Tamil Nadu Chopper Crash: ಸೇನಾ ಹೆಲಿಕಾಪ್ಟರ್​ ಅಪಘಾತದಲ್ಲಿ ಸಿಡಿಎಸ್​ ಬಿಪಿನ್ ರಾವತ್ ಪತ್ನಿ ದುರ್ಮರಣ; ರಾವತ್ ಸ್ಥಿತಿ ಗಂಭೀರ | CDS Bipin Rawat Wife Madhulika Rawat Died in Army Helicopted Crash in Tamil Nadu


Tamil Nadu Chopper Crash: ಸೇನಾ ಹೆಲಿಕಾಪ್ಟರ್​ ಅಪಘಾತದಲ್ಲಿ ಸಿಡಿಎಸ್​ ಬಿಪಿನ್ ರಾವತ್ ಪತ್ನಿ ದುರ್ಮರಣ; ರಾವತ್ ಸ್ಥಿತಿ ಗಂಭೀರ

ಬಿಪಿನ್ ರಾವತ್​ ಮತ್ತು ಅವರ ಪತ್ನಿ ಮಧುಲಿಕಾ ರಾವತ್​

ಇಂದು ತಮಿಳುನಾಡಿನ ಕುನೂರ್​ ಬಳಿ Mi-17V5 ಸೇನಾ ಹೆಲಿಕಾಪ್ಟರ್​ ಭೀಕರ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಸಿಡಿಎಸ್​ ಜನರಲ್​ ಬಿಪಿನ್​ ರಾವತ್​ ಪತ್ನಿ ಮಧುಲಿಕಾ ರಾವತ್ ಸೇರಿ ಐವರು ದುರ್ಮರಣಕ್ಕೀಡಾಗಿದ್ದಾರೆ. ಇನ್ನು ಬಿಪಿನ್ ರಾವತ್ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಒಟ್ಟಾರೆ ಇದರಲ್ಲಿ 14 ಜನ ಇದ್ದರು ಎಂದು ಮೂಲಗಳು ತಿಳಿಸಿವೆ. ಅದರಲ್ಲೀಗ 5 ಮಂದಿಯ ಮೃತದೇಹ ಪತ್ತೆಯಾಗಿದೆ. ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದ್ದರೂ, ಇನ್ನೂ ಮೃತರು ಯಾರ್ಯಾರು? ಗಾಯಗೊಂಡವರು ಯಾರು ಎಂಬ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ.

ಅದರಲ್ಲೂ ಈಗ ಸಿಡಿಎಸ್​ ಜನರಲ್​ ಬಿಪಿನ್​ ರಾವತ್​​ರ ಆರೋಗ್ಯ ಸ್ಥಿತಿ ಹೇಗಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಹೊರಬೀಳಬೇಕಿದೆ. ಸದ್ಯ ಮೂಲಗಳ ಪ್ರಕಾರ ಬಿಪಿನ್​ ರಾವತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ. ಇನ್ನು ಸೇನಾ ವಿಮಾನ ಪತನವಾಗಿದ್ದು ನೀಲಗಿರಿ ಬೆಟ್ಟ ಪ್ರದೇಶದಲ್ಲಿ ಆಗಿದ್ದರಿಂದ ರಕ್ಷಣಾ ಕಾರ್ಯಾಚರಣೆಯೂ ತುಸು ತೊಡಕಾಗಿದೆ. ಸ್ಥಳೀಯರ ಸಹಾಯದಿಂದ ಸೇನಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗಾಯಾಳುಗಳನ್ನು ಮತ್ತು ಮೃತರನ್ನು ಸ್ಥಳೀಯ ಮಿಲಿಟರಿ ಆಸ್ಪತ್ರೆಗೆ ಕಳಿಸಲಾಗಿದೆ. ತಮಿಳುನಾಡು ಸರ್ಕಾರದ ಉನ್ನತ ಅಧಿಕಾರಿಗಳು, ರಕ್ಷಣಾ ಸಿಬ್ಬಂದಿ ಕೂಡ ಅಪಘಾತವಾದ ಸ್ಥಳಕ್ಕೆ ಧಾವಿಸಿದ್ದಾರೆ.  ಅಂದಹಾಗೆ ಈ ಹೆಲಿಕಾಪ್ಟರ್​ ದೆಹಲಿಯಿಂದ ಸುಲುರ್​ಗೆ ಹೊರಟಿತ್ತು ಎಂದು ಮಾಹಿತಿ ಲಭ್ಯವಾಗಿದೆ.

ರಾಹುಲ್ ಗಾಂಧಿ ಟ್ವೀಟ್
ಮಿಲಿಟರಿ ವಿಮಾನ ಪತನದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಸಿಡಿಎಸ್​ ಬಿಪಿನ್ ರಾವತ್​, ಅವರ ಪತ್ನಿ ಮತ್ತು ಹೆಲಿಕಾಪ್ಟರ್​​ನಲ್ಲಿದ್ದ ಇನ್ನಿತರ ಸಿಬ್ಬಂದಿ ಸುರಕ್ಷಿತವಾಗಿರಲಿ ಎಂದು ಆಶಿಸುತ್ತೇನೆ. ಗಾಯಗೊಂಡವರು ಶೀಘ್ರವೇ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಕೇಂದ್ರ ಸಚಿವ ನಿತಿನ್​ ಗಡ್ಕರಿ ಟ್ವೀಟ್ ಮಾಡಿದ್ದು, ಈ ಹೆಲಿಕಾಪ್ಟರ್​ ಪತನದಿಂದ ಶಾಕ್​ ಆಗಿದೆ. ಎಲ್ಲರೂ ಬದುಕಿ ಬರಲಿ, ಗಾಯಾಳುಗಳು ಬೇಗನೇ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಟ್ವೀಟ್ ಮಾಡಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈಗಾಗಲೇ ತಮಿಳುನಾಡಿಗೆ ಹೊರಟಿದ್ದಾರೆ.

TV9 Kannada


Leave a Reply

Your email address will not be published. Required fields are marked *