ತುಂಬಿ ಹರಿಯುತ್ತಿರುವ ಪಾಲ ನದಿ (ಪಿಟಿಐ ಚಿತ್ರ)
ತಮಿಳುನಾಡು ವರುಣಾರ್ಭಟಕ್ಕೆ (Tamil Nadu Rains) ಅಕ್ಷರಶಃ ನಲುಗಿದೆ. ಇದೀಗ ಈಶಾನ್ಯ ಮಾನ್ಸೂನ್ ಅವಧಿಯಾಗಿದ್ದು, ತಮಿಳುನಾಡಿನಲ್ಲಿ ಈ ಸಮಯದಲ್ಲಿ ಎಂದಿಗಿಂತಲೂ ಆಗುವ ಮಳೆಯ ಶೇ.68ರಷ್ಟು ಹೆಚ್ಚು ಮಳೆ ಬಿದ್ದಿದೆ ಎಂದು ರಾಜ್ಯದ ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆ ಸಚಿವ ಕೆಕೆಎಸ್ಎಸ್ಆರ್ ಸಚಿವ ರಾಮಚಂದ್ರನ್ ಹೇಳಿದ್ದಾರೆ. ಹಾಗೇ, ತಮಿಳುನಾಡಿನಲ್ಲಿ ಅಕ್ಟೋಬರ್ 1ರಿಂದ ಇಲ್ಲಿಯವರೆಗೆ ಒಟ್ಟಾರೆ 518.99 ಎಂಎಂ ಮಳೆಯಾಗಿದ್ದಾಗಿಯೂ ಮಾಹಿತಿ ನೀಡಿದ್ದಾರೆ.
ತಮಿಳುನಾಡಿನಲ್ಲಿ ಮಳೆಯಿಂದ ಆಗುವ ಅನಾಹುತ, ಅವಘಡಗಳು ಹೆಚ್ಚುತ್ತಲೇ ಇವೆ. ಕಳೆದ 24ಗಂಟೆಯಲ್ಲಿ ಮೂವರು ಮೃತಪಟ್ಟಿದ್ದಾರೆ. ಇನ್ನು 300ಕ್ಕೂ ಹೆಚ್ಚು ಜಾನುವಾರಗಳು ಸಾವನ್ನಪ್ಪಿವೆ ಎಂದು ಸರ್ಕಾರ ಮಾಹಿತಿ ನೀಡಿದೆ. ಅದರಲ್ಲೂ ಕಾವೇರಿ ನದಿ ಮುಖಜಭೂಮಿಯ ಜಿಲ್ಲೆಗಳಿಗೆ ನೀರು ಒದಗಿಸುವ ಸೇಲಂನ ಮೆಟ್ಟೂರು ಸೇರಿ ಕೆಲವು ಜಲಾಶಯಗಳಿಂದ ಅಪಾರ ಪ್ರಮಾಣದ ನೀರು ಹೊರಬಿಡಲಾಗುತ್ತಿರುವುದು ಇನ್ನಷ್ಟು ಅಪಾಯದ ಆತಂಕಕ್ಕೆ ಕಾರಣವಾಗಿದೆ. ವಿಲ್ಲುಪುರಂನ ತೆನ್ಪೆನ್ನೈ ಮತ್ತು ಕಾಂಚಿಪುರಂನ ಪಾಲಾರ್ ನದಿಗಳು ತುಂಬಿ ಹರಿಯುತ್ತಿವೆ. ಮೆಟ್ಟೂರು ಜಲಾಶಯದಿಂದ 65 ಸಾವಿರ ಕ್ಯೂಸೆಕ್ಸ್ ಮತ್ತು ಪೂಂಡಿ ಜಲಾಶಯದಿಂದ 29,684 ಕ್ಯೂಸೆಕ್ಸ್ ನೀರು ಬಿಡಲಾಗುತ್ತಿದೆ.
ವಿಲ್ಲುಪುರಂನ ತೆನ್ಪೆನ್ನೈ ನದಿ ಉಕ್ಕಿ ಹರಿಯುತ್ತಿದ್ದರೆ, ಕಾಂಚೀಪುರಂನ ಪಾಲಾರ್ ತುಂಬಿ ಹರಿಯುತ್ತಿದೆ. ಕಳೆದ 24ಗಂಟೆಯಿಂದ ತಮಿಳುನಾಡಿನ 37 ಜಿಲ್ಲೆಗಳಲ್ಲಿ ಒಂದೇ ಸಮನೆ ಮಳೆ ಸುರಿಯುತ್ತಿದೆ. ಅದರಲ್ಲೂ ತಿರುಪತೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 39.91 ಎಂಎಂ ಮಳೆ ಸುರಿದಿದೆ. ವಿಲ್ಲುಪುರಂನಲ್ಲಿ ಬರೋಬ್ಬರಿ 18,500 ಹೆಕ್ಟೇರ್ಗಳಷ್ಟು ಕೃಷಿ ಭೂಮಿ ಜಲಾವೃತಗೊಂಡಿದೆ. ರಾಜ್ಯಾದ್ಯಂತ ಅದರಲ್ಲೂ ಚೆನ್ನೈ, ಕಾಂಚಿಪುರಂ, ತಿರುವಲ್ಲೂರ್ ಮತ್ತು ವೆಲ್ಲೋರ್ಗಳಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಎನ್ಡಿಆರ್ಎಫ್ ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ಕೆಳಪ್ರದೇಶಗಳಲ್ಲಿರುವ ಜನರನ್ನು ಸ್ಥಳಾಂತರ ಮಾಡುವ ಕಾರ್ಯ ಭರದಿಂದ ಸಾಗುತ್ತಿವೆ.
ಇದನ್ನೂ ಓದಿ: ‘ಸಾಧು ನನ್ನ ಕೈಗೆ ಸಿಕ್ಕಿದ್ದರೆ ಒಂದೆರಡು ಏಟು ಚೆನ್ನಾಗಿ ಬಿದ್ದಿರುತ್ತಿತ್ತು’: ರವಿಚಂದ್ರನ್