Travel: ಪ್ರಪಂಚದ ದುಬಾರಿ ಸ್ಥಳಗಳಿಗೆ ಭೇಟಿ ನೀಡುವ ಕನಸಿದೆಯೇ? ಈ ಐದು ಸ್ಥಳಗಳನ್ನು ಮಿಸ್ ಮಾಡಲೇಬೇಡಿ | Worlds most luxury places to travel here is your travelling destinations for your dreamy journey


Travel: ಪ್ರಪಂಚದ ದುಬಾರಿ ಸ್ಥಳಗಳಿಗೆ ಭೇಟಿ ನೀಡುವ ಕನಸಿದೆಯೇ? ಈ ಐದು ಸ್ಥಳಗಳನ್ನು ಮಿಸ್ ಮಾಡಲೇಬೇಡಿ

ಪ್ರಾತಿನಿಧಿಕ ಚಿತ್ರ

ಎಲ್ಲರಿಗೂ ಜೀವನದಲ್ಲಿ ತಮ್ಮ ನೆಚ್ಚಿನ ಸ್ಥಳಗಳಿಗೆ ಪ್ರವಾಸ (Travelling) ಮಾಡುವ ಕನಸುಗಳಿರುತ್ತದೆ. ಹಲವರಿಗೆ ಜಗತ್ತಿನ ದುಬಾರಿ ಹಾಗೂ ಐಷಾರಾಮಿ ಸ್ಥಳಗಳನ್ನು ಜೀವನದಲ್ಲಿ ಒಮ್ಮೆಯಾದರೂ ನೋಡಬೇಕು ಎಂಬ ಕನಸಿರುತ್ತದೆ. ಈ ಕನಸನ್ನು ಸಾಕಾರಗೊಳಿಸಲು ಪ್ರಯತ್ನವನ್ನೂ ಪಡುತ್ತಾರೆ. ತಮ್ಮ ವೇತನದಿಂದ ಬಂದ ಹಣವನ್ನು ಪ್ರವಾಸಕ್ಕೆಂದೇ ತೆಗೆದಿರಿಸುತ್ತಾರೆ. ಹಲವು ದಿನಗಳ ಪರಿಶ್ರಮ ಒಂದು ಸುಂದರ ಪ್ರವಾಸಕ್ಕೆ ಕಾರಣವಾಗುತ್ತದೆ. ನಿಮಗೂ ಜಗತ್ತಿನ ದುಬಾರಿ ನಗರಗಳಿಗೆ, ಐಷಾರಾಮಿ ಪ್ರದೇಶಗಳಿಗೆ ಭೇಟಿ ನೀಡುವ ಕನಸಿರಬಹುದು. ಆದರೆ ನಿಮಗೆ ಯಾವ ಸ್ಥಳಗಳು ದುಬಾರಿ ಎಂಬ ಗೊಂದಲಗಳಿರಬಹುದು. ನಿಮ್ಮ ಅನುಮಾನಕ್ಕೆ ಉತ್ತರವನ್ನು ಇಲ್ಲಿ ನೀಡಲಾಗಿದೆ. ಹೌದು, ವಿಶ್ವದ ಅತ್ಯಂತ ಐಷಾರಾಮಿ ಸ್ಥಳಗಳ ಪಟ್ಟಿ ಇಲ್ಲಿದೆ.

ಫಿಜಿ ಐಲ್ಯಾಂಡ್​:

ಫಿಜಿ 300 ಕ್ಕೂ ಹೆಚ್ಚು ದ್ವೀಪಗಳಿಗೆ ನೆಲೆಯಾಗಿದೆ. ಸುತ್ತಲೂ ಬಿಳಿ ಮರಳು, ತಾಳೆ ಮರಗಳಿಂದ ಆವೃತವಾದ ಈ ಅದ್ಭುತ ಪ್ರದೇಶಕ್ಕೆ ನೀವು ಎಂಟ್ರಿ ನೀಡಿದರೆ ಸ್ವರ್ಗಕ್ಕೆ ಪ್ರವೇಶ ನೀಡಿದ ಅನುಭವವಾಗೋದು ಸುಳ್ಳಲ್ಲ. ಮಮನುಕಾ ಮತ್ತು ಯಸವಾ ದ್ವೀಪಗಳಲ್ಲಿ ದೋಣಿ ವಿಹಾರ ಅತ್ಯಂತ ಪ್ರಸಿದ್ಧ. ಈ ಪ್ರದೇಶ ಅತ್ಯಂತ ಐಷಾರಾಮಿ ಹಾಗೂ ದುಬಾರಿಯಾಗಿದ್ದು, ನೀವು ಫಿಜಿಯ ಲೌಕಾಲಾ ದ್ವೀಪದಲ್ಲಿ ವಾಸಿಸಲು ಬಯಸಿದರೆ, ಏನಿಲ್ಲವೆಂದರೂ 11,500 ಯುರೋಗಳ ಲ್ಯಾಂಡಿಂಗ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ದುಬೈ:

ಮರಳುಗಾಡಿನಿಂದ ಆವೃತವಾಗಿರುವ ಈ ಭೂಮಿ ಅತ್ಯಂತ ಆಧುನಿಕ ನಗರಗಳಲ್ಲೊಂದು. ಅದಕ್ಕೆಂದೇ ಭಾರತದ ಖ್ಯಾತ ತಾರೆಯರು ರಜೆಯ ಸಮಯದಲ್ಲಿ ದುಬೈಗೆ ತೆರಳುತ್ತಾರೆ. ಕೆಲವು ಸ್ಥಳಗಳು ನಿಮಗೆ ಪ್ರಶಾಂತವಾದ ನೀರಿನೊಳಗಿನ ಪ್ರಪಂಚವನ್ನು ದರ್ಶನ ಮಾಡಿಸುತ್ತವೆ. ಐಷಾರಾಮಿ ಮರುಭೂಮಿ ಸಫಾರಿಯನ್ನು ನೀವು ಖಾಸಗಿ ಮರ್ಸಿಡಿಸ್ ಜಿ-ವ್ಯಾಗನ್‌ನಲ್ಲಿ ಮಾಡಬಹುದು. ಇದು ನಿಮಗೆ ರಾಜವೈಭೋಗದ ಅನುಭವ ನೀಡುತ್ತದೆ.

ಸಿಡ್ನಿ:

ನಿಮಗೆ ವಿಶ್ವದ ಅತ್ಯಂತ ದುಬಾರಿ ಭೋಜನಕೂಟಗಳು ಸಿಗುವ ಸ್ಥಳಕ್ಕೆ ಪ್ರವಾಸ ಮಾಡಬೇಕೆಂದು ಕನಸಿದ್ದರೆ ಸಿಡ್ನಿಗೆ ತೆರಳಬಹುದು. ವಿಶ್ವದ ಅತ್ಯಂತ ದುಬಾರಿ ಭೋಜನಕೂಟಗಳನ್ನು ಹೊಂದಿರುವ ಸ್ಥಳಗಳಲ್ಲಿ ಸಿಡ್ನಿ ಮೂರನೇ ಸ್ಥಾನದಲ್ಲಿದೆ. ನಗರದಲ್ಲಿ ಆಹಾರ ಮತ್ತು ಪಾನೀಯಗಳು ಹೆಚ್ಚು ದುಬಾರಿಯಾಗಿವೆ. ನಗರದಲ್ಲಿ ಹಲವು ಅತ್ಯುತ್ತಮ ಹೋಟೆಲ್‌ಗಳಿದ್ದು, ಅಲ್ಲಿ ನೀವು ರಾಜಾತಿಥ್ಯ ಪಡೆಯಬಹುದು. ಇಷ್ಟು ಮಾತ್ರವಲ್ಲದೆ, ಸುದೀರ್ಘ ನಡಿಗೆಯ ಮೂಲಕ ಕರಾವಳಿಯ ದಂಡೆಯಲ್ಲಿ ಸಾಗುತ್ತಾ ನಗರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.

ಲಾಸ್ ಎಂಜಲೀಸ್:

ಕ್ಯಾಲಿಫೋರ್ನಿಯಾದ ಈ ನಗರವು ದುಬಾರಿ ಪ್ರವಾಸಕ್ಕಾಗಿ ಹಾತೊರೆಯುವವರಿಗೆ ಉತ್ತಮ ಆಯ್ಕೆ. ಲಾಸ್ ಏಂಜಲೀಸ್‌ನಲ್ಲಿ ಹೋಟೆಲ್‌ಗಳು, ಪ್ರವಾಸಿ ಚಟುವಟಿಕೆಗಳು, ಆಹಾರ ಮತ್ತು ಬಾಡಿಗೆ ಕಾರುಗಳು ಕೂಡ ಬಹುದುಬಾರಿ!

Los Angeles

ಲಾಸ್ ಏಂಜಲೀಸ್ (ಸಂಗ್ರಹ ಚಿತ್ರ)

ಓಸ್ಲೋ:

ನಾರ್ವೇಯ ಈ ನಗರವು ಪ್ರವಾಸಿಗರಿಗೆ ಮಾತ್ರವಲ್ಲ; ಅಲ್ಲಿನ ನಾಗರಿಕರಿಗೂ ದುಬಾರಿ ನಗರವಾಗಿದೆ. ಪ್ರಪಂಚದಲ್ಲಿ ವಾಸಿಸಲು ದುಬಾರಿ ನಗರಗಳು ಯಾವುವು ಎಂದು 2018ರಲ್ಲಿ ತಯಾರಾದ ಪಟ್ಟಿಯಲ್ಲಿ ಈ ನಗರವೂ ಅಗ್ರ 5ರಲ್ಲಿ ಕಾಣಿಸಿಕೊಂಡಿತ್ತು. ಈ ನಗರ ಎಷ್ಟು ದುಬಾರಿಯೆಂದರೆ ಸಾಮಾನ್ಯರು ಒಂದು ಕಪ್ ಚಹಾವನ್ನು ಕೂಡ ಸರಾಗವಾಗಿ ಭರಿಸುವುದು ಕಷ್ಟ!

TV9 Kannada


Leave a Reply

Your email address will not be published.