Video : ನಿಮ್ಮನೆ ಬೆಕ್ಕುನಾಯಿ ಮರಿಗಳು ಹೀಗೆ ಮಾಡೋದನ್ನು ನೋಡಿರುತ್ತೀರಿ. ಆದರೆ ಸಿಂಹ! ನೋಡಿ ಇಲ್ಲಿ ಏನು ಮಾಡುತ್ತೆ…
Trending : ಛೆಛೆ ಎಷ್ಟಂತ ಗಂಭಿರವಾಗಿರೋದು. ಎಂಟರ್ಟೇನ್ಮೆಂಟ್ಗೆ ಇಲ್ಲಿ ಏನೂ ಇಲ್ಲವಲ್ಲ? ಅದೇ ಕಾಡು, ಅದೇ ಹಸಿರು, ಅದೇ ಕೆರೆ, ಅದೇ ಪ್ರಾಣಿಗಳು… ಹಿಂಗಂದುಕೊಂಡ ಪ್ರಾಣಿಗಳೂ ಒಮ್ಮೊಮ್ಮೆ ಕೀಟಲೆ ಮಾಡಿದರೆ ಹೇಗಿರುತ್ತದೆ? ಸಾಕುಪ್ರಾಣಿಗಳು ತಮ್ಮ ಮರಿಗಳೊಂದಿಗೆ ಹೀಗೆ ಕೀಟಲೆ ಮಾಡಿಕೊಂಡು ಮಸ್ತಿ ಮಾಡುವುದನ್ನು ನೋಡಿಯೇ ನೋಡಿರುತ್ತೀರಿ. ಆದರೆ ಕಾಡಿನಲ್ಲಿ!? ಅದು ಬೇರೆ ವರ್ಗದ ಪ್ರಾಣಿಗಳೊಂದಿಗೆ? ಅಲ್ಲಿ ಹೋಗಿ ಶೂಟ್ ಮಾಡೋವ್ರು ಯಾರು? ಶೂಟ್ ಮಾಡೋದಕ್ಕೆ ಅಂತ ಹೋದಾಗ ಇಂಥ ದೃಶ್ಯಗಳು ಕಣ್ಣಿಗೆ ಬೀಳ್ತಾವಾ? ಬಿದ್ದರೂ ಶೂಟ್ ಮಾಡೋದು ಅಷ್ಟು ಸುಲಭಾನಾ? ಅದೊಂದು ಅಪರೂಪದ ಟೈಮಿಂಗ್ ಅಷ್ಟೇ. ಇಲ್ಲಿರುವ ವಿಡಿಯೋ ಯಾರೂ ನಗುವಂತಿದೆ. ಘನಗಂಭೀರವಾಗಿ ತಮ್ಮ ಪಾಡಿಗೆ ಹುಲ್ಲು ಮೇಯುತ್ತಿರುವ ಘೇಂಡಾಮೃಗಗಳನ್ನು ಸಿಂಹವೊಂದು ಕೀಟಲೆ ಮಾಡೋದಲ್ಲದೆ, ಮಕ್ಕಳಂತೆ ಓಡಿಹೋಗಿಬಿಡುತ್ತದೆ. ಈ ವಿಡಿಯೋ ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕು ಅನ್ನಿಸುವಂತಿದೆ. ಚಲನೆ ಅನ್ನೋದು ಯಾವಾಗಲೂ ಹೀಗೆ. ಕ್ಷಣದಲ್ಲೇ ಸಂಚಲನ ಮೂಡಿಸಿ ಗಮನ ಸೆಳೆಯುತ್ತದೆ. ನೀವು ಇದನ್ನು ಅನುಭವಿಸಿ.
ಐಎಫ್ಎಸ್ ಅಧಿಕಾರಿ ಸುಸಾಂತ ನಂದಾ ಅವರು ಟ್ವಿಟರ್ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಎರಡು ಘೇಂಡಾಮೃಗಗಳು ಹುಲ್ಲು ತಿಂದುಕೊಂಡು ವಿಹರಿಸ್ತಾ ಇವೆ. ಅವುಗಳ ಬೆನ್ನ ಹಿಂದಿನಿಂದ ಎರಡು ಸಿಂಹಗಳು ಕಳ್ಳಬೆಕ್ಕಿನಂತೆ ಹೆಜ್ಜೆ ಇಟ್ಟುಕೊಂಡು ಬರುತ್ತವೆ. ಅವುಗಳಲ್ಲಿ ಒಂದು ಸಿಂಹ ಮೆಲ್ಲನೆ ಒಮ್ಮೆ ಬಾಲ ಮುಟ್ಟಲು ಪ್ರಯತ್ನಿಸುತ್ತವೆ. ಆಗ ಚೂರೇಚೂರು ಮೈ ಅಲುಗಾಡಿಸುತ್ತದೆ ಘೇಂಡಾ. ಅಷ್ಟಕ್ಕೇ ಸುಮ್ಮನಿರದ ಸಿಂಹ ಮತ್ತೊಮ್ಮೆ ಬಾಲವನ್ನು ತಡವುತ್ತದೆ. ಆಗ ಘೇಂಡಾ ತಿರುಗಿ ನೋಡಿದ ರೀತಿಗೆ ಸಿಂಹ ಒಳ್ಳೆ ಬೆಕ್ಕಿನಂತೆ ಹೆದರಿ ಓಡಿಬಿಡುತ್ತದೆ!
Dialling the wrong number ☺️☺️ pic.twitter.com/qJ8Z7H4NUn
— Susanta Nanda IFS (@susantananda3) August 4, 2022
ಈ ಪೋಸ್ಟ್ 39,500 ವೀಕ್ಷಣೆಗಳನ್ನು ಹೊಂದಿದೆ. ನೋಡಿದ ನೆಟ್ಟಿಗರು ಉರುಳಾಡಿ ನಗುತ್ತಿದ್ದಾರೆ. ಈ ಐಎಫ್ಎಸ್ ಅಧಿಕಾರಿ ಸುಸಾಂತ ಆಗಾಗ ಕಾಡಿನಲ್ಲಿನ ಇಂಥ ಅನೇಕ ಆಕರ್ಷಕ, ರೋಮಾಂಚನ ದೃಶ್ಯಗಳನ್ನು ಚಿತ್ರೀಕರಿಸಿ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಕೆಲದಿನಗಳ ಹಿಂದೆ ಎಂಪಿ ಟೈಗರ್ ಫೌಂಡೇಶನ್ನಲ್ಲಿ ಎರಡು ಹುಲಿಗಳು ಸಂತೋಷದಿಂದ ಆಟವಾಡುತ್ತಿರುವ ವಿಡಿಯೋವನ್ನು ಅವರು ಹಂಚಿಕೊಂಡಿದ್ದರು.