ಸಾಂದರ್ಭಿಕ ಚಿತ್ರ
ಈ ಬಾರಿಯ ಕೇಂದ್ರ ಸರ್ಕಾರದ ಸಾಮಾನ್ಯ ಬಜೆಟ್ನಲ್ಲಿ (Budget 2022) ರೈಲ್ವೇ ಇಲಾಖೆಗೆ (Indian Railway Department) ಹೆಚ್ಚಿನ ಹಣಕಾಸು ನೆರವು ಸಿಗುವ ಸಾಧ್ಯತೆ ಇದೆ. ಕಳೆದ ವರ್ಷದ ಬಜೆಟ್ಗೆ ಹೋಲಿಸಿದರೆ ಈ ವರ್ಷ ಶೇ.20ರಷ್ಟು ಹೆಚ್ಚಿನ ನೆರವನ್ನು ಹಣಕಾಸು ಇಲಾಖೆಯು ರೈಲ್ವೆ ಇಲಾಖೆಗೆ ನೀಡುವ ಸಾಧ್ಯತೆ ಇದೆ. ಇದರಿಂದ ದೇಶದಲ್ಲಿ ರೈಲ್ವೆ ಇಲಾಖೆಯು ದೀರ್ಘಾವಧಿಯ ಮೂಲಸೌಕರ್ಯ ವೃದ್ದಿಗೊಳಿಸುವ ನಿರೀಕ್ಷೆ ಇದೆ. ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಫೆಬ್ರವರಿ 1ರಂದು ಕೇಂದ್ರದ ಸಾಮಾನ್ಯ ಬಜೆಟ್ ಮಂಡಿಸುವರು. ಈ ಬಾರಿಯ ಬಜೆಟ್ನಲ್ಲಿ ರೈಲ್ವೆ ಇಲಾಖೆ ದಾಖಲೆಯ ಮೊತ್ತದ ಹಣ ಹಂಚಿಕೆ ಮಾಡುವ ಸಾಧ್ಯತೆ ಇದೆ. ಇದರಿಂದಾಗಿ ದೇಶದ ರೈಲ್ವೆ ಇಲಾಖೆಯಲ್ಲಿ ದೊಡ್ಡ ಬದಲಾವಣೆಯಾಗುವ ಸಾಧ್ಯತೆಯೂ ಇದೆ.
ಈ ಬಾರಿಯ ಬಜೆಟ್ ನಲ್ಲಿ ರೈಲ್ವೆ ಇಲಾಖೆಗೆ ಹಂಚಿಕೆ ಮಾಡುವ ಹಣದ ಮೊತ್ತವನ್ನು ಶೇ.20ರಷ್ಟು ಏರಿಕೆ ಮಾಡುವ ಸಾಧ್ಯತೆ ಇದೆ. ಕಳೆದ ವರ್ಷದ ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ ಅವರು 2.15 ಲಕ್ಷ ಕೋಟಿ ರೂ. ಹಣವನ್ನು ರೈಲ್ವೆ ಇಲಾಖೆಗೆ ನೀಡಿದ್ದರು. ಈ ಬಾರಿಯ ಬಜೆಟ್ನಲ್ಲಿ ರೈಲ್ವೆ ಇಲಾಖೆಗೆ ನೀಡುವ ಮೊತ್ತವನ್ನು 2.5 ಲಕ್ಷ ಕೋಟಿ ರೂ.ಗೆ ಏರಿಸುವ ಸಾಧ್ಯತೆ ಇದೆ. ಇದರಿಂದ ರೈಲ್ವೆ ಇಲಾಖೆಗೆ ದೊಡ್ಡ ಮೊತ್ತದ ಬಂಡವಾಳ ಸಿಗಲಿದೆ. ಇದನ್ನು ಬಳಸಿಕೊಂಡು ರೈಲ್ವೆ ಇಲಾಖೆಯು ದೇಶದ ರೈಲ್ವೆಯಲ್ಲಿ ದೀರ್ಘಾವಧಿ ಮೂಲಸೌಕರ್ಯ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಲಿದೆ. ಸರಕು-ಸಾಗಣೆ ಮಾರ್ಗಗಳು, ಸ್ಪೀಡ್ ಟ್ರೇನ್ ಹಾಗೂ ರೈಲ್ವೇ ಆಧುನೀಕರಣ, ವ್ಯಾಗನ್, ಲೋಕೋ ಟ್ರೇನ್ ಗಳ ಅಭಿವೃದ್ದಿ, ರೈಲ್ವೇ ಮಾರ್ಗಗಳ ವಿದ್ಯುದ್ದೀಕರಣಕ್ಕೆ ಹೆಚ್ಚು ಬಂಡವಾಳ ತೊಡಗಿಸಲು ಸಾಧ್ಯವಾಗುತ್ತದೆ.
ದೇಶದ ರೈಲ್ವೆ ಪ್ರಯಾಣವನ್ನು ಸುರಕ್ಷಿತ ಹಾಗೂ ಸದೃಢಗೊಳಿಸಲು ಹೆಚ್ಚಿನ ಬಂಡವಾಳ ಹಂಚಿಕೆಯಿಂದ ಸಾಧ್ಯವಾಗುತ್ತದೆ. ರೈಲ್ವೆ ಇಲಾಖೆಗೆ ಆಂತರಿಕ ಮೂಲಗಳಿಂದ 7,500 ಕೋಟಿ ರೂ. ಆದಾಯ ಸಂಗ್ರಹವಾಗಲಿದೆ. ಬಜೆಟ್ಯೇತರ 1 ಲಕ್ಷ ಕೋಟಿ ರೂ. ಸಂಗ್ರಹವಾದರೆ, 1.07 ಲಕ್ಷ ಕೋಟಿ ರೂ. ಬಜೆಟ್ ಮೂಲಕ ರೈಲ್ವೆ ಇಲಾಖೆಗೆ ಸಿಗಲಿದೆ. ಈ ಮೂಲಕ ರೈಲ್ವೆ ಇಲಾಖೆಯು ಹೊಸ ಮೂಲಸೌಕರ್ಯವನ್ನು ಅಭಿವೃದ್ದಿಪಡಿಸಲು ಅಗತ್ಯವಾದ ಬಂಡವಾಳವನ್ನು ಈ ಮೂಲಕ ನೀಡಲಾಗುತ್ತದೆ.
ಒಟ್ಟಾರೆ 2.5 ಲಕ್ಷ ಕೋಟಿ ರೂ. ಪೈಕಿ 1.25 ಲಕ್ಷ ಕೋಟಿ ರೂ. ಕೇಂದ್ರದ ಬಜೆಟ್ ಮೂಲಕವೇ ರೈಲ್ವೆ ಇಲಾಖೆಗೆ ಸಿಗಲಿದೆ. ರೈಲ್ವೆ ಇಲಾಖೆಯು ತನ್ನದೇ ಸಾರ್ವಜನಿಕ ಸ್ವಾಮ್ಯದ ಕಂಪನಿಗಳನ್ನು ಹೊಂದಿದ್ದು, ಅವುಗಳಿಂದಲೂ ಆದಾಯ ಹರಿದು ಬರಲಿದೆ. ಬಜೆಟ್ ಮೂಲಕ ಸಿಗುವ ಹಣದ ಪೈಕಿ ಹೆಚ್ಚಿನ ಹಣವನ್ನು ರೈಲ್ವೆ ಇಲಾಖೆಯು ಅಹಮದಾಬಾದ್-ಮುಂಬೈ ಬುಲೆಟ್ ಟ್ರೇನ್ ಯೋಜನೆಗೆ ವಿನಿಯೋಗಿಸಲಿದೆ. ಸದ್ಯ ಗುಜರಾತ್ ರಾಜ್ಯದಲ್ಲಿ ಬುಲೆಟ್ ಟ್ರೇನ್ ಯೋಜನೆಗೆ ವೇಗ ಸಿಕ್ಕಿದೆ. ಕೇಂದ್ರ ಸರ್ಕಾರವು ದೆಹಲಿ-ವಾರಾಣಸಿ ಹೈಸ್ಪೀಡ್ ಟ್ರೇನ್ ಯೋಜನೆ ಜಾರಿ ಬಗ್ಗೆಯೂ ಚಿಂತಿಸುತ್ತಿದೆ.
ನರೇಂದ್ರ ಮೋದಿ ಸರ್ಕಾರವು ಈಗ ಯಾವುದೇ ರೈಲ್ವೆ ಯೋಜನೆಯನ್ನು ಘೋಷಿಸಿದರೂ, ಅದನ್ನು ಕಾಲಮಿತಿಯಲ್ಲಿ ಜಾರಿಗೆ ತರಲು ಒತ್ತು ನೀಡುತ್ತಿದೆ. ಯಾವುದೇ ಒಂದು ರೈಲ್ವೆ ಯೋಜನೆಯನ್ನು ಘೋಷಿಸಿ, ಕಾಲಮಿತಿಯಲ್ಲಿ ಜಾರಿಗೆ ತರದಿದ್ದರೆ, ಯೋಜನಾ ವೆಚ್ಚ ಏರುತ್ತಾ ಹೋಗುತ್ತದೆ. ಅದನ್ನು ತಪ್ಪಿಸಲು ಶೀಘ್ರಗತಿಯಲ್ಲಿ ಯೋಜನೆ ಜಾರಿಗೊಳಿಸುವುದೇ ಪರಿಹಾರ. ದೇಶದಲ್ಲಿ ಕೆಲವು ರೈಲ್ವೆ ಮಾರ್ಗದ ಯೋಜನೆಗಳು 20 ವರ್ಷವಾದರೂ ಪೂರ್ಣವಾಗಿಲ್ಲ. ಈಗ ಈ ರೀತಿಯ ವಿಳಂಬಕ್ಕೆ ಅವಕಾಶ ಕೊಡಬಾರದು. ಹೊಸ ರೈಲ್ವೆ ಮಾರ್ಗದ ಯೋಜನೆ ಘೋಷಣೆ ಮಾಡದಿದ್ದರೂ ಪರವಾಗಿಲ್ಲ, ಘೋಷಿಸಿರುವ ಯೋಜನೆಗಳ ಜಾರಿಯಲ್ಲಿ ವಿಳಂಬ ಮಾಡಬಾರದು ಎಂಬ ನೀತಿಯನ್ನು ಮೋದಿ ಸರ್ಕಾರ ಅನುಸರಿಸುತ್ತಿದೆ.
ರೈಲ್ವೆ ಇಲಾಖೆಯ ಖರ್ಚಿನಲ್ಲಿ ಶೇ.75ರಷ್ಟು ಸಿಬ್ಬಂದಿ, ಉದ್ಯೋಗಿಗಳ ವೇತನಕ್ಕೆ ಖರ್ಚಾಗುತ್ತದೆ. ಕೇಂದ್ರ ಸರ್ಕಾರದಲ್ಲಿ ಅತಿ ಹೆಚ್ಚು ಉದ್ಯೋಗಿಗಳಿರುವ ಮೊದಲ ಇಲಾಖೆಯೇ ರೈಲ್ವೆ ಇಲಾಖೆ. ರೈಲ್ವೆ ಇಲಾಖೆಯಲ್ಲಿ 13 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. 13 ಲಕ್ಷ ಉದ್ಯೋಗಿಗಳಿಗೆ ಪ್ರತಿ ತಿಂಗಳ ವೇತನಕ್ಕೆ ಶೇ.75ರಷ್ಟು ತನ್ನ ಬಂಡವಾಳ, ಆದಾಯದ ಹಣವನ್ನು ಖರ್ಚು ಮಾಡಬೇಕಾಗಿದೆ. ರೈಲ್ವೆ ಇಲಾಖೆಯು ತಾನು ದುಡಿಯುವ 100 ರೂ. ಹಣದಲ್ಲಿ 96 ರೂಪಾಯಿಯನ್ನು ಖರ್ಚು ಮಾಡುತ್ತದೆ.