South Africa vs India: ಇಂದು ಭಾರತ- ದಕ್ಷಿಣ ಆಫ್ರಿಕಾ ಎರಡನೇ ಏಕದಿನ: ಗೆಲ್ಲಲೇ ಬೇಕಾದ ಒತ್ತಡದಲ್ಲಿ ರಾಹುಲ್ ಪಡೆ | South Africa vs India will have a go at each other for the second time in the three match ODI series Today


South Africa vs India: ಇಂದು ಭಾರತ- ದಕ್ಷಿಣ ಆಫ್ರಿಕಾ ಎರಡನೇ ಏಕದಿನ: ಗೆಲ್ಲಲೇ ಬೇಕಾದ ಒತ್ತಡದಲ್ಲಿ ರಾಹುಲ್ ಪಡೆ

India vs South Africa 2nd ODI

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಸೋಲಿನ ಬೆನ್ನಲ್ಲೇ ಆರಂಭದ ಏಕದಿನ ಸರಣಿಯ ಮೊದಲ ಪಂದ್ಯದಲ್ಲೂ ಸೋಲುಂಡ ಭಾರತ (South Africa vs India) ಇದೀಗ ಎರಡನೇ ಕದನಕ್ಕೆ ಸಜ್ಜಾಗಿದೆ. ಇಂದು ಪಾರ್ಲ್​ನ ಬೋಲೆಂಡ್ ಪಾರ್ಕ್​ನಲ್ಲಿ ಎರಡನೇ ಏಕದಿನ ಪಂದ್ಯ ನಡೆಯಲಿದ್ದು, ಟೀಮ್ ಇಂಡಿಯಾಕ್ಕೆ ಮಹತ್ವದ್ದಾಗಿದೆ. ರಾಹುಲ್ ಪಡೆಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಗೆದ್ದರಷ್ಟೆ ಸರಣಿ ವಶಪಡಿಸಿಕೊಳ್ಳುವ ಕನಸು ಉಳಿದುಕೊಳ್ಳಲಿದೆ. ಅಲ್ಲದೆ ನಾಯಕನಾಗಿ ರಾಹುಲ್​ಗೂ (KL Rahul) ಇದೊಂದು ಅಗ್ನಿಪರೀಕ್ಷೆಯಾಗಿದೆ. ಹೀಗಾಗಿ ಪಾರ್ಲ್​​ನಲ್ಲಿ ಇಂದು ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ. ಮೊದಲ ಏಕದಿನದಲ್ಲಿ ಮಧ್ಯಮ ಕ್ರಮಾಂಕದ ವೈಫಲ್ಯ ಭಾರತದ ಸೋಲಿಗೆ ಪ್ರಮುಖ ಕಾರಣವಾಗಿತ್ತು. ನಾಯಕ ರಾಹುಲ್ ಕೂಡ ಇದೇ ಕಾರಣ ನೀಡಿದ್ದರು. ವಿರಾಟ್ ಕೊಹ್ಲಿ (Virat Kohli) ನಾಯಕತ್ವದ ದಿನಗಳಲ್ಲೂ ಇದ್ದ ಈ ಸಮಸ್ಯೆ ಕೆಎಲ್ ರಾಹುಲ್ ಅವರ ಹಂಗಾಮಿ ಸಾರಥ್ಯದಲ್ಲೂ ಮುಂದುವರಿದಿದೆ. ಇದೀಗ ಎರಡನೇ ಏಕದಿನ ದಿನಕ್ಕೆ ತಂಡದಲ್ಲಿ ಪ್ರಮುಖ ಬದಲಾವಣೆ ನಿರೀಕ್ಷಿಸಲಾಗಿದೆ.

ಮೊದಲ ಏಕದಿನದಲ್ಲಿ ಶಿಖರ್ ಧವನ್, ವಿರಾಟ್ ಕೊಹ್ಲಿ ಜೋಡಿ ಅಗ್ರ ಕ್ರಮಾಂಕದಲ್ಲಿ ಭಾರತದ ಚೇಸಿಂಗ್‌ಗೆ ಬಲ ತುಂಬಿದ್ದರೂ, ಮಧ್ಯಮ ಕ್ರಮಾಂಕದ ಕುಸಿತ ಗುರಿ ತಲುಪಲು ಅಡ್ಡಿಯಾಗಿತ್ತು. ನಾಯಕ ಕೆ ಎಲ್ ರಾಹುಲ್ ಕೂಡ ಆರಂಭದಲ್ಲೆ ಎಡವಿದ್ದರು. ಕೊಹ್ಲಿ ನಾಯಕತ್ವ ಬಿಟ್ಟ ನಂತರ ಬ್ಯಾಟಿಂಗ್‌ನಲ್ಲಿ ಹೇಗೆ ಮಿಂಚುತ್ತಾರೆ ಎಂಬ ಕುತೂಹಲಕ್ಕೆ ಬುಧವಾರದ ಪಂದ್ಯದಲ್ಲಿ ಉತ್ತರ ಸಿಕ್ಕಿದೆ. ಅವರು ತಮ್ಮ ಅರ್ಧಶತಕದ ಮೂಲಕ ತಮ್ಮ ರನ್‌ಗಳ ಹಸಿವು ಇನ್ನೂ ಇದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಆದರೆ, ಶ್ರೇಯಸ್ ಅಯ್ಯರ್ ಮತ್ತು ರಿಷಭ್ ಪಂತ್ ಕಳಪೆ ಆಟ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಇವರ ವೈಫಲ್ಯದಿಂದಲೇ ತಂಡ ಕಳೆದ ಪಂದ್ಯದಲ್ಲಿ ದಿಢೀರ್ ಕುಸಿತ ಕಂಡಿತು. ಹೀಗಾಗಿ ಅಯ್ಯರ್​ ಅವರನ್ನು ಬೆಂಚ್ ಕೂರಿಸುವ ಯೋಚನೆ ಮ್ಯಾನೇಜ್ಮೆಂಟ್​ನಲ್ಲಿ ಮೂಡಿರಬಹುದು. ವೆಂಕಟೇಶ್ ಅಯ್ಯರ್ ಅವರನ್ನು ಆಲ್ರೌಂಡರ್ ಆಗಿ ತಂಡದಲ್ಲಿ ಸೇರಿಸಿಕೊಂಡಿದ್ದರೂ ಅವರಿಗೆ ಬೌಲಿಂಗ್ ನೀಡದಿರುವುದು ಅಚ್ಚರಿ ಎನಿಸಿದೆ. ಅಯ್ಯರ್ ಮೂಲತಃ ಓಪನರ್ ಆಗಿದ್ದು, ಇವರು ಇನ್ನಿಂಗ್ಸ್ ಆರಂಭಿಸಿ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಆಡುವ ನಿರೀಕ್ಷೆ ಇದೆ.

ಶಾರ್ದೂಲ್ ಥಾಕೂರ್ ಅರ್ಧಶತಕ ಸಿಡಿಸಿದ ನಡುವೆಯೂ ಬೌಲಿಂಗ್‌ನಲ್ಲಿ ದುಬಾರಿಯಾಗಿದ್ದರು. ಅವರ ಬದಲು ದೀಪಕ್ ಚಹರ್ ಅಥವಾ ಮೊಹಮದ್ ಸಿರಾಜ್ ಕಣಕ್ಕಿಳಿದರೆ ಅಚ್ಚರಿ ಇಲ್ಲ. ಬೂಮ್ರಾ ಎರಡು ವಿಕೆಟ್ ತೆಗೆದುಕೊಂಡಿದ್ದರು. ಉಳಿದವರು ದುಬಾರಿಯಾಗಿದ್ದರು. ಹೀಗಾಗಿ ಬೌಲಿಂಗ್ ವಿಭಾಗದಲ್ಲೂ ಬದಲಾವಣೆ ನಿರೀಕ್ಷಿಸಲಾಗಿದೆ.

ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ಮತ್ತು ರಸಿ ವ್ಯಾನ್ ಡರ್ ಡುಸೆನ್ ಕಳೆದ ಪಂದ್ಯದಲ್ಲಿ ಶತಕ ಬಾರಿಸಿ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಇವರಿಬ್ಬರ ವಿಕೆಟ್ ಭಾರತಕ್ಕೆ ಮುಖ್ಯವಾಗಿದೆ. ಇದರ ಹೊರತು ಪಡಿಸಿ ಆತಿಥೇಯರು ಗೆಲುವಿನ ಕಾಂಬಿನೇಷನ್ ಬದಲಾಯಿಸುವ ಸಾಧ್ಯತೆ ಕಡಿಮೆ.

ಭಾರತ ತಂಡ: ಕೆ.ಎಲ್. ರಾಹುಲ್ (ನಾಯಕ), ಜಸ್‌ಪ್ರೀತ್ ಬುಮ್ರಾ (ಉಪ ನಾಯಕ), ಶಿಖರ್ ಧವನ್, ಋತುರಾಜ್ ಗಾಯಕವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ರಿಷಭ್ ಪಂತ್ (ವಿಕೆಟ್‌ಕೀಪರ್), ಇಶಾನ್ ಕಿಶನ್ (ವಿಕೆಟ್‌ಕೀಪರ್), ಯುಜ್ವೇಂದ್ರ ಚಾಹಲ್, ಆರ್. ಅಶ್ವಿನ್, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಪ್ರಸಿದ್ಧ ಕೃಷ್ಣ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಜಯಂತ್ ಯಾದವ್, ನವದೀಪ್ ಸೈನಿ.

ದಕ್ಷಿಣ ಆಫ್ರಿಕಾ ತಂಡ: ತೆಂಬಾ ಬವುಮಾ (ನಾಯಕ), ಕೇಶವ್ ಮಹಾರಾಜ್, ಕ್ವಿಂಟನ್ ಡಿಕಾಕ್ (ವಿಕೆಟ್‌ಕೀಪರ್), ಜುಬೈರ್ ಹಮ್ಜಾ, ಮಾರ್ಕೊ ಜ್ಯಾನ್ಸೆನ್, ಜೆನ್‌ಮನ್ ಮಲಾನ್, ಸಿಸಾಂದ ಮಗಾಲ, ಏಡನ್ ಮರ್ಕರಂ, ಡೇವಿಡ್‌ ಮಿಲ್ಲರ್, ಲುಂಗಿ ಗಿಡಿ, ವೇಯ್ನ್ ಪಾರ್ನೆಲ್, ಆಯಂಡಿಲ್ ಪಿಶುವಾಯೊ, ಡ್ವೇನ್ ಪ್ರಿಟೊರಿಯಸ್, ಕಗಿಸೊ ರಬಾಡ, ತಬ್ರೇಜ್ ಶಮ್ಸಿ.

ICC T20 World Cup 2022 ವೇಳಾಪಟ್ಟಿ ಪ್ರಕಟ: ಭಾರತದ ಮೊದಲ ಎದುರಾಳಿ ಪಾಕಿಸ್ತಾನ, ಯಾವಾಗ ಪಂದ್ಯ?

TV9 Kannada


Leave a Reply

Your email address will not be published. Required fields are marked *