Tamil Nadu Rains: ತಮಿಳುನಾಡಿನಲ್ಲಿ ಇಂದು ಸಂಜೆ ಭರ್ಜರಿ ಮಳೆ ಸಾಧ್ಯತೆ; ಚೆನ್ನೈನಲ್ಲಿ ರೆಡ್​ ಅಲರ್ಟ್​​ | Northern Tamil Nadu to get heavy rain in evening Red alert in Chennai


Tamil Nadu Rains: ತಮಿಳುನಾಡಿನಲ್ಲಿ ಇಂದು ಸಂಜೆ ಭರ್ಜರಿ ಮಳೆ ಸಾಧ್ಯತೆ; ಚೆನ್ನೈನಲ್ಲಿ ರೆಡ್​ ಅಲರ್ಟ್​​

ಚೆನ್ನೈ ಮಳೆಯಿಂದಾದ ಅನಾಹುತ

ತಮಿಳುನಾಡಿನ ಚೆನ್ನೈನಲ್ಲಿ ಭಯಂಕರ ಮಳೆಗೆ (Chennai Rain) ಜನರು ತತ್ತರಿಸಿ ಹೋಗಿದ್ದಾರೆ. ಕಳೆದ ಮೂರು ದಿನಗಳಲ್ಲಿ ಭಾರಿ ಮಳೆಗೆ 12 ಮಂದಿ ಸಾವನ್ನಪ್ಪಿದ್ದಾರೆ. ಚೆನ್ನೈ, ಚೆಂಗಲಪಟ್ಟು ಮತ್ತು ಕಂಚಿಪುರಂ ಜಿಲ್ಲೆಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ದೈನಂದಿನ ಕೆಲಸ, ಚಟುವಟಿಕೆಗಳಿಗೆ ಹೊರಗಡೆ ಬರಲಾಗದೆ ಜನರು ಪರಿತಪಿಸುತ್ತಿದ್ದಾರೆ. ಇಡೀ ನಗರದಲ್ಲಿ ಬಹುತೇಕ ಕಡೆ ಸಂಪೂರ್ಣ ಜಲಾವೃತವಾಗಿದೆ. ವಾಹನ ಸಂಚಾರ ನಿಲುಗಡೆಯಾಗಿದೆ. ಪ್ರಮುಖ ಸಬ್​ವೇಗಳೆಲ್ಲ ಮುಚ್ಚಿಹೋಗಿವೆ. 2015ರಲ್ಲಿ ಇಂಥದ್ದೇ ಮಳೆಯನ್ನು ಚೆನ್ನೈ ನಗರ ಕಂಡಿತ್ತು. ಅದಾದ ಬಳಿಕ ಇಷ್ಟು ಭೀಕರ ಮಳೆ ಬಿದ್ದಿರಲಿಲ್ಲ. 

ಕೇಂದ್ರಾಡಳಿತ ಪ್ರದೇಶ ಪುದುಚೇರಿಯೂ ಕೂಡ ಭಯಂಕರ ಮಳೆಗೆ ತತ್ತರಿಸಿದೆ. ಆದರೆ ದುರದೃಷ್ಟವೆಂದರೆ ತಮಿಳುನಾಡಿನಲ್ಲಿ ಮಳೆ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಲಿರುವ ಹಿನ್ನೆಲೆಯಲ್ಲಿ ಇಂದು ಕೂಡ ವಿಪರೀತ ಮಳೆಯಾಗಲಿದೆ ಎಂದು ಯವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.  ತಮಿಳುನಾಡಿನ ಉತ್ತರ ಭಾಗದಲ್ಲಿರುವ ಚೆನ್ನೈ ನಗರ ಸೇರಿ ಹಲವು ಜಿಲ್ಲೆಗಳಲ್ಲಿ ಇಂದು ಸಂಜೆ ಸಿಕ್ಕಾಪಟೆ ಮಳೆ ಸುರಿಯಲಿದೆ. ಬಂಗಾಳಕೊಲ್ಲಿಯ ವಾಯುಭಾರ ಕುಸಿತದಿಂದ ಏಳುವ ಪ್ರಬಲ ಗಾಳಿ ಇಂದು ಸಂಜೆ ಹೊತ್ತಿಗೆ ತಮಿಳುನಾಡು ಉತ್ತರ ಮತ್ತು ಆಂಧ್ರಪ್ರದೇಶದ ದಕ್ಷಿಣ ಕರಾವಳಿ ಪ್ರದೇಶ ದಾಟುವ ಸಾಧ್ಯತೆ ಇದೆ. ಚೆನ್ನೈನಲ್ಲಿ ಸುಮಾರು ಗಂಟೆಗೆ 45 ಕಿಮೀ ವೇಗದಲ್ಲಿ ಗಾಳಿ ಬೀಸಬಹುದು ಎಂದು ಹವಾಮಾನ ಇಲಾಖೆ ಉಪನಿರ್ದೇಶಕ ಎಸ್​.ಬಾಲಚಂದ್ರನ್​ ತಿಳಿಸಿದ್ದಾರೆ.

11 ಸಬ್​ವೇಗಳು ಜಲಾವೃತ
ಚೆನ್ನೈನಲ್ಲಿ ವಿಪರೀತ ಮಳೆಯಿಂದಾಗಿ ವ್ಯಾಸರ್ಪಡಿ, ಗಣೇಶಪುರಂ, ಅಜಾಕ್ಸಸ್​, ಗಂಗು ರೆಡ್ಡಿ, ಮಾಲ್ಡೆ, ದೊರೆಸ್ವಾಮಿ ಸೇರಿ ಒಟ್ಟು 11 ಸಬ್​ವೇಗಳು ಸಂಪೂರ್ಣ ಜಲಾವೃತಗೊಂಡಿವೆ. ಇದರ ಹೊರತಾಗಿ ಕೆಕೆ ನಗರ್​, ಮೈಲಾಪೋರ್​, ಇವಿಆರ್ ಸಲೈ, ಕೆ-5 ಪೆರಾವಲ್ಲುರ್​, ಡಾ. ಅಂಬೇಡ್ಕರ್​ ರೋಡ್​, ವ್ಯಾಸರ್ಪಡಿ ಸೇರಿ ಹಲವು ರಸ್ತೆಗಳಲ್ಲಿ ಜನ ಮತ್ತು ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

11 ಎನ್​ಡಿಆರ್​ಎಫ್​ ತಂಡಗಳು ಸಜ್ಜು
ತಮಿಳುನಾಡಿನಲ್ಲಿ ಮಳೆಯಿಂದ ಸಂಕಷ್ಟಕ್ಕೀಡಾದ ಜನರನ್ನು ರಕ್ಷಿಸಲು ರಾಜ್ಯಾದ್ಯಂತ 11 ಎನ್​ಡಿಆರ್​ಎಫ್​ ತಂಡಗಳು ಮತ್ತು ಏಳು ಎಸ್​ಡಿಆರ್​ಎಫ್ (ರಾಜ್ಯ ವಿಪತ್ತು ಪ್ರತಿಕ್ರಿಯಾ ತಂಡ)​ ತಂಡಗಳನ್ನು ನಿಯೋಜಿಸಲಾಗಿದೆ.  ಮುಂದಿನ ಮೂರು ದಿನಗಳ ಕಾಲ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ. ಈಗಾಗಲೇ ಸಮುದ್ರದಲ್ಲಿ ಇದ್ದ ಬೋಟ್​ಗಳು ಕೂಡ ಹಿಂದಿರುಗಿದ್ದು, ಸದ್ಯಕ್ಕಂತೂ ಯಾವುದೇ ಬೋಟ್​, ದೋಣಿಗಳು ಸಮುದ್ರದಲ್ಲಿ ಸಿಲುಕಿಲ್ಲ ಎಂದು ತಮಿಳುನಾಡು ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಕೆಕೆಎಸ್​ಎಸ್​ಆರ್​ ರಾಮಚಂದ್ರನ್​ ಹೇಳಿದ್ದಾರೆ.   ಇನ್ನು ರಾಜ್ಯಾದ್ಯಂತ ಪ್ರವಾಹ ಪೀಡಿತ ಪ್ರದೇಶಗಳ ಮೇಲ್ವಿಚಾರಣೆಗಾಗಿ ಸುಮಾರು  1.5 ಲಕ್ಷ ಸ್ವಯಂ ಸೇವಕರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ. ಇಂದು ಕೂಡ ಚೆನ್ನೈನಲ್ಲಿ ರೆಡ್​ ಅಲರ್ಟ್​ ಘೋಷಣೆಯಾಗಿದೆ. ತಿರುವಲ್ಲೂರು, ಚೆಂಗಲಪಟ್ಟು, ಕಂಚಿಪುರಂಗಳಲ್ಲೂ ವಿಪರೀತ ಮಳೆಯಾಗಲಿದೆ.

ಇದನ್ನೂ ಓದಿ: Health Tips: ಆಯುರ್ವೇದದ ಪ್ರಕಾರ ಊಟದ ನಂತರ ಈ ಕೆಲವು ಚಟುವಟಿಕೆಗಳನ್ನು ಮಾಡಲೇಬಾರದು! ಯಾಕೆ ಗೊತ್ತಾ?

TV9 Kannada


Leave a Reply

Your email address will not be published. Required fields are marked *