Unsung Hero: ನಾಪತ್ತೆಯಾಗಿದ್ದ ಮಗುವನ್ನು ರಕ್ಷಿಸಿ ರಾತ್ರೋರಾತ್ರಿ ಹೀರೋ ಆದ ಶಾಲಾ ಬಾಲಕಿ | Unsung hero School girl helps Noida police to reunite lost child with his family


Unsung Hero: ನಾಪತ್ತೆಯಾಗಿದ್ದ ಮಗುವನ್ನು ರಕ್ಷಿಸಿ ರಾತ್ರೋರಾತ್ರಿ ಹೀರೋ ಆದ ಶಾಲಾ ಬಾಲಕಿ

ಪ್ರಾತಿನಿಧಿಕ ಚಿತ್ರ

ನೋಯ್ಡಾ: ಕಳೆದುಹೋದ ಮಗುವನ್ನು ಮತ್ತೆ ಕುಟುಂಬದೊಂದಿಗೆ ಸೇರಿಸಲು ನೋಯ್ಡಾ ಪೊಲೀಸರಿಗೆ ಸಹಾಯ ಮಾಡಿದ 14 ವರ್ಷದ ಬಾಲಕಿ ರಾತ್ರೋರಾತ್ರಿ ಹೀರೋ ಆಗಿದ್ದಾಳೆ. ಮಗು ಕಳೆದುಹೋಗಿದೆ ಎಂದು ಪೊಲೀಸರಿಗೆ ರಾತ್ರಿ 9.30ಕ್ಕೆ ಮಾಹಿತಿ ಸಿಕ್ಕಿತ್ತು. ಹೀಗಾಗಿ, ಕೂಡಲೇ ಪೊಲೀಸರು ಎರಡೂವರೆ ವರ್ಷದ ಮಗುವಿನ ಪತ್ತೆಗಾಗಿ ರಾತ್ರಿಯಿಡೀ ಶೋಧ ನಡೆಸಿದರು. ಆದರೂ ಮಗು ಸಿಕ್ಕಿರಲಿಲ್ಲ. ಮಗು ಬುಧವಾರ ಗಿಜೋಡ್ ಗ್ರಾಮದಿಂದ ನಾಪತ್ತೆಯಾಗಿತ್ತು. ಅದರ ನಂತರ ಸ್ಥಳೀಯ ಪೊಲೀಸರು ಮಗುವಿಗಾಗಿ ಹುಡುಕಾಟ ಆರಂಭಿಸಿದ್ದರು.

ಆರು ಗಂಟೆಗಳ ಹುಡುಕಾಟದ ನಂತರ ಸೆಕ್ಟರ್ 14ರ ಕೊಳೆಗೇರಿಯಲ್ಲಿ ಮಗು ಪತ್ತೆಯಾಗಿತ್ತು. ನಾಪತ್ತೆಯಾಗಿದ್ದ ಮಗು ಕಾಶಿಶ್ ಕುಮಾರಿ ಎಂಬ 14 ವರ್ಷದ ಬಾಲಕಿಯ ಆರೈಕೆಯಲ್ಲಿ ಆರಾಮಾಗಿತ್ತು. ಮಧ್ಯರಾತ್ರಿಯ ವೇಳೆಗೆ ಆ ಬಾಲಕಿಯ ಮನೆಯ ಬಳಿ ಆ ಮಗುವನ್ನಿಟ್ಟು ಹೋಗಲಾಗಿತ್ತು. ಹೀಗಾಗಿ, ಆ ಮಗುವನ್ನು ಮನೆಯೊಳಗೆ ತೆಗೆದುಕೊಂಡು ಹೋಗಿ ಆ ಬಾಲಕಿ ಆರೈಕೆ ಮಾಡಿದ್ದಳು ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಮಗುವನ್ನು ಸುರಕ್ಷಿತವಾಗಿ ತಂದೆ-ತಾಯಿಗೆ ನೀಡಲು ಪೊಲೀಸರಿಗೆ ಸಹಾಯ ಮಾಡಿದ್ದಕ್ಕಾಗಿ ಪೊಲೀಸ್ ಆಯುಕ್ತ ಅಲೋಕ್ ಸಿಂಗ್ ಶಾಲೆಗೆ ಹೋಗುವ ಬಾಲಕಿಗೆ ವಿಶೇಷ ಬಹುಮಾನವನ್ನು ಘೋಷಿಸಿದ್ದಾರೆ. ಮಗುವಿನ ಹುಡುಕಾಟದಲ್ಲಿ ತೊಡಗಿದ್ದ ಪೊಲೀಸ್ ತಂಡಕ್ಕೆ 25,000 ರೂ. ನಗದು ಬಹುಮಾನ ನೀಡಲಾಗುವುದು ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಎಸಿಪಿ (ನೋಯ್ಡಾ 2) ರಜನೀಶ್ ವರ್ಮಾ ಅವರ ಮೇಲ್ವಿಚಾರಣೆಯಲ್ಲಿ ಮಗುವನ್ನು ನೋಡಲು ಎರಡು ತಂಡಗಳನ್ನು ರಚಿಸಲಾಗಿತ್ತು. ಸೆಕ್ಟರ್ 24 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು ಉಪ ಪೊಲೀಸ್ ಆಯುಕ್ತ (ನೋಯ್ಡಾ) ರಾಜೇಶ್ ಎಸ್ ಹೇಳಿದ್ದಾರೆ. ಒಂದು ತಂಡವು ಕಾಣೆಯಾದ ಮಗುವನ್ನು ಹುಡುಕಲು ಮತ್ತು ಮಗುವಿನ ಬಗ್ಗೆ ಸ್ಥಳೀಯರನ್ನು ಕೇಳಲು ಹೋದರೆ, ಇನ್ನೊಂದು ತಂಡವು ಸುತ್ತಮುತ್ತಲೂ ಅನುಮಾನಾಸ್ಪದ ಚಲನವಲನಗಳನ್ನು ಪತ್ತೆಹಚ್ಚಲು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲು ಪ್ರಾರಂಭಿಸಿತು ಎಂದು ರಾಜೇಶ್ ಹೇಳಿದ್ದಾರೆ.

ಬೆಳಗಿನ ಜಾವ 1 ಗಂಟೆ ಸುಮಾರಿಗೆ ಕಾಶಿಶ್ ಮಗುವಿನ ಪೋಷಕರ ಬಗ್ಗೆ ವಿಚಾರಿಸುತ್ತಿದ್ದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಪತ್ತೆಯಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸರು ತಕ್ಷಣ ಕಾಶಿಶ್ ಅವರ ಮನೆಗೆ ಹೋಗಿ ನೋಡಿದಾಗ ಆಕೆಯ ಬಳಿ ನಾಪತ್ತೆಯಾಗಿದ್ದ ಮಗು ಸುರಕ್ಷಿತವಾಗಿತ್ತು. ಅನಾಥವಾಗಿ ಬಿದ್ದಿದ್ದ ಮಗುವನ್ನು ಜವಾಬ್ದಾರಿಯಿಂದ ತೆಗೆದುಕೊಂಡು ಹೋಗಿ ಕಾಪಾಡಿರುವುದಕ್ಕೆ ಆ ಬಾಲಕಿಯನ್ನು ಸನ್ಮಾನಿಸಲು ಪೊಲೀಸರು ನಿರ್ಧರಿಸಿದ್ದಾರೆ.

TV9 Kannada


Leave a Reply

Your email address will not be published. Required fields are marked *