂಡಿದೆ. ಪೋಸ್ಟ್​ಗೆ ನೆಟ್ಟಿಗರು ವಿಧವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದು, ಧೋನಿ ತಮ್ಮದೇ ಶೈಲಿಯಲ್ಲಿ ಸೂರ್ಯವಂಶಿ ಮುಗಿಸುತ್ತಾರೆ ಎಂದು ಓರ್ವರು ತಮಾಷೆಯಾಗಿ ಬರೆದಿದ್ಧಾರೆ. ಹಲವರು ಧೋನಿ ಅದೇ ಸ್ಟುಡಿಯೋದಲ್ಲಿ ಜಾಹಿರಾತೊಂದರ ಚಿತ್ರೀಕರಣದಲ್ಲಿ ಭಾಗಿಯಾಗಿರಬಹುದು ಎಂದು ಊಹಿಸಿದ್ದಾರೆ. ಎಲ್ಲರ ಪ್ರಶ್ನೆಗಳಿಗೆ ನಾಳೆ (ನವೆಂಬರ್ 5) ಚಿತ್ರದ ಬಿಡುಗಡೆಯ ಮುಖಾಂತರ ಉತ್ತರ ದೊರೆಯಲಿದೆ.

ಅಕ್ಷಯ್ ಕುಮಾರ್ ಈ ಚಿತ್ರದಲ್ಲಿ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಮಾರ್ಚ್​ನಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಬಿಡುಗಡೆ ತಡವಾಗಿತ್ತು. ಇದೀಗ ಈ ವಾರ ತೆರೆಗೆ ಬರುತ್ತಿದೆ.

ಇದನ್ನೂ ಓದಿ:

ಪುನೀತ್ ಅವರಿಗಿದ್ದಷ್ಟು ಪುಟಾಣಿ ಅಭಿಮಾನಿಗಳು ಭಾರತದ ಬೇರೆ ಯಾವುದೇ ನಟನಿಗೆ ಇರಲಿಕಿಲ್ಲ!

ಕೋಳಿ ವರ್ಷಕ್ಕೆ ಎಷ್ಟು ಮೊಟ್ಟೆ ಇಡುತ್ತದೆ ನಿಮಗೆ ಗೊತ್ತೇ? ಇಲ್ಲಿದೆ ಕುತೂಹಲಕಾರಿ ಮಾಹಿತಿ

TV9 Kannada


Leave a Reply

Your email address will not be published. Required fields are marked *