ರಾಜ್ಯಾದ್ಯಂತ ವರಮಹಾಲಕ್ಷ್ಮಿ ಹಬ್ಬದ ರಂಗು ಹೆಚ್ಚಾಗುತ್ತಿದೆ. ಈ ಬಾರಿ ತೆರೆದ ಜಮೀನಿನಲ್ಲಿ ಬೆಳೆದ ಹೂವುಗಳು ಮಳೆಯಿಂದಾಗಿ ಹಾನಿಗೊಳಗಾದ ಪರಿಣಾಮ ಪಾಲಿಹೌಸ್ನಲ್ಲಿ ಬೆಳೆದ ಹೂವುಗಳಿಗೆ ನಿರೀಕ್ಷೆಗೂ ಮೀರಿ ಬೇಡಿಕೆ ವ್ಯಕ್ತವಾಗಿವೆ. ದೊಡ್ಡಬಳ್ಳಾಪುರದ ರೈತರು ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿ ಇದ್ದಾರೆ.

ಸಾಂಕೇತಿಕ ಚಿತ್ರ
ಬೆಂಗಳೂರು ಗ್ರಾಮಾಂತರ: ಮಳೆಯ ಆರ್ಭಟದ ನಡುವೆ ನಾಡಿನೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ತಯಾರಿಗಳು ನಡೆಯುತ್ತಿವೆ. ಈ ನಡುವೆ ಪಾಲಿಹೌಸ್ನಲ್ಲಿ ಬೆಳೆದ ಹೂವುಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗುತ್ತಿದೆ. ನಾಗರ ಪಂಚಮಿಯ ನಂತರ ಸಾಲು ಸಾಲು ಹಬ್ಬಗಳು ಆರಂಭವಾಗಲಿದ್ದು, ರೈತರು ಹೂವುಗಳನ್ನು ಬೆಳೆದಿದ್ದಾರೆ. ಸದ್ಯ ರೈತರ ತೋಟದಲ್ಲಿ ಬಣ್ಣಬಣ್ಣದ ಹೂವುಗಳು ಅರಳಲು ಆರಂಭವಾಗಿವೆ. ಆದರೆ ಮಳೆರಾಯನ ಅಬ್ಬರಕ್ಕೆ ಹೂವಿನ ತೋಟಗಳಿಗೆ ಹಾನಿ ಉಂಟಾದ ಪರಿಣಾಮ ಪಾಲಿಹೌಸ್ನಲ್ಲಿ ಬೆಳೆದ ಹೂವುಗಳಿಗೆ ಬೇಡಿಕೆ ವ್ಯಕ್ತವಾಗುತ್ತಿದೆ.
ನಾಗರಪಂಚಮಿ ಹಬ್ಬವನ್ನು ನಾಡಿನೆಲ್ಲೆಡೆ ಸಂಭ್ರಮ ಸಡಗರದಿಂದ ಆಚರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಅನೇಕ ಹಿಂದೂ ಹಬ್ಬಗಳು ಬರಲಿವೆ. ಈ ಎಲ್ಲಾ ಹಬ್ಬಗಳಿಗೆ ಹೂವುಗಳು ಅವಶ್ಯಕವಾಗಿರುವುದರಿಂದ ಹೂವುಗಳಿಗೆ ಪ್ರತಿ ವರ್ಷದಂತೆ ಈ ಬಾರಿಯೂ ಬೇಡಿಕೆ ವ್ಯಕ್ತವಾಗಿದೆ. ಆಗಸ್ಟ್ 12ರಂದು ವರಮಹಾಲಕ್ಷ್ಮಿ ಹಬ್ಬ ಹಿನ್ನೆಲೆ ಹೂಗಳು ಹೆಚ್ಚು ಮಾರಾಟವಾಗುವ ಹಿನ್ನೆಲೆ ಪಾಲಿಹೌಸ್ನಲ್ಲಿ ಬೆಳೆದ ಅಲಂಕಾರಿಕ ಹೂಗಳಿಗೆ ಬೇಡಿಕೆ ವ್ಯಕ್ತವಾಗಿದ್ದು, ಪರಿಣಾಮವಾಗಿ ಅವುಗಳ ಬೆಲೆಯಲ್ಲೂ ಹೆಚ್ಚಳವಾಗಿದೆ.
ದೊಡ್ಡಬಳ್ಳಾಪುರ ಸುತ್ತಾಮುತ್ತ ಇರುವ ಎಕರೆಗಟ್ಟಲೆ ಪ್ರದೇಶಗಳಲ್ಲಿ ಗುಲಾಬಿ ಸೇರಿದಂತೆ ಅನೇಕ ರೀತಿಯ ಅಲಂಕಾರಿಕ ಹೂವುಗಳನ್ನು ಬೆಳೆಯಲಾಗಿದ್ದು, ಬೆಂಗಳೂರು ನಗರ, ಹೈದರಾಬಾದ್, ದೆಹಲಿ ಸೇರಿದಂತೆ ಅನೇಕ ಕಡೆಗಳಿಂದ ದೊಡ್ಡಬಳ್ಳಾಪುರದಲ್ಲಿ ಬೆಳೆದ ಹೂವುಗಳಿಗೆ ಬೇಡಿಕೆ ವ್ಯಕ್ತವಾಗಿದೆ.
ನೂರಾರು ಎಕರೆ ಹೆಚ್ಚಿನ ಪ್ರಮಾಣದಲ್ಲಿ ಪಾಲಿಹೌಸ್ನಲ್ಲಿ ರೈತರು ಹೂಗಳನ್ನ ಬೆಳೆದಿದ್ದು, ಬಣ್ಣ ಬಣ್ಣದ ಹೂವುಗಳನ್ನು ಮಾರುಕಟ್ಟೆಗೆ ರವಾನಿಸಲಾಗುತ್ತಿದೆ. ಈ ಬಾರಿ ನಿರೀಕ್ಷೆಗೂ ಮೀರಿ ಬೇಡಿಕೆ ವ್ಯಕ್ತವಾದ ಹಿನ್ನೆಲೆ ಪ್ರತಿನಿತ್ಯ ದಿನಕ್ಕೆ ಒಂದು ಪಾಲಿಹೌಸ್ನಿಂದ 30ಸಾವಿರಕ್ಕೂ ಹೆಚ್ಚು ಬಂಚ್ಗಳನ್ನು ಮಾರುಕಟ್ಟೆಗೆ ಕಳುಹಿಸಲಾಗುತ್ತಿದೆ. ತೆರೆದ ಪ್ರದೇಶದಲ್ಲಿ ಹೂವುಗಳನ್ನು ಬೆಳೆದ ರೈತರಿಗೆ ನಷ್ಟವಾಗಿದ್ದು, ಪಾಲಿಹೌಸ್ನಲ್ಲಿ ಬೆಳೆದ ಹೂವಿನ ರೈತರು ಹೆಚ್ಚಿನ ಲಾಭದ ನಿರೀಕ್ಷಿಸುತ್ತಿದ್ದಾರೆ.