T20 World Cup: ಸೆಮಿಫೈನಲ್‌ಗೂ ಮುನ್ನ ಆಂಗ್ಲರಿಗೆ ಆಘಾತ! ತಂಡದ ಸ್ಟಾರ್ ಓಪನರ್ ವಿಶ್ವಕಪ್​ನಿಂದ ಔಟ್ | T20 World Cup 2021 Big Blow for England as opener Jason Roy ruled out of tournament


T20 World Cup: ಸೆಮಿಫೈನಲ್‌ಗೂ ಮುನ್ನ ಆಂಗ್ಲರಿಗೆ ಆಘಾತ! ತಂಡದ ಸ್ಟಾರ್ ಓಪನರ್ ವಿಶ್ವಕಪ್​ನಿಂದ ಔಟ್

ಜೇಸನ್ ರಾಯ್

ಇಯಾನ್ ಮಾರ್ಗನ್ ನಾಯಕತ್ವದಲ್ಲಿ ಸತತ ಎರಡನೇ ವಿಶ್ವಕಪ್ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿರುವ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಸೆಮಿಫೈನಲ್‌ಗೂ ಮುನ್ನವೇ ಕೆಟ್ಟ ಸುದ್ದಿಯೊಂದು ಬಂದಿದೆ. ತಂಡವನ್ನು ಸೆಮಿಫೈನಲ್‌ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅನುಭವಿ ಆರಂಭಿಕ ಆಟಗಾರ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಗ್ರೂಪ್ ಪಂದ್ಯದ ವೇಳೆ ಗಾಯಗೊಂಡಿದ್ದ ಓಪನರ್ ಜೇಸನ್ ರಾಯ್ ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ. ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ರನ್ ತೆಗೆದುಕೊಳ್ಳುವಾಗ ರಾಯ್ ಕಾಲಿಗೆ ಗಾಯ ಮಾಡಿಕೊಂಡಿದ್ದರು. ಟೂರ್ನಿಯಲ್ಲಿ ಇಂಗ್ಲೆಂಡ್‌ಗೆ ಬಿರುಸಿನ ಆರಂಭ ನೀಡುವಲ್ಲಿ ತಮ್ಮ ಪಾತ್ರ ವಹಿಸಿದ್ದ ರಾಯ್ ಅವರನ್ನು ಹೊರಗಿಟ್ಟಿರುವುದು ಇಂಗ್ಲೆಂಡ್‌ಗೆ ದೊಡ್ಡ ಹೊಡೆತ ನೀಡಿದೆ. ರಾಯ್ ಅವರ ಸ್ಥಾನವನ್ನು ತುಂಬಲು, ಇಂಗ್ಲೆಂಡ್ ಕ್ರಿಕೆಟ್ ತಂಡವು ಆರಂಭಿಕ ಆಟಗಾರ ಜೇಮ್ಸ್ ವಿನ್ಸ್ ಅವರನ್ನು ಸೇರಿಸಿಕೊಂಡಿದೆ, ಅವರು ತಂಡದೊಂದಿಗೆ ಮೀಸಲು ಆಟಗಾರರಾಗಿ ಸೇರಿದ್ದಾರೆ. ಇಂಗ್ಲೆಂಡ್ ತನ್ನ ಸೆಮಿಫೈನಲ್ ಪಂದ್ಯವನ್ನು ನವೆಂಬರ್ 10 ರಂದು ನ್ಯೂಜಿಲೆಂಡ್ ವಿರುದ್ಧ ಆಡಬೇಕಾಗಿದೆ.

ತಮ್ಮ ಬಿರುಸಿನ ಬ್ಯಾಟ್ಸ್‌ಮನ್ ಗಾಯದ ಕಾರಣ ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ ಎಂದು ದೃಢಪಡಿಸಿದ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ನವೆಂಬರ್ 8 ಸೋಮವಾರದಂದು ಹೇಳಿಕೆ ನೀಡಿತು. ಇಂಗ್ಲೆಂಡ್ ಮತ್ತು ಸರ್ರೆ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಜೇಸನ್ ರಾಯ್ ಟಿ 20 ವಿಶ್ವಕಪ್‌ನ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಶಾರ್ಜಾದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಸೂಪರ್-12 ಪಂದ್ಯದಲ್ಲಿ ರಾಯ್ ಇಂಜುರಿಗೆ ತುತ್ತಾಗಿದ್ದರು. ರಾಯ್ ಹೇಳಿಕೆಯಲ್ಲಿ, ನಾನು ವಿಶ್ವಕಪ್‌ನಿಂದ ಹೊರಗುಳಿಯಲು ತುಂಬಾ ನಿರಾಶೆಗೊಂಡಿದ್ದೇನೆ. ಇದು ನನಗೆ ಕಹಿ ಮಾತ್ರೆ ನುಂಗಿದಂತಿದೆ ಎಂದಿದ್ದಾರೆ.

TV9 Kannada


Leave a Reply

Your email address will not be published. Required fields are marked *