T20 Blast: ಸಿಕ್ಸ್​-ಫೋರ್​ಗಳ ಸುರಿಮಳೆ: ಟಿ20 ಬ್ಲಾಸ್ಟ್​ನಲ್ಲಿ ಅಬ್ಬರಿಸಿದ RCB ಆಟಗಾರ | Yorkshire beat Durham Yorkshire won by 6 wickets


ಟಿ20 ಬ್ಲಾಸ್ಟ್​ನ ನಾರ್ತ್​ ಗ್ರೂಪ್ ಪಂದ್ಯದಲ್ಲಿ ಯಾರ್ಕ್‌ಷೈರ್ ಹಾಗೂ ಡರ್ಹಾಮ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಯಾರ್ಕ್​ಷೈರ್​ ನಾಯಕನಾಗಿ ಕಾಣಿಸಿಕೊಂಡ ಡೇವಿಡ್ ವಿಲ್ಲಿ ಆಲ್​ರೌಂಡರ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ ಸೀಸನ್​ 15 ನಲ್ಲಿ ಆರ್​ಸಿಬಿ (RCB) ತಂಡವು 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಹೊಸ ನಾಯಕ ಫಾಫ್ ಡುಪ್ಲೆಸಿಸ್ ನೇತೃತ್ವದಲ್ಲಿ ಕಣಕ್ಕಿಳಿದ ಆರ್​ಸಿಬಿ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದ ಸೋಲುವ ಮೂಲಕ ಐಪಿಎಲ್ ಅಭಿಯಾನ ಅಂತ್ಯಗೊಳಿಸಿತ್ತು. ವಿಶೇಷ ಎಂದರೆ ಈ ಬಾರಿ 22 ಆಟಗಾರರನ್ನು ಒಳಗೊಂಡ ಆರ್​ಸಿಬಿ ಪರ 17 ಆಟಗಾರರು ಕಣಕ್ಕಿಳಿದಿದ್ದರು. ಇವರಲ್ಲಿ ಆಲ್​ರೌಂಡರ್ ಡೇವಿಡ್ ವಿಲ್ಲಿ ಕೂಡ ಒಬ್ಬರು. ಆರ್​ಸಿಬಿ ತಂಡದ ಆರಂಭಿಕ ಪಂದ್ಯಗಳಲ್ಲಿ ಕಾಣಿಸಿಕೊಂಡ ವಿಲ್ಲಿಗೆ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಟಿ20 ಬ್ಲಾಸ್ಟ್​ ಲೀಗ್​ನಲ್ಲಿ ಡೇವಿಡ್ ವಿಲ್ಲಿ ತನ್ನ ಬ್ಯಾಟಿಂಗ್ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ.

ಟಿ20 ಬ್ಲಾಸ್ಟ್​ನ ನಾರ್ತ್​ ಗ್ರೂಪ್ ಪಂದ್ಯದಲ್ಲಿ ಯಾರ್ಕ್‌ಷೈರ್ ಹಾಗೂ ಡರ್ಹಾಮ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಯಾರ್ಕ್​ಷೈರ್​ ನಾಯಕನಾಗಿ ಕಾಣಿಸಿಕೊಂಡ ಡೇವಿಡ್ ವಿಲ್ಲಿ ಆಲ್​ರೌಂಡರ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. ಈ ಮ್ಯಾಚ್​ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿ ಡರ್ಹಾಮ್ ತಂಡವು ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 207 ರನ್​ ಕಲೆಹಾಕಿತ್ತು.

ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಯಾರ್ಕ್​ಷೈರ್​ಗೆ ಆ್ಯಡಂ ಲಿತ್ ಸ್ಪೋಟಕ ಆರಂಭ ಒದಗಿಸಿದ್ದರು. ಕೇವಲ 33 ಎಸೆತಗಳನ್ನು ಎದುರಿಸಿದ ಲಿತ್ 10 ಫೋರ್ ಹಾಗೂ 3 ಸಿಕ್ಸ್​ನೊಂದಿಗೆ 77 ರನ್​ ಬಾರಿಸಿದ್ದರು. ಮತ್ತೊಂದೆಡೆ ಫಿನ್ ಅಲೆನ್ ಕೇವಲ 12 ಎಸೆತಗಳಲ್ಲಿ 29 ರನ್​ ಸಿಡಿಸಿದರು. ಈ ಮೂಲಕ ಯಾರ್ಕ್​ಷೈರ್​ಗೆ ಭರ್ಜರಿ ಆರಂಭ ಒದಗಿಸಿದ್ದ ಈ ಜೋಡಿಯ ನಿರ್ಗಮನದ ಬಳಿಕ ನಾಯಕ ಡೇವಿಡ್ ವಿಲ್ಲಿ ಕಣಕ್ಕಿಳಿದರು.

ಆರಂಭದಲ್ಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಡೇವಿಡ್ ವಿಲ್ಲಿ, ಸಿಕ್ಸ್​-ಫೋರ್​ಗಳ ಸುರಿಮಳೆಗೈದರು. ಪರಿಣಾಮ ಕೇವಲ 39 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ ಅಜೇಯ 75 ರನ್ ಬಾರಿಸಿದರು. ಈ ಮೂಲಕ 17.4 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 210 ರನ್​ ಗಳಿಸುವ ಮೂಲಕ ಯಾರ್ಕ್​ಷೈರ್​ಗೆ 6 ವಿಕೆಟ್​ಗಳ ಭರ್ಜರಿ ಜಯ ತಂದುಕೊಟ್ಟರು.

ಈ ಬಾರಿ ಆರ್​ಸಿಬಿ ಪರ 4 ಪಂದ್ಯಗಳನ್ನಾಡಿದ ಡೇವಿಡ್ ವಿಲ್ಲಿ ನಿರೀಕ್ಷಿತ ಆಟ ಪ್ರದರ್ಶಿಸುವಲ್ಲಿ ವಿಫಲರಾಗಿದ್ದರು. ಆಡಿದ ನಾಲ್ಕು ಪಂದ್ಯಗಳಿಂದ ಕೇವಲ 18 ರನ್​ ಮಾತ್ರ ಕಲೆಹಾಕಿದ್ದರು. ಇನ್ನು ಬೌಲಿಂಗ್​ನಲ್ಲಿ ಒಂದು ವಿಕೆಟ್ ಮಾತ್ರ ಪಡೆದಿದ್ದರು. ಈ ಕಳಪೆ ಪ್ರದರ್ಶನದ ಹೊರತಾಗಿಯೂ ಇದೀಗ ಟಿ20 ಬ್ಲಾಸ್ಟ್​ನಲ್ಲಿ ಅಬ್ಬರಿಸುವ ಮೂಲಕ ಡೇವಿಡ್ ವಿಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published. Required fields are marked *