Spiritual News: ದಿನಕ್ಕೆ ಎರಡು ಬಾರಿ ಸಂಧ್ಯಾವಂದನೆಯನ್ನು ಮಾಡುವ ಕೊನೆಯಲ್ಲಿ ಹೇಳುವ ಗೋತ್ರಪ್ರವರದ ವೈಜ್ಞಾನಿಕ ಮಹತ್ವ ಮತ್ತು ಮಾಹಿತಿ ಇಲ್ಲಿದೆ | Spiritual News: Here is the scientific significance and information of the Gotrapravara recited at the end of Sandhyavandan twice a day


ಈ ಗೋತ್ರಪ್ರವರದ ಪ್ರಯೋಜನ ನಮಗೆ ತಿಳಿಯುವುದು ಒಂದಷ್ಟು ಕಾವ್ಯಗಳನ್ನೂ, ಶಾಸನಗಳನ್ನೂ ಓದುವಾಗ. ಮತ್ತೊಂದಷ್ಟು ಆತ್ಮಾವಲೋಕನ ಮಾಡಿಕೊಳ್ಳುವಾಗ. ನಮ್ಮ ಪ್ರಾಚೀನರು ಶಾಸನವನ್ನು ಕೆತ್ತಿಸುವಾಗ ಕೇವಲ ಮೇಲೆ ಕುಳಿತ ರಾಜನಷ್ಟೇ ಅಲ್ಲ.

ಕೇವಲ ಸಂಧ್ಯಾವಂದನೆಯೇ ಅಂತ ಅಲ್ಲ. ಹಿರಿಯರ ಪಾದಾಭಿವಂದನೆಯನ್ನು ಮಾಡುವಾಗ ಸಹ ಪ್ರಾಚೀನಕಾಲದಿಂದಲೂ ಬೆಳೆದು ಬಂದಿರುವುದು ಇದೇ ಪರಿಪಾಠ. ಅಷ್ಟಲ್ಲದೇ ರಣಾಂಗಣದಲ್ಲಿ ವೈರಿಯೊಬ್ಬನ ಜೊತೆ ಯುದ್ಧಕ್ಕೆ ಮುಂದಾಗುವ ಮುನ್ನ ಸಹ ತಮ್ಮ ಕುಲ-ಗೋತ್ರಗಳನ್ನು ಪರಸ್ಪರ ಹೇಳಿಕೊಳ್ಳಬೇಕು ಎನ್ನುವುದು ಮಹಾಭಾರತಾದಿ ಆರ್ಷಗ್ರಂಥಗಳನ್ನು ಅಧ್ಯಯನ ಮಾಡುವವರಿಗೆ ವೇದ್ಯವಾಗುತ್ತದೆ. ಇದನ್ನೇ ‘ಗೋತ್ರಪ್ರವರ’ ಅಂತ ಕರೆಯುವುದು. ಆದರೆ ಯಾಕೆ? ನನ್ನ ಅಪ್ಪ, ಅವರ ಅಪ್ಪ, ಅವರ ವಂಶದ ಮೂಲಪುರುಷ ಇವರನ್ನೆಲ್ಲ ತಿಳಿದು ಆ ನಮಸ್ಕಾರ ಮಾಡಿಸಿಕೊಳ್ಳುವವರಿಗೆ ಆಗಬೇಕಾದ್ದೇನಿದೆ? ಸಂಸ್ಕಾರ, ಪರಂಪರೆ ಅಂತ ನನ್ನ ಹಿಂದಿನವರು ಹೇಳಿದರು, ನಾನೂ ಪಾಲಿಸಿದೆ, ನನ್ನ ಮಕ್ಕಳಿಗೂ ಹೇಳಿಕೊಟ್ಟೆ. ಆಯಿತೇ?!

ಗೋತ್ರಪ್ರವರದ ಪ್ರಯೋಜನ ನಮಗೆ ತಿಳಿಯುವುದು ಒಂದಷ್ಟು ಕಾವ್ಯಗಳನ್ನೂ, ಶಾಸನಗಳನ್ನೂ ಓದುವಾಗ. ಮತ್ತೊಂದಷ್ಟು ಆತ್ಮಾವಲೋಕನ ಮಾಡಿಕೊಳ್ಳುವಾಗ. ನಮ್ಮ ಪ್ರಾಚೀನರು ಶಾಸನವನ್ನು ಕೆತ್ತಿಸುವಾಗ ಕೇವಲ ಮೇಲೆ ಕುಳಿತ ರಾಜನಷ್ಟೇ ಅಲ್ಲ. ಅನಂತಕಾಲಕ್ಕೆ ಬೇಕಾಗಿ ತನ್ನ ರಾಜನನ್ನೂ, ಅವನ ಪ್ರಶಸ್ತಿ-ದಾನಾದಿಗಳನ್ನೂ ಜೀವಂತವಾಗಿರಿಸುವ ಆ ಶಿಲ್ಪಿ ಸಹ ತಾನು ಇಂತಹವನ ಮಗ, ಇಂತಹವನ ಮೊಮ್ಮಗ ಅಂತ ಬರೆದುಕೊಂಡು ಪ್ರಾಮಾಣಿಕರಾದ ಇತಿಹಾಸಕಾರರಿಗೆ ಸಮಾಧಾನವನ್ನು ನೀಡಿ ರಾಜ ಯಾವ ಜಾತಿಯಲ್ಲಿ ಹುಟ್ಟಿದ ಶಿಲ್ಪಿ ಯಾವ ಜಾತಿಯವನು ಅಂತ ತೌಡು ಕುಟ್ಟುವ ಇತಿಹಾಸಕಾರರ ಬಾಯಿಗೆ ಬೀಗ ಜಡಿದು ಧನ್ಯನಾಗುತ್ತಾನೆ.

ಒಂದು ಉದಾಹರಣೆ: ಲಖ್ಖ ಮಂಡಲ ದೇವಸ್ಥಾನದ ಶಾಸನದಲ್ಲಿ ಅದನ್ನು ಖಂಡರಿಸಿದ ಈಶ್ವರನಾಗ ಎನ್ನುವವ ತಾನು ನಾಗದತ್ತನ ಮಗ ಅಂತ ಹೇಳಿಕೊಳ್ಳುವುದು. ( Epigraphia Indica Volume 01. Inscription no.2)

ಮುಂದುವರಿದು ನೋಡುವಾಗ ಒಂದೇ ಹೆಸರಿನ ಇಬ್ಬರು ಐತಿಹಾಸಿಕ ವ್ಯಕ್ತಿಗಳಿದ್ದಾಗ ಆಗುವ ಸಮಸ್ಯೆಯನ್ನು ಈ ವಿಧಾನ ಪರಿಹರಿಸುವುದು ಕಂಡುಬರುತ್ತದೆ. ಉದಾಹರಣೆಗೆ ನಮ್ಮಲ್ಲಿ ಸಮರಾಂಗಣಸೂತ್ರಧಾರ ಎನ್ನುವ ವಾಸ್ತುಶಿಲ್ಪ ಗ್ರಂಥವನ್ನು ಬರೆದಿರುವ ಭೋಜನೂ, ಚಂಪೂರಾಮಾಯಣಾದಿ ಗ್ರಂಥಗಳನ್ನು ಬರೆದ ಭೋಜನೂ ಒಂದೇ (ಪರಮಾರ ವಂಶದ ಭೋಜ) ಎನ್ನುವ ಕಲ್ಪನೆಯಿದೆ. ಆದರೆ ಅಲ್ಲ. ಈ ಗೊಂದಲ ಶೀಲಹಾರ ವಂಶದ ರಾಜನಾದ ಗಂಡರಾದಿತ್ಯ ಎನ್ನುವವ ತನ್ನ ಶಾಸನದಲ್ಲಿ ತನ್ನ ವಂಶದಲ್ಲಿ ಹಿಂದೆ ಆಳಿದ್ದ ಭೋಜದೇವನ ಕುರಿತಾಗಿ ಬರೆಸುವಾಗ ಕೊಲ್ಲಾಪುರ ಶಾಸನದಲ್ಲಿ ಆತನಿಗಿದ್ದ ಸಮರಾಂಗಣ ಸೂತ್ರಧಾರ ವಿಖ್ಯಾತ ಕೀರ್ತಿರಿಹ ಪಂಡಿತಪಾರಿಜಾತಃ ಅನ್ನುವ ಬಿರುದನ್ನು ಉಲ್ಲೇಸುವಾಗ ಪರಿಹಾರವಾಗುತ್ತದೆ.

ವಿದ್ವದ್ವಲಯದಲ್ಲಿ ಬಹಳ ಕಾಲ ಚರ್ಚೆಗೆ ಗ್ರಾಸವಾಗಿದ್ದ ಒಂದು ವಿಷಯ ಈ ಭಾಸ ಯಾರು? ಯಾವ ಕಾಲದವನು? ಟಿ.ಗಣಪತಿಶಾಸ್ತ್ರಿಗಳಿಗೆ ಸಿಕ್ಕಿದ ಹನ್ನೆರಡು ನಾಟಕಗಳ ಚಕ್ರದ ರಚಯಿತ ಇವನೇ ಹೌದೋ ಅಲ್ಲವೋ ಅನ್ನುವ ಕುರಿತಾದದ್ದು. ಆ ಗೊಂದಲಕ್ಕೆ ಮುಖ್ಯ ಕಾರಣ ಆತ ಎಲ್ಲಿಯೂ ತನ್ನ ಹೆಸರನ್ನು, ಕುಲ-ಗೋತ್ರ, ತನಗೆ ಆಶ್ರಯ ನೀಡಿದ ರಾಜನನ್ನು ಸ್ಮರಿಸದಿರುವುದು. ಹಾಗಂತ ಇದು ಖಂಡಿತ ಕವಿಯ ದೌಷ್ಟ್ಯವಲ್ಲ. ಜಗದಗಲ ಪ್ರಸಿದ್ಧರಾದ ಭಾರತೀಯ ಕವಿಪ್ರಮುಖರನೇಕರು “ಇದಂ ನ ಮಮ” ಎನ್ನುವ ಆದರ್ಶೈಕಪ್ರೇಮದೃಷ್ಟಿಯಿಂದ ಗ್ರಂಥಗಳನ್ನು ರಚಿಸುವುದು ಭಾಸನಿಂದ ಹಿಡಿದು ಸದ್ಯೋಭೂತದ ಕವಿಪುಂಗವರಾದ ಡಿ.ವಿ.ಜಿಯವರವರೆಗೂ ಹರಿದುಬಂದಿದೆ. ಗುಂಡಪ್ಪನವರ ಕಗ್ಗದ ಮೊದಲ ಆವೃತ್ತಿ ಒಂದು ಅನಾಮಧೇಯ ಪ್ರಕಟಣೆ!! ಆನಂತರ ಅವರ ಆಪ್ತರೆಲ್ಲರ ಒತ್ತಾಯಕ್ಕೆ ಮಣಿದು ಮುಂದಿನ ಆವೃತ್ತಿಗಳಲ್ಲಿ ತಮ್ಮ ಹೆಸರನ್ನು ಕಾಣಿಸಿರುವುದು. ಈ ಕೃತಿ ನನ್ನದು. ಈ ವರ್ಷ ಅಕಾಡೆಮಿಯ ಅವಾರ್ಡಿಗೆ ಇದನ್ನು ರೆಕಮೆಂಡ್ ಮಾಡಿ ಎನ್ನುವ ದುರ್ಗತಿ ಅವರಿಗಿರಲಿಲ್ಲ. ಆದರೂ ಬರೆದುಕೊಂಡಿದ್ದರೆ ಮುಂದಿನವರಿಗೆ ಸ್ವಲ್ಪ ಸೌಲಭ್ಯವಾಗುತ್ತಿತ್ತೇನೋ ಅಂತ ಭಾವ ಅಷ್ಟೇ.

ಅದೇ ನೋಡಿ, ಭವಭೂತಿಯಲ್ಲಿ ನಮಗೆ ಈ ಸಮಸ್ಯೆಯಿಲ್ಲ. ಆತ ತನ್ನ ‘ಮಹಾವೀರಚರಿತ’ದಲ್ಲಿ “ಭಟ್ಟಗೋಪಾಲಸ್ಯ ಪೌತ್ರಃ, ಪವಿತ್ರಕೀರ್ತೇಃ ನೀಲಕಂಠಸ್ಯಾತ್ಮಸಂಭವಃ, ಭವಭೂತಿರ್ನಾಮಜಾತುಕರ್ಣೀಪುತ್ರಃ” ಅಂತ ಸ್ಪಷ್ಟವಾಗಿ ಹೇಳಿಕೊಳ್ಳುತ್ತಾನೆ. ತನ್ನದೇ ಅನ್ಯಗ್ರಂಥವಾದ ಉತ್ತರರಾಮಚರಿತದಲ್ಲಿ “ಶ್ರೀಕಂಠಪದಲಾಂಛನೋ” ಅಂತ ತನ್ನ ಪರಿಚಯವನ್ನು ಮಾಡಿಕೊಳ್ಳುವುದರ ಮುಖಾಂತರ ತನಗಿರುವ ಮತ್ತೊಂದು ಹೆಸರನ್ನೂ ಭವಿಷ್ಯದ ಓದುಗರ ಮುಂದಿಟ್ಟು ಹಗುರಾಗುತ್ತಾನೆ, ಹಗುರಾಗಿಸುತ್ತಾನೆ ಸಹ. ಇವನಲ್ಲಿ ನಮಗೆ ಪ್ರಶ್ನೆಗಳೇ ಇಲ್ಲ!!

ಶ್ರೀಮದ್ಯಜುಃಶಾಖಾ ಬೋಧಾಯನ ಸೂತ್ರಾನ್ವಿತ ವಿಶ್ವಾಮಿತ್ರ

ದೇವರಾತ ಔದಲ್ಯೇತಿ ತ್ರಯ್ಯಾರ್ಷಯ ಪ್ರವರಾನ್ವಿತ ವಿಶ್ವಾಮಿತ್ರ

ಗೋತ್ರೋತ್ಪನ್ನಃ ಪ್ರಶಾಂತಶರ್ಮಣಃ ಪುತ್ರೋ ನಚಿಕೇತ

ಶರ್ಮಾಹಂ (ಅಹಂ) ಅಸ್ಮಿ ಭೋ ಅಭಿವಾದಯೇ |

ಅಂದಹಾಗೇ ಗೋತ್ರಪ್ರವರವನ್ನ ವೈಜ್ಞಾನಿಕವಾಗಿ ನೋಡಿದಾಗ ಅದು ಮದುವೆಯ ಸಮಯದಲ್ಲಿ ಪ್ರಾಮುಖ್ಯತೆಯನ್ನು ಪಡೆಯುವುದಕ್ಕೆ ಕಾರಣ ಕಂಡುಬರುತ್ತದೆ. ಒಂದು ಕುಟುಂಬದಲ್ಲಿ ಒಂದೇ ವಂಶದ ( ಒಂದೇ ಗೋತ್ರ ಅಂತ ಇಟ್ಟುಕೊಂಡರೆ) ಮಧ್ಯೆ ಮದುವೆ ಮುಂತಾದವು ನಡೆಯುತ್ತಿದ್ದರೆ ಅವರ ಮುಂದಿನ ಪೀಳಿಗೆಯಲ್ಲಿ ಮಕ್ಕಳಾಗುವ ಸಾಧ್ಯತೆಗಳು ಕಡಿಮೆಯಾಗುತ್ತ ಹೋಗುತ್ತವೆ. ಅದಲ್ಲದೇ ಹುಟ್ಟುವ ಮಕ್ಕಳೂ ಸಹ ವ್ಯಾಧಿಗ್ರಸ್ತರೂ ,ಬುದ್ಧಿಮಾಂದ್ಯರೂ ಆಗಿರುತ್ತಾರೆ. ಇದಕ್ಕೆ inbreeding depression ಅಂತ ಹೆಸರು. ದನಕರುಗಳಲ್ಲಿ ಇದು ಇನ್ನೂ ಹೆಚ್ಚು ಸ್ಪಷ್ಟವಾಗಿ ಕಂಡುಬರುತ್ತವೆ. ಅವುಗಳಲ್ಲಿ inbreeding ಮಾಡಿದಾಗ lactation ಕಡಿಮೆಯಾಗುವುದರೊಂದಿಗೆ ಗರ್ಭಧಾರಣೆಯ ಪ್ರಮಾಣದಲ್ಲಿ ಸಹ ಇಳಿಕೆಯಾಗುವುದನ್ನು genetics ಲೋಕ ನೋಡುತ್ತಲೇ ಇದೆ. ಏಕೆಂದರೆ ಪಾಲಕರ ವರ್ಣತಂತುಗಳು (genes) ಭಿನ್ನವಾಗಿದ್ದು, ಅವುಗಳ ಸಮ್ಮಿಶ್ರಣ ( gene overlapping ) ಆದರೆ ಮಾತ್ರ ಮುಂದಿನ ಪೀಳಿಗೆಯ ಜೈವಿಕವಾಗಿ ಹಾಗೂ ಅನುವಂಶಿಕವಾಗಿ (genetically) ಹೆಚ್ಚು ಸಾಮರ್ಥ್ಯ ಹೊಂದಿರುತ್ತಾರೆ.

ಮತ್ತೆ ಇವೆಲ್ಲಕ್ಕೂ ಮಿಗಿಲಾದದ್ದು ಉಂಟಲ್ಲ. ನನ್ನ ಯೋಗ್ಯತೆ, ನನ್ನ ಕರ್ತವ್ಯ, ನನ್ನ ವರ್ತನೆ ಏನು? ಹೇಗೆ? ಎನ್ನುವ ಪ್ರಶ್ನೆ !! ನನ್ನ ಅಪ್ಪ, ಅವರ ಅಪ್ಪ, ಅವರ ಅಪ್ಪ ಹೀಗಿದ್ದರು. ಹಾಗಾಗಿ ನಾನು ಹೀಗಿರಬೇಕು ಎನ್ನುವ ಒಂದು ಹೊಣೆಗಾರಿಕೆಯನ್ನು ಈ ಗೋತ್ರಪ್ರವರ ನಮ್ಮ ಮೇಲೆ ಹೊರಿಸುತ್ತದೆ. ಅದೊಂದು ರೀತಿಯ ಅಂಕುಶದ ಹಾಗೆ. ನಮಗೆ ನಾವೇ ತಿವಿದುಕೊಳ್ಳುವ ಅಂಕುಶ. ಹಾಗೆಯೇ ಎದುರಿಗಿರುವ ವ್ಯಕ್ತಿಗೆ ನಮ್ಮ ಜೊತೆ ಹೇಗೆ, ಎಲ್ಲಿ, ಎಷ್ಟು ಮಾತನಾಡಬೇಕೆನ್ನುವ ಎಚ್ಚರಿಕೆಯನ್ನು ನೀಡುವ ಗಂಟೆಯಾಗಿ ಈ ಪ್ರವರ ಕೆಲಸ ಮಾಡುತ್ತದೆ. ಹಾಗಾಗಿಯೇ ಪ್ರಾಮಾಣಿಕವಾಗಿ “ನನಗೆ ಅಪ್ಪನ ಹೆಸರು ತಿಳಿದಿಲ್ಲ. ಅಮ್ಮ ಸತ್ಯಕಾಮ ಜಾಬಾಲಿ ಅನ್ನು ಅಂತಷ್ಟೇ ಹೇಳಿಕೊಟ್ಟಿದ್ದಾಳೆ” ಎಂದ ಜಾಬಾಲಿಗೆ ಆತನ ಗುರುಗಳು ಬ್ರಹ್ಮವಿದ್ಯೆ ದೊರೆಯುವ ಮಾರ್ಗವನ್ನು ತೋರಿಸಿಕೊಟ್ಟರು. ಧೂರ್ತತನದಿಂದ ಸತ್ಯವನ್ನು ಮರೆಮಾಚಿ “ನಾಹಂ ಕ್ಷತ್ರಿಯಸೂನುಃ”, ನಾನು ಭಾರ್ಗವವಂಶೀಯನಾದ ಬ್ರಾಹ್ಮಣ ಎಂದ ಕರ್ಣನಿಗೆ ಪರಶುರಾಮ ಅವಶ್ಯಕತೆ ಬಿದ್ದಾಗ ಅಸ್ತ್ರಗಳ ವಿಸ್ಮೃತಿಯಾಗುವ ಶಾಪ ನೀಡಿದ!

ನಚಿಕೇತ್ ಹೆಗ್ಡೆ

ತಾಜಾ ಸುದ್ದಿ

TV9 Kannada


Leave a Reply

Your email address will not be published.