Tejashwi Yadav: ತೇಜಸ್ವಿ ಯಾದವ್​ಗೆ ನಾಳೆ ನಿಶ್ಚಿತಾರ್ಥ; ಸೊಸೆಯ ಬಗ್ಗೆ ಗುಟ್ಟು ಬಿಟ್ಟುಕೊಡದ ಲಾಲೂ ಪ್ರಸಾದ್ | Lalu Prasad Yadav son Tejashwi Yadav set to get married soon engagement ceremony likely tomorrow in Delhi


Tejashwi Yadav: ತೇಜಸ್ವಿ ಯಾದವ್​ಗೆ ನಾಳೆ ನಿಶ್ಚಿತಾರ್ಥ; ಸೊಸೆಯ ಬಗ್ಗೆ ಗುಟ್ಟು ಬಿಟ್ಟುಕೊಡದ ಲಾಲೂ ಪ್ರಸಾದ್

ಲಾಲೂ ಪ್ರಸಾದ್ ಯಾದವ್-ರಾಬ್ರಿ ದೇವಿ- ತೇಜಸ್ವಿ ಯಾದವ್

ನವದೆಹಲಿ: ಆರ್​​ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಅವರ ಮಗ ತೇಜಸ್ವಿ ಯಾದವ್ (Tejaswi Yadav) ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸದ್ದಿಲ್ಲದಂತೆ ಅವರ ಮದುವೆ ನಿಶ್ಚಯವಾಗಿದ್ದು, ಗುರುವಾರ ದೆಹಲಿಯಲ್ಲಿ ನಿಶ್ಚಿತಾರ್ಥ ಸಮಾರಂಭ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ನಿಶ್ಚಿತಾರ್ಥಕ್ಕಾಗಿ ತೇಜಸ್ವಿ ಯಾದವ್ ಕುಟುಂಬ ಈಗಾಗಲೇ ದೆಹಲಿಗೆ ಆಗಮಿಸಿದೆ. ತೇಜಸ್ವಿ ಯಾದವ್ ಮತ್ತು ತೇಜ್ ಪ್ರತಾಪ್ (Tej Prathap)  ಪ್ರಸ್ತುತ ಲಾಲೂ ಪ್ರಸಾದ್ ಯಾದವ್ (Lalu Prasad Yadav), ರಾಬ್ರಿ ದೇವಿ (Rabri Devi) ಮತ್ತು ಮಿಸಾ (Misa)  ಅವರೊಂದಿಗೆ ದೆಹಲಿಯಲ್ಲಿದ್ದಾರೆ. ತೇಜಸ್ವಿ ಯಾದವ್ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ಕಿರಿಯ ಮಗನಾಗಿದ್ದು, ತಮ್ಮ ಮಗನನ್ನು ಮದುವೆಯಾಗುತ್ತಿರುವ ಯುವತಿ ಯಾರೆಂಬ ಬಗ್ಗೆ ಲಾಲೂ ಪ್ರಸಾದ್​ ಯಾದವ್ ದಂಪತಿ ಯಾವುದೇ ಸುಳಿವನ್ನು ಬಿಟ್ಟುಕೊಟ್ಟಿಲ್ಲ.

ನಾಳೆ ನಡೆಯುವ ನಿಶ್ಚಿತಾರ್ಥ ಸಮಾರಂಭದಲ್ಲಿ ಆಪ್ತ ಸಂಬಂಧಿಗಳು ಸೇರಿದಂತೆ ಸುಮಾರು 50 ಜನರು ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಬಿಹಾರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಹಾಗೂ ರಾಘೋಪುರ ಕ್ಷೇತ್ರದ ಶಾಸಕರಾಗಿದ್ದಾರೆ. ತೇಜಸ್ವಿ ಯಾದವ್ 2015ರಿಂದ 2017ರವರೆಗೆ ಬಿಹಾರದ ಉಪ ಮುಖ್ಯಮಂತ್ರಿಯಾಗಿದ್ದರು.

ಲಾಲೂ ಪ್ರಸಾದ್ ಯಾದವ್ ಅವರ ಮಗ ತೇಜಸ್ವಿ ಯಾದವ್ ನಿಶ್ಚಿತಾರ್ಥ ಸಮಾರಂಭವು ದೆಹಲಿಯಲ್ಲಿ ಮಿಸಾ ಭಾರತಿ ಅವರ ನಿವಾಸದಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. 32 ವರ್ಷದ ತೇಜಸ್ವಿ ಯಾದವ್ ಬಿಹಾರದ ಮಾಜಿ ಮುಖ್ಯಮಂತ್ರಿಗಳಾದ ಲಾಲು ಪ್ರಸಾದ್ ಯಾದವ್ ಮತ್ತು ರಾಬ್ರಿ ದೇವಿ ಅವರ ಕಿರಿಯ ಮಗ. ಅನಾರೋಗ್ಯದಿಂದ ಬಳಲುತ್ತಿರುವ ಲಾಲು ಪ್ರಸಾದ್ ಮೇವು ಹಗರಣದ ಆರೋಪಿಯಾಗಿದ್ದು, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ.

ತೇಜಸ್ವಿ ಯಾದವ್ ಅವರನ್ನು ಮದುವೆಯಾಗುವ ಯುವತಿ ದೆಹಲಿ ಅಥವಾ ಹರಿಯಾಣಕ್ಕೆ ಸೇರಿದವರು ಎನ್ನಲಾಗಿದೆ. ಅಲ್ಲದೆ, ಆಕೆ ತೇಜಸ್ವಿ ಯಾದವ್​ಗೆ ಪರಿಚಿತರಾಗಿದ್ದಾರೆ ಎಂದು ಕೂಡ ಹೇಳಲಾಗಿದೆ. ಆಕೆ ಕೆಲಕಾಲ ಪಾಟ್ನಾದಲ್ಲಿ ತನ್ನ ಶಾಲಾ ಶಿಕ್ಷಣವನ್ನು ಹೊಂದಿದ್ದಳು ಎಂದು ಹೇಳಲಾಗುತ್ತಿದೆ. ಆದರೆ, ವಧುವಿನ ಬಗ್ಗೆ ಬೇರೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ನಿಶ್ಚಿತಾರ್ಥ ಸಮಾರಂಭಕ್ಕೆ ಕುಟುಂಬ ಸದಸ್ಯರು ಮತ್ತು ಸ್ನೇಹಿತರನ್ನು ಮಾತ್ರ ಆಹ್ವಾನಿಸಲಾಗುತ್ತದೆ. ದೆಹಲಿಯಲ್ಲಿ ನಡೆಯಲಿರುವ ನಿಶ್ಚಿತಾರ್ಥ ಸಮಾರಂಭದಲ್ಲಿ ಆಪ್ತರು ಸೇರಿದಂತೆ ಸುಮಾರು 50 ಮಂದಿ ಭಾಗವಹಿಸಲಿದ್ದಾರೆ.

2020ರ ಬಿಹಾರ ವಿಧಾನಸಭಾ ಚುನಾವಣೆಯ ನಂತರ ಮತ್ತು ತಂದೆಗೆ ಜಾಮೀನು ಸಿಕ್ಕ ನಂತರ ಮದುವೆಯಾಗುವುದಾಗಿ ತೇಜಸ್ವಿ ಯಾದವ್ ಈ ಹಿಂದೆಯೇ ಸುಳಿವು ನೀಡಿದ್ದರು. ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ಬಿಹಾರದ ಮಾಜಿ ಮುಖ್ಯಮಂತ್ರಿ ದರೋಗಾ ಪ್ರಸಾದ್ ರಾಯ್ ಅವರ ಮೊಮ್ಮಗಳು ಐಶ್ವರ್ಯಾ ರೈ ಅವರನ್ನು ಮೇ 2018ರಲ್ಲಿ ವಿವಾಹವಾಗಿದ್ದರು. ಆದರೆ, ಆರು ತಿಂಗಳೊಳಗೆ ಅವರ ಸಂಬಂಧ ಹದಗೆಟ್ಟಿದ್ದರಿಂದ ವಿಚ್ಛೇದನ ಪಡೆದಿದ್ದರು.

TV9 Kannada


Leave a Reply

Your email address will not be published. Required fields are marked *