ತುಳಸಿ ವಿವಾಹ 2021
ತುಳಸಿಯನ್ನು ಮಹಿಳೆಯರು ಪ್ರತಿದಿನ ಬೆಳಿಗ್ಗೆ ಪೂಜಿಸುತ್ತಾರೆ. ಆದರೆ ಕಾರ್ತಿಕ ಮಾಸದಲ್ಲಿ ಆಚರಿಸಲಾಗುವ ದೇವ್ ಉಥನಿ ಏಕಾದಶಿಯ ದಿನದಂದು ತುಳಸಿ ವಿವಾಹವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ತುಳಸಿ ಮತ್ತು ಶಾಲಿಗ್ರಾಮ ದೇವರ ವಿವಾಹವನ್ನು ಶಾಸ್ತ್ರೋಕ್ತವಾಗಿ ಆಚರಿಸಲಾಗುತ್ತದೆ. ದೇವುತ್ಥಾನ ಏಕಾದಶಿಯು ಕಾರ್ತಿಕ ಮಾಸದ ಶುಕ್ಲ ಪಕ್ಷದಲ್ಲಿ ಬರುತ್ತದೆ. ಈ ಬಾರಿ 2021 ನವೆಂಬರ್ 14ರಿಂದ ಬೆಳಿಗ್ಗೆ 05:48 ಕ್ಕೆ ಪ್ರಾರಂಭಗೊಂಡಿದ್ದು, ನವೆಂಬರ್ 15 ಸಾಯಂಕಾಲ 6:39 ಕ್ಕೆ ಕೊನೆಗೊಳ್ಳುತ್ತದೆ. ತುಳಸಿ ವಿವಾಹವು ನವೆಂಬರ್ 15ನೇ ತಾರೀಕು ಅಂದರೆ ಇಂದು ಮುಕ್ತಾಯಗೊಳ್ಳಲಿದೆ.
ಮನೆಯನ್ನು ಗುಡಿಸಿ ಸ್ವಚ್ಛಗೊಳಿಸಿ ಅಲಂಕಾರ ಮಾಡಲಾಗುತ್ತದೆ. ಮನೆಯವರೆಲ್ಲಾ ಸೇರಿ ತುಳಸಿಯನ್ನು ಮನೆಯ ಎದುರು ಇಟ್ಟು ಅಲಂಕರಿಸಲಾಗುತ್ತದೆ. ತುಳಸಿ ಗಿಡಕ್ಕೆ ಕಬ್ಬಿನ ಮಂಟಪವನ್ನು ಕಟ್ಟಲಾಗುತ್ತದೆ. ಸಂಜೆಯಾಗುತ್ತಿದ್ದಂತೆಯೇ ಹೂವಿನ ಅಲಂಕಾರದ ಜೊತೆಗೆ ದೀಪ ಬೆಳಗುವ ಮೂಲಕ ಮಂಟಪವನ್ನು ಅಲಂಕರಿಸಲಾಗುತ್ತದೆ. ಶಾಲಿಗ್ರಾಮವನ್ನು ಒಂದು ಪಾತ್ರೆಯಲ್ಲಿಟ್ಟು ತುಳಸಿ ಮತ್ತು ಶಾಲಿಗ್ರಾಮದ ಮೇಲೆ ಹಾಲಿನಲ್ಲಿ ನೆನೆಸಿದ ಅರಿಶಿನವನ್ನು ಹಚ್ಚಿ ಮಂಟಪದ ಸುತ್ತ ಅರಿಶಿನವನ್ನು ಲೇಪನ ಮಾಡಲಾಗುತ್ತದೆ.
ಹಿಂದೂ ಸಂಪ್ರದಾಯದ ಪ್ರಕಾರ ತುಳಸಿ ವಿವಾಹ ಆಚರಣೆ ಮಾಡುವುದರಿಂದ ಕನ್ಯಾದಾನದಿಂದ ಸಿಗುವ ಪುಣ್ಯ ಸಿಗುತ್ತದೆ. ನಂಬಿಕೆ ಪ್ರಕಾರ ತುಳಸಿ ವಿವಾಹವನ್ನು ಮಾಡುವವರ ಮನೆಯಲ್ಲಿ ಎಂದಿಗೂ ಸಂತೋಷ ನೆಮ್ಮದಿ ಲಭಿಸುತ್ತದೆ. ಮನೆಯವರು ಎಂದಿಗೂ ಅದೃಷ್ಟವಂತರಾಗಿರುತ್ತಾರೆ. ವೈವಾಹಿಕ ಜೀವನದಲ್ಲಿ ತೊಡಕುಗಳು, ಸಮಸ್ಯೆಗಳಿದ್ದವರು ಭಕ್ತಿಯಿಂದ ತುಳಸಿ ವಿವಾಹ ಆಚರಣೆಯನ್ನು ಮಾಡಿ. ಇದರಿಂದ ನಿಮ್ಮ ಕುಟುಂಬ ಮತ್ತು ದಾಂಪತ್ಯ ಜೀವನ ಸುಖವಾಗಿರುತ್ತದೆ ಎಂಬ ನಂಬಿಕೆ ಮೊದಲಿನಿಂದಲೂ ಇದೆ.