ಸಾಂದರ್ಭಿಕ ಚಿತ್ರ
ವಿಜಯ್ ಹಜಾರೆ ಟೂರ್ನಿಯ ಮೊದಲ ಪಂದ್ಯದಲ್ಲೇ ಭರ್ಜರಿ ಜಯ ಸಾಧಿಸುವ ಮೂಲಕ ಕರ್ನಾಟಕ ತಂಡವು ಶುಭಾರಂಭ ಮಾಡಿದೆ. ಎಲೈಟ್ ಗ್ರೂಪ್-ಬಿ ನಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ಹಾಗೂ ಪುದಿಚೇರಿ ಮುಖಾಮುಖಿಯಾಗಿತ್ತು. ಟಾಸ್ ಗೆದ್ದ ಪುದಿಚೇರಿ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಮೊದಲ ಓವರ್ನಲ್ಲೇ ರೋಹನ್ ಕದಮ್ (0) ವಿಕೆಟ್ ಒಪ್ಪಿಸಿ ಹೊರನಡೆದಿದ್ದರು. ಆದರೆ ಮತ್ತೋರ್ವ ಆರಂಭಿಕ ರವಿ ಕುಮಾರ್ ಸಮರ್ಥ್ ಭರ್ಜರಿ ಬ್ಯಾಟಿಂಗ್ ನಡೆಸಿದರು. 2ನೇ ವಿಕೆಟ್ಗೆ ಸಿದ್ದಾರ್ಥ್ ಜೊತೆಗೂಡಿ ಸಮರ್ಥ್ 153 ರನ್ಗಳ ಜೊತೆಯಾಟವಾಡಿದರು. ಈ ವೇಳೆ 61 ರನ್ಗಳಿಸಿದ ಸಿದ್ಧಾರ್ಥ್ ವಿಕೆಟ್ ಒಪ್ಪಿಸಿದರು.
ಆ ಬಳಿಕ ಕ್ರೀಸ್ಗಿಳಿದ ನಾಯಕ ಮನೀಷ್ ಪಾಂಡೆ ಕೂಡ ಉತ್ತಮ ಬ್ಯಾಟಿಂಗ್ ಮಾಡಿದರು. ಆದರೆ ತಂಡದ ಮೊತ್ತ 172 ರನ್ ಆಗಿದ್ದ ವೇಳೆ 95 ರನ್ಗಳಿಸಿದ್ದ ರವಿಕುಮಾರ್ ಸಮರ್ಥ್ ವಿಕೆಟ್ ಒಪ್ಪಿಸಿದರು. ಈ ವೇಳೆ ಜೊತೆಯಾದ ಶರತ್ ಹಾಗೂ ಪಾಂಡೆ ತಂಡಕ್ಕೆ ಆಸರೆಯಾದರು. ಅದರಂತೆ ಮನೀಷ್ ಪಾಂಡೆ 48 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 2 ಬೌಂಡರಿಯೊಂದಿಗೆ ಅಜೇಯ 64 ರನ್ಗಳಿಸಿದರು. ಮತ್ತೊಂದೆಡೆ ಶರತ್ 42 ಎಸೆತಗಳಲ್ಲಿ 55 ರನ್ ಬಾರಿಸಿದರು. ಪರಿಣಾಮ ನಿಗದಿತ 50 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 289 ರನ್ ಕಲೆಹಾಕಿತು.
290 ರನ್ಗಳ ಗುರಿ ಪಡೆದ ಪುದುಚೇರಿ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಕರ್ನಾಟಕ ಬೌಲರುಗಳು ಯಶಸ್ವಿಯಾದರು. 45 ರನ್ಗಳಿಸುವಷ್ಟರಲ್ಲಿ ಪುದುಚೇರಿ ತಂಡದ 5 ವಿಕೆಟ್ ಉರುಳಿದ್ದವು. ಆ ಬಳಿಕ ದಾಳಿಗಿಳಿದ ಎಡಗೈ ಸ್ಪಿನ್ನರ್ ಜಗದೀಶ್ ಸುಚಿತ್ ಬ್ಯಾಕ್ ಟು ಬ್ಯಾಕ್ 4 ವಿಕೆಟ್ ಪಡೆಯುವ ಮೂಲಕ ಪುದುಚೇರಿ ತಂಡವನ್ನು 53 ರನ್ಗಳಿಗೆ ಆಲೌಟ್ ಮಾಡಿದರು. ಇದರೊಂದಿಗೆ ಕರ್ನಾಟಕ ತಂಡವು 236 ರನ್ಗಳ ಭರ್ಜರಿ ಜಯ ಸಾಧಿಸಿತು. ಕರ್ನಾಟಕ ಪರ ಸುಚಿತ್ ಕೇವಲ 3 ರನ್ ನೀಡಿ 4 ವಿಕೆಟ್ ಪಡೆದರೆ, ವಿ ಕೌಶಿಕ್ 3 ವಿಕೆಟ್ ಕಬಳಿಸಿ ಮಿಂಚಿದರು.