ಸ್ವರಾ ಭಾಸ್ಕರ್
ನಟ- ನಟಿಯರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಎದುರಾಗುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಅಸಭ್ಯ ಭಾಷೆಯಲ್ಲಿ ಕಾಮೆಂಟ್ಗಳು, ಚುಚ್ಚು ಮಾತುಗಳು ಕೇಳಿ ಬರುತ್ತವೆ. ಬಹುತೇಕ ಬಾರಿ ಅಂಥದ್ದನ್ನು ತಾರೆಯರು ನಿರ್ಲಕ್ಷಿಸುತ್ತಾರೆ. ಆದರೆ ಕೆಲವರು ಅವುಗಳಿಗೆ ಖಡಕ್ ಆಗಿ ಉತ್ತರಿಸಿ, ಲಂಗುಲಗಾಮಿಲ್ಲದೆ ಕಾಮೆಂಟ್ ಮಾಡುವವರ ಬಾಯಿ ಮುಚ್ಚಿಸುತ್ತಾರೆ. ಬಾಲಿವುಡ್ ನಟಿ ಸ್ವರಾ ಭಾಸ್ಕರ್ (Swara Bhasker) ಈ ಹಿಂದೆ ಕೂಡ ತಮ್ಮ ನೇರ ಮಾತುಗಳಿಂದ ಸುದ್ದಿಯಾಗಿದ್ದವರು. ಇತ್ತೀಚೆಗೆ ಟ್ವಿಟರ್ನಲ್ಲಿ ಅವರ ಫೋಟೋವೊಂದಕ್ಕೆ ಕೀಳುಮಟ್ಟದ ಪ್ರತಿಕ್ರಿಯೆ ಬರೆದಿದ್ದವರಿಗೆ ಅವರು ಪ್ರತಿಕ್ರಿಯೆ ನೀಡಿದ್ದು, ಸಖತ್ ಸುದ್ದಿಯಾಗಿದೆ.
ಸ್ವರಾ ಭಾಸ್ಕರ್ ಹಂಚಿಕೊಂಡಿರುವ ಟ್ವೀಟ್ ಇಲ್ಲಿದೆ:
A sari, a park, a walk, a book.. ‘at peace’ must feel like this 💛✨#smalljoys #gratitude #feelingwise 🙂 pic.twitter.com/QREYOLYnyO
— Swara Bhasker (@ReallySwara) November 9, 2021
ಸ್ವರ ಭಾಸ್ಕರ್ ತಮ್ಮ ಚಿತ್ರವೊಂದನ್ನು ಟ್ವೀಟ್ ಮಾಡಿದ್ದರು. ಅದರಲ್ಲಿ ಅವರು ತಮ್ಮ ಮುಖದ ಚಿತ್ರವೊಂದನ್ನು ಹಂಚಿಕೊಂಡಿದ್ದರು. ಅದಕ್ಕೆ ಸುಂದರವಾದ ಕ್ಯಾಪ್ಶನ್ ಕೂಡ ನೀಡಿದ್ದರು. ಆದರೆ ಅದಕ್ಕೆ ನೆಟ್ಟಿಗರೋರ್ವರು ಕೀಳುದರ್ಜೆಯ ಕಾಮೆಂಟ್ ಮಾಡಿದ್ದಾರೆ. ‘ನಮ್ಮ ಮನೆಯ ಕೆಲಸದಾಳು ಸೀರೆಯಲ್ಲಿ ನಿಮಗಿಂತ ಚೆನ್ನಾಗಿ ಕಾಣಿಸುತ್ತಾರೆ’ ಎಂದು ಬರೆದಿದ್ದಾರೆ. ಅದನ್ನು ನೋಡಿದ ಸ್ವರಾ, ಪ್ರತಿಕ್ರಿಯೆ ನೀಡಿದ್ದು, ‘ಖಂಡಿತವಾಗಿಯೂ ನಿಮ್ಮ ಮನೆಯ ಕೆಲಸದವರು ಚೆನ್ನಾಗಿದ್ದಾರೆ. ನೀವು ಆಕೆಯ ಘನತೆ ಮತ್ತು ಶ್ರಮವನ್ನು ಗೌರವಿಸುತ್ತೀರಿ ಎಂದು ಭಾವಿಸುತ್ತೇನೆ. ಆಕೆಯೊಂದಿಗೆ ಕೆಟ್ಟದಾಗಿ ವರ್ತಿಸಬೇಡಿ’ ಎಂದು ಬರೆದಿದ್ಧಾರೆ. ಸ್ವರಾ ನೀಡಿರುವ ಪ್ರತಿಕ್ರಿಯೆ ಎಲ್ಲರ ಗಮನ ಸೆಳೆದಿದ್ದು, ದಿಟ್ಟ ಉತ್ತರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಸ್ವರಾ ಬರೆದಿರುವ ಪ್ರತಿಕ್ರಿಯೆ ಇಲ್ಲಿದೆ:

ಸ್ವರ ಭಾಸ್ಕರ್ ನೀಡಿರುವ ಪ್ರತಿಕ್ರಿಯೆ
ಸ್ವರಾ ಸಾಮಾಜಿಕ ಜಾಲತಾಣದಲ್ಲಿ ಹೀಗೆ ಸುದ್ದಿಯಾಗುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಮ್ಯಾಗಜೀನ್ ಒಂದರಲ್ಲಿ ಅವರು ಕಾಣಿಸಿಕೊಂಡಿದ್ದಕ್ಕೆ ಕಡಿಮೆ ಆದಾಯ ಹೊಂದಿದ ಪ್ರದೇಶದವರೂ ಮ್ಯಾಗಜೀನ್ನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಟೀಕಿಸಲಾಗಿತ್ತು. ಅದಕ್ಕೂ ಕೂಡ ಸ್ವರಾ ಖಡಕ್ ಉತ್ತರ ನೀಡಿ, ‘ಯಾಕಾಗಬಾರದು’ ಎಂದು ಪ್ರಶ್ನಿಸಿದ್ದರು. ಇದಲ್ಲದೇ ತಮ್ಮ ನೇರ ನುಡಿಗಳಿಂದ ಸ್ವರಾ ಆಗಾಗ ಸದ್ದು ಮಾಡುತ್ತಲೇ ಇರುತ್ತಾರೆ.
ಸ್ವರಾ ‘ತನು ವೆಡ್ಸ್ ಮನು’ ಚಿತ್ರದಿಂದ ಖ್ಯಾತಿ ಗಳಿಸಿದರು. ನಂತರ ‘ರಾಂಝಾನಾ’, ‘ತನು ವೆಡ್ಸ್ ಮನು ರಿಟರ್ನ್ಸ್’, ಪ್ರೇಮ್ ರತನ್ ಧನ್ ಪಾಯೋ ಮೊದಲಾದ ಚಿತ್ರಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದರು. ಸ್ವರಾ ಬತ್ತಳಿಕೆಯಲ್ಲಿ ‘ಶೀರ್ ಕೋರ್ಮಾ’ ಸೇರಿದಂತೆ ಹಲವು ಚಿತ್ರಗಳಿವೆ.
ಇದನ್ನೂ ಓದಿ:
ಟ್ರೋಲ್ ಆಗುವ ಈ ಗಾಯಕಿ ಬಗ್ಗೆ ನಿಮಗೆಷ್ಟು ಗೊತ್ತು? ಇವರ ಖಾತೆಯಲ್ಲಿವೆ ಹಿಟ್ ಸಾಂಗ್ಸ್, ಪ್ರತಿಷ್ಠಿತ ಅವಾರ್ಡ್ಸ್
ಆರ್ಆರ್ಆರ್ ಚಿತ್ರದ ಪ್ರಮೋಷನ್ಗಾಗಿ ದೊಡ್ಡ ತ್ಯಾಗಕ್ಕೆ ಸಿದ್ಧರಾದ ಜ್ಯೂ.ಎನ್ಟಿಆರ್