ಬಿಬಿಎಂಪಿ ಆವರಣ ಎದುರು ಮದ್ಯದ ಪಾರ್ಟಿ
ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆವರಣದಲ್ಲಿ, ಅಲ್ಲಿನ ಸಿಬ್ಬಂದಿಯೇ ಎಣ್ಣೆ ಪಾರ್ಟಿ ನಡೆಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಬಿಬಿಎಂಪಿ ಮುಖ್ಯ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಎದುರಿಗೇ ಕುಳಿತು ಮದ್ಯಪಾನ ಮಾಡಿದ್ದಾರೆ. ಅಲ್ಲೆಲ್ಲ ಮದ್ಯದ ಬಾಟಲಿಗಳು, ಸಿಗರೇಟ್, ಪ್ಲಾಸ್ಟಿಕ್ ಕವರ್ಗಳು ಬಿದ್ದಿದ್ದನ್ನು ವಿಡಿಯೋದಲ್ಲಿ ನೋಡಬಹುದು. ಬಿಬಿಎಂಪಿಯಲ್ಲಿಯೇ ಡ್ರೈವರ್ ಆಗಿರುವ ಗೋಪಾಲ್ ಮತ್ತು ಒಂದಷ್ಟು ಜನ ಸೇರಿ ಈ ಎಣ್ಣೆ ಪಾರ್ಟಿ ಮಾಡಿದ್ದು, ಹೊಯ್ಸಳ ಪೊಲೀಸರ ಕೈಯಲ್ಲಿ ಸಿಕ್ಕಿಬಿದ್ದಿದ್ದಾರೆ.
ಅಂಬೇಡ್ಕರ್ ಪ್ರತಿಮೆ ಬಳಿಯ ಇರುವ ಕಲ್ಲಿನ ಬೆಂಚ್ ಮೇಲೆ ಇವರೆಲ್ಲ ಕುಳಿತು, ಮೈಮರೆತು ಮದ್ಯಪಾನ ಮಾಡುತ್ತಿದ್ದರು. ಇದೇ ವೇಳೆ ಹೊಯ್ಸಳ ಪೊಲೀಸರು ಬಂದಿದ್ದಾರೆ. ಕ್ಯಾಮರಾ ಕೂಡ ಅವರೆಡೆಗೆ ಫೋಕಸ್ ಆಗಿದೆ. ಇಷ್ಟಾದ ಕೂಡಲೇ ಎಣ್ಣೆ ಪಾರ್ಟಿ ಮಾಡುತ್ತಿದ್ದವರೆಲ್ಲ ಅಲ್ಲಿಂದ ಎದ್ದು ಹೊರಟಿದ್ದಾರೆ. ಅದರಲ್ಲೊಬ್ಬರು ತಮ್ಮ ಮುಖ ಕಾಣಬಾರದು ಎಂದು ಕೈಯನ್ನು ಮುಖಕ್ಕೆ ಅಡ್ಡ ಹಿಡಿದಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ, ಅದರಲ್ಲೂ ಹೀಗೆ ಸರ್ಕಾರಿ ಕಚೇರಿ ಬಳಿಯೇ ಮದ್ಯಪಾನ ಮಾಡಿದ್ದು ತೀವ್ರ ಟೀಕೆಗೆ ಗುರಿಯಾಗಿದೆ. ಸ್ಥಳಕ್ಕೆ ಹುಲಸೂರು ಗೇಟ್ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆಯನ್ನೂ ನಡೆಸಿದ್ದಾರೆ.
ಇತ್ತೀಚೆಗೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಹೊವನಹಳ್ಳಿಯಲ್ಲಿ ಉರ್ದು ಶಾಲೆಯಲ್ಲಿ ಕೆಲವು ಪುಂಡರು ಮದ್ಯದ ಪಾರ್ಟಿ ಮಾಡಿದ್ದರು. ಶಾಲೆಗೆ ಬಾಗುಲು ಹಾಕಿ ಹೋಗಿದ್ದರೂ ಕೂಡ ಆ ಬಾಗಿಲನ್ನು ಮುರಿದು ಒಳಹೋಗಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ಈ ಶಾಲೆಯಲ್ಲಿ, ಶಾಲೆಯ ಬಳಿ ಪ್ರತಿದಿನ ಎಣ್ಣೆ ಪಾರ್ಟಿ ನಡೆಯುತ್ತಿರುತ್ತದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.