T20 World Cup final: ಡೆವೊನ್ ಕಾನ್ವೇ ಬದಲಿಗೆ ಕಣಕ್ಕಿಳಿಯಲಿದ್ದಾರೆ KKR ತಂಡದ ಸ್ಫೋಟಕ ದಾಂಡಿಗ | Tim Seifert likely to replace injured Devon Conway in T20 World Cup final


T20 World Cup final: ಡೆವೊನ್ ಕಾನ್ವೇ ಬದಲಿಗೆ ಕಣಕ್ಕಿಳಿಯಲಿದ್ದಾರೆ KKR ತಂಡದ ಸ್ಫೋಟಕ ದಾಂಡಿಗ

New zealand

ಟಿ20 ವಿಶ್ವಕಪ್​ನಲ್ಲಿ (T20 World Cup final) ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯಕ್ಕೂ ಮುನ್ನ ನ್ಯೂಜಿಲೆಂಡ್ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಪ್ರಮುಖ ಆಟಗಾರ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಹೌದು, ವಿಕೆಟ್‌ ಕೀಪರ್‌-ಬ್ಯಾಟ್ಸ್​ಮನ್ ಡೆವೊನ್‌ ಕಾನ್ವೇ ಅವರ ಬಲಗೈಗೆ ಗಾಯ ಮಾಡಿಕೊಂಡಿದ್ದು, ಹೀಗಾಗಿ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ. ಕಾನ್ವೇ ಈ ಬಾರಿ ಉತ್ತಮ ಪ್ರದರ್ಶನ ನೀಡಿದ್ದರು. ಮಧ್ಯಮ ಕ್ರಮಾಂಕದಲ್ಲಿ ನ್ಯೂಜಿಲೆಂಡ್​ನ ಬ್ಯಾಟಿಂಗ್ ಶಕ್ತಿಯಾಗಿ ಗುರುತಿಸಿಕೊಂಡಿದ್ದರು. ಇಂಗ್ಲೆಂಡ್​ ವಿರುದ್ದ ಸೆಮಿಫೈನಲ್​ನಲ್ಲೂ 38 ಎಸೆತಗಳಲ್ಲಿ 46 ರನ್ ಬಾರಿಸಿದ ಕಾನ್ವೇ, ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದ್ದರು. ಇದೀಗ ಫೈನಲ್ ಪಂದ್ಯಕ್ಕೂ ಮುನ್ನ ಕಾನ್ವೇ ಗಾಯಗೊಂಡಿದ್ದು, ಬಲಗೈನ ಮೆಟಾಕಾರ್ಪಲ್ ಮುರಿದಿರುವುದು ಸ್ಕ್ಯಾನಿಂಗ್ ವೇಳೆ ಕಂಡು ಬಂದಿದೆ. ಹೀಗಾಗಿ ಅವರು ಅಂತಿಮ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ ಎಂದು ನ್ಯೂಜಿಲೆಂಡ್‌ ಹೆಡ್‌ ಕೋಚ್‌ ಗ್ಯಾರಿ ಸ್ಟೀಡ್‌ ತಿಳಿಸಿದ್ದಾರೆ.

ಇದೀಗ ಗಾಯಗೊಂಡಿರುವ ಕಾನ್ವೇ ಬದಲಿಗೆ ನ್ಯೂಜಿಲೆಂಡ್ ತಂಡ ಟಿಮ್ ಸೀಫರ್ಟ್ ಅವರನ್ನು ಫೈನಲ್​ನಲ್ಲಿ ಕಣಕ್ಕಿಳಿಸಲಿದ್ದಾರೆ ಎಂದು ತಿಳಿದು ಬಂದಿದೆ. ಸಿಫರ್ಟ್ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಪರ ಆಡಿದ್ದರು ಎಂಬುದು ವಿಶೇಷ. 26ರ ಹರೆಯದ ಸಿಫರ್ಟ್ ಕಿವೀಸ್ ತಂಡದ ಸ್ಫೋಟಕ ಬ್ಯಾಟರ್​ಗಳಲ್ಲಿ ಒಬ್ಬರು. ಏಕದಿನ ಮತ್ತು T20 ಎರಡರಲ್ಲೂ ಸಿಫರ್ಟ್​​ ಸ್ಟ್ರೈಕ್ ರೇಟ್ 120 ಕ್ಕಿಂತ ಮೇಲಿದೆ.

ಬಲಗೈ ಬ್ಯಾಟರ್​ ಆಗಿರುವ ಸಿಫರ್ಟ್ 36 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 132 ಸ್ಟ್ರೈಕ್ ರೇಟ್‌ನಲ್ಲಿ 703 ರನ್ ಗಳಿಸಿದ್ದಾರೆ. ಇದರಲ್ಲಿ ಐದು ಅರ್ಧಶತಕಗಳೂ ಸೇರಿದೆ. ಸಾಮಾನ್ಯವಾಗಿ ಆರಂಭಿಕನಾಗಿ ಕಣಕ್ಕಿಳಿಯುವ ಸೀಫರ್ಟ್​​ ಫೈನಲ್​ನಲ್ಲಿ 3ನೇ ಅಥವಾ 4ನೇ ಕ್ರಮಾಂಕದಲ್ಲಿ ಆಡಲಿದ್ದಾರೆ.

ಇತ್ತ ಕಾನ್ವೇ ಹೊರಬೀಳುವ ಸುದ್ದಿ ಬೆನ್ನಲ್ಲೇ ಟಿಮ್ ಸೀಫರ್ಟ್​ ವಿಕೆಟ್ ಕೀಪಿಂಗ್ ಅಭ್ಯಾಸ ಶುರು ಮಾಡಿರುವ ವಿಡಿಯೋವನ್ನು ನ್ಯೂಜಿಲೆಂಡ್ ಕ್ರಿಕೆಟ್​ ಮಂಡಳಿಯ ಅಧಿಕೃತ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹೀಗಾಗಿ ಡೆವೊನ್ ಕಾನ್ವೇ ಬದಲಿ ಆಟಗಾರನಾಗಿ ಸ್ಪೋಟಕ ದಾಂಡಿಗ ಟಿಮ್ ಸೀಫರ್ಟ್ ಫೈನಲ್​ನಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಬಹುದು.

ಉಭಯ ತಂಡಗಳು ಹೀಗಿವೆ:
ಆಸ್ಟ್ರೇಲಿಯಾ : ಆರೋನ್ ಫಿಂಚ್ (ನಾಯಕ), ಅಷ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್, ಜೋಶ್ ಹ್ಯಾಝಲ್‌ವುಡ್, ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಕೆನ್ ರಿಚರ್ಡ್ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋನಿಸ್, ಮಿಚೆಲ್ ಸ್ವಪ್ಸನ್, ಮ್ಯಾಥ್ಯೂ ವೇಡ್ ಆ್ಯಡಂ ಝಂಪಾ.

ನ್ಯೂಜಿಲೆಂಡ್: ಕೆನ್ ವಿಲಿಯಮ್ಸನ್ (ನಾಯಕ), ಟಾಡ್ ಅಸ್ಟಲ್, ಟ್ರೆಂಟ್ ಬೋಲ್ಟ್, ಮಾರ್ಕ್ ಚಾಪ್ಮನ್, ಆಡಮ್ ಮಿಲ್ನ್, ಮಾರ್ಟಿನ್ ಗಪ್ಟಿಲ್, ಕೈಲ್ ಜೇಮಿಸನ್, ಡೆರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸೆಂಟ್ನರ್, ಟಿಮ್ ಸಿಫರ್ಟ್ (ವಿಕೆಟ್ ಕೀಪರ್), ಇಶ್ ಸೋಧಿ, ಟಿಮ್ ಸೌಥಿ .

ಇದನ್ನೂ ಓದಿ: Explained: ನ್ಯೂಜಿಲೆಂಡ್-ಆಸ್ಟ್ರೇಲಿಯಾ ಮತ್ತೊಂದು ಭಾರತ-ಪಾಕಿಸ್ತಾನ್…ಆದರೆ

ಇದನ್ನೂ ಓದಿ: Team India: ಟೀಮ್ ಇಂಡಿಯಾದ ಈ ಜೋಡಿ ವಿಶ್ವಕಪ್ ಗೆದ್ದು ಕೊಡಲಿದೆ ಎಂದ ಮಾಜಿ ಕ್ರಿಕೆಟಿಗ

ಇದನ್ನೂ ಓದಿ: Team India: ಟೀಮ್ ಇಂಡಿಯಾದ ಮುಂದಿನ ಸರಣಿಗಳ ವೇಳಾಪಟ್ಟಿ ಹೀಗಿದೆ

(Tim Seifert likely to replace injured Devon Conway in T20 World Cup final)

TV9 Kannada


Leave a Reply

Your email address will not be published. Required fields are marked *