Future Of Indians Lost Job In America: ಒಂದು ಒಂದಾಜು ಪ್ರಕಾರ ಕಳೆದ 1 ವರ್ಷದಲ್ಲಿ ಒಟ್ಟು 4 ಲಕ್ಷಕ್ಕೂ ಹೆಚ್ಚು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಇವರ ಪೈಕಿ ಅಮೆರಿಕದಲ್ಲಿರುವ 1 ಲಕ್ಷದಷ್ಟು ಭಾರತೀಯರಿಗೆ ಕೆಲಸ ಹೋಗಿದೆ ಎಂದು ಹೇಳಲಾಗುತ್ತಿದೆ. ಇವರ ಗತಿ ಏನು?

ಅಮೆರಿಕದಲ್ಲಿರುವ ಭಾರತೀಯರು
ನವದೆಹಲಿ: ಅಮೆರಿಕದ ದೈತ್ಯ ಕಂಪನಿಗಳು ಲೇ ಆಫ್ (Layoffs) ಭರಾಟೆ ಎಗ್ಗಿಲ್ಲದೇ ಮುಂದುವರಿಸುತ್ತಿವೆ. ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಅಮೆರಿಕದವರಷ್ಟೇ ಅಲ್ಲ ಈ ಕಂಪನಿಗಳು ಇರುವ ಇತರ ದೇಶಗಳಲ್ಲಿನ ಉದ್ಯೋಗಿಗಳಿಗೂ ಕೆಲಸ ಇಲ್ಲವಾಗಿದೆ. ಅಮೇಜಾನ್, ಗೂಗಲ್, ಮೆಟಾ, ಮೈಕ್ರೋಸಾಫ್ಟ್ ಹೀಗೆ ಲೇ ಆಫ್ ಮಾಡಿದ ಟೆಕ್ ಕಂಪನಿಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಭಾರತದಲ್ಲಿಯೂ ಸಾವಿರಾರು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಅಮೆರಿಕಕ್ಕೆ ಹಲವು ಕನಸುಗಳನ್ನು ಕಟ್ಟಿಕೊಂಡು ಹೋದ ಭಾರತೀಯರ ಕಥೆ ಏನು? ಅಲ್ಲಿ ಅಕಸ್ಮಾತ್ ಆಗಿ ಕೆಲಸ ಕಳೆದುಕೊಂಡ ಭಾರತೀಯರು ಜೀವನಕ್ಕೆ ಏನು ಮಾಡಿಯಾರು? ಅವರ ಗತಿ ಏನು? ಎಷ್ಟು ದಿನ ಅವರು ಅಮೆರಿಕದಲ್ಲಿರಲು ಸಾಧ್ಯ?
ಅಮೆರಿಕದಲ್ಲಿ ಕೆಲಸ ಕಳೆದುಕೊಂಡ ಭಾರತೀಯರ ಸಂಖ್ಯೆ 1 ಲಕ್ಷವಾ?
ಅಮೆರಿಕದ ಐಟಿ ಕಂಪನಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದು ಭಾರತೀಯರೇ. ಹೀಗಾಗಿ, ಉದ್ಯೋಗಕಡಿತದ ವಿಚಾರ ಬಂದಾಗ ಸಹಜವಾಗಿ ಹೆಚ್ಚು ಬಾಧಿತವಾಗುವುದು ಭಾರತೀಯರೇ. ಒಂದು ಒಂದಾಜು ಪ್ರಕಾರ ಒಟ್ಟು 4 ಲಕ್ಷಕ್ಕೂ ಹೆಚ್ಚು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಇವರ ಪೈಕಿ ಅಮೆರಿಕದಲ್ಲಿರುವ 1 ಲಕ್ಷದಷ್ಟು ಭಾರತೀಯರಿಗೆ ಕೆಲಸ ಹೋಗಿದೆ. ಜನವರಿಯಲ್ಲಿ ಬಂದ ಮಾಹಿತಿ ಪ್ರಕಾರ 60-80,000 ದಷ್ಟು ಭಾರತೀಯರು ಅಮೆರಿಕದಲ್ಲಿ ಕೆಲಸ ಕಳೆದುಕೊಂಡಿದ್ದಾರೆ. ಈಗ ಈ ಸಂಖ್ಯೆ ಇನ್ನೂ ಹೆಚ್ಚಾಗಿದೆ.