Vikram Twitter Review: ಮುಂಜಾನೆಯೇ ‘ವಿಕ್ರಮ್​’ ಚಿತ್ರ ನೋಡಿ ‘ಮ್ಯಾಜಿಕ್​’ ಅಂತ ಹೊಗಳಿದ ಪ್ರೇಕ್ಷಕರು | Vikram Twitter Review: Kamal Haasan fans praise Vikram Movie: Here is Twitter reaction


Vikram Twitter Review: ಮುಂಜಾನೆಯೇ ‘ವಿಕ್ರಮ್​’ ಚಿತ್ರ ನೋಡಿ ‘ಮ್ಯಾಜಿಕ್​’ ಅಂತ ಹೊಗಳಿದ ಪ್ರೇಕ್ಷಕರು

ಕಮಲ್ ಹಾಸನ್

Vikram | Kamal Haasan : ‘ವಿಕ್ರಮ್​’ ಚಿತ್ರದ ಮೇಕಿಂಗ್​ ಗುಣಮಟ್ಟ ಗಮನ ಸೆಳೆಯುತ್ತಿದೆ. ಕಮಲ್​ ಹಾಸನ್​ ಅಭಿಮಾನಿಗಳಿಗೆ ಈ ಸಿನಿಮಾ ತುಂಬ ಇಷ್ಟ ಆಗುತ್ತಿದೆ.

ಕಮಲ್​ ಹಾಸನ್ (Kamal Haasan)​ ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. ಅವರ ನಟನೆಯ ಸಿನಿಮಾಗಳು ಬಿಡುಗಡೆಯಾದರೆ ಭರ್ಜರಿ ಓಪನಿಂಗ್ ಪಡೆದುಕೊಳ್ಳುತ್ತವೆ. ಇತ್ತೀಚಿನ ವರ್ಷಗಳಲ್ಲಿ ಅವರು ನಟನೆಯಿಂದ ಕೊಂಚ ದೂರ ಉಳಿದುಕೊಂಡಿದ್ದರು. ಆದರೆ ಈಗ ಸಖತ್​ ಮಾಸ್​ ಆಗಿ ಕಮ್​ಬ್ಯಾಕ್​ ಮಾಡಿದ್ದಾರೆ. ಕಮಲ್​ ಹಾಸನ್​ ನಟನೆಯ ‘ವಿಕ್ರಮ್​’ ಸಿನಿಮಾ (Vikram Movie) ಇಂದು (ಜೂನ್​ 3) ರಿಲೀಸ್​ ಆಗಿ ಅಬ್ಬರಿಸುತ್ತಿದೆ. ಹಲವು ಕಡೆಗಳಲ್ಲಿ ಮುಂಜಾನೆಯೇ ಶೋ ಆರಂಭ ಆಗಿದೆ. ಫಸ್ಟ್​ ಡೇ ಫಸ್ಟ್​ ಶೋ ನೋಡಿ ಬಂದ ಅಭಿಮಾನಿಗಳು ಈ ಚಿತ್ರದ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಪ್ರೇಕ್ಷಕರು ಟ್ವಿಟರ್​ ಮೂಲಕ ತಮ್ಮ ವಿಮರ್ಶೆ (Vikram Twitter Review) ತಿಳಿಸಿದ್ದಾರೆ. ಈ ಚಿತ್ರಕ್ಕೆ ಲೋಕೇಶ್​ ಕನಗರಾಜ್​ ನಿರ್ದೇಶನ ಮಾಡಿದ್ದು, ‘ರಾಜ್​ ಕಮಲ್​ ಫಿಲ್ಮ್ಸ್​ ಇಂಟರ್​ನ್ಯಾಷನಲ್​’ ಬ್ಯಾನರ್​ ಮೂಲಕ ನಿರ್ಮಾಣ ಆಗಿದೆ.

‘ವಿಕ್ರಮ್​’ ಸಿನಿಮಾದಲ್ಲಿ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಕಮಲ್​ ಹಾಸನ್​ ಜೊತೆಗೆ ವಿಜಯ್​ ಸೇತುಪತಿ, ಫಹಾದ್​ ಫಾಸಿಲ್​ ಕೂಡ ಮುಂಚಿದ್ದಾರೆ. ಸೂರ್ಯ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಈ ಕಲಾವಿದರ ಕಾಂಬಿನೇಷನ್​ ಕಾರಣದಿಂದ ಚಿತ್ರಕ್ಕೆ ಹೈವೋಲ್ಟೇಜ್​ ಬಂದಂತೆ ಆಗಿದೆ. ಇದು ಪ್ರೇಕ್ಷಕರಿಗೆ ಇಷ್ಟ ಆಗಿದೆ.

ಇಂಟರ್​ವಲ್​ ದೃಶ್ಯ ನೋಡಿದ ಪ್ರೇಕ್ಷಕರು ಫಿದಾ ಆಗಿದ್ದಾರೆ. ಅನೇಕ ಮಂದಿ ಆ ಬಗ್ಗೆಯೇ ಟ್ವೀಟ್​ ಮಾಡುತ್ತಿದ್ದಾರೆ. ಒಟ್ಟಾರೆ ಸಿನಿಮಾದ ಮೇಕಿಂಗ್​ ಕಂಡು ಕಮಲ್​ ಹಾಸನ್​ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಇದರಿಂದ ಚಿತ್ರಕ್ಕೆ ಉತ್ತಮವಾದ ಕಲೆಕ್ಷನ್​ ಆಗುವ ಸಾಧ್ಯತೆ ದಟ್ಟವಾಗಿದೆ.

ನಿರ್ದೇಶಕ ಲೋಕೇಶ್​ ಕನಗರಾಜ್​ ಅವರ ಮೇಲೆ ಅಭಿಮಾನಿಗಳು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದರು. ಆ ನಿರೀಕ್ಷೆಯ ಮಟ್ಟವನ್ನು ತಲುಪುವಲ್ಲಿ ಅವರು ಯಶಸ್ವಿ ಆಗಿದ್ದಾರೆ ಎಂಬ ಅಭಿಪ್ರಾಯ ಪ್ರೇಕ್ಷಕರಿಂದ ಕೇಳಿಬಂದಿದೆ. ‘ಇದು ನಿಜವಾಗಿಯೂ ಲೋಕೇಶ್​ ಕನಗರಾಜ್ ಶೈಲಿಯ ಚಿತ್ರ. ಒಂದು ಮ್ಯಾಜಿಕ್​ ರೀತಿಯಲ್ಲಿ ಇದೆ’ ಎಂದು ಪ್ರೇಕ್ಷಕರು ಟ್ವೀಟ್​ ಮಾಡಿದ್ದಾರೆ.

‘ವಿಕ್ರಮ್​’ ಸಿನಿಮಾದಲ್ಲಿ ಸಾಹಸ ದೃಶ್ಯಗಳು ಮತ್ತು ಚೇಸಿಂಗ್​ ದೃಶ್ಯಗಳನ್ನು ಜನರು ಮೆಚ್ಚಿಕೊಂಡಿದ್ದಾರೆ. ಒಟ್ಟಾರೆಯಾಗಿ ಚಿತ್ರದ ಮೇಕಿಂಗ್​ ಗುಣಮಟ್ಟ ಗಮನ ಸೆಳೆಯುತ್ತಿದೆ. ಕಲಾವಿದರ ನಟನೆಗೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ಬಾಕ್ಸ್​​ ಆಫೀಸ್​ನಲ್ಲಿ ‘ವಿಕ್ರಮ್​’ ಸಿನಿಮಾ ಜಯಭೇರಿ ಭಾರಿಸುವ ಸೂಚನೆ ಸಿಕ್ಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published. Required fields are marked *