Sooryavanshi: ಬಾಕ್ಸಾಫೀಸ್​ನಲ್ಲಿ ಬಂಪರ್ ಬೆಳೆ ತೆಗೆಯುತ್ತಿರುವ ಅಕ್ಷಯ್ ನಟನೆಯ ಸೂರ್ಯವಂಶಿ; 2ನೇ ದಿನದ ಗಳಿಕೆಯೆಷ್ಟು? | Akshay Kumar and Katrina Kaif starring Sooryavanshi collects 24 crore on second day


Sooryavanshi: ಬಾಕ್ಸಾಫೀಸ್​ನಲ್ಲಿ ಬಂಪರ್ ಬೆಳೆ ತೆಗೆಯುತ್ತಿರುವ ಅಕ್ಷಯ್ ನಟನೆಯ ಸೂರ್ಯವಂಶಿ; 2ನೇ ದಿನದ ಗಳಿಕೆಯೆಷ್ಟು?

‘ಸೂರ್ಯವಂಶಿ’ ಚಿತ್ರದ ಪೋಸ್ಟರ್

ಅಕ್ಷಯ್ ಕುಮಾರ್ ಹಾಗೂ ಕತ್ರೀನಾ ಕೈಫ್ ನಟನೆಯ ‘ಸೂರ್ಯವಂಶಿ’ ಚಿತ್ರ ಬಾಕ್ಸಾಫೀಸ್​ನಲ್ಲಿ ಉತ್ತಮ ಗಳಿಕೆ ಮಾಡಿ ಮುನ್ನುಗ್ಗುತ್ತಿದೆ. ಮೊದಲ ದಿನಕ್ಕಿಂತ ಎರಡನೇ ದಿನದ ಗಳಿಕೆಯಲ್ಲಿ ತುಸು ಇಳಿಕೆ ಕಂಡುಬಂದಿದ್ದರೂ ಕೂಡ, ಒಟ್ಟಾರೆ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದು, ಚಿತ್ರತಂಡಕ್ಕೆ ಸಮಾಧಾನ ಮೂಡಿಸಿದೆ. ಚಿತ್ರವು ನವೆಂಬರ್ 5ರಂದು ಬಿಡುಗಡೆಯಾಗಿತ್ತು. ಮೊದಲ ದಿನದಂದು ಪ್ರೇಕ್ಷಕರು ಚಿತ್ರಕ್ಕೆ ಬಹುಪರಾಕ್ ಎಂದಿದ್ದು, ₹ 26.29 ಕೋಟಿ ಗಳಿಸಿತ್ತು. ಎರಡನೇ ದಿನ ಹಬ್ಬವಿದ್ದ ಕಾರಣ, ಪ್ರೇಕ್ಷಕರು ಅಷ್ಟಾಗಿ ಚಿತ್ರಮಂದಿರಕ್ಕೆ ಆಗಮಿಸಿರಲಿಲ್ಲ. ಅದಾಗ್ಯೂ ಚಿತ್ರವು ₹ 24.50 ಕೋಟಿ ಗಳಿಕೆ ಮಾಡಿದೆ. ಇದರೊಂದಿಗೆ ವೀಕೆಂಡ್ ಕೂಡ ಇರುವುದರಿಂದ ಇಂದು ಕೂಡ ಚಿತ್ರವು ಉತ್ತಮವಾಗಿ ಗಳಿಸಲಿದೆ ಎಂದು ಬಾಕ್ಸಾಫೀಸ್ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ.

ಮೆಟ್ರೋ ನಗರಗಳಲ್ಲಿ ‘ಸೂರ್ಯವಂಶಿ’ ಚಿತ್ರಕ್ಕೆ ಹಾಲಿವುಡ್ ಚಿತ್ರವಾದ ‘ಇಟರ್ನಲ್ಸ್’ ದೊಡ್ಡ ಪೈಪೋಟಿ ನೀಡಿದೆ. ಅದಾಗ್ಯೂ ‘ಸೂರ್ಯವಂಶಿ’ ಚಿತ್ರವು ಉತ್ತಮ ಆರಂಭ ಕಂಡಿದ್ದು, ಗಳಿಕೆಯಲ್ಲಿ ಹೆಚ್ಚೆಂದರೆ 5 ರಿಂದ 10 ಪ್ರತಿಶತ ಕುಸಿತವಾಗಬಹುದು ಎಂದು ಬಾಕ್ಸಾಫೀಸ್ ಇಂಡಿಯಾ ವರದಿ ಮಾಡಿದೆ. ಸೂರ್ಯವಂಶಿ ಚಿತ್ರವು ಈ ಹಿಂದೆ ಹಲವು ಬಾರಿ ಬಿಡುಗಡೆಯಾಗಲು ಸಿದ್ಧತೆ ನಡೆಸಿತ್ತು. ಆದರೆ ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟು, ಅಂತಿಮವಾಗಿ ನವೆಂಬರ್ 5ಕ್ಕೆ ತೆರೆಗೆ ಬಂದಿದೆ.

ಚಿತ್ರದ ಗಳಿಕೆಗೆ ವರದಾನವಾಗಿರುವ ಮತ್ತೊಂದು ಸಂಗತಿಯೆಂದರೆ, ಮಹಾರಾಷ್ಟ್ರ ಸೇರಿದಂತೆ ಹಿಂದಿ ಚಿತ್ರರಂಗಕ್ಕೆ ಉತ್ತಮ ಮಾರುಕಟ್ಟೆ ಒದಗಿಸುವ ರಾಜ್ಯಗಳು ಚಿತ್ರಮಂದಿರದಲ್ಲಿ ಅರ್ಧ ಭರ್ತಿಯೊಂದಿಗೆ ಪ್ರದರ್ಶನಕ್ಕೆ ಅನುಮತಿ ನೀಡಿವೆ. ಅವುಗಳಲ್ಲಿ ಮಹಾರಾಷ್ಟ್ರ, ಮಧ್ಯಪ್ರದೇಶ, ಬಿಹಾರ, ಹರ್ಯಾಣ ಸೇರಿವೆ. ಈ ಹಿಂದೆ ಅಕ್ಷಯ್ ಕುಮಾರ್ ನಟನೆಯ ‘ಬೆಲ್ ಬಾಟಂ’ ಚಿತ್ರ ಮಹಾರಾಷ್ಟ್ರ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಚಿತ್ರಮಂದಿರ ತೆರೆಯದೇ ಇದ್ದಾಗ ಬಿಡುಗಡೆಯಾಗಿ, ಸೋಲು ಕಂಡಿತ್ತು. ಆದರೆ ಪ್ರಸ್ತುತ ಅರ್ಧ ಪ್ರತಿಶತ ಭರ್ತಿಯೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಿರುವುದು, ಚಿತ್ರಗಳಿಗೆ ಸಮಾಧಾನ ತಂದಿದ್ದು, ಗಳಿಕೆಯಲ್ಲೂ ಸಹಾಯ ಮಾಡಿವೆ. ಚಿತ್ರಮಂದಿರಗಳು ಸಂಪೂರ್ಣ ಭರ್ತಿಯೊಂದಿಗೆ ಪ್ರದರ್ಶನ ಕಾಣಬೇಕು ಎಂದು ಚಿತ್ರರಂಗ ಆಶಿಸುತ್ತಿದೆ.

ದೇಶದಾದ್ಯಂತ ಕೊರೊನಾ ಕಾರಣದಿಂದ ಸುಮಾರು 1000ಕ್ಕೂ ಅಧಿಕ ಚಿತ್ರಮಂದಿರಗಳು ಮುಚ್ಚಿವೆ. ಇದು ಚಿತ್ರಗಳ ಗಳಿಕೆಯಲ್ಲಿ ಬಹುದೊಡ್ಡ ಪರಿಣಾಮ ಬೀರಲಿವೆ. ಈ ಎಲ್ಲಾ ಅಡೆ ತಡೆಗಳ ನಡುವೆಯೂ, ‘ಸೂರ್ಯವಂಶಿ’ ಚಿತ್ರವು ಮೂರು ದಿನಗಳಲ್ಲಿ ₹ 75- 85 ಕೋಟಿ ಗಳಿಸಬಹುದು ಎಂದು ಚಿತ್ರತಂಡದವರು ಈ ಹಿಂದೆ ಲೆಕ್ಕಾಚಾರ ಹಾಕಿದ್ದರು. ಚಿತ್ರತಂಡದ ನಿರೀಕ್ಷೆಯಂತೆಯೇ, ಚಿತ್ರವು ಉತ್ತಮ ಗಳಿಕೆ ಮಾಡಿ ಮುನ್ನುಗ್ಗುತ್ತಿದೆ.

TV9 Kannada


Leave a Reply

Your email address will not be published.