Sydney Diary : ಬಕ್ಕೇಶ್ವರ, ಬಸವಾರಾಧ್ಯ, ರಾಘವೇಂದ್ರಸ್ವಾಮಿ, ಗುರುವಾಯೂರಪ್ಪನ ಆಶೀರ್ವಾದದಿಂದ… | Sydney Diary on Social media addiction by Shriharsha Salimat


Sydney Diary : ಬಕ್ಕೇಶ್ವರ, ಬಸವಾರಾಧ್ಯ, ರಾಘವೇಂದ್ರಸ್ವಾಮಿ, ಗುರುವಾಯೂರಪ್ಪನ ಆಶೀರ್ವಾದದಿಂದ...

Sydney Diary : ಸಿಡ್ನಿ ಡೈರಿ – What’s the big deal? ನನ್ನ ಮಗ ಜನರ ಕಣ್ಣೀರು ಒರೆಸಿದ, ಒಬ್ಬರಿಗೆ ನ್ಯಾಯ ಕೊಡಿಸಿದ, ಶಾಲೆ ಕಟ್ಟಿಸಿದ, ಕಕ್ಕಸು ತೊಳೆದ, ರೋಗಿಗಳ ಸೇವೆ ಮಾಡಿದ ಇಂತಾವು ಬರೆಯಲಿ ಜುಕರ್ಬರ್ಗಪ್ಪ ಫೇಸ್ ಬುಕ್ ಹುಟ್ಟು ಹಾಕಿದ್ದಕ್ಕೂ ಸಾರ್ಥಕವಾಗುತ್ತದೆ. ಎಸ್ಸೆಲ್ಸಿ ಪಾಸು ಮಾಡಿದ್ದಕ್ಕೆ “ನನ್ನ ಮಗ ಅಭಿಷೇಕ್ ಬಚ್ಚನ್ ಆಗಲಿಲ್ಲ ಎಂದು ಸಮಾಧಾನವಾಯಿತು” ಅಂತ ಒಬ್ಬರು ಹಾಕಿಕೊಂಡಿದ್ದರು. ಕಡೆಗೆ ಆತ ಅವರಪ್ಪನಂತೆ ಸಿವಿಲ್ ಇಂಜಿನಿಯರೇ ಆದ, ಆತನ ಕಾಂಟ್ರಾಕ್ಟುಗಳನ್ನೇ ಮುಂದುವರೆಸಿಕೊಂಡು ಹೋದ ಅನ್ನಿ! ಕಾಂಟ್ರಾಕ್ಟುಗಳನ್ನು ಮುಂದುವರೆಸಿಕೊಂಡು ಹೋದಾಗ ಅಪ್ಪನ ಲೆಗಸಿಯನ್ನು ಮುಂದುವರೆಸಿಕೊಂಡು ಹೋದ ಮಗ ಅಂತಲೂ ಹೆಮ್ಮೆಯಿಂದ ಹಾಕಿಕೊಂಡರು. ಕಮೆಂಟು ಹಾಕುವ ಐನ್ ಸ್ಟೈನ್ ಮೆದುಳುಗಳು ಮೊದಲನೆಯ ಸಂದರ್ಭದಲ್ಲಿ ಹೌದು ನಿಮ್ಮ ಮಗ ಸ್ವಂತ ಶಕ್ತಿಯಿಂದಲೇ ಎಲ್ಲವನ್ನೂ ಸಾಧಿಸಬಲ್ಲ ಪ್ರತಿಬಾವಂತ ಅಂತ ಹಾಕಿದರೆ ಎರಡನೆಯ ಸಂದರ್ಭದಲ್ಲಿ ಅಪ್ಪನ ಉದ್ಯೋಗ ಎಂದರೆ ಮೂಗು ಮುರಿಯುವ ಈ ಕಾಲದಲ್ಲಿ ನಿಮ್ಮ ಮಗನಂತವರು ಅಪರೂಪ ಅಂತ ಕಮೆಂಟು ಹಾಕುವುದು. ಈ ಕಮೆಂಟಿಗರಿಗಾಗಿ ಮನೋರೋಗ ತಜ್ಞರು ಹೊಸದೊಂದು ಹೆಸರು ಕಂಡುಹಿಡಿದು ಅದಕ್ಕಾಗಿ ವಿಶೇಷ ಸಾಮೂಹಿಕ ಅಸ್ಪತ್ರೆಗಳನ್ನು ಕಟ್ಟಬೇಕು.
ಶ್ರೀಹರ್ಷ ಸಾಲಿಮಠ

*

(ಕಂತು : 6)

ನಾನು ಸೋಷಿಯಲ್ ಮೀಡಿಯಾ ಬಿಟ್ಟದ್ದು ತುಂಬಾ ಮಹತ್ವದ ಸಂದರ್ಭದಲ್ಲಿ. ನನ್ನ ಪುಸ್ತಕ ಆಗ ತಾನೆ ಬಿಡುಗಡೆಯಾಗಿತ್ತು. ಪುಸ್ತಕದ ಮಾರ್ಕೆಟಿಂಗ್​ಗಾಗಿ, ಜನರಿಗೆ ತಲುಪಿಸಲು, ಲೇಖಕ ಓದುಗರ ನಡುವೆ ಕೊಂಡಿಯಾಗಲು ಸಾಮಾಜಿಕ ಮಾಧ್ಯಮದ ಅವಶ್ಯಕತೆಯೂ ಇತ್ತು. ಆದರೆ ಸರಿಯಾದ ಸಮಯಕ್ಕೆ ನಾನು ಸಾಮಾಜಿಕ ಮಾಧ್ಯಮಗಳಿಂದ ದೂರವಾದದ್ದು ಪುಸ್ತಕದ ಪ್ರಕಾಶಕರಿಗೂ ಬೇಸರ ತರಿಸಿತ್ತು. ಸಾಮಾಜಿಕ ಮಾಧ್ಯಮಗಳು ನನಗೆ ಮೊದಲಿನಿಂದಲೂ ದೂರ. ನನ್ನ ಟ್ವಿಟರ್ ಇನ್ಸ್ಟಾ ಅಕೌಂಟುಗಳು ಅನೇಕ ವರ್ಷಗಳಿಂದ ಬೀಳುಬಿದ್ದಿವೆ. ಆಗಾಗ ಫೇಸ್​ಬುಕ್​ನಲ್ಲಿ ಕೆಲವು ಪೋಸ್ಟ್​ಗಳನ್ನು ಹಾಕುತ್ತಿದ್ದುದಷ್ಟೇ. ಮೊದಲು ಫೇಸ್​ಬುಕ್​ ಮಾಧ್ಯಮವನ್ನು ಹೇಗೆ ಬಳಸಬೇಕು ಅಂತ ತಿಳಿದುಕೊಳ್ಳಲೇ ವರ್ಷಗಳು ಹಿಡಿದುಹೋದವು.

ಇದೊಂದು ನಾವು ಸಾರ್ವಜನಿಕವಾಗಿ ನಡೆದುಕೊಳ್ಳಬೇಕಾದ ಜಾಗ ಮನೆಯಲ್ಲಿ ಬಾತ್ರೂಮ್​ಗಳಲ್ಲಿ ನಡೆದುಕೊಳ್ಳುವ ಹಾಗೆ ಇಲ್ಲಿ ನಡೆದುಕೊಳ್ಳುವುದಲ್ಲ ಎಂಬುದು ಬಹಳ ಜನರಿಗೆ ಈಗಲೂ ಗೊತ್ತಿಲ್ಲ. ಕೆಲವರಿಗೆ ಗೊತ್ತಿದ್ದರೂ ಅವರು ಬಹುಷಃ ನಿಜ ಜಗತ್ತಿನಲ್ಲಿ ಹಾಗೆಯೇ ನಡೆದುಕೊಳ್ಳುತ್ತಾರೇನೋ! ಸ್ವಂತ ವಿಷಯಗಳಾವುದು ಸಾರ್ವಜನಿಕ ವಿಷಯ ಯಾವುದು ಎಂಬುದರ ಪರಿವೆಯೇ ಇರುವುದಿಲ್ಲ ಕೆಲವರಿಗೆ. ಪ್ರೊಫೈಲ್ ಮತ್ತು ಟೈಮ್​ಲೈನ್ ಫೋಟೋದ ಜೊತೆಗೆ ಯಾವತ್ತೋ ಅಪರೂಪದ ಫೋಟೊವನ್ನು ಹಾಕಿದರೆ ಸಹಿಸಬಹುದು. ಕೆಲವರು ದಿನಾ ತಾನು ವಾಕಿಂಗ್ ಹೋಗಿದ್ದು ಉಂಡದ್ದು ಮಲಗಿದ್ದು ಪ್ರತಿಯೊಂದನ್ನೂ ದಿನವೂ ಫೋಟೊ ಹಾಕಬೇಕು. ಒಬ್ಬ ದಿನಾ ದಿನಾ ತನ್ನ ಹೆಂಡತಿಯ ಭಾವ ಭಂಗಿಗಳ, ಚಾ ಕುಡಿಯುವ, ಕಾರಲ್ಲಿ ಕೂರುವ, ಇಳಿಯುವ ಅಡುಗೆ ಮಾಡುವ, ಪಾತ್ರೆ ತಿಕ್ಕುವ, ಮನೆ ಬಾಗಿಲಿಂದ ಹೊರಹೊಗುವ ಒಳಬರುವ ಎಷ್ಟು ಫೋಟೊಗಳನ್ನು ಹಾಕುತ್ತಿದ್ದನೆಂದರೆ ಕಡೆಗೆ ಆತನನ್ನು ಬ್ಲಾಕ್ ಮಾಡಬೇಕಾಗಿ ಬಂತು. ಕಮೆಂಟ್ ಗಳಲ್ಲಿ ಊರಮಂದಿಯೆಲ್ಲ ‘ಚಿಂದಿ, ಸುಪರ್, ಕ್ಯೂಟ್, ಬ್ಯೂಟಿಫುಲ್, ಎರಡು ಕಣ್ಣು ಸಾಲದು’ ಇತ್ಯಾದಿ ಕಮೆಂಟುಗಳನ್ನು ಆತ ತನ್ನ ಫೋಟೋಗ್ರಫಿ ಚಾತುರ್ಯಕ್ಕೆ ಅಂದುಕೊಂಡಿದ್ದನೇನೋ!

ಹಿಂಗೆ ಒಬ್ಬ ನನ್ನ ಗೆಳೆಯರ ಪಟ್ಟಿಯಲ್ಲಿದ್ದವರೊಬ್ಬರು ತಮ್ಮ ವಂಶೋದ್ಧಾರಕಿಯ ಡಂಗುರ ಸಾರಿಸಲೇ ಅಕೌಂಟು ತೆಗೆದಿದ್ದರು. “ತಿಪ್ಪಿಯೇ ನನ್ನ ಜಗತ್ತು” ಎನ್ನುವುದು ಟ್ಯಾಗ್ ಲೈನು. ದಿನದಿನವೂ ತಿಪ್ಪು ಚಿತ್ರ ಬರೆಯುತ್ತಿದ್ದಾಳೆ, ತಿಪ್ಪಿ ಕುಣಿಯುತ್ತಿದ್ದಾಳೆ, ತಿಪ್ಪಿ ಊಟ ಮಾಡುತ್ತಿದ್ದಾಳೆ, ತಿಪ್ಪಿ ಟಾಯ್ಲೆಟ್ ಬಾಗಿಲು ಹಾಕಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಿದ್ದಾಳೆ, ತಿಪ್ಪಿ ಶಾಲೆಗೆ ಹೋಗುತ್ತಿದ್ದಾಳೆ ಇತ್ಯಾದಿ ನೂರಾರು ವಿಡಿಯೋಗಳು ಫೋಟೋಗಳು. ಹತ್ತು ವರ್ಷದ ತಿಪ್ಪಿ ಎರಡು ವರ್ಷದ ಮಕ್ಕಳಂತೆ ಗೀಚಿ ಗೀಚಿ ಚಿತ್ರ ಬರೆಯುವುದು ಹೆತ್ತವರಿಗೆ ಹೆಗ್ಗಣವೂ ಮುದ್ದಂತೆ, ಆದರೆ ಈ ಹೆಗ್ಗಣ ಊರಿಗೆಲ್ಲ ಹೆಂಗೆ ಮುದ್ದಾಗಲು ಸಾಧ್ಯ? ಇದಕ್ಕೂ ಕೆಲವು “ಅಬ್ಬಾ ಎಂತಾ ಪ್ರತಿಭಾವಂತೆ ತಿಪ್ಪಿ!” ಅಂತ ಉಬ್ಬಿಸುತ್ತಿದ್ದರು. ಅದರಿಂದ ಮದವೇರಿ ಈ ವಮ್ಮ ಮತ್ತೆ ಹತ್ತಾರು ವಿಡಿಯೋಗಳನ್ನು ಹಾಕುವುದು!
ಜೊತೆಗೆ ಅತಿಯಾದ ಟ್ರಾವೆಲ್ ಅಪ್ ಡೇಟುಗಳು. ತಾವು ಯಾವ ಊರಿಗೆ ಹೊರಟಿದ್ದೇವೆ ಯಾಕೆ ಹೊರಟಿದ್ದೇವೆ ಎಲ್ಲಿ ಕೂತಿದ್ದೇವೆ ಎಲ್ಲವೂ ಫೇಸ್ ಬುಕ್ಕಲ್ಲಿ ಅಪ್ ಡೇಟ್ ಆಗಬೇಕು! ಹಿಂಗೇ ಆ ಆಂಟಿಯೂ ಅಮೆರಿಕಕ್ಕೆ ಹೊರಟಿದ್ದರು. ಸಂಜೆ ಹೊರಟರು. ವಿಮಾನ ಹತ್ತಿದ ಕೂಡಲೇ ಸೆಲ್ಫಿ ತೆಗೆದುಕೊಂಡು “ಈಗ ಅಮೇರಿಕದ ಫ್ಲೈಟ್ ಅನ್ನು ಹತ್ತಿದ್ದೇನೆ. ಮಕ್ಕಳು ನನಗಾಗಿ ಕಾಯುತ್ತಿದ್ದಾರೆ” ಎಂಬ ಫೇಸ್ ಬುಕ್ ಅಪ್ ಡೇಟ್. ಮರುದಿನ ಬೆಳಗ್ಗೆ ಏರ್ ಪೋರ್ಟ್ ನಲ್ಲಿ “ನನ್ನ ಮಕ್ಕಳು ನನ್ನನ್ನು ಕರೆದುಕೊಂಡು ಹೋಗಲು ಬಂದಿದ್ದಾರೆ” ಎಂದು ಅವರೊಡನೆ ಸೆಲ್ಫಿಯೊಂದಿಗೆ ಒಂದು ಅಪ್ಡೇಟ್. ಮಧ್ಯಾಹ್ನದ ಹೊತ್ತಿಗೆ “ನನ್ನ ಮಕ್ಕಳು ನನ್ನಿಂದ ತಮ್ಮ ಮಕ್ಕಳ ಮುಕಳಿ ತೊಳೆಸುತ್ತಿದ್ದಾರೆ” ಅಂತ ಮತ್ತೊಂದು ಹೆಮ್ಮೆಯ ಅಪ್​ಡೇಟ್! ಅದಾದ ಮೇಲೆ ಸತತವಾಗಿ ಈ ಫಾರಿನ್ ತಿಪ್ಪಿಗಳು ಮಾಡುವ ತಿಪ್ಪೆಗಳ ವರಾತ. “ನನ್ನ ಹತ್ತು ವರ್ಷದ ಮೊಮ್ಮಗ ನೋಡ್ರೀ ಬಸ್ ಬಂತು ಅಜ್ಜೀ ಅಂತ ಕೂಗ್ತಾನೆ. ಎಷ್ಟು ಜಾಣ” ಅಂತ ಕೊಚ್ಚಿಕೊಂಡು ವಿಡಿಯೋ ಹಾಕುವುದು. ಇಲ್ಲಿಯವರೆಗೆ ಸಹಿಸಿಕೊಳ್ಳಬಹುದು. ಆದರೆ ಕಮೆಂಟುಗಳಿರ್ತಾವಲ್ಲ. “ಅಬ್ಬಾ ಎಂತಾ ಬುದ್ಧಿವಂತ. ನಾವು ಈ ವಯಸ್ಸಿನಲ್ಲಿದ್ದಾಗ ನಮಗೆ ಸಿಂಬಳ ಒರೆಸಿಕೊಳ್ಳುವುದೂ ಗೊತ್ತಿರಲಿಲ್ಲ!” . ಈ ಹತ್ತು ವರ್ಷವಾದರೂ ಸಿಂಬಳ ಒರೆಸಿಕೊಳ್ಳಲು ಕಲಿಯದವನ ಮೆದುಳನ್ನು ಐನ್ ಸ್ಟೈನ್ ನ ಮಿದುಳಿನ ಪಕ್ಕವೇ ಸಮಾಧಿ ಮಾಡಬೇಕು!

ನನ್ನ ಗೆಳೆಯನೊಬ್ಬ ತನ್ನ “ಬಂಡಲ್ ಆಫ್ ಜಾಯ್” ಭೂಮಿಗವತರಿಸಿದ್ದನ್ನು ಹೀಗೆ ಬರೆದುಕೊಂಡಿದ್ದ. ಅವನು ಯರ್ರಾಬಿರ್ರಿ ಆಸ್ತಿಕ. “ಶ್ರೀಬಕ್ಕೆಶ್ವರನ ಕೃಪೆಯಿಂದ, ಶ್ರೀಗುರು ಬಸವಾರಾಧ್ಯರ ಕೃಪೆಯಿಂದ, ಶ್ರೀಗುರು ರಾಘವೇಂದ್ರ ಸ್ವಾಮಿಗಳ ಕೃಪೆಯಿಂದ, ಗುರುವಾಯೂರಪ್ಪನ ಆಶೀರ್ವಾದದಿಂದ, ನಂಜನಗೂಡು ನಂಜುಂಡೇಶ್ವರನ ಕೃಪೆಯಿಂದ ನಮಗೆ ಗಂಡುಮಗು ಹುಟ್ಟಿದೆ”. ನನಗೆ ತಡೆಯಲಾಗಲಿಲ್ಲ. ನಾನು ಕಮೆಂಟಿಸಿದೆ. “ಅಲ್ಲಾ ಸಿಸ್ಯಾ.. ಜಗತ್ತಲ್ಲಿ ಪ್ರಳಯ ಬರಗಾಲ ಹಸಿವು ಬಡತನ ರೋಗ ರುಜಿನಗಳಂಹ ಸಾವಿರಾರು ಸಮಸ್ಯೆಗಳಿವೆ ಅವೆಲ್ಲಾ ಅಟೆಂಡ್ ಮಾಡೋದು ಬಿಟ್ಟು ಈ ದೇವರುಗಳು ನಿನ್ನಂತಾ ಅಯೋಗ್ಯನಿಗೆ ಮಗು ಹುಟ್ಟಿಸೋಕೆ ಇಷ್ಟೊಂದು ಸಮಯ ವ್ಯರ್ಥ ಮಾಡಿದ್ದಾರಲ್ಲ ಇನ್ನು ಈ ಜಗತ್ತು ಉದ್ದಾರ ಆಗ್ತದಾ?”

ಒಬ್ಬ ಲೀಡ್ ತಗೊಂಡರೆ ಸಾವಿರ ಜನ ಸೇರಿಕೊಳ್ಳುತ್ತಾರೆ. ಅದರಲ್ಲೂ ಟ್ರೋಲ್ ಮಹಾನದಿಗೆ ಸೇರುವ ತೊರೆಗಳು ಹೊಳೆಗಳಿಗೇನು ಬರವೇ? ನನ್ನ ಕೆಳಗೇ ಮತ್ತೊಬ್ಬ ಗೆಳೆಯನೊಬ್ಬ “ನೀನು ಬಿಡಪ್ಪಾ ಜಮೀನ್ದಾರ ಮಕ್ಕಳು ಹುಟ್ಟಿಸೋಕು ಕೈಗೊಂದು ಕಾಲಿಗೊಂದು ದೇವರು ಇಟ್ಕೊಂಡಿದಿಯಾ. ನಾವು ನೋಡು ಎಲ್ಲಾ ನಾವೇ ಮಾಡ್ಕೊಬೇಕು!” ಅದಕ್ಕೆ ಉತ್ತರವಾಗಿ ಇನ್ನೊಬ್ಬ ಗೆಳೆಯ “ದೊಡ್ಡ ಮೈಗಳ್ಳ ಇವನು. ಒಂದು ಕೆಲಸಾನೂ ಸ್ವಂತವಾಗಿ ಮಾಡ್ಕೊಳಲ್ಲ. ಇಂತಾ ಕೆಲಸಕ್ಕೂ ದೇವರುಗಳನ್ನು ಚಾಕರಿಗೆ ಇಟ್ಟುಕೊಂಡಿದ್ದಾನೆ.” ಅಂತ ಕಮೆಂಟ್ ಹಾಕಿದ್ದ. ಆತ ಗೆಳೆಯರ ವಾಟ್ಸಾಪ್ ಗ್ರೂಪಲ್ಲಿ ಬಂದು ಎಲ್ಲರೊಡನೆ ಜಗಳಾಡಿದ್ದ!

Sydney Diary Shriharsha Salimat on Social media

ಸೌಜನ್ಯ : ಅಂತರ್ಜಾಲ

ವಾಟ್ಸಾಪ್ ಗ್ರೂಪ್ ಅಂದ ಕೂಡಲೆ ಇನ್ನೊಂದು ನೆನಪಾಯಿತು. ನಮ್ಮ ಸಂಬಂಧಿಕರಲ್ಲೊಬ್ಬ ಹುಡುಗ ಮದುವೆಯಾದ. ಆತನ ಮದುವೆಯನ್ನು ಶತಮಾನದ ಮದುವೆ ಎಂಬಂತೆ ಸಂಭ್ರಮಿಸಲಾಯಿತು. ಯಾವ ಮಟ್ಟಿಗೆ ಸಂಭ್ರಮ ಎಂದರೆ ನಮ್ಮಮ್ಮ ಕರೆಯದೇ ಹೋಗಿದ್ದರು. ಕುಟುಂಬದ ವಾಟ್ಸಾಪ್ ಗ್ರೂಪಲ್ಲಿ ಮದುವೆಯ ಭರ್ಜರಿ ಫೋಟೊಗಳು ಓಡಾಡಿದವು. ಅದಕ್ಕೆಲ್ಲ ಜನಗಳು ವಿವಿಧ ಎಮೋಜಿಗಳನ್ನು ಕಕ್ಕಿಕೊಂಡು ಸಂಭ್ರಮಿಸಿದರು. ಹೀಗೆಲ್ಲ ಆದದ್ದನ್ನು ನೋಡಿ ಆತ ನಿಜಕ್ಕೂ ತಾನು ಮದುವೆಯಾಗುವುದರ ಮೂಲಕ ಜಗತ್ತನ್ನು ಉದ್ಧಾರಕ್ಕೆ ಈಡು ಮಾಡುತ್ತಿದ್ದೇನೆ ಅಂತ ಭ್ರಮಿಸಿಬಿಟ್ಟ. ಅದಾದ ಮೇಲೆ ದಿನವೂ ತಾನು ತನ್ನ ಹೆಂಡತಿ ಯಾರದೊ ಮದುವೆಗೆ ಹೋಗಿದ್ದರ ಸೆಲ್ಫಿ, ಸಿನಿಮಾದಲ್ಲಿ ಕೂತದ್ದರ ಸೆಲ್ಫಿ, ಹೋಟಲಲ್ಲಿ ತಿಂಡಿ ತಿಂದದ್ದರ ಸೆಲ್ಫಿ. ಬೈಕ್ ಓಡಿಸುವ ಸೆಲ್ಫಿ ಗಳನ್ನು ಗುಡ್ಡೆ ಹಾಕತೊಡಗಿದ. ಮೊದಮೊದಲು ಎಲ್ಲರೂ ಎಮೋಜಿಗಳನ್ನು ಚಿಮುಕಿಸಿದರಾದರೂ ಬರ್ತಾ ಬರ್ತಾ ಕಡೆಗಣಿಸತೊಡಗಿದರು. ಆತ ಹನಿಮೂನ್ ಗೆ ಹೊರಟ. ಎಂದಿನಂತೆ ವಿಮಾನ ಹತ್ತುವಾಗ ಒಂದು ಫೋಟೊ, ಹತ್ತಿ ಕೂತ ಮೇಲೆ ಒಂದು ಫೋಟೊ, ಇಳಿದ ಮೇಲೆ, ಹೋಟಲ್ ಗೆ ಚೆಕಿನ್ ಮಾಡುವಾಗ ಒಂದು ಫೊಟೋ. ಅತಿಯಾದ ಫೋಟೊ ಬೇಧಿಯಿಂದ ಬೇಸತ್ತು ಹೋಗಿದ್ದ ನಾನು “ತಮ್ಮಾ ಇಲ್ಲಿಯವರೆಗಿನದು ಓಕೆ. ಇಲ್ಲಿಂದ ಮುಂದಿನದ್ದು ನಾವೆಲ್ಲ ಮಾಡಿರೋದೆ. ಕಲಯೋ ಅಂತದ್ದು ಏನೂ ಇಲ್ಲ. ಕ್ಯಾಮರಾ ಬಂದ್ ಮಾಡಿಕೊ!” ಅಂತ ಹಾಕಿದೆ. ಎರಡೇ ಕ್ಷಣಗಳಲ್ಲಿ ನನ್ನನ್ನು ಗ್ರೂಪ್ ನಿಂದ ಹೊರಹಾಕಲಾಯಿತು! ವಾಟ್ಸಾಪ್ ಹೋಗಲಿ ಕೆಲವರಿಗೆ ಫೇಸ್​ಬುಕ್ಕಲ್ಲೂ ಇದನ್ನು ಹಾಕಿಕೊಳ್ಳುವ ಚಟ. ಪ್ರತಿ ದಿನ ತಿಂಗಳುಗಟ್ಟಲೆ ನೂರಾರು ಫೋಟೊಗಳು. ಪ್ರತಿ ಫೋಟೊ ಗುಚ್ಚಕ್ಕೂ “ಸೂಪರ್ ಜೋಡಿ” ಅನ್ನುವ ಕಮೆಂಟುಗಳು ಅವರಿಗೆ ವಯಾಗ್ರಾ ನುಂಗಿದ ಕಿಕ್ ತಂದುಕೊಡುತ್ತೇನೋ. ಈ ಕಿಕ್​ನಲ್ಲೇ ಒಂದು ಬಂಡಲ್ ಆಫ್ ಜಾಯನ್ನು ಭೂಮಿಗೆ ತರುತ್ತಿದ್ದಂತೆ ಅದೆಲ್ಲಿ ನಾಪತ್ತೆ ಆಗಿಬಿಡುತ್ತಾರೋ ಆಗಿಬಿಡುತ್ತಾರೆ. ಬಂಡಲ್ ಆಫ್ ಜಾಯಿ ಸೂಪರ್ ಜೋಡಿಯನ್ನು ದುಡಿಮೆಗೆ ಬಗ್ಗಿಸಿರುತ್ತದೆ. ಅದು ಬಂಡಲ್ ಆಫ್ ಜಾಯಿ ಅಲ್ಲ ಬಂಡಲ್ ಆಫ್ ಸ್ಟ್ರೆಸ್ಸು ಅಂತ ಆಫ್ ಲೈನಲ್ಲಿ ಅನೇಕರು ಗೊಣಗಿಕೊಂಡಿದ್ದಾರೆ ನನ್ನೆದುರಿಗೆ!

ನನಗೆ ಇನ್ನೊಂದು ಚಟ ಅರ್ಥವಾಗುವುದಿಲ್ಲ. ತನ್ನ ಹೆಂಡತಿಗೆ ಫೇಸ್ ಬುಕ್ ನಲ್ಲಿ ಯಾಕೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಬೇಕು ಅಂತ. ಮನೆಯಲ್ಲಿ ಎದುರಿಗೆ ಇರುತ್ತಾಳಲ್ವಾ? ಅಲ್ಲೆ ಒಂದು ಕೇಕ್ ತಂದುಕೊಟ್ಟು ಹೆಚ್ಚಿಸಿ ತಿನ್ನಿಸಿ ಸಂಭ್ರಮಿಸಿದರಾಯ್ತು. ಊರಿಗೆಲ್ಲ ಕೇಳುವಂತೆ “ಚಿನ್ನಾ ಪುಟ್ಟಿ ಕಂದಾ.. ನಿನ್ನಿಂದನೇ ನಾನು ಉದ್ಧಾರ ಆಗಿರೋದು. ನೀನಿಲ್ಲ ಅಂದರೆ ನಾನು ಭೂಮಿ ಮೇಲ ಹುಟ್ಟಿರೊದೇ ವೇಸ್ಟು..” ಅಂತೆಲ್ಲ ಹಾಕಿಕೊಳ್ಳೋದು. ಈ ಮಾತಂತೂ ಸತ್ಯ ಇವರೆಲ್ಲ ಭೂಮಿ ಮೇಲೆ ಇರೋದು ವೇಸ್ಟೇ! ಇದನ್ನ ಓದಿ ಪಾಪ ಹಿಂಗೆ ಬರೆದವನ ತಾಯಿಗೆ ಲೈಟಾಗಿ ಕುದಿತಿರುತ್ತೆ, ಆದರೆ ಪಾಪ ಅವರಾದರೂ ಏನು ಮಾಡಕಾಗುತ್ತೆ? ಆದರೂ ಹಿಂಗೆಲ್ಲಾ ಹಾಕಿಕೊಂಡಾಗ ಬರ್ತಡೇ ಗಿಫ್ಟಿನ ಮೇಲಿನ ಖರ್ಚು ಗಣನೀಯವಾಗಿ ಕಡಿಮೆ ಆಗುತ್ತದೆ ಅಂತ ಕೇಳಿದ್ದೇನೆ.
ಇನ್ನೊಂದು ದೊಡ್ಡ ಕಿರಿಕಿರಿ ಅಂದರೆ ಎಸ್ಸೆಲ್ಸಿ ಪಾಸಾಗುವುದು. ರಿಸಲ್ಟ್ ಬರೋ ದಿನ ಬೆಳಗ್ಗೆ “ಲೂಸರ್” ಗಳ ಲೋಕ! ನಾನೂ ಎಸ್ಸೆಲ್ಸಿ ಡುಮುಕಿ ಹೊಡೆದಿದ್ದೆ. ಆದರೆ ಈಗ ನೋಡಿ ಎಂತಾ ಪರಿ ಉದ್ಧಾರ ಆಗಿದ್ದೇನೆ. ತೀರಾ ಕಡಿಮೆ ಮಾರ್ಕು ಬಂದಿತ್ತು. ಇವತ್ತು ಏನೇನೊ ಕಡಿದು ಕಟ್ಟಿ ಹಾಕದ್ದೇನೆ ಇತ್ಯಾದಿ ಇತ್ಯಾದಿ.

ಇರಲಿ ಪಾಪ. ಕೆಲವರು ತಮ್ಮ ಜೀವನದಲ್ಲಿ ಯಾವತ್ತೂ ಇನ್ನೊಬ್ಬರಿಗೆ ಸ್ಪೂರ್ತಿಯಾದವರಲ್ಲ. ಎಸ್ಸೆಲ್ಸಿ ಫೇಲಾಗಿ ತಿಣುಕಿ ಒಂದು ಯಾವುದೋ ನವುಕರಿ ಹಿಡಿದು ಗುಂಪಲ್ಲೊಂದಾಗಿ ಬಾಳುತ್ತಾ ಎರಡು ಮಕ್ಕಳು ಹುಟ್ಟಿಸಿದವರಿಗೆ ತಮ್ಮನ್ನು ಪ್ರೊಜೆಕ್ಟ್ ಮಾಡಿಕೊಳ್ಳಲು ಈ ಸೋಲನ್ನು ಗ್ಲಾಮರೈಸ್ ಮಾಡುವುದು ಒಂದು ಒಳ್ಳೆಯ ಅವಕಾಶ! ರಿಸಲ್ಟ್ ಬಂದ ಮೇಲೆ ಮಕ್ಕಳು ಪಾಸಾಗಿಬಿಟ್ಟ ಸಂಭ್ರಮ. ಇದೇನು ಯಾರೂ ಮಾಡದ ಕೆಲಸವೇ? ಲಕ್ಷಾಂತರ ಮಕ್ಕಳು ಪಾಸಾಗಿರ್ತಾರೆ. ನನ್ನ ಮಗ ಎಸ್ಸೆಲ್ಸಿ ಪಾಸ್ ಮಾಡಿದ, ನನ್ನ ಮಗೆ ಹಡೆದ, ನನ್ನ ಮಗ ಮನೆ ಕಟ್ಟಿಸಿದ, ನನ್ನ ಮಗ ಕಾರು ತಗೊಂಡ.. what’s the big deal? ನನ್ನ ಮಗ ಜನರ ಕಣ್ಣೀರು ಒರೆಸಿದ, ಒಬ್ಬರಿಗೆ ನ್ಯಾಯ ಕೊಡಿಸಿದ, ಶಾಲೆ ಕಟ್ಟಿಸಿದ, ಕಕ್ಕಸು ತೊಳೆದ, ರೋಗಿಗಳ ಸೇವೆ ಮಾಡಿದ ಇಂತಾವು ಬರೆಯಲಿ ಜುಕರ್ಬರ್ಗಪ್ಪ ಫೇಸ್ ಬುಕ್ ಹುಟ್ಟು ಹಾಕಿದ್ದಕ್ಕೂ ಸಾರ್ಥಕವಾಗುತ್ತದೆ. ಎಸ್ಸೆಲ್ಸಿ ಪಾಸು ಮಾಡಿದ್ದಕ್ಕೆ “ನನ್ನ ಮಗ ಅಭಿಷೇಕ್ ಬಚ್ಚನ್ ಆಗಲಿಲ್ಲ ಎಂದು ಸಮಾಧಾನವಾಯಿತು” ಅಂತ ಒಬ್ಬರು ಹಾಕಿಕೊಂಡಿದ್ದರು. ಕಡೆಗೆ ಆತ ಅವರಪ್ಪನಂತೆ ಸಿವಿಲ್ ಇಂಜಿನಿಯರೇ ಆದ, ಆತನ ಕಾಂಟ್ರಾಕ್ಟುಗಳನ್ನೇ ಮುಂದುವರೆಸಿಕೊಂಡು ಹೋದ ಅನ್ನಿ! ಕಾಂಟ್ರಾಕ್ಟುಗಳನ್ನು ಮುಂದುವರೆಸಿಕೊಂಡು ಹೋದಾಗ ಅಪ್ಪನ ಲೆಗಸಿಯನ್ನು ಮುಂದುವರೆಸಿಕೊಂಡು ಹೋದ ಮಗ ಅಂತಲೂ ಹೆಮ್ಮೆಯಿಂದ ಹಾಕಿಕೊಂಡರು. ಕಮೆಂಟು ಹಾಕುವ ಐನ್ ಸ್ಟೈನ್ ಮೆದುಳುಗಳು ಮೊದಲನೆಯ ಸಂದರ್ಭದಲ್ಲಿ ಹೌದು ನಿಮ್ಮ ಮಗ ಸ್ವಂತ ಶಕ್ತಿಯಿಂದಲೇ ಎಲ್ಲವನ್ನೂ ಸಾಧಿಸಬಲ್ಲ ಪ್ರತಿಬಾವಂತ ಅಂತ ಹಾಕಿದರೆ ಎರಡನೆಯ ಸಂದರ್ಭದಲ್ಲಿ ಅಪ್ಪನ ಉದ್ಯೋಗ ಎಂದರೆ ಮೂಗು ಮುರಿಯುವ ಈ ಕಾಲದಲ್ಲಿ ನಿಮ್ಮ ಮಗನಂತವರು ಅಪರೂಪ ಅಂತ ಕಮೆಂಟು ಹಾಕುವುದು. ಈ ಕಮೆಂಟಿಗರಿಗಾಗಿ ಮನೋರೋಗ ತಜ್ಞರು ಹೊಸದೊಂದು ಹೆಸರು ಕಂಡುಹಿಡಿದು ಅದಕ್ಕಾಗಿ ವಿಶೇಷ ಸಾಮೂಹಿಕ ಅಸ್ಪತ್ರೆಗಳನ್ನು ಕಟ್ಟಬೇಕು.

ಸಾಮಾಜಿಕ ಜಾಲತಾಣಗಳು ದಾರಿಯಲ್ಲಿ ನಡೆದುಕೊಂಡು ಹೊಗುವವರಿಗೆಲ್ಲ ಮೈಕು ಕೊಟ್ಟಂತೆ. ಬರೀ ಎಲ್ಲೆಡೆ ಗದ್ದಲ ಗದ್ದಲ ಗದ್ದಲ. ಒಬ್ಬ ತಾನು ಜಳಕ ಮಾಡಿದೆ ಅಂತ ಕೂಗಿದರೆ ಇನ್ನೊಬ್ಬ ತನ್ನ ಮೆಚ್ಚಿನ ರಾಜಕಾರಣಿಯಿಂದಲೇ ದೇಶ ಉದ್ದಾರ ಆಗೋದು ಅಂತ ಕೂಗುತ್ತಾನೆ. ಮತ್ತೊಬ್ಬ ನನ್ನ ಹೆಂಡತಿಯೇ ಜಗತ್ಸುಂದರಿ ಅಂದರೆ ಮತ್ತೊಬ್ಬ ನಮ್ಮ ಚಿತ್ರನಟನೇ ಸುರಸುಂದರಾಂಗ ಅಂತ ಕೂಗುತ್ತಿರುತ್ತಾನೆ. ದಾರಿ ಉದ್ದಕ್ಕೂ ಹೋಗುವಾಗ ಹಿಂಗೆ ಸುತ್ತಲೂ ಮೈಕ್ ಹಿಡಿದುಕೊಂಡು ಜನ ಕೂಗುತ್ತಿದ್ದರೆ ಅದೆಂತಹ ಶಾಂತಿ ನೆಮ್ಮದಿ ಇದ್ದೀತು? ಒಂದು ಹಂತದಲ್ಲಿ ನಮ್ಮ ಸುತ್ತ ನಿಜವಾದ ಜಗತ್ತು ಒಂದಿದೆ ಎಂಬುದೇ ಮರೆತುಹೋಗುತ್ತದೆ. ಸಾಮಾಜಿಕ ಜಾಲತಾಣದ ಪಾತ್ರಗಳೇ ನಮ್ಮ ಸುತ್ತಲಿನ ಜಗತ್ತಿನ ಪಾತ್ರಗಳು ಎಂಬಂತೆ ಮುಳುಗಿ ಹೋಗಿಬಿಟ್ಟಿರುತ್ತೇವೆ. ಯಾವತ್ತೂ ಕಂಡೇ ಇರದ ನೋಡೇ ಇರದ ಜನರ ಬಗ್ಗೆ ದ್ವೇಶ ಅಸಹನೆ ಬೆಳೆಸಿಕೊಂಡಿರುತ್ತೇವೆ. ನಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತೇವೆ. ಇದಕ್ಕಾಗಿ ದೊಡ್ಡ ದೊಡ್ಡ ಕಂಪನಿಗಳಿಗೆ ಡಾಟಾ ಸಪ್ಲೈ ಮಾಡುತ್ತೇವೆ. ಅವರಿಗೆ ಪುಗಸಟ್ಟೆ ಡಾಟಾ ಸಪ್ಲೈ ಮಾಡಲು ನಮ್ಮ ಮಕ್ಕಳ ಜೊತೆ ಕಳೆಯಬೇಕಾದ ಸುಂದರ ಕ್ಷಣಗಳನ್ನು ಕಳೆದುಕೊಳ್ಳುತ್ತೇವೆ. ಮುಂದೆ ಮಕ್ಕಳೂ ಸಹ ಈ ಕೃತಕ ಜಗತ್ತಲ್ಲಿ ಕಳೆದುಹೋಗುದಾಗ ನಾವು ಒಂಟಿತನ ಅನುಭವಿಸುತ್ತೇವೆ.

ಹಿಂದಿನ ಕಂತು : Sydney Diary : ‘ಮಕ್ಕಳು ಪಾರೆನ್​ನಾಗೆ ಅದಾರೆ’ ಹೇಳಿಕೊಳ್ಳುವ ಹೆಮ್ಮೆ ಬೇಕೋ, ಅವರ ಜೊತೆಗಿರುವ ಸುಖ ಬೇಕೋ?

TV9 Kannada


Leave a Reply

Your email address will not be published. Required fields are marked *