Tamil Nadu Rains ತಮಿಳುನಾಡಿನ ಕೆಲವು ಭಾಗಗಳಲ್ಲಿ ಭಾರೀ ಮಳೆ ಸಾಧ್ಯತೆ; 9 ಜಿಲ್ಲೆಗಳಲ್ಲಿ ರಜೆ ಘೋಷಣೆ | Met Department predicting further rain over the next five days in Tamil Nadu


Tamil Nadu Rains ತಮಿಳುನಾಡಿನ ಕೆಲವು ಭಾಗಗಳಲ್ಲಿ ಭಾರೀ ಮಳೆ ಸಾಧ್ಯತೆ; 9 ಜಿಲ್ಲೆಗಳಲ್ಲಿ ರಜೆ ಘೋಷಣೆ

ಚೆನ್ನೈನಲ್ಲಿ ಮಳೆ

ಚೆನ್ನೈ: ಈಗಾಗಲೇ ಭಾರೀ ಮಳೆಯಿಂದ ತತ್ತರಿಸಿರುವ ತಮಿಳುನಾಡಿನಲ್ಲಿ(Tamil Nadu) ಮುಂದಿನ ಐದು ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ (Met Department) ನೀಡಿದೆ. ಮಳೆಯಿಂದಾಗಿ ಇದುವರೆಗೆ ಸಾವನ್ನಪ್ಪಿದವರ ಸಂಖ್ಯೆ ಐದು ಎಂದು ರಾಜ್ಯ ಸರ್ಕಾರ ತಿಳಿಸಿದೆ. ಆಗ್ನೇಯ ಮತ್ತು ನೈಋತ್ಯ ಬಂಗಾಳಕೊಲ್ಲಿಯಲ್ಲಿ (Bay of Bengal)ಚಂಡಮಾರುತದ ಶಕ್ತಿಯಿಂದಾಗಿ ವಾಯುಭಾರ ಕುಸಿತವು ರೂಪುಗೊಳ್ಳುವ ನಿರೀಕ್ಷೆಯಿದೆ. ಮುಂದಿನ 36 ಗಂಟೆಗಳಲ್ಲಿ ಇದು ಉತ್ತರ ತಮಿಳುನಾಡಿನ ಕರಾವಳಿಗೆ ಅಪ್ಪಳಿಸುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮಂಗಳವಾರ ತಿಳಿಸಿದೆ. ಇದರ ಪರಿಣಾಮವಾಗಿ ಮುಂದಿನ ಐದು ದಿನಗಳಲ್ಲಿ ತಮಿಳುನಾಡು, ದಕ್ಷಿಣ ಕರಾವಳಿ ಆಂಧ್ರಪ್ರದೇಶ ಮತ್ತು ಕೇರಳದಾದ್ಯಂತ ತಕ್ಕಮಟ್ಟಿಗೆ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನವೆಂಬರ್ 10 ರವರೆಗೆ ಕರಾವಳಿ ತಮಿಳುನಾಡಿನ ಮಧ್ಯ ಮತ್ತು ಉತ್ತರ ಭಾಗಗಳ ವಿವಿಧ ಜಿಲ್ಲೆಗಳಲ್ಲಿ ಪ್ರತ್ಯೇಕವಾದ ಕುಂಭದ್ರೋಣ (20 ಸೆಂ.ಮೀಗಿಂತ ಹೆಚ್ಚು) ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿದೆ. ನವೆಂಬರ್ 11 ರಿಂದ ಕೆಲವು ಪ್ರದೇಶಗಳಲ್ಲಿ ಮಾತ್ರ ಜೋರು ಮಳೆಯಾಗಲಿದೆ. ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ ತಮಿಳುನಾಡಿನ ಕಾರೈಕಲ್ ಮತ್ತು ನಾಗಪತಿನಂನಲ್ಲಿ ಕ್ರಮವಾಗಿ 20 ಸೆಂ ಮತ್ತು 15 ಸೆಂ.ಮೀ ಮಳೆ ದಾಖಲಾಗಿದೆ. ಚೆನ್ನೈನ ಕೊಳತ್ತೂರ್ ಪ್ರದೇಶ ಜಲಾವೃತವಾಗಿರುವುದಾಗಿ ವರದಿ ಆಗಿದೆ.

ಕೆಲವು ಜಿಲ್ಲೆಗಳಿಗೆ ರಜೆ ಘೋಷಣೆ
ಭಾರೀ ಮಳೆಯ ಮುನ್ಸೂಚನೆಯ ಹಿನ್ನೆಲೆಯಲ್ಲಿ ಚೆನ್ನೈ, ಕಾಂಚೀಪುರಂ, ತಿರುವಳ್ಳೂರು, ಚೆಂಗಲ್ಪಟ್ಟು, ಕಡಲೂರು, ನಾಗಪಟ್ಟಿಣಂ, ತಂಜಾವೂರು, ತಿರುವಾರೂರ್ ಮತ್ತು ಮೈಲಾಡುತುರೈ ಒಂಬತ್ತು ಜಿಲ್ಲೆಗಳಿಗೆ ನವೆಂಬರ್ 10 ಮತ್ತು 11 ರಂದು ರಾಜ್ಯ ಸರ್ಕಾರ ಸ್ಥಳೀಯ ರಜೆ ಘೋಷಿಸಿದೆ ಎಂದು ಎಎನ್‌ಐ ವರದಿ ಮಾಡಿದೆ.

ಮುಂದುವರಿದ ರಕ್ಷಣಾ ಕಾರ್ಯಾಚರಣೆ
ಮಂಗಳವಾರ ಸುರಿದ ಮಳೆಯ ನಂತರ ತಗ್ಗು ಪ್ರದೇಶಗಳಿಂದ ನೀರನ್ನು ಹೊರಹಾಕಲಾಗುತ್ತಿದೆ. ಎನ್‌ಡಿಆರ್‌ಎಫ್, ಸೇನೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಮಿಳುನಾಡು ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಕೆಕೆಎಸ್ ಎಸ್‌ಆರ್ ರಾಮಚಂದ್ರನ್ ಹೇಳಿದ್ದಾರೆ, ಮಧುರೈ ಡಿಸಿ ಅನೀಶ್ ಶೇಖರ್ ಅವರು ಮಂಗಳವಾರ ರಾತ್ರಿ ತಿರುಮಂಗಲಂ ಬಳಿಯ ಉಚ್ಚಪಟ್ಟಿ ಶ್ರೀಲಂಕಾ ನಿರಾಶ್ರಿತರ ಶಿಬಿರವನ್ನು ಪರಿಶೀಲಿಸಿದರು,.ಇಲ್ಲಿ ನಿರಂತರ ಮಳೆಯಿಂದ 12ಕ್ಕಿಂತಲೂ ಹೆಚ್ಚು ಮಣ್ಣಿನ ಮನೆಗಳಿಗೆ ಹಾನಿಯಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಅವರನ್ನು ಸುರಕ್ಷಿತವಾಗಿ ಕರೆದೊಯ್ಯಲು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.

ಕೆಲವು ಜಿಲ್ಲೆಗಳಲ್ಲಿ ಶಾಲೆಗಳು ಬಂದ್
ತಮಿಳುನಾಡಿನಾದ್ಯಂತ ನಿರಂತರ ಮಳೆಯಿಂದಾಗಿ 14 ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳು ತರಗತಿಗಳನ್ನು ಸ್ಥಗಿತಗೊಳಿಸಬೇಕಾಯಿತು. ಕೊಯಮತ್ತೂರಿನ ಎಲ್ಲಾ ಶಾಲೆಗಳು ಬುಧವಾರವೂ ಮುಚ್ಚಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ.

ತಮಿಳುನಾಡು ಜಿಲ್ಲೆಗಳಿಗೆ ರೆಡ್ ಅಲರ್ಟ್‌
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ಪುದುಕ್ಕೊಟ್ಟೈ, ರಾಮನಾಥಪುರಂ, ಕಾರೈಕಲ್‌ಗೆ ಮಂಗಳವಾರ ರೆಡ್ ಅಲರ್ಟ್ ಘೋಷಿಸಿತ್ತು. ಗುರುವಾರದಂದು ತಿರುವಳ್ಳೂರು, ಚೆನ್ನೈ, ಕಾಂಚೀಪುರಂ, ಚೆಂಗಲ್ಪಟ್ಟು, ವಿಲ್ಲುಪುರಂ ಮತ್ತು ತಿರುವಣ್ಣಾಮಲೈಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಐದು ಜಿಲ್ಲೆಗಳಾದ ಕಡಲೂರು, ವಿಲ್ಲುಪುರಂ, ಶಿವಗಂಗಾ, ರಾಮನಾಥಪುರಂ ಮತ್ತು ಕಾರೈಕಲ್‌ಗೆ ಬುಧವಾರ ರೆಡ್ ಅಲರ್ಟ್ ಘೋಷಿಸಲಾಗಿದೆ. ಏತನ್ಮಧ್ಯೆ, ತಮಿಳುನಾಡು, ದಕ್ಷಿಣ ಆಂಧ್ರಪ್ರದೇಶ ಮತ್ತು ಶ್ರೀಲಂಕಾ ಕರಾವಳಿಯ ಕಡೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

ಇಂದು ಮತ್ತು ನಾಳೆ ಕೇರಳದಲ್ಲಿ ಮಳೆ ನಿರೀಕ್ಷೆ
ನವೆಂಬರ್ 10 ಮತ್ತು ನವೆಂಬರ್ 11 ರಂದು ಕೇರಳದಲ್ಲಿ ಪ್ರತ್ಯೇಕ ಪ್ರದೇಶಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ ಮತ್ತು ಎರಡು ದಿನಗಳವರೆಗೆ ಐದು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಪತ್ತನಂತಿಟ್ಟ, ಕೋಟ್ಟಯಂ, ಇಡುಕ್ಕಿ, ಪಾಲಕ್ಕಾಡ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ನವೆಂಬರ್ 10 ರಂದು ತಿರುವನಂತಪುರಂ, ಕೊಲ್ಲಂ, ಅಲಪ್ಪುಳ, ಎರ್ನಾಕುಲಂ, ತ್ರಿಶೂರ್, ಕೋಯಿಕ್ಕೋಡ್ ಮತ್ತು ವಯನಾಡ್ ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಲಾಗಿದೆ ಎಂದು ಏಷ್ಯಾನೆಟ್ ನ್ಯೂಸ್ ವರದಿ ಮಾಡಿದೆ. ಕೇರಳ ಕರಾವಳಿಯಲ್ಲಿ ಗಂಟೆಗೆ 40 ರಿಂದ 50 ಕಿಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

ಇದನ್ನೂ ಓದಿ:  Chennai Rain ತಮಿಳುನಾಡಿನಲ್ಲಿ ಭಾರೀ ಮಳೆಯಿಂದಾಗಿ 5 ಸಾವು; ನವೆಂಬರ್ 11ರವರೆಗೆ ರೆಡ್ ಅಲರ್ಟ್ ಘೋಷಣೆ 

TV9 Kannada


Leave a Reply

Your email address will not be published. Required fields are marked *