Sri Lanka Crisis ಶ್ರೀಲಂಕಾ: ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದವರಿಗೆ ಕಂಡಲ್ಲಿ ಗುಂಡಿಕ್ಕಲು ರಕ್ಷಣಾ ಸಚಿವಾಲಯ ಆದೇಶ | Sri Lanka’s Ministry of Defence orders shoot on sight to any person damaging public property


Sri Lanka Crisis ಶ್ರೀಲಂಕಾ: ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದವರಿಗೆ ಕಂಡಲ್ಲಿ ಗುಂಡಿಕ್ಕಲು ರಕ್ಷಣಾ ಸಚಿವಾಲಯ ಆದೇಶ

ಶ್ರೀಲಂಕಾ ಬಿಕ್ಕಟ್ಟು

ಸಹ ನಾಗರಿಕರ ವಿರುದ್ಧ “ಹಿಂಸಾಚಾರ ಮತ್ತು ಸೇಡಿನ ಕ್ರಮಗಳನ್ನು” ನಿಲ್ಲಿಸುವಂತೆ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಜನರಲ್ಲಿ ಮನವಿ ಮಾಡಿದ್ದಾರೆ.

ಕೊಲಂಬೊ: ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನ ಮಧ್ಯೆ ಶ್ರೀಲಂಕಾದಲ್ಲಿ(Sri Lanka) ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಸಾರ್ವಜನಿಕ ಆಸ್ತಿಯನ್ನು ಲೂಟಿ ಮಾಡುವ ಅಥವಾ ಇತರರಿಗೆ ಹಾನಿ ಮಾಡುವ ವ್ಯಕ್ತಿಗಳು ಯಾರೇ ಆದರೂ ಅವರಿಗೆ ಗುಂಡು ಹಾರಿಸುವಂತೆ ಶ್ರೀಲಂಕಾದ ರಕ್ಷಣಾ ಸಚಿವಾಲಯ(Ministry of Defence) ಮಂಗಳವಾರ ಸೇನೆ, ವಾಯುಪಡೆ ಮತ್ತು ನೌಕಾಪಡೆಯ ಸಿಬ್ಬಂದಿಗೆ ಆದೇಶಿಸಿದೆ. ಸಹ ನಾಗರಿಕರ ವಿರುದ್ಧ “ಹಿಂಸಾಚಾರ ಮತ್ತು ಸೇಡಿನ ಕ್ರಮಗಳನ್ನು” ನಿಲ್ಲಿಸುವಂತೆ ಅಧ್ಯಕ್ಷ ಗೋಟಾಬಯ ರಾಜಪಕ್ಸೆ (Gotabaya Rajapaksa) ಜನರಲ್ಲಿ ಮನವಿ ಮಾಡಿದ್ದು, ರಾಷ್ಟ್ರವು ಎದುರಿಸುತ್ತಿರುವ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ಪ್ರತಿಜ್ಞೆ ಮಾಡಿದ ನಂತರ ಈ ಆದೇಶ ಬಂದಿದೆ. ಶ್ರೀಲಂಕಾದ ರಕ್ಷಣಾ ಪ್ರಧಾನ ಕಾರ್ಯದರ್ಶಿ (ನಿವೃತ್ತ) ಕಮಲ್ ಗುಣರತ್ನೆ ಮಂಗಳವಾರ ಪ್ರತಿಭಟನಾಕಾರರನ್ನು ಶಾಂತವಾಗಿರಲು ಹೇಳಿದ್ದು ಹಿಂಸಾಚಾರಕ್ಕೆ ಮುಂದಾಗದಂತೆ ಒತ್ತಾಯಿಸಿದರು. ಲೂಟಿ ಮತ್ತು ಆಸ್ತಿ ಹಾನಿ ಮುಂದುವರಿದರೆ, ಉಲ್ಲಂಘಿಸುವವರ ವಿರುದ್ಧ ಕಾನೂನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ರಕ್ಷಣಾ ಸಚಿವಾಲಯವನ್ನು ಒತ್ತಾಯಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದರು. ಯುವಕರು ಮತ್ತು ಯುವತಿಯರು ಹಿಂಸಾಚಾರದಲ್ಲಿ ತೊಡಗದಂತೆ ನಾನು ಮನವಿ ಮಾಡುತ್ತೇನೆ. ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗೆ ಬೆಂಕಿ ಹಚ್ಚಬೇಡಿ. ನಿಮ್ಮ ಹೋರಾಟದಲ್ಲಿ ಪ್ರಜಾಪ್ರಭುತ್ವ ಮತ್ತು ಶಾಂತಿ ಕಾಪಾಡಿ. ಶಾಂತಿಯುತ ಪ್ರತಿಭಟನೆಯ ನೆಪದಲ್ಲಿ ಲೂಟಿಕೋರರು ಅಪರಾಧ ಎಸಗಲು ಅವಕಾಶವನ್ನು ಬಳಸಿಕೊಂಡಿದ್ದಾರೆ ಎಂದು ರಕ್ಷಣಾ ಕಾರ್ಯದರ್ಶಿ ಎಚ್ಚರಿಸಿದ್ದಾರೆ, ಇದು ಅತ್ಯಂತ ದುರದೃಷ್ಟಕರ ಪರಿಸ್ಥಿತಿಯಾಗಿದೆ ಎಂದು ಹೇಳಿದರು.

ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಮತ್ತು ಅವರ ಕುಟುಂಬದವರು ಆಶ್ರಯ ಪಡೆದಿರುವ ಟ್ರಿಂಕೋಮಲಿ ನೌಕಾನೆಲೆಯ ಹೊರಗೆ ಸರ್ಕಾರಿ ವಿರೋಧಿ ಪ್ರತಿಭಟನಾಕಾರರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬ ವರದಿಗಳ ನಡುವೆ ಅವರ ಕಠಿಣ ಎಚ್ಚರಿಕೆ ನೀಡಲಾಗಿದೆ. ಯುವಜನತೆಗೆ ಶಾಂತಿಯುತವಾಗಿ ನಡೆದುಕೊಳ್ಳುವಂತೆ ಸಲಹೆ ನೀಡುವಂತೆ ಧಾರ್ಮಿಕ ಮುಖಂಡರಿಗೆ ಗುಣರತ್ನೆ ಮನವಿ ಮಾಡಿದರು.

ಏತನ್ಮಧ್ಯೆ  ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರ ಬೆಂಬಲಿಗರು ಸೋಮವಾರ ಸರ್ಕಾರಿ ವಿರೋಧಿ ಪ್ರತಿಭಟನಾಕಾರರ ಮೇಲೆ ದಾಳಿ ಮಾಡಿದ ನಂತರ ಭುಗಿಲೆದ್ದ ಹಿಂಸಾಚಾರದಲ್ಲಿ ಸಾವಿನ ಸಂಖ್ಯೆ ಎಂಟಕ್ಕೆ ಏರಿದೆ. ಇದೀಗ ಸರ್ಕಾರಿ ವಿರೋಧಿ ಪ್ರತಿಭಟನಾಕಾರರು ಮಹಿಂದಾ ರಾಜಪಕ್ಸೆ ಅವರ ಕಿರಿಯ ಸಹೋದರ ಅಧ್ಯಕ್ಷ ಗೊಟಾಬಯ ರಾಜಪಕ್ಸೆ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

ಕೊಲಂಬೊ ಮತ್ತು ದೇಶದ ಇತರ ಭಾಗಗಳಲ್ಲಿ ನಡೆದ ಹಿಂಸಾಚಾರದಲ್ಲಿ ಸುಮಾರು 250 ಜನರು ಗಾಯಗೊಂಡಿದ್ದಾರೆ. ಆರ್ಥಿಕ ಬಿಕ್ಕಟ್ಟಿನಲ್ಲಿ ಹೆಚ್ಚುತ್ತಿರುವ ಆಕ್ರೋಶದ ಮಧ್ಯೆ ಆಡಳಿತಾರೂಢ ರಾಜಪಕ್ಸೆ ಕುಟುಂಬಕ್ಕೆ ಸೇರಿದ ಪೂರ್ವಜರ ಮನೆಯನ್ನು ಜನರು  ಸುಟ್ಟುಹಾಕಿದ ನಂತರ ಶ್ರೀಲಂಕಾದಲ್ಲಿ ಕರ್ಫ್ಯೂ ಜಾರಿಯಲ್ಲಿದೆ.

ರಾಜಪಕ್ಸೆ ಕುಟುಂಬದ ನಿಷ್ಠಾವಂತರು ದೇಶದಿಂದ ಪಲಾಯನ ಮಾಡುವುದನ್ನು ತಡೆಯಲು ಸರ್ಕಾರಿ ವಿರೋಧಿ ಪ್ರತಿಭಟನಾಕಾರರು ಕೊಲಂಬೊದ ಬಂಡಾರನಾಯಕೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಿದ್ದಾರೆ.  1948ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದ ನಂತರ ಶ್ರೀಲಂಕಾ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ.

ಈ  ಸುದ್ದಿಯನ್ನು ಇಂಗ್ಲಿಷ್​​ನಲ್ಲಿ  ಓದಲು ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *