Temple Tour: ಭಕ್ತರ ಪಾಲಿಗೆ ಭೂಕೈಲಾಸ ಯಾದಗಿರಿಯ ವಿಶ್ವಾರಾಧ್ಯ ಕ್ಷೇತ್ರ | Spiritual news details about Yadagiri Vishwaradhya Temple


ರಾಜ್ಯದ ನಾನಾ ಭಾಗಗಳಲ್ಲಿ ಇರುವಂತಾ ದೇಗುಲಗಳು ಸ್ಥಳೀಯವಾಗಿ ಮತ್ತು ರಾಜ್ಯವ್ಯಾಪಿಯಲ್ಲಿ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿವೆ. ಅಂತಾ ದೇಗುಲಗಳ ವಿಶೇಷತೆಗಳ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲೋ ವಿಶೇಷ ಕಾರ್ಯಕ್ರಮವೇ ಈ ಟೆಂಪಲ್ ಟೂರ್. ರಾಜ್ಯದ ದೇಗುಲಗಳು ಹೇಗೆ ಧರ್ಮ ಸಾರವನ್ನು ಜಗತ್ತಿಗೆ ಪಸರಿಸುತ್ತಿವೆಯೋ ಅದೇ ರೀತಿ ನಾಡಿನ ಸಾಕಷ್ಟು ಮಠ ಮಾನ್ಯಗಳು, ಸಿದ್ಧಿ ಪುರುಷರ ಸುಕ್ಷೇತ್ರಗಳು ಸಮಾಜಕ್ಕೆ ಧರ್ಮ ಬೋಧನೆಯನ್ನು ಮಾಡುತ್ತಿವೆ. ಒಳಿತು ಕೆಡುಕುಗಳ ಮಾರ್ಗದರ್ಶನವನ್ನು ನೀಡುತ್ತಿವೆ. ಸತ್ಕಾರ್ಯ, ಸನ್ಮಾರ್ಗಗಳ ಬೆಳಕಾಗಿ ನಿಂತಿವೆ. ಅಂತಾ ಸಾಕಷ್ಟು ಪುಣ್ಯ ಕ್ಷೇತ್ರಗಳಲ್ಲಿ ಯಾದಗಿರಿ ಜಿಲ್ಲೆಯ ಅಬ್ಬೆ ತುಮಕೂರಿನಲ್ಲಿರುವ ವಿಶ್ವಾರಾಧ್ಯರ ಧಾರ್ಮಿಕ ಸಂಸ್ಥಾನವೂ ಒಂದು.

ಈ ಪುಣ್ಯ ಕ್ಷೇತ್ರ ಇಡೀ ಕಲ್ಯಾಣ ಕರ್ನಾಟಕ ಭಾಗದಲ್ಲೇ ಅತ್ಯಂತ ಪ್ರಸಿದ್ಧಿಯನ್ನು ಪಡೆದ ಕ್ಷೇತ್ರವಾಗಿದೆ. ಈ ಕ್ಷೇತ್ರಕ್ಕೆ ಸಾವಿರಾರು ಮಂದಿ ಭಕ್ತರು ಒಂದಲ್ಲ ಒಂದು ಸಮಸ್ಯೆಯನ್ನು ಹೊತ್ತುಕೊಂಡು ಬಂದು ಪರಿಹಾರವನ್ನು ಕಂಡುಕೊಳ್ಳುತ್ತಾರೆ ಎನ್ನುವುದಕ್ಕೆ ಸಾಕಷ್ಟು ಉದಾರಣೆಗಳಿವೆ. ಒಂದು ಸಾಮಾನ್ಯ ಹಳ್ಳಿಯಾಗಿದ್ದ ಅಬ್ಬೆ ತುಮಕೂರು ಶ್ರೀವಿಶ್ವಾರಾಧ್ಯರ ದಿವ್ಯಾಗಮನದಿಂದ ಪರಮ ಪವಿತ್ರ ಪುಣ್ಯ ಕ್ಷೇತ್ರವಾಯಿತು. ಮಹಾತ್ಮ ವಿಶ್ವಾರಾಧ್ಯರು ಅಬ್ಬೆ ತುಮಕೂರಿನಲ್ಲಿ ಅಂತಿಮ ದಿನಗಳನ್ನು ಕಳೆದ ಕಾರಣಕ್ಕೆ ಇದು ಅವಿಮುಕ್ತ ಕ್ಷೇತ್ರವಾಗಿದೆ. ಪಾವನ ಪರಂಧಾಮವಾಗಿದೆ. ಭಕ್ತರ ಪಾಲಿಗೆ ಭೂಕೈಲಾಸವಾಗಿದೆ. ಆಧ್ಯಾತ್ಮಿಕ ಪವಾಡ ಪುರುಷ, ಅಂಗ ಗುಣಗಳನ್ನು ಅಳಿದ ವಿಶ್ವಾರಾಧ್ಯರಿಂದ ಅಬ್ಬೆತುಮಕೂರು ನಾಡಿನ ಮೂಲೆ ಮೂಲೆಗೂ ಹೆಸರುವಾಸಿಯಾಗಿದೆ.

ಅತ್ಯಂತ ಜಾಗೃತ ಕ್ಷೇತ್ರವೆಂದು ವಿಶ್ವಾರಾಧ್ಯರ ಈ ಭೂಮಿ ಪ್ರಸಿದ್ಧಿ ಪಡೆದಿದೆ. ಈ ಕ್ಷೇತ್ರದ ಒಡೆಯರಾದ ಸದ್ಗುರು ವಿಶ್ವಾರಾಧ್ಯರು ನಾಡಿನ ಜನತೆಯ ಆರಾಧ್ಯ ದೈವವಾಗಿದ್ದಾರೆ. ಕರ್ನಾಟಕ ಮಾತ್ರವಲ್ಲ ಆಂಧ್ರ, ತೆಲಂಗಾಣ ಮತ್ತು ಮಹಾರಾಷ್ಟ್ರಗಳಿಂದ ಲಕ್ಷೋಪಲಕ್ಷ ಭಕ್ತವೃಂದ ಸಾಗರೋಪಾದಿಯಲ್ಲಿ ಹರಿದು ಬರುತ್ತದೆ. ವಿಶ್ವಾರಾಧ್ಯರ ದರ್ಶನಾಶೀರ್ವಾದ ಪಡೆದು ಭವ ಚಿಂತೆಯನ್ನು ದೂರ ಮಾಡಿಕೊಂಡು ಭವ ರೋಗ ಅಳಿಸಿಕೊಂಡು, ಅಂತರಂಗ ಶುದ್ಧಿಗೊಳಿಸಿಕೊಂಡು ಪುಣ್ಯಾತ್ಮರಾಗುತ್ತಾರೆ.

ಕುಳಿತುಕೊಳ್ಳಲು ಕುರ್ಚಿ ಇಲ್ಲದ ಮಠಕ್ಕೆ ಪೀಠಾಧಿಪತಿಗಳಾಗಿ ಬಂದ ಹಿರಿಮೆ ಶ್ರೀಗಂಗಾಧರ ಮಹಾಸ್ವಾಮಿಗಳಿಗೆ ಸಲ್ಲುತ್ತದೆ. ಸಂಕಲ್ಪ ಶಕ್ತಿ ಸದಿಚ್ಛೆ ಕತೃತ್ವ ಶಕ್ತಿಗಳಿಂದ ಇಂದು ಮಠ ಉತ್ತರೋತ್ತರ ಅಭಿವೃದ್ಧಿಯ ಪಥದಲ್ಲಿ ಸಾಗುವಂತೆ ಮಾಡಿರುವರು. ಸುಂದರವಾದ ದೇವಾಲಯ, ಶಿವಾನುಭವ ಮಂಟಪ, ಕಲ್ಯಾಣ ಮಂಟಪ, ಬೃಹತ್ತಾದ ಶಿವನ ಮೂರ್ತಿ, ದಾಸೋಹ ಮಹಾಮನೆ, ಶಾಲಾ, ಕಾಲೇಜುಗಳು ತಲೆಯೆತ್ತಿ ನಿಂತಿವೆ. ಆ ಮೂಲಕ ಅನ್ನದಾಸೋಹದ ಜತೆಗೆ ಅಕ್ಷರ ದಾಸೋಹವು ಈ ಪುಣ್ಯ ಭೂಮಿಯಿಂದ ನಡೀತಿದೆ.

ಇದನ್ನೂ ಓದಿ:
Temple Tour: ಉದ್ಭವ ಮೂರ್ತಿಯಾಗಿ ವೀರಭದ್ರ ಸ್ವಾಮಿ ಎದ್ದು ನಿಂತ ದೇವಾಲಯದ ದರ್ಶನ ಪಡೆಯಿರಿ

Temple Tour: ಕುಕ್ಕೇ ಸುಬ್ರಹ್ಮಣ್ಯ ದೇಗುಲದಷ್ಟೇ ಪ್ರಸಿದ್ಧಿ ಪಡೆದಿದೆ ಹಾಸನದ ಪ್ರಸನ್ನ ಸುಬ್ರಹ್ಮಣ್ಯ ದೇವಾಲಯ

TV9 Kannada


Leave a Reply

Your email address will not be published. Required fields are marked *