Terrorists Encounter: ಕಾಶ್ಮೀರದಲ್ಲಿ ಜ. 1ರಿಂದ 7 ಪಾಕಿಸ್ತಾನಿ ಉಗ್ರರು ಸೇರಿ 14 ಭಯೋತ್ಪಾದಕರ ಹತ್ಯೆ | Indian Security forces Encounter 14 terrorists in Kashmir since January 1 seven of them Pakistan Citizens


Terrorists Encounter: ಕಾಶ್ಮೀರದಲ್ಲಿ ಜ. 1ರಿಂದ 7 ಪಾಕಿಸ್ತಾನಿ ಉಗ್ರರು ಸೇರಿ 14 ಭಯೋತ್ಪಾದಕರ ಹತ್ಯೆ

ಸಾಂದರ್ಭಿಕ ಚಿತ್ರ

ಶ್ರೀನಗರ: ಈ ವರ್ಷದ ಜನವರಿ 1ರಿಂದ ಇದುವರೆಗೆ ಕಾಶ್ಮೀರ ಕಣಿವೆಯಲ್ಲಿ ಭದ್ರತಾ ಪಡೆಗಳು 14 ಭಯೋತ್ಪಾದಕರನ್ನು ಹೊಡೆದುರುಳಿಸಿವೆ. ಅದರಲ್ಲಿ 7 ಉಗ್ರರು ಪಾಕಿಸ್ತಾನದವರಾಗಿದ್ದಾರೆ ಎಂದು ಕಾಶ್ಮೀರ ಪೊಲೀಸ್ ಮಹಾನಿರೀಕ್ಷಕ ವಿಜಯ್ ಕುಮಾರ್ ಹೇಳಿದ್ದಾರೆ. ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಜೊತೆ ನಂಟು ಹೊಂದಿದ್ದ ಪಾಕಿಸ್ತಾನಿ ಉಗ್ರ ಬಾಬರ್ ಭಾಯಿಯನ್ನು ಎನ್​​ಕೌಂಟರ್​ ಮಾಡಿದ ನಂತರ ಕುಲ್ಗಾಮ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಶ್ಮೀರದ ಐಜಿ, ಭಯೋತ್ಪಾದಕ ಅಡಗಿರುವ ಸ್ಥಳದ ಮಾಲೀಕ ಮತ್ತು ಅವನ ಕುಟುಂಬವು ಉದ್ದೇಶಪೂರ್ವಕವಾಗಿ ಪೊಲೀಸ್ ತಂಡವನ್ನು ದಾರಿ ತಪ್ಪಿಸಿದೆ ಎಂದು ಹೇಳಿದ್ದಾರೆ.

ಉಗ್ರರ ಶೋಧ ಕಾರ್ಯಾಚರಣೆಯ ಹಾದಿ ತಪ್ಪಿಸಿರುವವರ ವಿರುದ್ಧ ಭಯೋತ್ಪಾದನಾ ಕಾನೂನಿನಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. “2022ರ ಜನವರಿ 1ರಿಂದ 8 ಕಾರ್ಯಾಚರಣೆಗಳಲ್ಲಿ ಹತ್ಯೆಗೀಡಾದ 14 ಭಯೋತ್ಪಾದಕರ ಪೈಕಿ 7 ಮಂದಿ ಪಾಕಿಸ್ತಾನದವರು” ಎಂದು ಜಮ್ಮು ಕಾಶ್ಮೀರದ ಡಿಜಿಪಿ ದಿಲ್ಬಾಗ್ ಸಿಂಗ್ ಹೇಳಿದ್ದಾರೆ.

ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ಸೇನಾ ಸಿಬ್ಬಂದಿ ಮತ್ತು ಪೊಲೀಸರು ಶಂಕಿತ ಸ್ಥಳವನ್ನು ಸಮೀಪಿಸುತ್ತಿದ್ದಂತೆ ಭಯೋತ್ಪಾದಕರು ಅವರ ಮೇಲೆ ಮನಬಂದಂತೆ ಗುಂಡು ಹಾರಿಸಿದರು. ಇದರ ಪರಿಣಾಮವಾಗಿ ಪ್ರತೀಕಾರದ ಗುಂಡಿನ ದಾಳಿ ನಡೆಸಲಾಯಿತು. ಆದರೂ ಎನ್‌ಕೌಂಟರ್ ಸ್ಥಳದಿಂದ ನಾಗರಿಕರನ್ನು ಸ್ಥಳಾಂತರಿಸುವಾಗ ಒಬ್ಬ ಪೊಲೀಸ್ ಸಿಬ್ಬಂದಿ, ಮೂವರು ಸೇನಾ ಯೋಧರು ಮತ್ತು ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಎಲ್ಲಾ ಗಾಯಾಳುಗಳನ್ನು ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೂ ಪೊಲೀಸ್ ಸಿಬ್ಬಂದಿಯಾದ ರೋಹಿತ್ ಚಿಬ್ ಅವರಿಗೆ ತೀವ್ರ ಗಾಯಗಳಾಗಿದ್ದವರಿಂದ ಸಾವನ್ನಪ್ಪಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿರುವ ಇಬ್ಬರು ನಾಗರಿಕರು ಸೇರಿದಂತೆ ಇತರ ಗಾಯಾಳುಗಳ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್‌ನೊಂದಿಗೆ ನಂಟು ಹೊಂದಿರುವ ಪಾಕಿಸ್ತಾನದ ಪ್ರಮುಖ ಭಯೋತ್ಪಾದಕ ಬಾಬರ್ ಭಾಯ್ ಬುಧವಾರ ಕುಲ್ಗಾಮ್‌ನಲ್ಲಿ ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿದ್ದಾನೆ. ಎನ್‌ಕೌಂಟರ್ ನಡೆದ ಸ್ಥಳದಿಂದ ಒಂದು ಎಕೆ-47 ರೈಫಲ್, ಒಂದು ಪಿಸ್ತೂಲ್ ಮತ್ತು ಎರಡು ಗ್ರೆನೇಡ್‌ಗಳು ಸೇರಿದಂತೆ ಹಲವು ಸಾಮಗ್ರಿಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

TV9 Kannada


Leave a Reply

Your email address will not be published. Required fields are marked *