Vaidehi’s Birthday: ‘ಪೂರ್ವಗ್ರಹಗಳಿಲ್ಲದೆ ನಾವು ಕಂಡ ಸತ್ಯವನ್ನು ನಿರ್ಭಯವಾಗಿ ಹೇಳಬೇಕು’ ನುಡಿಗೂ ಬೆಳಕಿದೆ | Kannada writer Vaidehi Birthday Special write up by Poet writer Dr Geeta Vasant


Vaidehi’s Birthday: ‘ಪೂರ್ವಗ್ರಹಗಳಿಲ್ಲದೆ ನಾವು ಕಂಡ ಸತ್ಯವನ್ನು ನಿರ್ಭಯವಾಗಿ ಹೇಳಬೇಕು’ ನುಡಿಗೂ ಬೆಳಕಿದೆ

ವೈದೇಹಿಯವರೊಂದಿಗೆ ಡಾ. ಗೀತಾ ವಸಂತ

ವೈದೇಹಿ | Vaidehi : ಸಾಹಿತ್ಯ ರಾಜಕಾರಣದೆಡೆಗೆ ಮಾತು ಹೊರಳಿದಾಗ ಅವರೆಂದದ್ದು ಹೀಗೆ “ಬರವಣಿಗೆಯೆಂಬುದು ಅತ್ಯಂತಿಕವಾಗಿ ನಮ್ಮನ್ನು ಎಲ್ಲ ಚೌಕಟ್ಟುಗಳಿಂದ ಬಿಡುಗಡೆಗೊಳಿಸುವ ಮಾರ್ಗ ಅಲ್ಲವಾ?”. “ಹೌದು. ಆದರೆ ಧರ್ಮ, ಜಾತಿ, ಲಿಂಗಗಳ ಚೌಕಟ್ಟಿನೊಳಗೆ ಬರಹಗಾರರನ್ನು ಎಳೆತಂದು ಅಳೆಯುವ ಇಂದಿನ ಸಂದರ್ಭವನ್ನು ದಾಟುವುದು ಹೇಗೆ? ಇವೆಲ್ಲವುಗಳ ಆಚೆ ಇರುವ ಸ್ತ್ರೀತ್ವದ ಅಂತಃಶಕ್ತಿಯ ಧಾರೆಗಳನ್ನು ಹುಡುಕಿಕೊಳ್ಳುವುದು ಹೇಗೆ? ಅವುಗಳನ್ನು ಬೆಸೆಯುವುದು ಹೇಗೆ?” ಕೊನೆಯಿಲ್ಲದ ಪ್ರಶ್ನೆಗಳಿದ್ದವು, ಆದರೆ ಉತ್ತರವೆಂಬುದು ಸಿದ್ಧಸೂತ್ರವಲ್ಲವಲ್ಲ! ಅಂಗುಲಂಗುಲ ನಡೆಯುತ್ತಲೇ ಉತ್ತರಗಳು ಸಿಗುತ್ತವೆ ಅಲ್ಲವಾ? “ನೋವು, ಅವಮಾನ, ಸಂದೇಹ, ಸಂಕಟಗಳನ್ನು ಅನುಭವಿಸಿಯೇ ಅದನ್ನು ದಾಟಬೇಕು. ಅನುಭವಗಳನ್ನೇ ನಿರಾಕರಿಸಿ ದಡಸೇರುವುದು ಸಾಧ್ಯವಾ?” ಇದು ಪಕ್ಪಗೊಂಡ ಜೀವವೊಂದು ಮಾತ್ರ ನುಡಿಯಬಲ್ಲ ನುಡಿ.

ಡಾ. ಗೀತಾ ವಸಂತ, ಕವಿ, ಲೇಖಕಿ

*

ಒಮ್ಮೆ ಮಣಿಪಾಲವನ್ನು ಹಾಯ್ದು ಬರುವಾಗ ಥಟ್ಟನೆ ವೈದೇಹಿ ನೆನಪಾದರು. ಮುಸ್ಸಂಜೆಯ ಬಣ್ಣಗಳಲ್ಲಿ ತೊಯ್ದು ಹೈವೇಯಿಂದ ಒಳಸರಿದು ಅವರ ಮನೆ ‘ಇರುವಂತಿಗೆ’ಯ ಮುಂದೆ ನಿಂತಾಗ ದೀಪಗಳು ಹೊತ್ತಿಕೊಂಡವು. ಹೆಣ್ಣಿನ ಒಳಜಗತ್ತನ್ನು ಕನ್ನಡ ಕಥಾಲೋಕದ ಜಗುಲಿಗೆ ತಂದು ನಿಲ್ಲಿಸಿದ ವೈದೇಹಿ ನಮ್ಮನ್ನು ಹೊಸಿಲೊಳಗೆ ಬರಮಾಡಿಕೊಂಡರು. ಮೆತ್ತಗಿನ ಕಾಟನ್ ಸೀರೆಯುಟ್ಟ ಪುಟ್ಟ ಜೀವ. ಚುರುಕು ಕಣ್ಣಲ್ಲಿ ಚೂಪು ನೋಟ… ಅಷ್ಟೇ ಖಚಿತ ಮಾತು. ಒಳಗೆ ಅಂತರಗಂಗೆಯಂಥ ಝುಳು ಝುಳು ಪ್ರೀತಿ… ಮಕ್ಕಳು, ಮನೆ, ವೃತ್ತಿ, ಬರವಣಿಗೆ ಹೀಗೆ ಎಲ್ಲ ಲೌಕಿಕ ಉಪದ್ವ್ಯಾಪಗಳ ಬಗ್ಗೆ ವಿಚಾರಿಸಿಕೊಂಡು, ಬೇಡಬೇಡವೆಂದರೂ ಸಿಹಿ ಅವಲಕ್ಕಿ ಮೊಸರು ತಿನಿಸಿ ಅಮ್ಮನ ವಾತ್ಸಲ್ಯವನ್ನು ನೆನಪಿಸಿದರು. 

ಹದಿಹರೆಯದ ದಿನಗಳಲ್ಲಿ ಓದಿನ ಕಿಚ್ಚಹಚ್ಚಿದವರು ವೈದೇಹಿ. ಹಾಗೆ ಅವರು ಒಂದಷ್ಟು ಪಾತ್ರಗಳನ್ನು ಎದೆಯಲ್ಲಿ ಊರಿಬಿಟ್ಟರು. ಅವುಗಳ ಒಡಲ ಉರಿ ಒಳಗೊಳಗೇ ಸದಾ ಉರಿಯುತ್ತ ಪ್ರಖರ ಸಂವೇದನೆಯೊಂದನ್ನು ರೂಪಿಸಿದ್ದು ಸುಳ್ಳಲ್ಲ ಆ ಪಾತ್ರಗಳಾದರೂ ಎಂಥವು? ಅಕ್ಕು, ಅಮ್ಮಚ್ಚಿ, ಸಿರಿ, ಸೌಗಂಧಿ, ಕಮಲಾವತಿ, ಸುಬ್ಬಕ್ಕ ಇಂಥವೇ. ಇವರೊಳಗೆ ಸ್ಪೋಟಕ್ಕೆ ಕಾದಿದ್ದ ಇಂಥಾ ಕಾವು ಇತ್ತಾ? ಎಂದು ನಿಬ್ಬೆರಗಾಗುವಂತೆ ಮಾಡಿದ ವೈದೇಹಿ, ಹೆಂಗಸರ ಮೂಕಸಂಕಟಗಳ ಲೋಕದ ಪರದೆ ಸರಿಸಿಬಿಟ್ಟರು. ಸದ್ದಿಲ್ಲದ ಚೀತ್ಕಾರವನ್ನು ಹೀಗೂ ಕೇಳಬಹುದೆಂದು ತಿಳಿಸಿದರು. ಇವೆಲ್ಲ ಕಟ್ಟಿದ ಕತೆಗಳ ಲೋಕವಲ್ಲ ಕಾಣುವ ಲೋಕದ ಕತೆಗಳಿವು. ಆ ಪಾತ್ರಗಳ ಭುಸುಗಡುವಿಕೆ, ನಿಟ್ಟುಸಿರು, ಒಳಗೊಳಗೇ ನುಂಗಿಕೊಂಡ ಬಿಕ್ಕುಗಳು ಎಲ್ಲವೂ ಕೇಳಿಸುವಂತೆ ಅವರು ಸಂವೇದನೆಯನ್ನೇ ಸೂಕ್ಷ್ಮಗೊಳಿಸಿದರು.

ಚಿಕ್ಕವಳಿದ್ದಾಗ ಅಪ್ಪ ಹೇಳುತ್ತಿದ್ದ ದುಷ್ಯಂತ ಶಕುಂತಲೆಯರ ಕತೆ ನನಗೆ ತುಂಬ ಇಷ್ಟವಾಗಿತ್ತು. ಆ ಉತ್ಕಟ ಪ್ರೇಮ, ಆ ಅಪರಿಮಿತ ದುಃಖ… ಇವುಗಳ ಎರಡು ತುದಿಯ ನಡುವೆ ದುಂಬಿ, ಶಾಪ, ಉಂಗುರ ನುಂಗಿದ ಮೀನು, ಮುದ್ರೆಯುಂಗುರ ನೋಡಿ ಮರುಕಳಿಸುವ ನೆನೆಪು ಇಂತಹ ಎಷ್ಟೆಲ್ಲ ರೋಮಾಂಚಕ ತಿರುವುಗಳು! ವೈದೇಹಿಯವರದೂ ಒಂದು ಕತೆಯಿದೆ. ‘ಶಕುಂತಲೆಯೊಂದಿಗೆ ಒಂದು ಅಪರಾಹ್ನ’ ಅಂತ. ಅದರಲ್ಲಿ ದುಷ್ಯ್ಟಂತನೆಂಬ ಪಳಗಿದ ಪ್ರಣಯಿಯ ನಿಪುಣತೆ ಬೇರೆಯೇ ಥರ ಕಾಣುತ್ತದೆ! ದುಷ್ಯಂತ ಶಕುಂತಲೆಯರನ್ನು ಅವರು ಹೀಗೆ ಹೀಗೆಂದು ಲೋಕಕ್ಕೆ ಕಾಣಿಸುವ ಕವಿಯಿದ್ದಾನಲ್ಲ! ಅವನು ಇನ್ನೂ ನಿಪುಣ! ದುಷ್ಯಂತನ ಮರೆವಿಗೆ ಶಾಪದ ನೆಪವೊಡ್ಡಿ ಅವನನ್ನು ಪುರುವಂಶದ ಸತ್ಯಸಂಧನಾಗಿಯೇ ಉಳಿಸಿಬಿಡುತ್ತಾನೆ. “ಕಲ್ಪನೆಯ ಕುದುರೆಗೆ ಎಂದೂ ಲಂಗುಲಗಾಮಿಲ್ಲ. ಕವಿ ಶಾಪ ಗೀಪ ಇತ್ಯಾದಿಗಳನ್ನೆಲ್ಲ ಅಡ್ಡ ಇಟ್ಟು ಪುರುಷರ ಲಂಪಟತ್ವವನ್ನು ಮುಚ್ಚಿಡಲು ಹವಣಿಸಿದ. ಎಲ್ಲ ಜಾಣಮರೆವಿನ ಮಲ್ಲರನ್ನು ತನ್ನ ತೆಕ್ಕೆಯೊಳಗೆ ಸುರಕ್ಷಿತವಾಗಿರಿಸುವ ಪುರುಷ ಕಟ್ಟಿದ ವಿಸ್ಮರಣೆಯ ಕತೆ ರುಚಿಸಲೇಬೇಕು. ಕಾವ್ಯಮೀಯುವುದೇ ತನಗೆ ಬೇಕಾದ ಸುಖೋಷ್ಣ ಕಲ್ಪನೆಯಲ್ಲಿ” ಎಂಬ ಕತೆಗಾರ್ತಿಯ ವ್ಯಂಗ್ಯ ಕಾವ್ಯ – ಪುರಾಣಗಳ ಹಿಂದಿನ ಸಾಂಸ್ಕೃತಿಕ ರಾಜಕಾರಣವನ್ನು ಬಯಲು ಮಾಡುತ್ತದೆ. ಲಿಂಗರಾಜಕಾರಣದತ್ತ ಕೈ ತೋರುತ್ತದೆ.

TV9 Kannada


Leave a Reply

Your email address will not be published.