T20 World Cup 2021: ಟಿ20 ವಿಶ್ವಕಪ್​ನಿಂದ ಟೀಮ್ ಇಂಡಿಯಾ ಔಟ್ | T20 World Cup 2021: Team India Out of the Semi final race


T20 World Cup 2021: ಟಿ20 ವಿಶ್ವಕಪ್​ನಿಂದ ಟೀಮ್ ಇಂಡಿಯಾ ಔಟ್

Team India

ಟಿ20 ವಿಶ್ವಕಪ್​ನ 40ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ್ ವಿರುದ್ದ ನ್ಯೂಜಿಲೆಂಡ್ (Afghanistan vs New Zealand) ಗೆಲುವು ದಾಖಲಿಸಿದೆ. ಈ ಜಯದೊಂದಿಗೆ ನ್ಯೂಜಿಲೆಂಡ್ ತಂಡವು ಸೆಮಿಫೈನಲ್​ಗೇರಿದರೆ, ಅತ್ತ ಟೀಮ್ ಇಂಡಿಯಾ (Team India Semi Final) ವಿಶ್ವಕಪ್​ನಿಂದ ಹೊರಬಿದ್ದಿದೆ. ಏಕೆಂದರೆ ನ್ಯೂಜಿಲೆಂಡ್​ ವಿರುದ್ದ ಅಫ್ಘಾನಿಸ್ತಾನ್ ಗೆದ್ದರೆ ಮಾತ್ರ ಸೆಮಿಫೈನಲ್​ಗೇರುವ ಅವಕಾಶ ಟೀಮ್ ಇಂಡಿಯಾಗಿತ್ತು. ಇದೀಗ ನ್ಯೂಜಿಲೆಂಡ್ ಗೆದ್ದು 8 ಅಂಕದೊಂದಿಗೆ ಸೆಮಿಫೈನಲ್ ಪ್ರವೇಶಿಸಿದೆ. ಇನ್ನು ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಭಾರತ ನಮೀಬಿಯಾ (India vs Namibia) ವಿರುದ್ದ ಔಪಚಾರಿಕ ಪಂದ್ಯವಾಡಬೇಕಿದೆ.

ಗ್ರೂಪ್-2ನಿಂದ ಈಗಾಗಲೇ ಪಾಕಿಸ್ತಾನ್ ತಂಡವು ಸೆಮಿಫೈನಲ್ ಪ್ರವೇಶಿಸಿದ್ದು, 2ನೇ ತಂಡವಾಗಿ ನ್ಯೂಜಿಲೆಂಡ್ ಮುಂದಿನ ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ. ಮತ್ತೊಂದೆಡೆ ಗ್ರೂಪ್-1 ರಿಂದ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್​ ಪ್ರವೇಶಿಸಿದೆ. 2016 ರ ಟಿ20 ವಿಶ್ವಕಪ್​ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ದ ಸೋಲುವ ಮೂಲಕ ಹೊರಬಿದ್ದಿತ್ತು. ಆದರೆ ಈ ಬಾರಿ ಭಾರತ ತಂಡವು ಲೀಗ್​ ಹಂತದಿಂದಲೇ ಹೊರ ನಡೆದು ನಿರಾಸೆ ಮೂಡಿಸಿದೆ.

ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ದ ಹೀನಾಯ ಸೋಲನುಭವಿಸಿದ್ದ ಭಾರತ, ಬಳಿಕ 2ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ದ ಮುಗ್ಗರಿಸಿತ್ತು. ಇದಾಗ್ಯೂ ಕಂಬ್ಯಾಕ್ ಮಾಡಿದ ಟೀಮ್ ಇಂಡಿಯಾ ಅಫ್ಘಾನಿಸ್ತಾನ್ ಹಾಗೂ ಸ್ಕಾಟ್ಲೆಂಡ್​ ವಿರುದ್ದ ಭರ್ಜರಿ ಜಯ ಸಾಧಿಸಿ ಎಲ್ಲಾ ತಂಡಕ್ಕಿಂತ ಹೆಚ್ಚಿನ ರನ್​ ರೇಟ್​ ಹೊಂದಿತ್ತು. ಇದಾಗ್ಯೂ ಸೆಮಿಫೈನಲ್ ಪ್ರವೇಶಿಸಲು ಅಫ್ಘಾನಿಸ್ತಾನ್, ನ್ಯೂಜಿಲೆಂಡ್ ಹಾಗೂ ಭಾರತ ಅಂಕ ಪಟ್ಟಿಯಲ್ಲಿ ಸಮಬಲ ಸಾಧಿಸಬೇಕಿತ್ತು. ಅದರಂತೆ ಮೂರು ತಂಡಗಳು 6 ಅಂಕ ಪಡೆದಿದ್ದರೆ ಮಾತ್ರ ಅವಕಾಶವಿತ್ತು.

ಆದರೆ ಅಫ್ಘಾನಿಸ್ತಾನ್ ವಿರುದ್ದ ಗೆಲ್ಲುವ ಮೂಲಕ 8 ಅಂಕ ಪಡೆದಿರುವ ನ್ಯೂಜಿಲೆಂಡ್ ಸೆಮಿಫೈನಲ್​ಗೆ ಎಂಟ್ರಿಕೊಟ್ಟಿದೆ. ಇದರೊಂದಿಗೆ ಟೀಮ್ ಇಂಡಿಯಾ ಹಾಗೂ ಅಫ್ಘಾನಿಸ್ತಾನ್ ಸೆಮಿಫೈನಲ್ ಆಸೆ ಕೂಡ ಕೊನೆಗೊಂಡಿದೆ. ನ.8 ರಂದು ಟೀಮ್ ಇಂಡಿಯಾ ತನ್ನ ಕೊನೆಯ ಪಂದ್ಯವನ್ನು ನಮೀಬಿಯಾ ವಿರುದ್ದ ಆಡಲಿದ್ದು, ಈ ಪಂದ್ಯದೊಂದಿಗೆ ಭಾರತ ತಂಡದ ವಿಶ್ವಕಪ್ ಅಭಿಯಾನ ಅಂತ್ಯವಾಗಲಿದೆ.

ಇದನ್ನೂ ಓದಿ: ICC T20 Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಎಲ್ಲರನ್ನು ಹಿಂದಿಕ್ಕಿದ ಬಾಬರ್

ಇದನ್ನೂ ಓದಿ: IPL 2022: RCB ಈ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದು..!

ಇದನ್ನೂ ಓದಿ: T20 World Cup 2021: ಸೆಹ್ವಾಗ್-ಗಂಭೀರ್ ದಾಖಲೆ ಮುರಿದ ಕೆಎಲ್ ರಾಹುಲ್-ರೋಹಿತ್ ಶರ್ಮಾ

(T20 World Cup 2021: Team India Out of the Semi final race)

TV9 Kannada


Leave a Reply

Your email address will not be published. Required fields are marked *