ಬಳ್ಳಾರಿ ಉತ್ಸವದಲ್ಲಿ ಸಿಂಗರ್ ಮಂಗ್ಲಿ ಕಾರಿನ ಮೇಲೆ ಕಲ್ಲು ತೂರಾಟ ಸುದ್ದಿ ಬಗ್ಗೆ ಜಿಲ್ಲಾ ವರಿಷ್ಠಾಧಿಕಾರಿ ಸ್ಪಷ್ಟನೆ ಕೊಟ್ಟಿದ್ದಾರೆ. ಇನ್ನು ಈ ಬಗ್ಗೆ ಸ್ವತಃ ಸಿಂಗರ್ ಮಂಗ್ಲಿ ಪ್ರತಿಕ್ರಿಯಿಸಿದ್ದಾರೆ.
ಬಳ್ಳಾರಿ ಉತ್ಸವದಲ್ಲಿ (bellary utsav 2023) ಸಂಗೀತ ಕಾರ್ಯಕ್ರಮ ನೀಡಲು ಬಂದಿದ್ದ ತೆಲುಗು ಗಾಯಕಿ ಮಂಗ್ಲಿ (Singer Mangli) ಅವರಿದ್ದ ಕಾರಿನ ಮೇಲೆ ಯುವಕರ ಗುಂಪೊಂದು ಕಲ್ಲು ತೂರಿ ದಾಂದಲೆ ನಡೆಸಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದ್ರೆ, ಆ ತರಹದ ಯಾವುದೇ ಘಟನೆ ನಡೆದಿಲ್ಲ. ಸಿಂಗರ್ ಮಂಗ್ಲಿ ಅವರ ಕಾರಿನ ಮೇಲೆ ಕಲ್ಲು ತೂರಾಟ ಆಗಿಲ್ಲ. ಈ ಬಗ್ಗೆ ಸ್ವತಃ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತಕುಮಾರ್ ಬಂಡಾರ ಹಾಗೂ ಗಾಯಕಿ ಮಂಗ್ಲಿ ಸ್ಪಷ್ಟನೆ ನೀಡಿದ್ದಾರೆ. ಹಾಗೇ ಮಂಗಲಿ ಅವರ ಕಾರಿ ಗ್ಲಾಸ್ ಏಕೆ ಒಡೆದಿದೆ ಎನ್ನುವ ಬಗ್ಗೆ ಕಾರಣವನ್ನು ಸಹ ಎಸ್ಪಿ ಕೊಟ್ಟಿದ್ದಾರೆ.
ತಾಜಾ ಸುದ್ದಿ
ಘಟನೆ ಬಗ್ಗೆ ಸ್ಪಷ್ಟನೆ ನೀಡಿರುವ ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ ರಂಜಿತಕುಮಾರ್ ಬಂಡಾರ, ವೇದಿಕೆ ಬಳಿ ಕಾರಿನ ಮೇಲೆ ಯಾವುದೇ ಕಲ್ಲು ತೂರಾಟ ನಡೆದಿಲ್ಲ. ಪೊಲೀಸರು ಯಾವುದೇ ಲಾಠಿಚಾರ್ಜ್ ಸಹ ಮಾಡಿಲ್ಲ. ಕಾರಿನ ಮೇಲೆ ಯಾವುದೋ ಒಂದು ವಸ್ತು ಬಿದ್ದು ಗ್ಲಾಸ್ ಒಡೆದಿದೆ. ಪುನೀತ್ ಪುತ್ಥಳಿ ಅನಾವರಣ ವಿಳಂಬ ಹಿನ್ನೆಲೆ ಹೆಚ್ಚು ಜನ ಸೇರಿದ್ದರು. ಕಾರ್ಯಕ್ರಮದಲ್ಲಿ ಹೆಚ್ಚು ಜನ ಸೇರಿದ್ದರಿಂದ ಕೆಲ ತೊಂದರೆಯಾಗಿದೆ ಎಂದು ಸ್ಪಷ್ಟಪಡಿಸಿದರು.
ಇನ್ನು ಈ ಬಗ್ಗೆ ಸ್ವತಃ ಮಂಗ್ಲಿ ಅವರು ಸ್ಪಷ್ಟನೆ ಕೊಟ್ಟಿದ್ದು, ತಮ್ಮ ಕಾರಿನ ಕಲ್ಲು ತೂರಾಟ ನಡೆದಿದೆ ಎನ್ನುವ ಸುದ್ದಿಯನ್ನು ತಳ್ಳಿಹಾಕಿದ್ದಾರೆ. ಅಲ್ಲದೇ ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಮಂಗ್ಲಿ ಸ್ಪಷ್ಟನೆ
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಮಂಗ್ಲಿ, ನಿನ್ನೆ ಬಳ್ಳಾರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನನ್ನ ಮೇಲೆ ಹಲ್ಲೆ ನಡೆದಿದೆ ಎಂದು ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ತಪ್ಪು ಸುದ್ದಿಯನ್ನು ನಾನು ಸಂಪೂರ್ಣವಾಗಿ ನಿರಾಕರಿಸುತ್ತೇನೆ. ಕಾರ್ಯಕ್ರಮ ಒಂದು ದೊಡ್ಡ ಯಶಸ್ಸು ಕಂಡಿದ್ದು, ಅದನ್ನು ನೀವು ಫೋಟೋಗಳು ಮತ್ತು ವಿಡಿಯೋಗಳಲ್ಲಿ ನೋಡಿದ್ದೀರಿ. ಕನ್ನಡಿಗ ಪ್ರೀತಿ ಮತ್ತು ಬೆಂಬಲ ಅಗಾಧವಾಗಿದೆ. ಅದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಅಧಿಕಾರಿಗಳು ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ. ಇದೆಲ್ಲವೂ ನನ್ನ ಇಮೇಜ್ ಹಾಳುಮಾಡಲಾಗುತ್ತಿದೆ ಮತ್ತು ಈ ರೀತಿಯ ಸುಳ್ಳು ಪ್ರಚಾರವನ್ನು ನಾನು ಖಂಡಿಸುತ್ತೇನೆ ಎಂದು ಪ್ರಕಟಣೆ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.