Suriya 42: ಅಭಿಮಾನದ ಅತಿರೇಕಕ್ಕೆ ಹೀಗೆಲ್ಲ ಮಾಡಿದ್ರೆ ಹುಷಾರ್​; ಖಡಕ್​ ಎಚ್ಚರಿಕೆ ನೀಡಿದ ಸೂರ್ಯ ಟೀಮ್ | Team Suriya 42nd movie gives strict warning to those who sharing leaked video and photos


Suriya: ಈ ಸಿನಿಮಾದ ಮೇಲೆ ಸೂರ್ಯ ಅವರಿಗೆ ಸಖತ್​ ಕಾಳಜಿ ಇದೆ. 3ಡಿ ವರ್ಷನ್​ನಲ್ಲಿ ಅದ್ದೂರಿಯಾಗಿ ಮೂಡಿಬರಲಿರುವ ಈ ಚಿತ್ರದಲ್ಲಿ ಸೂರ್ಯ ಅವರಿಗೆ ಜೋಡಿಯಾಗಿ ದಿಶಾ ಪಟಾಣಿ ನಟಿಸುತ್ತಿದ್ದಾರೆ.

ನಟ ಸೂರ್ಯ (Suriya) ಅವರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಕಾಲಿವುಡ್​ (Kollywood) ನಟನಾದರೂ ಕೂಡ ಅವರ ಖ್ಯಾತಿ ಕೇವಲ ತಮಿಳುನಾಡಿಗೆ ಸೀಮಿತವಾಗಿಲ್ಲ. ಸೂರ್ಯ ನಟನೆಯ ಸಿನಿಮಾಗಳು ಉತ್ತರ ಭಾರತದಲ್ಲೂ ಉತ್ತಮ ಕಮಾಯಿ ಮಾಡುತ್ತವೆ. ಅವರ ಕೆಲವು ಚಿತ್ರಗಳು ಬಾಲಿವುಡ್​ಗೆ ರಿಮೇಕ್​ ಆಗಿಯೂ ಯಶಸ್ಸು ಕಂಡಿವೆ. ಈಗ ಅವರು ತಮ್ಮ 42ನೇ (Suriya 42) ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆ ಎಲ್ಲರಿಗೂ ಒಂದು ಖಡಕ್​ ಎಚ್ಚರಿಕೆ ರವಾನಿಸಿದ್ದಾರೆ. ಈ ಸಿನಿಮಾದ ಶೂಟಿಂಗ್​ ಸೆಟ್​ನಲ್ಲಿ ಸೆರೆಯಾದ ಕೆಲವು ದೃಶ್ಯದ ತುಣುಕುಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಕೆಲವರು ಲೀಕ್​ ಮಾಡುತ್ತಿದ್ದಾರೆ. ಕೆಲವು ಅಭಿಮಾನಿಗಳು ಕೂಡ ಇದನ್ನು ಶೇರ್​ ಮಾಡಿಕೊಳ್ಳುತ್ತಿದ್ದಾರೆ. ಆದರೆ ಹೀಗೆಲ್ಲ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಚಿತ್ರತಂಡದವರು ಎಚ್ಚರಿಕೆ ನೀಡಿದ್ದಾರೆ.

ತಮ್ಮ ನೆಚ್ಚಿನ ನಟನ ಹೊಸ ಸಿನಿಮಾದ ಬಗ್ಗೆ ಅಪ್​ಡೇಟ್​ ತಿಳಿಯಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಹೊಸ ಫೋಟೋ, ಪೋಸ್ಟರ್​ ಅಥವಾ ಚಿಕ್ಕ ವಿಡಿಯೋ ಸಿಕ್ಕರೂ ಹಂಚಿ ಹಬ್ಬ ಮಾಡಲು ಕಾದಿರುತ್ತಾರೆ ಅಭಿಮಾನಿಗಳು. ಆದರೆ, ಶೇರ್ ಮಾಡುತ್ತಿರುವ ಕಂಟೆಂಟ್​ ಅಧಿಕೃತವೋ ಅಲ್ಲವೋ ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಾಗುವುದು ಅಗತ್ಯ. ಸದ್ಯ ಸೂರ್ಯ ಅವರ 42ನೇ ಸಿನಿಮಾದ ಶೂಟಿಂಗ್​ ಸೆಟ್​ನಿಂದ ಲೀಕ್​ ಆದ ದೃಶ್ಯಗಳನ್ನು ಶೇರ್ ಮಾಡುತ್ತಿರುವುದು ತಪ್ಪು ಎಂದು ಚಿತ್ರತಂಡ ಖಂಡಿಸಿದೆ.

ಈ ಸಿನಿಮಾದ ಮೇಲೆ ಸ್ವತಃ ಸೂರ್ಯ ಅವರಿಗೆ ಸಖತ್​ ಕಾಳಜಿ ಇದೆ. 3ಡಿ ವರ್ಷನ್​ನಲ್ಲಿ ಈ ಚಿತ್ರ ಮೂಡಿಬರಲಿದೆ. ಸೂರ್ಯ ಅವರಿಗೆ ಜೋಡಿಯಾಗಿ ದಿಶಾ ಪಟಾಣಿ ನಟಿಸುತ್ತಿದ್ದಾರೆ. ಅದ್ದೂರಿ ಬಜೆಟ್​ನಲ್ಲಿ ಇದು ಸಿದ್ಧವಾಗುತ್ತಿದ್ದು, ಚಿತ್ರಮಂದಿರದಲ್ಲಿ ಪ್ರೇಕ್ಷಕರಿಗೆ ಹೊಸ ಅನುಭವ ನೀಡಬೇಕು ಎಂಬುದು ತಂಡದ ಉದ್ದೇಶ. ಅದಕ್ಕೂ ಮುನ್ನವೇ ಈ ರೀತಿ ದೃಶ್ಯಗಳು ಲೀಕ್​ ಆದರೆ ಅಸಲಿ ಮಜಾ ಮಾಯವಾಗುತ್ತದೆ. ಅದನ್ನು ತಪ್ಪಿಸಲು ಸೋಶಿಯಲ್​ ಮೀಡಿಯಾ ಮೂಲಕ ನಿರ್ಮಾಪಕರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

‘ಪ್ರತಿ ದೃಶ್ಯದ ಹಿಂದೆ ಚಿತ್ರತಂಡದ ಪರಿಶ್ರಮ ಇರುತ್ತದೆ. ಅದನ್ನು ಹಾಳು ಮಾಡಬೇಡಿ. ಈಗಾಗಲೇ ಹಂಚಿಕೊಂಡಿರುವ ವಿಡಿಯೋ ಮತ್ತು ಫೋಟೋವನ್ನು ಡಿಲೀಟ್​ ಮಾಡಿದರೆ ಒಳ್ಳೆಯದು. ಮತ್ತೆ ಶೇರ್​ ಮಾಡಿದರೆ ಕಾಪಿರೈಟ್​ ನಿಯಮದ ಪ್ರಕಾರ ಕಾನೂನು ಕ್ರಮ ಕೈಕೊಳ್ಳುತ್ತೇವೆ’ ಎಂದು ಸ್ಡುಡಿಯೋ ಗ್ರೀನ್​ ಸಂಸ್ಥೆ ಟ್ವೀಟ್​ ಮಾಡಿದೆ.

ಸೂರ್ಯ ಅವರು ‘ಸೂರರೈ ಪೋಟ್ರು’, ‘ಜೈ ಭೀಮ್​’ ಸಿನಿಮಾಗಳ ಮೂಲಕ ಭರ್ಜರಿ ಯಶಸ್ಸು ಪಡೆದುಕೊಂಡಿದ್ದಾರೆ. ಹಾಗಾಗಿ ಅವರ ಮುಂದಿನ ಸಿನಿಮಾ ಬಗ್ಗೆ ಸಹಜವಾಗಿಯೇ ನಿರೀಕ್ಷೆ ಮನೆ ಮಾಡಿದೆ.

TV9 Kannada


Leave a Reply

Your email address will not be published.