Toto Award 2023 : ‘ಕನ್ನಡ ಸೃಜನಶೀಲ ಸಾಹಿತ್ಯ’ ಆಸಕ್ತರಿಗೆ ಇಲ್ಲಿದೆ ಸುವರ್ಣಾವಕಾಶ | Toto Award 2023 Kannada Creative Writing Call for Application


Kannada Creative Writing : ಕನ್ನಡದ ಸೃಜನಶೀಲ ಯುವ ಬರಹಗಾರರಿಗೆ ಮೀಸಲಾದ 2023 ನೇ ಸಾಲಿನ ಟೊಟೊ ಪುರಸ್ಕಾರಕ್ಕಾಗಿ ಪ್ರವೇಶಗಳನ್ನು ಆಹ್ವಾನಿಸಲಾಗಿದೆ. ಈ ಪುರಸ್ಕಾರವು ರೂ. 50,000 ನಗದು ಬಹುಮಾನವನ್ನು ಒಳಗೊಂಡಿದೆ.

ಟೊಟೊ ಪುರಸ್ಕಾರ 2023 (Toto Award 2023) : ಕನ್ನಡದ ಸೃಜನಶೀಲ ಯುವ ಬರಹಗಾರರಿಗೆ ಮೀಸಲಾದ 2023 ನೇ ಸಾಲಿನ ಟೊಟೊ ಪುರಸ್ಕಾರಕ್ಕಾಗಿ ಟೊಟೊ ಫಂಡ್ಸ್ ದಿ ಆರ್ಟ್ಸ್ (Toto Funds the Arts) ಸಂಸ್ಥೆಯು ಪ್ರವೇಶಗಳನ್ನು ಆಹ್ವಾನಿಸಿದೆ. ಪ್ರವೇಶಗಳನ್ನು ಕಥೆ, ಕವಿತೆ ಮತ್ತು ನಾಟಕ ಈ ಮೂರರಲ್ಲಿ ಯಾವುದೇ ಪ್ರಕಾರದಲ್ಲಿಯಾದರೂ ಕಳಿಸಬಹುದು. ಈ ಮೂರು ಪ್ರಕಾರಗಳಿಂದ ಒಬ್ಬರನ್ನು ಪುರಸ್ಕಾರಕ್ಕಾಗಿ ಆಯ್ಕೆ ಮಾಡಲಾಗುತ್ತದೆ. ಈ ಆಯ್ಕೆಯನ್ನು ಪ್ರತಿವರ್ಷದಂತೆ ಕನ್ನಡದ ಹಿರಿಯ ಬರಹಗಾರರ ಸಮಿತಿಯು ಮಾಡಲಿದೆ.  ಪುರಸ್ಕಾರಕ್ಕಾಗಿ ಬರಹಗಳನ್ನು ಕಳುಹಿಸುವವರು ಭಾರತೀಯ ನಾಗರಿಕರಾಗಿರಬೇಕು (ಓವರ್ಸೀಸ್ ಸಿಟಿಜೆನ್ ಆಫ್‌ಇಂಡಿಯಾ (OCI) ಚೀಟಿ ಉಳ್ಳವರು ಪ್ರವೇಶಕ್ಕೆ ಅರ್ಹರಾಗಿರುವುದಿಲ್ಲ) ಹಾಗೂ  18 ರಿಂದ 29 ವರ್ಷ ವಯಸ್ಸಿನವರಾಗಿರಬೇಕು. ಅಂದರೆ, ಜನವರಿ 1, 1993ರ ನಂತರ ಮತ್ತು ಜನವರಿ 1, 2005 ರ ನಡುವೆ ಹುಟ್ಟಿದವರು ಮಾತ್ರ ಈ ಪುರಸ್ಕಾರಕ್ಕೆ ಪ್ರವೇಶಗಳನ್ನು ಕಳಿಸಲು ಅರ್ಹರು. ಟೊಟೊ ಪುರಸ್ಕಾರವು 50,000 ರೂಪಾಯಿಗಳ ನಗದು ಬಹುಮಾನವನ್ನು ಒಳಗೊಂಡಿದೆ.

ಪ್ರವೇಶಗಳನ್ನು MS Word ನಲ್ಲಿ ನುಡಿ, ಬರಹ ಅಥವಾ ಯೂನಿಕೋಡ್ ನಲ್ಲಿ ಮಾತ್ರ ಕಳಿಸಬೇಕು. ಮುದ್ರಿತ ಅಥವಾ ಹಸ್ತಪ್ರತಿಗಳನ್ನು ಸ್ವೀಕರಿಸುವುದಿಲ್ಲ. MS Word ಅಲ್ಲದೇ ಬೇರೆ ಯಾವ ಸಾಫ್ಟವೇರ್ ನಲ್ಲಿಯೂ ಪ್ರವೇಶಗಳನ್ನು ಸ್ವೀಕರಿಸುವುದಿಲ್ಲ. ಪ್ರವೇಶಕ್ಕಾಗಿ ಕಳಿಸುವ ಕತೆ, ಕವಿತೆ, ನಾಟಕಗಳ ಮೇಲೆ ಎಲ್ಲಿಯೂ ನಿಮ್ಮ ಹೆಸರು ಬರೆದಿರಬಾರದು. ಇದನ್ನು ಅರ್ಜಿಯಲ್ಲೇ ಬರೆದು, ಪ್ರವೇಶದ ಜೊತೆ ಕಳಿಸಬೇಕು. ಕವಿತೆಗಳನ್ನು ಕಳುಹಿಸುವವರು 8 ರಿಂದ 12 ಕವಿತೆಗಳನ್ನು ಕಳಿಸಬಹುದು. ಕತೆಗಳನ್ನು ಕಳಿಸುವವರು ಒಂದಕ್ಕಿಂತ ಹೆಚ್ಚು ಕತೆಗಳನ್ನು ಕಳಿಸಬಹುದು, ಆದರೆ ಎಲ್ಲ ಕತೆಗಳೂ ಸೇರಿ 7500 ಶಬ್ದಗಳನ್ನು ಮೀರಬಾರದು. ಪ್ರವೇಶಕ್ಕೆ ಕಳಿಸುವ ನಾಟಕಗಳ ಶಬ್ದಮಿತಿ 10,000 ಶಬ್ದಗಳು.

ಒಬ್ಬರು ಮೂರು ಪ್ರಕಾರಗಳಲ್ಲಿಯೂ ಪ್ರವೇಶಗಳನ್ನು ಕಳಿಸಬಹುದು. ಆದರೆ ಪ್ರತಿಯೊಂದು ಪ್ರಕಾರಕ್ಕೂ ಪ್ರತ್ಯೇಕವಾದ ಪ್ರವೇಶಗಳನ್ನು ಕಳಿಸಬೇಕು. ನಿಮ್ಮ ಕವಿತೆಗಳನ್ನು ಮೊದಲ ಪ್ರವೇಶವಾಗಿಯೂ, ಕತೆಗಳನ್ನು ಎರಡನೆಯ ಪ್ರವೇಶವಾಗಿಯೂ, ನಾಟಕವನ್ನು ಮೂರನೆಯ ಪ್ರವೇಶವಾಗಿಯೂ ಕಳಿಸಬೇಕು. ಪ್ರತಿ ಪ್ರತ್ಯೇಕ ಪ್ರವೇಶಕ್ಕೂ ಪ್ರತ್ಯೇಕ ಅರ್ಜಿ ಕಳಿಸಬೇಕು.

ಈಗಾಗಲೇ ಪುಸ್ತಕರೂಪದಲ್ಲಿ ಪ್ರಕಟವಾಗಿರುವ ಕೃತಿಗಳನ್ನು ಪುರಸ್ಕಾರಕ್ಕಾಗಿ ಕಳಿಸುವಂತಿಲ್ಲ. ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಬಿಡಿ ಕತೆ, ಕವಿತೆ, ನಾಟಕಗಳನ್ನು ಕಳಿಸಬಹುದು. ಈಮೇಲ್ Subject ನಲ್ಲಿ ನಿಮ್ಮ ಕೃತಿಯ ಪ್ರಕಾರವನ್ನು ಸೂಚಿಸಬೇಕು. ಉದಾಹರಣೆಗೆ: ‘ಕನ್ನಡ ಸೃಜನಶೀಲ ಸಾಹಿತ್ಯ – ಕವಿತೆ’,‘ಕನ್ನಡ ಸೃಜನಶೀಲ ಸಾಹಿತ್ಯ – ನಾಟಕ’ ಅಥವಾ‘ ಕನ್ನಡ ಸೃಜನಶೀಲ ಸಾಹಿತ್ಯ – ಕತೆ’. ಎಲ್ಲವೂ ಇ-ಮೇಲ್ ಮೂಲಕ ಮಾತ್ರ ಕಳಿಸಬೇಕು.

ಪ್ರವೇಶಗಳನ್ನು ಕಳುಹಿಸಲು ಕೊನೆಯ ದಿನಾಂಕ:  15, ಸೆಪ್ಟೆಂಬರ್, 2022. ಪ್ರವೇಶಗಳನ್ನು ಕಳಿಸಬೇಕಾದ ಇ-ಮೇಲ್ [email protected] ಸಂದೇಹಗಳಿದ್ದಲ್ಲಿ ಇದೇ ವಿಳಾಸಕ್ಕೆ ಬರೆದು ಹೆಚ್ಚಿನ ವಿವರ ಕೇಳಬಹುದು. ಸಲ್ಲಿಸುವ ಪ್ರತಿ ಪ್ರವೇಶದ ಜೊತೆಗೆ ಅರ್ಜಿಯನ್ನು ಲಗತ್ತಿಸಬೇಕು. ಈ ಅರ್ಜಿಯನ್ನು http://totofundsthearts.blogspot.com ಇಲ್ಲಿಂದ ನಕಲಿಳಿಸಬಹುದು. ಈ ಅರ್ಜಿ ಇಲ್ಲದ ಪ್ರವೇಶಗಳನ್ನು ಪರಿಗಣಿಸುವುದಿಲ್ಲ.

TV9 Kannada


Leave a Reply

Your email address will not be published. Required fields are marked *