ಪುನೀತ್ ರಾಜ್ಕುಮಾರ್ ನಟನೆಯ ಗಂಧದ ಗುಡಿ ಸಿನಿಮಾ ಈ ವಾರ ಒಟಿಟಿಗೆ ಬಂದಿರುವುದು ಮಾತ್ರವೇ ಅಲ್ಲದೆ ಇನ್ನೂ ಹಲವು ಆಸಕ್ತಿಕರ, ಜನಪ್ರಿಯ ಸಿನಿಮಾಗಳು ಈ ವಾರ ಒಟಿಟಿಗೆ ಬಂದಿವೆ. ಕೆಲವು ಪ್ರಮುಖ ಸಿನಿಮಾ ಹಾಗೂ ವೆಬ್ ಸರಣಿಗಳ ಪಟ್ಟಿ ಇಲ್ಲಿದೆ.

ಈ ವಾರ ಒಟಿಟಿಗೆ ಬಂದ ಸಿನಿಮಾಗಳು
ಚಿತ್ರಮಂದಿರಗಳಲ್ಲಿ ಕಬ್ಜ (Kabzaa) ಸಿನಿಮಾ ಅಬ್ಬರಿಸುತ್ತಿರುವಾಗಲೇ ಒಟಿಟಿಯಲ್ಲಿಯೂ (OTT) ಹಲವು ಸಿನಿಮಾಗಳು ದಾಂಗುಡಿ ಇಟ್ಟಿವೆ. ಅದರಲ್ಲಿಯೂ ಪುನೀತ್ ರಾಜ್ಕುಮಾರ್ (Puneeth Rajkumar) ನಟನೆಯ ಗಂಧದ ಗುಡಿ ಸಿನಿಮಾ ಈ ವಾರ ಒಟಿಟಿಗೆ ಬಂದಿರುವುದು ಮಾತ್ರವೇ ಅಲ್ಲದೆ ಇನ್ನೂ ಹಲವು ಆಸಕ್ತಿಕರ, ಜನಪ್ರಿಯ ಸಿನಿಮಾಗಳು ಈ ವಾರ ಒಟಿಟಿಗೆ ಬಂದಿವೆ. ಕೆಲವು ಪ್ರಮುಖ ಸಿನಿಮಾ ಹಾಗೂ ವೆಬ್ ಸರಣಿಗಳ ಪಟ್ಟಿ ಇಲ್ಲಿದೆ.
ಗಂಧದ ಗುಡಿ
ಪುನೀತ್ ರಾಜ್ಕುಮಾರ್ ಅವರು ಕೊನೆಯ ಬಾರಿ ಅವರು ಅವರಾಗಿಯೇ ತೆರೆಯ ಮೇಲೆ ಕಾಣಿಸಿಕೊಂಡಿರು ಡಾಕ್ಯುಡ್ರಾಮಾ ಗಂಧದ ಗುಡಿ ಅಮೆಜಾನ್ ಪ್ರೈಂಗೆ ಬಿಡುಗಡೆ ಆಗಿದೆ. ಮಾರ್ಚ್ 17 ರಂದು ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದಂದೇ ಈ ಡಾಕ್ಯುಡ್ರಾಮಾ ಒಟಿಟಿಗೆ ಬಂದಿದೆ.
ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ
ಡಾಲಿ ಧನಂಜಯ್, ಅದಿತಿ ಪ್ರಭುದೇವ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದ ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಸಿನಿಮಾ ಇದೇ ವಾರ ಸನ್ ನೆಕ್ಸ್ಟ್ ಒಟಿಟಿಯಲ್ಲಿ ತೆರೆ ಕಂಡಿದೆ. ಈ ಸಿನಿಮಾವು ಕಳೆದ ವರ್ಷಾಂತ್ಯದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಕಂಡಿತ್ತು. ಡಾಲಿ ನಟನೆ ಬಗ್ಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿತ್ತು.
ವಾತಿ
ಫೆಬ್ರವರಿ 17 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ನಟ ಧನುಶ್ ಮುಖ್ಯ ಪಾತ್ರದಲ್ಲಿ ನಟಿಸಿರುವ ತಮಿಳು ಸಿನಿಮಾ ವಾತಿ ಇದೇ ವಾರ ಒಟಿಟಿಗೆ ಬಂದಿದೆ. ನೆಟ್ಫ್ಲಿಕ್ಸ್ನಲ್ಲಿ ಈ ಸಿನಿಮಾ ಸ್ಟ್ರೀಮ್ ಆಗುತ್ತಿದ್ದು, ಚಿತ್ರಮಂದಿರಗಳಲ್ಲಿ ತೆರೆ ಕಂಡಾಗ ಸೂಪರ್ ಹಿಟ್ ಎನಿಸಿಕೊಂಡಿತ್ತು. ನೂರು ಕೋಟಿಗೂ ಹೆಚ್ಚು ಗಳಿಕೆ ಮಾಡಿತ್ತು. ಶಿಕ್ಷಣ ವ್ಯವಸ್ಥೆಯ ಹುಳುಕುಗಳ ಮೇಲೆ ಬೆಳಕು ಚೆಲ್ಲುವ ಸಿನಿಮಾ ಇದಾಗಿದೆ.
ರೈಟರ್ ಪದ್ಮಭೂಷಣ್
ಹಾಸ್ಯನಟ ಸುಹಾನ್ ನಾಯಕ ನಟನಾಗಿ ನಟಿಸುತ್ತಿರುವ ಎರಡನೇ ಸಿನಿಮಾ ರೈಟರ್ ಪದ್ಮಭೂಷಣ್ ಸಿನಿಮಾ ಫೆಬ್ರವರಿ 3 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಕತೆಗಾರನಾಗುವ ಕನಸು ಕಂಡ ಯುವಕನೊಬ್ಬನ ನವಿರು ಪ್ರೇಮಕತೆಯನ್ನು ಒಳಗೊಂಡ ಈ ಸಿನಿಮಾ ಇದೀಗ ಜೀ5 ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಕುತ್ತೆ
ಬಾಲಿವುಡ್ನ ಆಕ್ಷನ್ ಥ್ರಿಲ್ಲರ್ ಕಾಮಿಡಿ ಸಿನಿಮಾ ಕುತ್ತೆ ಈ ವಾರ ನೆಟ್ಫ್ಲಿಕ್ಸ್ಗೆ ಬಂದಿದೆ. ಜನವರಿ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಹಾಗೆ ಬಂದು ಹೀಗೆ ಹೋಗಿಬಿಟ್ಟಿತ್ತು. ಆದರೆ ವಿಮರ್ಶಕರಿಂದ ತುಸು ಉತ್ತಮ ವಿಮರ್ಶೆಯನ್ನೇ ಗಳಿಸಿತ್ತು. ಈ ಸಿನಿಮಾ ಇದೀಗ ಒಟಿಟಿಗೆ ಬಂದಿದೆ. ಪರಸ್ಪರರ ಮೇಲೆ ನಂಬಿಕೆ ಇಲ್ಲದವರು ತಂಡವಾಗಿ ಹಣ ಮಾಡಲು ಹೋಗುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.
ಬ್ಲಾಕ್ ಆಡಮ್
ದಿ ರಾಕ್ ಅಡ್ಡನಾಮದ ನಟ ಡ್ವೇನ್ ಜೋನ್ಸ್ ನಟಿಸಿರುವ ಸೂಪರ್ ಹೀರೋ ಸಿನಿಮಾ ಬ್ಲಾಕ್ ಆಡಮ್ ಅಮೆಜಾನ್ ಪ್ರೈಂನಲ್ಲಿ ಸ್ಟ್ರೀಮ್ ಆಗುತ್ತಿದೆ. ಇದಕ್ಕೂ ಮೊದಲೇ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿತ್ತಾದರೂ ಹಣ ಕೊಟ್ಟು ನೋಡಬೇಕಿತ್ತು. ಆದರೆ ಈಗ ಚಂದಾದಾರರಾಗಿರುವವನ್ನು ಉಚಿತವಾಗಿ ನೋಡಬಹುದಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ