ಡಿ ನೋಟಿಫಿಕೇಷನ್ ಪ್ರಕರಣ ಸಂಬಂಧ ಯಡಿಯೂರಪ್ಪ ಅವರನ್ನು ಬಂಧಿಸದಂತೆ ಈ ಹಿಂದೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿತ್ತು. ಈ ಆದೇಶ ರದ್ದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಬಿ.ಎಸ್.ಯಡಿಯೂರಪ್ಪ (ಎಡ ಚಿತ್ರ) ಮತ್ತು ಸುಪ್ರೀಂ ಕೋರ್ಟ್ (ಎಡ ಚಿತ್ರ)
ದೆಹಲಿ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (B.S.Yediyurappa) ವಿರುದ್ಧದ ಡಿ ನೋಟಿಫಿಕೇಷನ್ ಪ್ರಕರಣ (De-notification Case) ಸಂಬಂಧ ನೀಡಲಾಗಿದ್ದ ಮಧ್ಯಂತರ ರಕ್ಷಣೆ ಆದೇಶವನ್ನು ರದ್ದುಗೊಳಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ವಜಾಗೊಳಿಸಿದೆ. ಆ ಮೂಲಕ ಯಡಿಯೂರಪ್ಪ ಅವರಿಗೆ ಮತ್ತೊಮ್ಮೆ ರಿಲೀಫ್ ಸಿಕ್ಕಂತಾಗಿದೆ. ಡಿ ನೋಟಿಫಿಕೇಷನ್ ಪ್ರಕರಣ ಸಂಬಂಧ ಯಡಿಯೂರಪ್ಪ ಅವರನ್ನು ಬಂಧಿಸದಂತೆ ಈ ಹಿಂದೆ ಸುಪ್ರೀಂಕೋರ್ಟ್ ಮಧ್ಯಂತರ ತಡೆ ನೀಡಿತ್ತು. ಇದನ್ನು ಪ್ರಶ್ನಿಸಿರುವ ಸಾಮಾಜಿಕ ಕಾರ್ಯಕರ್ತ ಆಲಂಪಾಷ ಅವರು ಮಧ್ಯಂತರ ರಕ್ಷಣೆ ನೀಡಿದ್ದ ಆದೇಶ ರದ್ದುಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾ.ಬಿ.ಆರ್ ಗವಾಯಿ ನೇತೃತ್ವದ ದ್ವಿ ಸದಸ್ಯ ಪೀಠ, ಅರ್ಜಿ ವಜಾಗೊಳಿಸಿ ಆದೇಶಿಸಿದೆ. ಪ್ರಕರಣದ ಮುಖ್ಯ ಅರ್ಜಿ ವಿಚಾರಣೆ ಜನವರಿ 30ರಂದು ನಡೆಯಲಿದೆ.
ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ವಸತಿ ಯೋಜನೆಗೆ 26 ಎಕರೆ ಭೂಮಿ ಮಂಜೂರು ಮಾಡಿದ ಪ್ರಕರಣ ಇದಾಗಿದೆ. ಈ ಆರೋಪವನ್ನು ಯಡಿಯೂರಪ್ಪ ಮತ್ತು ಮುರುಗೇಶ್ ನಿರಾಣಿ ವಿರುದ್ಧ ಮಾಡಲಾಗಿತ್ತು. 2010-11ರಲ್ಲಿ ನಕಲಿ ದಾಖಲೆ ಹಾಗೂ ನಕಲಿ ಸಹಿ ಬಳಸಿ ಭೂಮಿ ವಾಪಸ್ ಪಡೆದ ಬಗ್ಗೆ ಉದ್ಯಮಿ ಎ.ಆಲಂ ಪಾಷಾ ಅವರು ದೂರು ದಾಖಲಿಸಿದ್ದರು. ಬಳಿಕ ಹೈಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ನಡೆಯಿತು. ತಮ್ಮ ವಿರುದ್ಧದ ವಿಚಾರಣೆ ರದ್ದುಪಡಿಸುವಂತೆ ಕೋರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯನ್ನು ಜ. 5ರಂದು ಹೈಕೋರ್ಟ್ ವಜಾಗೊಳಿಸಿತ್ತು. ಅರ್ಜಿ ವಜಾ ಜೊತೆಗೆ ವಿಚಾರಣೆಗೆ ಆದೇಶ ನೀಡಿತ್ತು.
ತಾಜಾ ಸುದ್ದಿ