ಐಟಿ ಹಾಗೂ ಬಿಪಿಒ ಕಂಪೆನಿಗಳಲ್ಲಿ ಉದ್ಯೋಗ ಬಿಡುತ್ತಿರುವವರ ಪ್ರಮಾಣ ಹೆಚ್ಚಾಗುತ್ತಿದೆ. ಇದನ್ನು ಅಟ್ರಿಷನ್ ದರ ಎನ್ನಲಾಗುತ್ತದೆ. ಕೊರೊನಾ ನಂತರದಲ್ಲಿ ಈ ಪ್ರಮಾಣ ವಿಪರೀತ ಹೆಚ್ಚಾಗಿದೆ. ಇದರ ಬಿಸಿ ಬಹುತೇಕ ಎಲ್ಲ ಕಂಪೆನಿಗಳಿಗೂ ತಟ್ಟಿದೆ. ಈಚೆಗೆ ಇನ್ಫೋಸಿಸ್ (Infosys) ತ್ರೈಮಾಸಿಕ ಫಲಿತಾಂಶ ಪ್ರಕಟಿಸಿದಾಗ ಆ ಬಗ್ಗೆ ಆತಂಕ ವ್ಯಕ್ತ ಆಗಿತ್ತು. ಪ್ರತಿಭಾವಂತರು ಕೆಲಸ ಬಿಟ್ಟು, ಬೇರೆ ಕಂಪೆನಿಗಳಿಗೆ ಎದ್ದು ಹೋದರೆ ಪ್ರಾಜೆಕ್ಟ್ಗಳಿಗೆ ಹೊಡೆತ ಬೀಳುತ್ತದೆ. ಅಷ್ಟೇ ಅಲ್ಲ, ಹೊಸಬರು ಉದ್ಯೋಗಕ್ಕೆ ಸಿಗುವುದು ಸಹ ಸಲೀಸಲ್ಲ. ಈ ಕಾರಣಕ್ಕೆ ಭಾರತದ ಹಲವು ಐಟಿ- ಬಿಪಿಒ ಕಂಪೆನಿಗಳು ಉದ್ಯೋಗಿಗಳನ್ನು ತಮ್ಮಲ್ಲೇ ಉಳಿಸಿಕೊಳ್ಳಲು ನಾನಾ ಮಾರ್ಗಗಳನ್ನು ಅನುಸರಿಸುತ್ತಿವೆ. ಇದೀಗ ಇನ್ಫೋಸಿಸ್ ಉದ್ಯೋಗಿಗಳ ಜತೆಗಿನ ಒಪ್ಪಂದದಲ್ಲಿ ಹೊಸ ಷರತ್ತು ಸೇರಿಸಿದೆ. ಅದರ ಅನ್ವಯ ಕಂಪೆನಿಯನ್ನು ಬಿಡುವ ನಿರ್ಧಾರಕ್ಕೆ ಬಂದಲ್ಲಿ ಪ್ರತಿಸ್ಪರ್ಧಿ ಕಂಪೆನಿಗಳಲ್ಲಿ ಸೇರುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಲಾಗುತ್ತಿದೆ.
ಈ ಸಂಬಂಧವಾಗಿ ಫೇಸ್ಬುಕ್ ಲೈವ್ನಲ್ಲಿ ಏಪ್ರಿಲ್ 25ನೇ ತಾರೀಕಿನ ಸೋಮವಾರದಂದು ಚರ್ಚೆ ನಡೆದಿದ್ದು, ಪ್ರಮುಖ ಸಂಗತಿಗಳು, ಆಕ್ಷೇಪಗಳಿಗೆ ಯಾರು- ಏನು ಹೇಳಿದರು ಎಂಬುದನ್ನು ಇಲ್ಲಿ ನೀಡಲಾಗಿದೆ. ತನ್ನ ಕ್ರಮವನ್ನು ಇನ್ಫೋಸಿಸ್ ಸಮರ್ಥನೆ ಮಾಡಿಕೊಂಡಿದೆ. ಇತರ ಕಂಪೆನಿಗಳು ಇದೇ ಹಾದಿಯನ್ನು ತುಳಿಯುತ್ತಿವೆ ಎಂಬುದು ಉದ್ಯೋಗಿಗಳ ಸಂಘಟನೆಯ ಆರೋಪವಾಗಿದೆ. ಒಟ್ಟಿನಲ್ಲಿ ದೊಡ್ಡ ಪ್ರಮಾಣದಲ್ಲಿ ಕೆಲಸ ಬಿಡುವುದು ಈಗಿನ ಮಟ್ಟಿಗೆ ದೊಡ್ಡ ವಿಚಾರವಾಗಿದೆ ಎಂಬುದು ನಿಜ. ಅದರ ಜತೆಗೆ ಹೊಸ ಷರತ್ತನ್ನು ಒಪ್ಪಂದದಲ್ಲಿ ತಂದು, ಇನ್ಫೋಸಿಸ್ನಿಂದ ಉದ್ಯೋಗಿಗಳು ಕೆಲಸ ಬಿಡದಂತೆ ತಡೆಯಲಾಗುತ್ತಿದೆ ಎಂಬುದು ಇನ್ನಷ್ಟು ವಿವಾದಕ್ಕೆ ಕಾರಣವಾಗಿದೆ.
ಈ ವಿಚಾರವಂತೂ ಈಗ ಕೇಂದ್ರ ಸಚಿವಾಲಯದ ಮೆಟ್ಟಿಲನ್ನು ಹತ್ತಿದೆ. ಮಾಹಿತಿ ತಂತ್ರಜ್ಞಾನ ಮತ್ತು ಬಿಪಿಒ ವಲಯದಲ್ಲಿ ಕೊರೊನಾ ನಂತರದ ಕಾಲದಲ್ಲಿ ಉದ್ಯೋಗ ಬಿಡುತ್ತಿರುವುದನ್ನು ತಡೆಯುವುದಕ್ಕೆ ಇನ್ಫೋಸಿಸ್ ವಿಧಿಸುತ್ತಿರುವ ಷರತ್ತು ಹಾಗೂ ಅದಕ್ಕೆ ಕಂಪೆನಿ ಪರವಾದ ಸಮರ್ಥನೆ ಮತ್ತು ವಿರುದ್ಧವಾದ ಆಕ್ಷೇಪಗಳ ಬಗ್ಗೆ ಅರ್ಥಪೂರ್ಣವಾದ ಚರ್ಚೆ ಟಿವಿ9 ಕನ್ನಡ ಡಿಜಿಟಲ್ನಿಂದ ನಿಮ್ಮೆದುರು ಇದೆ.