Tamil Nadu Rain: ತಮಿಳುನಾಡಿನಲ್ಲಿ ವಿಪರೀತ ಮಳೆ; ಕಾವೇರಿ ಕಣಿವೆಯ ಡ್ಯಾಂಗಳು ಭರ್ತಿ | Tamil Nadu Rain after Heavy Rainfall in Tamil Nadu Cauvery Basin Dams Reached Maximum Level


Tamil Nadu Rain: ತಮಿಳುನಾಡಿನಲ್ಲಿ ವಿಪರೀತ ಮಳೆ; ಕಾವೇರಿ ಕಣಿವೆಯ ಡ್ಯಾಂಗಳು ಭರ್ತಿ

ಚೆನ್ನೈ ಮಳೆ

ಚೆನ್ನೈ: ತಮಿಳುನಾಡಿನಲ್ಲಿ ಭಾರೀ ಮಳೆಯಿಂದ (Tamil Nadu Rains) ಜಲಾಶಯಗಳೆಲ್ಲ ಭರ್ತಿಯಾಗಿವೆ. ತಮಿಳುನಾಡಿನ ಜಲಾಶಯಗಳಲ್ಲಿ ಬರೋಬ್ಬರಿ 200 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ತಮಿಳುನಾಡಿನ ಕಾವೇರಿ ಕಣಿವೆಯ (Cauvery River) ಡ್ಯಾಂಗಳು ಬಹುತೇಕ ಭರ್ತಿಯಾಗಿವೆ. ಆದರೂ, ತಮಿಳುನಾಡು ರಾಜ್ಯ ಸರ್ಕಾರವು ಕರ್ನಾಟಕದಿಂದ ಕಾವೇರಿ ನದಿ ನೀರು (Kaveri Water) ಹರಿಸಬೇಕೆಂದು ಬೇಡಿಕೆ ಇಟ್ಟರೂ ಅಚ್ಚರಿ ಇಲ್ಲ.

ನಮ್ಮ ಕರ್ನಾಟಕದ ನೆರೆಯ ತಮಿಳುನಾಡು ರಾಜ್ಯ ಈಗ ಭಾರೀ ಮಳೆಯಿಂದ ತತ್ತರಿಸಿ ಹೋಗಿದೆ. ಕಳೆದ ಶನಿವಾರ ರಾತ್ರಿಯಿಂದ ತಮಿಳುನಾಡಿನಾದ್ಯಂತ ಭಾರೀ ಮಳೆ ಸುರಿಯುತ್ತಿದೆ. ಇದರಿಂದ ರಾಜಧಾನಿ ಚೆನ್ನೈ ಸೇರಿದಂತೆ ಅನೇಕ ಜಿಲ್ಲೆಗಳು ಜಲಾವೃತವಾಗಿವೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿ ಹೋಗಿದೆ. ತಮಿಳುನಾಡಿನಲ್ಲಿರುವ ಜಲಾಶಯಗಳು ಈಗ ಮಳೆ ನೀರಿನಿಂದ ಭರ್ತಿಯಾಗಿವೆ. ನವೆಂಬರ್ 10ರಂದು ತಮಿಳುನಾಡಿನ 90 ಜಲಾಶಯಗಳು ಶೇ. 89ರಷ್ಟು ಭರ್ತಿಯಾಗಿದ್ದವು. ಈ ಜಲಾಶಯಗಳಲ್ಲಿ ಬರೋಬ್ಬರಿ 199.16 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಜಲಾಶಯಗಳ ನೀರಿನ ಸಂಗ್ರಹ ಹತ್ತಿರ ಹತ್ತಿರ 200 ಟಿಎಂಸಿ ಅಡಿಯನ್ನು ತಲುಪುತ್ತಿದೆ.

2020ರ ನವೆಂಬರ್ 10ರಂದು ತಮಿಳುನಾಡಿನ ಜಲಾಶಯಗಳಲ್ಲಿ ಸುಮಾರು 140 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಇದು ಜಲಾಶಯಗಳ ಸಾಮರ್ಥ್ಯದ ಶೇ. 63ರಷ್ಟು ಆಗಿತ್ತು. ತಮಿಳುನಾಡು ರಾಜ್ಯದಲ್ಲಿರುವ ಜಲಾಶಯಗಳ ಒಟ್ಟು ಸಾಮರ್ಥ್ಯ 224.297 ಟಿಎಂಸಿ ಅಡಿ ಇದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ತಮಿಳುನಾಡಿನಲ್ಲಿ ಮೂರು ಜಲಾಶಯಗಳಿವೆ. ಅವುಗಳೆಂದರೆ, ಮೆಟ್ಟೂರು, ಭವಾನಿಸಾಗರ, ಅಮರಾವತಿ ಜಲಾಶಯಗಳು. ಈ ಮೂರು ಜಲಾಶಯಗಳಲ್ಲೇ ಮೂರನೇ ಎರಡರಷ್ಟು ನೀರು ಸಂಗ್ರಹವಾಗಿದೆ. ಮೆಟ್ಟೂರು, ಭವಾನಿಸಾಗರ ಮತ್ತು ಅಮರಾವತಿ ಜಲಾಶಯಗಳಲ್ಲಿ 126.827 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಮೆಟ್ಟೂರು ಜಲಾಶಯದಲ್ಲಿ 91.883 ಟಿಎಂಸಿ ಅಡಿ, ಭವಾನಿಸಾಗರ ಡ್ಯಾಂನಲ್ಲಿ 31.131 ಟಿಎಂಸಿ ಮತ್ತು ಅಮರಾವತಿ ಡ್ಯಾಂನಲ್ಲಿ 3.8 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಮೂರೂ ಡ್ಯಾಂಗಳು ಬಹುತೇಕ ತುಂಬಿವೆ.

ಪರಂಬಿಕುಲಂ ಗುಂಪಿನ ಜಲಾಶಯಗಳಿಗೆ ಸಂಬಂಧಿಸಿದಂತೆ, ನಾಲ್ಕು ಪ್ರಮುಖ ಜಲಾಶಯಗಳು ಇವೆ. ಅವುಗಳೆಂದರೆ, ಪರಂಬಿಕುಲಂ, ಅಲಿಯಾರ್, ಶೋಲಾಯರ್ ಮತ್ತು ತಿರುಮೂರ್ತಿ ಡ್ಯಾಂಗಳು. ಅತ್ಯಂತ ಉತ್ತಮವಾದ ನೀರಿನ ಸಂಗ್ರಹವನ್ನು ಈ ಡ್ಯಾಂಗಳು ಹೊಂದಿವೆ. ತಿರುಮೂರ್ತಿಯನ್ನು ಹೊರತುಪಡಿಸಿ, ಅದರ ಸಂಗ್ರಹಣೆಯು ಸಾಮರ್ಥ್ಯದ ಸುಮಾರು ಶೇ. 87ರಷ್ಟು ನೀರು ಭರ್ತಿ ಆಗಿದೆ. ಉಳಿದ ಮೂರು ಡ್ಯಾಂಗಳು ಸಂಪೂರ್ಣ ತುಂಬಿವೆ. ಮುಲ್ಲಪೆರಿಯಾರ್-ವೈಗೈ ನೆಟ್‌ವರ್ಕ್‌ಗೆ ಸಂಬಂಧಿಸಿದಂತೆ, ಮುಲ್ಲಪೆರಿಯಾರ್ ಡ್ಯಾಂನಲ್ಲಿ 6.8 ಟಿಎಂಸಿ ಅಡಿಗಳ ನೀರು ಸಂಗ್ರಹವಾಗಿದೆ. ಮುಲ್ಲಪೆರಿಯಾರ್ ಡ್ಯಾಂನಲ್ಲಿ 7.67 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹಕ್ಕೆ ಮಾತ್ರ ಅವಕಾಶ ಇದೆ. ಹೀಗಾಗಿ ಮುಲ್ಲಪೆರಿಯಾರ್ ಡ್ಯಾಂ ಶೇ.89 ರಷ್ಟು ತುಂಬಿದೆ. ಕನ್ಯಾಕುಮಾರಿ ಜಿಲ್ಲೆಯ ಎರಡು ಪ್ರಮುಖ ಜಲಾಶಯಗಳು ಅಂದರೆ, ಪೆಚಿಪರೈ ಮತ್ತು ಪೆರುಂಚನಿ. ಈ ಎರಡು ಡ್ಯಾಂಗಳು ಸುಮಾರು ಶೇ.85ರಷ್ಟು ನೀರಿನ ಸಂಗ್ರಹವನ್ನು ಹೊಂದಿವೆ.

ರಾಜ್ಯದ ಉತ್ತರದ ಜಿಲ್ಲೆಗಳಲ್ಲಿ ಈ ಪ್ರದೇಶದ ಅತಿದೊಡ್ಡ ಜಲಾಶಯ ಅಂದರೆ, ಸಾತನೂರು ಜಲಾಶಯವಾಗಿದೆ. ಅದರ ಸಂಗ್ರಹವು ಅದರ ಸಾಮರ್ಥ್ಯದ ಅರ್ಧದಷ್ಟು ಸಹ ಮುಟ್ಟಿಲ್ಲ. ಸಾತನೂರು ಜಲಾಶಯದ ಸಂಗ್ರಹ ಸಾಮರ್ಥ್ಯ 3.392 ಟಿಎಂಸಿ ಅಡಿ. ಆದರೆ ಈಗ ಈ ಸಾಮರ್ಥ್ಯದ ಸುಮಾರು ಶೇಕಡಾ 46 ರಷ್ಟು ನೀರು ಸಂಗ್ರಹವಾಗಿದೆ. ಕಡಲೂರು ಜಿಲ್ಲೆಯ ಐತಿಹಾಸಿಕ ಟ್ಯಾಂಕ್ ವೀರನಂ 0.892 ಟಿಎಂಸಿ ಅಡಿ ಸಂಗ್ರಹವನ್ನು ಹೊಂದಿದೆ, ಅದರ ಸಾಮರ್ಥ್ಯದ ಸುಮಾರು ಶೇ.61 ರಷ್ಟು ನೀರು ಸಂಗ್ರಹವಾಗಿದೆ.

ಚೆನ್ನೈಗೆ ನೀರು ಸರಬರಾಜು ಮಾಡುವ ಜಲಾಶಯಗಳಿಗೆ ಸಂಬಂಧಿಸಿದಂತೆ, ಮತ್ತಷ್ಟು ಪ್ರವಾಹದ ನಿರೀಕ್ಷೆಯಲ್ಲಿ ಅವುಗಳ ನೀರು ಸಂಗ್ರಹ ಮಟ್ಟವನ್ನು ಕಡಿಮೆ ಮಾಡಲಾಗಿದೆ. ಪರಿಣಾಮವಾಗಿ, ಅವುಗಳ ಒಟ್ಟಾರೆ ಸಂಗ್ರಹಣೆಯು ಶೇ. 83ರಿಂದ ಶೇ.73ಕ್ಕೆ ಇಳಿದಿದೆ.

ರಾಜ್ಯದ ಕಾವೇರಿ ನೀರಿನ ಸಂಗ್ರಹಕ್ಕೆ ಸಂಬಂಧಿಸಿದಂತೆ ನೋಡುವುದಾದರೇ, ಜೂನ್ 1ರಿಂದ ಒಟ್ಟಾರೆ 150 ಟಿಎಂಸಿ ಅಡಿಗಳಿಗಿಂತ ಹೆಚ್ಚಿನ ನೀರು ಸಂಗ್ರಹವಾಗಿದೆ. ನವೆಂಬರ್ 8ರವರೆಗೆ ಸುಮಾರು 151.64 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಕಳೆದ ಅವಧಿಗೆ ಹೋಲಿಸಿದರೆ, 4.6 ಟಿಎಂಸಿ ಅಡಿ ಹೆಚ್ಚಿನ ನೀರು ಸಂಗ್ರಹವಾಗಿದೆ.

ಕರ್ನಾಟಕದ ಕಾವೇರಿ ಕಣಿವೆಯ ಡ್ಯಾಂಗಳಲ್ಲಿ ನೀರು ಎಷ್ಟಿದೆ?:
ಕರ್ನಾಟಕದ ಕಾವೇರಿ ಕಣಿವೆಯ ಡ್ಯಾಂಗಳಲ್ಲಿರುವ ನೀರಿನ ಸಂಗ್ರಹ ನೋಡುವುದಾದರೆ, ನವೆಂಬರ್ 10ರಂದು ಕರ್ನಾಟಕದ ನಾಲ್ಕು ಕಾವೇರಿ ಕಣಿವೆಯ ಡ್ಯಾಂಗಳಲ್ಲಿ 103.08 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಕರ್ನಾಟಕದ ಕಾವೇರಿ ಕಣಿವೆಯ ಕೆಆರ್.ಎಸ್, ಕಬಿನಿ, ಹಾರಂಗಿ, ಹೇಮಾವತಿ ಡ್ಯಾಂಗಳ ಗರಿಷ್ಠ ಸಾಮರ್ಥ್ಯ 114.57 ಟಿಎಂಸಿ ಅಡಿ. ಕರ್ನಾಟಕದ ಕಾವೇರಿ ಕಣಿವೆಯ ಡ್ಯಾಂಗಳು ತಮ್ಮ ಸಾಮರ್ಥ್ಯದ ಶೇ. 90ರಷ್ಟು ಭರ್ತಿಯಾಗಿವೆ. ಕಬಿನಿ ಹಾಗೂ ಕೆಆರ್‌ಎಸ್ ಡ್ಯಾಂಗಳು ಶೇ. 100ರಷ್ಟು ಭರ್ತಿಯಾಗಿವೆ. ಹೇಮಾವತಿ ಡ್ಯಾಂ ಶೇ. 70ರಷ್ಟು ಭರ್ತಿಯಾಗಿದ್ದರೆ, ಹಾರಂಗಿ ಡ್ಯಾಂ ಶೇ. 95ರಷ್ಟು ಭರ್ತಿಯಾಗಿದೆ. ಕೆಆರ್​ಎಸ್ ಡ್ಯಾಂನಿಂದ ನವೆಂಬರ್ 11ರಂದು ಒಟ್ಟಾರೆ 6,283 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. 3,817 ಕ್ಯೂಸೆಕ್ ನೀರುನ್ನು ನದಿಗೆ ಬಿಡಲಾಗುತ್ತಿದ್ದರೆ, ಕೆಆರ್.ಎಸ್. ಡ್ಯಾಂನಿಂದ 2,466 ಕ್ಯೂಸೆಕ್ ನೀರುನ್ನು ನಾಲೆಗಳಿಗೆ ಬಿಡಲಾಗುತ್ತಿದೆ. ಕೆಆರ್.ಎಸ್ ಡ್ಯಾಂಗೆ 6,492 ಕ್ಯೂಸೆಕ್ ನೀರಿನ ಒಳ ಹರಿವು ಇದೆ.

ಇದನ್ನೂ ಓದಿ: Tamil Nadu Rains: ತಮಿಳುನಾಡಿನಲ್ಲಿ ಇಂದು ಸಂಜೆ ಭರ್ಜರಿ ಮಳೆ ಸಾಧ್ಯತೆ; ಚೆನ್ನೈನಲ್ಲಿ ರೆಡ್​ ಅಲರ್ಟ್​​

Tamil Nadu Rains ತಮಿಳುನಾಡಿನ ಕೆಲವು ಭಾಗಗಳಲ್ಲಿ ಭಾರೀ ಮಳೆ ಸಾಧ್ಯತೆ; 9 ಜಿಲ್ಲೆಗಳಲ್ಲಿ ರಜೆ ಘೋಷಣೆ

TV9 Kannada


Leave a Reply

Your email address will not be published. Required fields are marked *