Union Budget 2022: ತೆರಿಗೆಮುಕ್ತ ಪ್ರಾವಿಡೆಂಟ್ ಫಂಡ್ ಮಿತಿಯನ್ನು ರೂ. 5 ಲಕ್ಷಕ್ಕೆ ಹೆಚ್ಚಿಸಲು ಸರ್ಕಾರ ಚಿಂತನೆ | Tax Free Provident Fund Limit Likely To Increase To Rs 5 Lakhs In Union Budget 2022 According To Sources


Union Budget 2022: ತೆರಿಗೆಮುಕ್ತ ಪ್ರಾವಿಡೆಂಟ್ ಫಂಡ್ ಮಿತಿಯನ್ನು ರೂ. 5 ಲಕ್ಷಕ್ಕೆ ಹೆಚ್ಚಿಸಲು ಸರ್ಕಾರ ಚಿಂತನೆ

ಸಾಂದರ್ಭಿಕ ಚಿತ್ರ

ಪ್ರಾವಿಡೆಂಟ್​ ಫಂಡ್​ಗೆ (Provident Fund) ಇತರ ಎಲ್ಲ ವೇತನದಾರ ಉದ್ಯೋಗಿಗಳ ತೆರಿಗೆಮುಕ್ತ ಕೊಡುಗೆ ಮಿತಿಯನ್ನು ಕೇಂದ್ರ ಸರ್ಕಾರವು ದುಪ್ಪಟ್ಟುಗೊಳಿಸುವ ಸಾಧ್ಯತೆ ಇದೆ. ಇನ್ನು ಮುಂದೆ ಸರ್ಕಾರಿ ಸಿಬ್ಬಂದಿಗೆ ಇರುವಂತೆಯೇ ವಾರ್ಷಿಕ ಗರಿಷ್ಠ ಮಿತಿಯನ್ನು 5 ಲಕ್ಷ ರೂಪಾಯಿಗೆ ಏರಿಕೆ ಮಾಡಬಹುದು, ಎಂದು ಈ ಬೆಳವಣಿಗೆ ಬಗ್ಗೆ ಮಾಹಿತಿ ಇರುವವರು ತಿಳಿಸಿದ್ದಾರೆ. ಕೇಂದ್ರ ಬಜೆಟ್​ 2021-22ರಲ್ಲಿ ಹಣಕಾಸು ಸಚಿವರು ಘೋಷಣೆ ಮಾಡಿದಂತೆ, ತೆರಿಗೆ ಮುಕ್ತ ಬಡ್ಡಿ ಆದಾಯದ ಅನುಕೂಲ ಪಡೆಯಬೇಕು ಅಂದರೆ ತೆರಿಗೆ ಮುಕ್ತ ಪಿಎಫ್ ಕೊಡುಗೆ ಮೇಲೆ ವಾರ್ಷಿಕವಾಗಿ 2.5 ಲಕ್ಷ ರೂಪಾಯಿ ಮಿತಿಯನ್ನು ಹಾಕಲಾಗಿತ್ತು. ಆ ನಂತರ ಉದ್ಯೋಗದಾತರು ಕೊಡುಗೆ ನೀಡಿಲ್ಲ ಎಂದಾದರೆ ಆ ಮಿತಿಯನ್ನು 5 ಲಕ್ಷ ರೂಪಾಯಿಗೆ ಹೆಚ್ಚಿಸಲಾಯಿತು. ಈ ನಡೆಯಿಂದ ಸರ್ಕಾರದ ಉದ್ಯೋಗಿಗಳಿಗೆ ಮಾತ್ರ ಅನುಕೂಲ, ಎಂದು ಈ ಬೆಳವಣಿಗೆ ಬಗ್ಗೆ ಮಾಹಿತಿ ಇರುವವರು ತಮ್ಮ ಗುರುತು ಬಹಿರಂಗ ಮಾಡಬಾರದು ಎಂಬ ಷರತ್ತಿನ ಮೇಲೆ ತಿಳಿಸಿದ್ದಾರೆ.

“ವಿವಿಧ ಸಚಿವಾಲಯ ಹಾಗೂ ಇಲಾಖೆಗಳಿಂದ ಹಲವಾರು ಮನವಿಗಳು ಬಂದಿವೆ. ಈ ನಿಯಮಾವಳಿಯು ಎಲ್ಲರಿಗೂ ಸಮಾನವಾದದ್ದು ಹಾಗೂ ತಾರತಮ್ಯ ಇಲ್ಲದ್ದು. ಜತೆಗೆ ಬಹಳ ಪರಿಣಾಮಕಾರಿಯಾದ ಸಾಮಾಜಿಕ ಭದ್ರತೆ ಯೋಜನೆಯಾಗಿ ಮಿತಿಯ ವಿಸ್ತರಣೆಯನ್ನು ನೋಡಲಾಗುತ್ತಿದೆ. ಇದನ್ನು ಹಾಗೇ ಪರಿಗಣಿಸಲಾಗುವುದು,” ಎಂದು ಮೂಲಗಳು ತಿಳಿಸಿವೆ. ಕಳೆದ ವರ್ಷ ಬಜೆಟ್​ನಲ್ಲಿ ಮಿತಿಯನ್ನು ಘೋಷಣೆ ಮಾಡಿದ ನಂತರ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾರ್ಚ್ 23, 2021ರಂದು ಲೋಕಸಭೆಯಲ್ಲಿ ಮಾತನಾಡಿ, ಪಿಎಫ್‌ನಲ್ಲಿ ರೂ. 2.5 ಲಕ್ಷ ಕೊಡುಗೆಗೆ ವಿಧಿಸಲಾದ ಆದಾಯ ತೆರಿಗೆಯ ಪ್ರಶ್ನೆಯನ್ನು ನಾನು ಪರಿಹರಿಸಲು ಬಯಸುತ್ತೇನೆ. ರೂ. 2.5 ಲಕ್ಷದ ಈ ಮಿತಿಯು ಬಹುಪಾಲು ಜನರನ್ನು ಒಳಗೊಂಡಿದೆ. ಸಣ್ಣ ಮತ್ತು ಮಧ್ಯಮ ತೆರಿಗೆದಾರರ ಮೇಲೆ ಇದರಿಂದ ಪರಿಣಾಮ ಆಗಲ್ಲ. ಉದ್ಯೋಗದಾತರಿಂದ ಯಾವುದೇ ಕೊಡುಗೆ ಇಲ್ಲದಿದ್ದಲ್ಲಿ ಮಿತಿಯನ್ನು ರೂ. 5 ಲಕ್ಷಕ್ಕೆ ಏರಿಸಲು ನಾನು ಉದ್ದೇಶಿಸಿದ್ದೇನೆ ಎಂದಿದ್ದರು.

ತೆರಿಗೆ ವೃತ್ತಿಪರರು ಮತ್ತು ಪಿಎಫ್ ತಜ್ಞರು ಮಾತನಾಡಿ, ಮಿತಿಯನ್ನು ರೂ. 2.5 ಲಕ್ಷದಿಂದ ರೂ. 5 ಲಕ್ಷಕ್ಕೆ ಹೆಚ್ಚಿಸುವ ತಿದ್ದುಪಡಿಯು ಸರ್ಕಾರಿ ನೌಕರರಿಗೆ ಮಾತ್ರ ಲಾಭದಾಯಕವಾಗಿದೆ. ಇದು ತಾರತಮ್ಯವಾಗಿದೆ ಎಂದು ಹೇಳಿದ್ದರು. “ಬಜೆಟ್ 2021ರ ನಂತರ ಸರ್ಕಾರವು ಮತ್ತಷ್ಟು ತಿದ್ದುಪಡಿಯನ್ನು ಘೋಷಿಸಿತು. ಇದರಲ್ಲಿ ಉದ್ಯೋಗದಾತರಿಂದ ಯಾವುದೇ ಕೊಡುಗೆ ಇಲ್ಲದ ನಿಧಿಗೆ ಪಿಎಫ್ ಕೊಡುಗೆಯನ್ನು ಮಾಡಿದರೆ ತೆರಿಗೆ ಮುಕ್ತ ಬಡ್ಡಿ ಆದಾಯಕ್ಕಾಗಿ ಕೊಡುಗೆಯ ಮಿತಿಯನ್ನು ರೂ. 2.5 ಲಕ್ಷದಿಂದ ರೂ. 5 ಲಕ್ಷಕ್ಕೆ ದ್ವಿಗುಣಗೊಳಿಸಿತು. ಆದ್ದರಿಂದ ಸಾಮಾನ್ಯ ಭವಿಷ್ಯ ನಿಧಿಗೆ (GPF) ನೀಡಿದ ಕೊಡುಗೆಗಳಿಗೆ ಸರ್ಕಾರವು ಪರಿಹಾರವನ್ನು ಒದಗಿಸಿದೆ. ಇದು ಸರ್ಕಾರಿ ನೌಕರರಿಗೆ ಮಾತ್ರ ಲಭ್ಯವಿರುತ್ತದೆ ಮತ್ತು ಉದ್ಯೋಗದಾತರಿಂದ ಇದಕ್ಕೆ ಯಾವುದೇ ಕೊಡುಗೆ ಇಲ್ಲ. ಆದ್ದರಿಂದ ಸರ್ಕಾರಿ ಉದ್ಯೋಗಿಗಳಿಗೆ ತೆರಿಗೆ ಮುಕ್ತ ಬಡ್ಡಿ ಆದಾಯದ ಮಿತಿಯು ರೂ. 5 ಲಕ್ಷ ರೂಪಾಯಿ,” ಎಂದು ತೆರಿಗೆ ಸಲಹಾ ಸಂಸ್ಥೆ ಕ್ಲಿಯರ್‌ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅರ್ಚಿತ್ ಗುಪ್ತಾ ಹೇಳಿದ್ದಾರೆ.

ಮತ್ತೊಂದು ಮೂಲದ ಪ್ರಕಾರ, “ಎಲ್ಲ ಪ್ರಾಯೋಗಿಕ ಉದ್ದೇಶಗಳಿಗಾಗಿ, ವಿಶೇಷವಾಗಿ ಖಾಸಗಿ ವಲಯದ ಉದ್ಯೋಗಿಗಳಿಗೆ ಉದ್ಯೋಗಿ ಮತ್ತು ಉದ್ಯೋಗದಾತರ ಕೊಡುಗೆಗಳು ಒಪ್ಪಂದದ ವೇತನದ ಭಾಗವಾಗಿರುತ್ತದೆ. ಇದನ್ನು ಕಂಪೆನಿಗೆ ವೆಚ್ಚ (CTC) ಎಂದು ಕರೆಯಲಾಗುತ್ತದೆ. ಉದ್ಯೋಗದಾತರ ಕೊಡುಗೆ ಯಾವಾಗಲೂ ಈ ಸಿಟಿಸಿ ಭಾಗವಾಗಿರುತ್ತದೆ. ಆದ್ದರಿಂದ ಪರಿಗಣನೆಗೆ ಒಂದು ಪ್ರಕರಣವಿದೆ,” ಎಂದು ತಿಳಿಸಲಾಗಿದೆ. ತೆರಿಗೆ ವೃತ್ತಿಪರರು ಹೇಳುವಂತೆ, ಹೊಸ ಪದ್ಧತಿಯು ಹಿಂದಿನ ಕೊಡುಗೆಗಳಿಗೆ ವಿನಾಯಿತಿ ಒದಗಿಸುತ್ತದೆ ಎಂದು ಹೇಳಲಾಗಿದೆ. “ಈ ತಿದ್ದುಪಡಿಯು ಏಪ್ರಿಲ್ 1, 2021ರಂದು ಅಥವಾ ನಂತರ ನೀಡಿದ ಕೊಡುಗೆಗಳಿಗೆ ಅನ್ವಯಿಸುತ್ತದೆ. ಎಲ್ಲ ಹಿಂದಿನ ಕೊಡುಗೆಗಳು ಮತ್ತು ಬಡ್ಡಿಯು ತಿದ್ದುಪಡಿಯಿಂದ ಪ್ರಭಾವಿತ ಆಗುವುದಿಲ್ಲ,” ಎಂದು ತೆರಿಗೆ ಸಂಸ್ಥೆಯಾದ ಸುದಿತ್ ಕೆ. ಪರೇಖ್ ಅಂಡ್ ಕಂ. LLP, ತೆರಿಗೆಯ ಪಾಲುದಾರರಾದ ಅನಿತಾ ಬಸ್ರೂರ್ ಹೇಳಿದ್ದಾರೆ.

“ರೂ. 2,50,000 ಮಿತಿಯು ಹಿಂದಿನ ವರ್ಷದಲ್ಲಿ ನೌಕರರ ಕೊಡುಗೆಗಳಿಗೆ ಮಾತ್ರ ಅನ್ವಯಿಸುತ್ತದೆ. ಅಂತಹ ಹೆಚ್ಚುವರಿ ಭಾಗದ ಮೇಲೆ ಗಳಿಸಿದ ಬಡ್ಡಿ ಮಾತ್ರ ಉದ್ಯೋಗಿಯ ಕೈಯಲ್ಲಿ ತೆರಿಗೆಗೆ ಒಳಪಡುತ್ತದೆ. ಈ ಭಾಗದ ಮೇಲಿನ ವರ್ಷದಿಂದ ವರ್ಷಕ್ಕೆ ಬಡ್ಡಿ ಸಂಚಯಗಳಿಗೆ ಮಾತ್ರ ಈ ತೆರಿಗೆ ಪರಿಣಾಮವು ಮುಂದುವರಿಯುತ್ತದೆ,” ಎಂದು ಡೆಲಾಯಿಟ್ ಇಂಡಿಯಾ ಪಾಲುದಾರರಾದ ಆರತಿ ರಾವ್ಟೆ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

TV9 Kannada


Leave a Reply

Your email address will not be published. Required fields are marked *