Victor Chirwa
ಜಿಂಬಾಬ್ವೆಯ ಅಂಡರ್ 19 ತಂಡದ ಯುವ ಬೌಲರ್ ವಿಕ್ಟರ್ ಚಿರ್ವಾ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಬೌಲಿಂಗ್ ಮಾಡುವುದನ್ನು ಅಮಾನತುಗೊಳಿಸಲಾಗಿದೆ. ಶನಿವಾರ ನಡೆದ ಜಿಂಬಾಬ್ವೆ ಮತ್ತು ಪಪುವಾ ನ್ಯೂಗಿನಿ ನಡುವಿನ ಪಂದ್ಯದ ವೇಳೆ ಚಿರ್ವಾ ಅವರ ಬೌಲಿಂಗ್ ಶೈಲಿ ಬಗ್ಗೆ ಪಂದ್ಯದ ಅಧಿಕಾರಿಗಳು ದೂರು ನೀಡಿದ್ದರು. ಅವರ ಬೌಲಿಂಗ್ನ ವೀಡಿಯೊ ತುಣುಕನ್ನು ಪರಿಶೀಲನೆಗಾಗಿ ಸ್ಪರ್ಧಾ ಸಮಿತಿಗೆ ಕಳುಹಿಸಲಾಗಿದೆ. ಅದರಂತೆ ಐಸಿಸಿ ಅಂಡರ್-19 ವಿಶ್ವಕಪ್ನ ಸ್ಪರ್ಧಾ ಸಮಿತಿಯು ಚಿರ್ವಾ ಅವರ ಬೌಲಿಂಗ್ ಆ್ಯಕ್ಷನ್ ಕಾನೂನುಬಾಹಿರ ಎಂದು ಖಚಿತಪಡಿಸಿದೆ.
“ಸ್ಪರ್ಧಾತ್ಮಕ ಸಮಿತಿಯು ಚಿರ್ವಾ ಅವರ ಬೌಲಿಂಗ್ ಕ್ರಮವನ್ನು ಕಾನೂನುಬಾಹಿರ ಎಂದು ಕಂಡುಹಿಡಿದಿದೆ . ಐಸಿಸಿ ನಿಯಮಗಳ ಆರ್ಟಿಕಲ್ 6.7 ರ ಪ್ರಕಾರ, ಅವರನ್ನು ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಬೌಲಿಂಗ್ ಮಾಡದಂತೆ ತಕ್ಷಣವೇ ಅಮಾನತುಗೊಳಿಸಲಾಗಿದೆ” ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.
19 ವರ್ಷದೊಳಗಿನವರ ವಿಶ್ವಕಪ್ನಲ್ಲಿ ಜಿಂಬಾಬ್ವೆ ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಪಪುವಾ ನ್ಯೂಗಿನಿಯೊಂದಿಗೆ ಗ್ರೂಪ್-ಸಿಯಲ್ಲಿದೆ. ಇದುವರೆಗೆ ಜಿಂಬಾಬ್ವೆ ಎರಡು ಪಂದ್ಯಗಳನ್ನು ಆಡಿದ್ದು, ಒಂದರಲ್ಲಿ ಗೆದ್ದಿದ್ದರೆ, ಒಂದರಲ್ಲಿ ಸೋತಿದ್ದಾರೆ. ಪಪುವಾ ನ್ಯೂಗಿನಿ ವಿರುದ್ಧದ ಪಂದ್ಯದಲ್ಲಿ ಜಿಂಬಾಬ್ವೆ 228 ರನ್ಗಳಿಂದ ಜಯಗಳಿಸಿತ್ತು. ಈ ಪಂದ್ಯದಲ್ಲಿ ಚಿರ್ವಾ 7 ಓವರ್ಗಳಲ್ಲಿ 11 ರನ್ ನೀಡಿ 2 ವಿಕೆಟ್ ಪಡೆದಿದ್ದರು. ಅಲ್ಲದೆ 35 ರನ್ ಬಾರಿಸಿದ್ದರು.
ಇನ್ನು ಮತ್ತೊಂದು ಪಾಕಿಸ್ತಾನ ವಿರುದ್ದ ಜಿಂಬಾಬ್ವೆ 115 ರನ್ಗಳಿಂದ ಸೋತಿತ್ತು. ಈ ಪಂದ್ಯದಲ್ಲಿ ಚಿರ್ವಾ 9 ಓವರ್ಗಳಲ್ಲಿ 73 ರನ್ ನೀಡಿದರು. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಂತರ ಜಿಂಬಾಬ್ವೆ ತನ್ನ ಗುಂಪಿನಲ್ಲಿ ಮೂರನೇ ಸ್ಥಾನದಲ್ಲಿದೆ. ಜಿಂಬಾಬ್ವೆ ತನ್ನ ಮುಂದಿನ ಪಂದ್ಯವನ್ನು ಅಫ್ಘಾನಿಸ್ತಾನ ವಿರುದ್ಧ ಜನವರಿ 22 ರಂದು ಆಡಲಿದೆ.