T20 World Cup 2021: ನ್ಯೂಜಿಲೆಂಡ್ ಸೋಲುತ್ತಾ? ಅಂಕಿ ಅಂಶ ಕೂಡ ಅದನ್ನೇ ಹೇಳುತ್ತೆ | T20 World Cup New Zealand record in knock out matches


T20 World Cup 2021: ನ್ಯೂಜಿಲೆಂಡ್ ಸೋಲುತ್ತಾ? ಅಂಕಿ ಅಂಶ ಕೂಡ ಅದನ್ನೇ ಹೇಳುತ್ತೆ

New Zealand

ಭಾನುವಾರ ನಡೆಯಲಿರುವ ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ್ (Afghanistan vs New Zealand) ನಡುವಿನ ಪಂದ್ಯಕ್ಕಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಈ ಪಂದ್ಯದ ಫಲಿತಾಂಶದ ಮೇಲೆ ಟೀಮ್ ಇಂಡಿಯಾದ (Team India) ಸೆಮಿಫೈನಲ್ ಕನಸು ನಿರ್ಧಾರವಾಗಲಿದೆ. ಒಂದು ವೇಳೆ ನ್ಯೂಜಿಲೆಂಡ್ ಗೆದ್ದರೆ ಭಾರತ ತಂಡವು ಟಿ20 ವಿಶ್ವಕಪ್​ನಿಂದ ಹೊರಬೀಳಲಿದೆ. ಅತ್ತ ಸೆಮಿಫೈನಲ್​ಗೇರಬೇಕಾದರೆ ಅಫ್ಘಾನಿಸ್ತಾನ್ ಹಾಗೂ ನ್ಯೂಜಿಲೆಂಡ್ ತಂಡಗಳಿಗೂ ಈ ಪಂದ್ಯ ಬಹಳ ಮಹತ್ವದ್ದು. ಹೀಗಾಗಿ ಒಂದು ಪಂದ್ಯವು ಮೂರು ತಂಡಗಳ ಸೆಮಿಫೈನಲ್ ಹಾದಿಯನ್ನು ನಿರ್ಧರಿಸಲಿದೆ. ಇಲ್ಲಿ ಬಲಿಷ್ಠ ತಂಡವಾಗಿ ನ್ಯೂಜಿಲೆಂಡ್ ತಂಡ ಕಾಣಿಸಿಕೊಂಡರೂ, ನಿರ್ಣಾಯಕ ಪಂದ್ಯದಲ್ಲಿ ಒತ್ತಡಕ್ಕೊಳಗಾಗುವ ಕೆಟ್ಟ ದಾಖಲೆ ಇದೇ ತಂಡದ ಮೇಲಿದೆ. ಅದು ಈ ಬಾರಿ ಕೂಡ ಆವೃತ್ತಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಏಕೆಂದರೆ ನ್ಯೂಜಿಲೆಂಡ್ ತಂಡ ಒಂದು ಬಾರಿಯೂ ಟಿ20 ವಿಶ್ವಕಪ್ ಗೆದ್ದಿಲ್ಲ. ಎರಡು ಬಾರಿ ಸೆಮಿಫೈನಲ್‌ನಲ್ಲಿ ಸೋಲುವ ಮೂಲಕ ಹೊರಬಿದ್ದಿತ್ತು. 2007 ರ ಮೊದಲ T20 ವಿಶ್ವಕಪ್‌ನ ಸೆಮಿಫೈನಲ್​ನಲ್ಲಿ ಪಾಕಿಸ್ತಾನ್ ವಿರುದ್ದ 6 ವಿಕೆಟ್‌ಗಳಿಂದ ಸೋತು ಹೊರನಡೆದಿತ್ತು. ಹಾಗೆಯೇ 2016ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ 7 ವಿಕೆಟ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತ್ತು. ಅಂದರೆ ಇಲ್ಲಿ ನಿರ್ಣಾಯಕ ಎನಿಸಿಕೊಳ್ಳುವ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಎಡವಿರುವುದು ಸ್ಪಷ್ಟ.

ಇನ್ನು ಇತ್ತೀಚಿನ ದಾಖಲೆಗಳನ್ನು ತೆಗೆದುಕೊಂಡರೂ, 2015 ಹಾಗೂ 2019 ರ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡವು ಫೈನಲ್​ನಲ್ಲಿ ಸೋಲನುಭವಿಸಿತ್ತು. ಹಾಗೆಯೇ T20 ಮತ್ತು ODI ಒಟ್ಟಾರೆ ದಾಖಲೆಯನ್ನು ನೋಡಿದಾಗ, ನ್ಯೂಜಿಲೆಂಡ್ ಇದುವರೆಗೆ ನಾಕೌಟ್​ನಲ್ಲಿ 44 ಪಂದ್ಯಗಳನ್ನು ಆಡಿದೆ. ಅದರಲ್ಲಿ ಗೆದ್ದಿರೋದು ಕೇವಲ 13 ಬಾರಿ ಮಾತ್ರ. ಅಂದರೆ ಸೆಮಿಫೈನಲ್, ಫೈನಲ್ ಮತ್ತು ಕ್ವಾರ್ಟರ್-ಫೈನಲ್​ನಲ್ಲಿ ನ್ಯೂಜಿಲೆಂಡ್​ 30 ಕ್ಕೂ ಅಧಿಕ ಪಂದ್ಯಗಳಲ್ಲಿ ಸೋಲನುಭವಿಸಿದೆ. ನಾಕೌಟ್ ಹಂತದಲ್ಲಿ ಶೇ.68 ರಷ್ಟು ಪಂದ್ಯಗಳಲ್ಲಿ ಸೋತಿರುವ ನ್ಯೂಜಿಲೆಂಡ್​ ಕ್ರಿಕೆಟ್​ ಇತಿಹಾಸದಲ್ಲೇ ಅತ್ಯಂತ ಕೆಟ್ಟ ದಾಖಲೆಯನ್ನು ಹೊಂದಿದೆ.

ಇದಾಗ್ಯೂ ಕಳೆದ ಕೆಲ ವರ್ಷಗಳಿಂದ ತಂಡವನ್ನು ಅದೃಷ್ಟ ಕೈ ಹಿಡಿಯುತ್ತಿದೆ ಎನ್ನಬಹುದು. ಏಕೆಂದರೆ 2019 ರ ಏಕದಿನ ವಿಶ್ವಕಪ್​ ಸೆಮಿಫೈನಲ್​ ವೇಳೆ ಮಳೆ ಬಂದ ಕಾರಣ ಪರಿಸ್ಥಿತಿ ನ್ಯೂಜಿಲೆಂಡ್ ಪಾಲಿಗೆ ವರದಾನವಾಯಿತು. ಇದರಿಂದ ಟೀಮ್ ಇಂಡಿಯಾ ವಿರುದ್ದ ಗೆದ್ದು ಫೈನಲ್​ ಪ್ರವೇಶಿಸಿತ್ತು. ಹಾಗೆಯೇ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲೂ ವರುಣನ ಕೃಪೆಯಿಂದ ಟೀಮ್ ಇಂಡಿಯಾ ವಿರುದ್ದ ನ್ಯೂಜಿಲೆಂಡ್ ಗೆಲ್ಲುವಂತಾಯಿತು ಎಂದರೆ ತಪ್ಪಾಗಲಾರದು. ಈ ಎಲ್ಲಾ ಕಾರಣಗಳಿಂದಾಗಿ ಈ ಬಾರಿ ಕೂಡ ನಿರ್ಣಾಯಕ ಹಂತದಲ್ಲಿ ನ್ಯೂಜಿಲೆಂಡ್ ಒತ್ತಡಕ್ಕೊಳಗಾಗಿ ಮುಗ್ಗರಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: ICC T20 Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಎಲ್ಲರನ್ನು ಹಿಂದಿಕ್ಕಿದ ಬಾಬರ್

ಇದನ್ನೂ ಓದಿ: IPL 2022: RCB ಈ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದು..!

ಇದನ್ನೂ ಓದಿ: T20 World Cup 2021: ಸೆಹ್ವಾಗ್-ಗಂಭೀರ್ ದಾಖಲೆ ಮುರಿದ ಕೆಎಲ್ ರಾಹುಲ್-ರೋಹಿತ್ ಶರ್ಮಾ

(T20 World Cup New Zealand record in knock out matches)

TV9 Kannada


Leave a Reply

Your email address will not be published. Required fields are marked *