T20 World Cup 2021: ಟಿ20 ಕ್ರಿಕೆಟ್​ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಭಾರತ-ಪಾಕ್ ಪಂದ್ಯ | India Pakistan T20 World Cup Match Most Viewed T20 International


T20 World Cup 2021: ಟಿ20 ಕ್ರಿಕೆಟ್​ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಭಾರತ-ಪಾಕ್ ಪಂದ್ಯ

India-Pakistan

ಟಿ20 ವಿಶ್ವಕಪ್​ನಲ್ಲಿ (T20 World Cup 2021) ಅಕ್ಟೋಬರ್ 24 ರಂದು ನಡೆದ ಭಾರತ ಹಾಗೂ ಪಾಕಿಸ್ತಾನ್ (India-Pakistan) ನಡುವಣ ಪಂದ್ಯವು ಇದೀಗ ಹೊಸ ಇತಿಹಾಸ ನಿರ್ಮಿಸಿದೆ. ಈ ಪಂದ್ಯವು ಟಿ20 ಕ್ರಿಕೆಟ್​ ಇತಿಹಾಸದಲ್ಲೇ ಅತೀ ಹೆಚ್ಚು ವೀಕ್ಷಣೆ ಕಂಡ ಪಂದ್ಯ ಎಂಬ ದಾಖಲೆಯನ್ನು ಬರೆದಿದೆ. ಸ್ಟಾರ್ ಇಂಡಿಯಾ ಸಂಸ್ಥೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಭಾರತ-ಪಾಕ್ ನಡುವಣ ಪಂದ್ಯವನ್ನು ಬರೋಬ್ಬರಿ 16.7 ಕೋಟಿ ಜನರು ವೀಕ್ಷಿಸಿದ್ದಾರೆ. ಇದು ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆಯಾಗಿದೆ. ಅಷ್ಟೇ ಅಲ್ಲದೆ ಟಿ20 ಕ್ರಿಕೆಟ್ ಪಂದ್ಯವು 15 ಕೋಟಿಗೂ ಅಧಿಕ ಮಂದಿ ವೀಕ್ಷಿಸಿರುವುದು ಕೂಡ ಇದೇ ಮೊದಲ ಬಾರಿಗೆ ಎಂಬುದು ವಿಶೇಷ. ಈ ಹಿಂದೆ 2016ರ ಟಿ20 ವಿಶ್ವಕಪ್ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ಸೆಮಿಫೈನಲ್​ ಪಂದ್ಯವನ್ನು 13.6 ಕೋಟಿ ಜನರು ವೀಕ್ಷಿಸಿದ್ದು ದಾಖಲೆಯಾಗಿತ್ತು. ಇದೀಗ ಈ ದಾಖಲೆಯನ್ನು ಅಳಿಸಿ ಹಾಕಿ ಭಾರತ-ಪಾಕಿಸ್ತಾನ್ ಪಂದ್ಯವು ಹೊಸ ಮೈಲುಗಲ್ಲನ್ನು ಸೃಷ್ಟಿಸಿದೆ.

ಇನ್ನು ಸ್ಟಾರ್​ ಸ್ಪೋರ್ಟ್ಸ್​ ಚಾನೆಲ್​ ಮೂಲ ಸಂಸ್ಥೆ ಸ್ಟಾರ್ ಇಂಡಿಯಾ ಬಿಡುಗಡೆ ಮಾಡಿರುವ ಟಿ20 ವಿಶ್ವಕಪ್ 2021 ರ ವೀಕ್ಷಣೆ ಅಂಕಿ ಅಂಶಗಳ ಪ್ರಕಾರ ಅರ್ಹತಾ ಸುತ್ತಿನ ಪಂದ್ಯಗಳು ಹಾಗೂ ಸೂಪರ್ 12 ಪಂದ್ಯಗಳು ಸೇರಿದಂತೆ ಒಟ್ಟಾರೆ 23.8 ಕೋಟಿ ವೀಕ್ಷಕರು ಪಂದ್ಯವನ್ನು ನೋಡಿದ್ದಾರೆ. ಇದರಲ್ಲಿ ಭಾರತ ಹಾಗೂ ಪಾಕಿಸ್ತಾನ್ ನಡುವಣ ಪಂದ್ಯವೊಂದೇ 16 ಕೋಟಿಗೂ ಅಧಿಕ ಮಂದಿ ವೀಕ್ಷಿಸಿರುವುದು ವಿಶೇಷ.

ಭಾರೀ ಸಂಖ್ಯೆಯನ್ನು ವೀಕ್ಷಕರನ್ನು ಸೆಳೆಯಲು ನಾವು ಸತತ ಪ್ರಯತ್ನ ಮಾಡಿದ್ದೆವು. ಅದಕ್ಕಾಗಿ ದೊಡ್ಡ ಮಟ್ಟದಲ್ಲಿ ಪ್ರಚಾರ ಹಾಗೂ ಪ್ರಾದೇಶಿಕ ಭಾಷೆಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸದ್ದೆವು. ಈ ಎಲ್ಲಾ ಪ್ರಯತ್ನಕ್ಕೆ ಇದೀಗ ಈ ದಾಖಲೆಯ ವೀಕ್ಷಣೆ ಸಾಕ್ಷಿಯಾಗಿದೆ ಎಂದು ಸ್ಟಾರ್ ಸ್ಪೋರ್ಟ್ಸ್​ ಚಾನೆಲ್​ ಸಂತಸ ವ್ಯಕ್ತಪಡಿಸಿದೆ.

ಇದೀಗ ವಿಶ್ವಕಪ್ ಟೂರ್ನಿಯಿಂದ ಭಾರತ ತಂಡವು ಹೊರಬಿದ್ದಿದ್ದು, ಹೀಗಾಗಿ ಸೆಮಿಫೈನಲ್ ಹಂತದ ಪಂದ್ಯಗಳ ವೀಕ್ಷಣೆಯಲ್ಲಿ ಗಣನೀಯ ಇಳಿಕೆ ಕಂಡು ಬರುವ ಸಾಧ್ಯತೆಯಿದೆ. ಸೆಮಿಫೈನಲ್​ನಲ್ಲಿ ಪಾಕಿಸ್ತಾನ್-ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್-ನ್ಯೂಜಿಲೆಂಡ್ ಮುಖಾಮುಖಿಯಾಗಲಿದ್ದು, ಈ ಬಾರಿ ಯಾರು ಚಾಂಪಿಯನ್ ಪಟ್ಟ ಅಲಂಕರಿಸಲಿದ್ದಾರೆ ಕಾದು ನೋಡಬೇಕಿದೆ.

ಇದನ್ನೂ ಓದಿ: Team India: ಟೀಮ್ ಇಂಡಿಯಾದ ಈ ಜೋಡಿ ವಿಶ್ವಕಪ್ ಗೆದ್ದು ಕೊಡಲಿದೆ ಎಂದ ಮಾಜಿ ಕ್ರಿಕೆಟಿಗ

ಇದನ್ನೂ ಓದಿ: Team India: ಟೀಮ್ ಇಂಡಿಯಾದ ಮುಂದಿನ ಸರಣಿಗಳ ವೇಳಾಪಟ್ಟಿ ಹೀಗಿದೆ

(India-Pakistan T20 World Cup Match Most Viewed T20 International)

TV9 Kannada


Leave a Reply

Your email address will not be published. Required fields are marked *