Viral News: 42 ಲಕ್ಷ ರೂ. ವೆಚ್ಚದಲ್ಲಿ ಕೃಷ್ಣನ ದೇವಸ್ಥಾನ ಕಟ್ಟಿಸಿ ಸಾಮರಸ್ಯ ಮೆರೆದ ಮುಸ್ಲಿಂ ಉದ್ಯಮಿ | Muslim businessman spends Rs 42 lakh to build Krishna temple in Jharkhand


Viral News: 42 ಲಕ್ಷ ರೂ. ವೆಚ್ಚದಲ್ಲಿ ಕೃಷ್ಣನ ದೇವಸ್ಥಾನ ಕಟ್ಟಿಸಿ ಸಾಮರಸ್ಯ ಮೆರೆದ ಮುಸ್ಲಿಂ ಉದ್ಯಮಿ

ಜಾರ್ಖಂಡ್​ನಲ್ಲಿ ನಿರ್ಮಿಸಲಾಗಿರುವ ಕೃಷ್ಣನ ದೇವಸ್ಥಾನ

ರಾಂಚಿ: ದೇಶಾದ್ಯಂತ ಹಿಂದೂ-ಮುಸ್ಲಿಂ ಗಲಾಟೆ ಆಗಾಗ ನಡೆಯುತ್ತಲೇ ಇರುತ್ತದೆ. ಇದೀಗ ಹಿಜಾಬ್​​ನಿಂದಾಗಿ  (Hijab Row) ಮತ್ತೆ ಕೋಮುಗಲಭೆ ಸೃಷ್ಟಿಯಾಗಿದೆ. ಈ ವಿವಾದ ಇಡೀ ಜಗತ್ತಿನಾದ್ಯಂತ ಚರ್ಚೆಯಾಗುತ್ತಿದೆ. ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಘೋಷಿಸಬೇಕೆಂಬ ಒತ್ತಾಯಗಳೂ ಕೇಳಿಬರುತ್ತಿವೆ. ಇದೆಲ್ಲದರ ನಡುವೆ ಆಗಾಗ ಹಿಂದೂ-ಮುಸ್ಲಿಂ ಸಾಮರಸ್ಯವನ್ನು ಎತ್ತಿ ಹಿಡಿಯುವ ಘಟನೆಗಳು ಕೂಡ ನಡೆಯುತ್ತಿರುತ್ತವೆ. ಜಾರ್ಖಂಡ್​ನಲ್ಲಿ ಅದೇ ರೀತಿ ಮುಸ್ಲಿಂ ಉದ್ಯಮಿಯೊಬ್ಬರು 42 ಲಕ್ಷ ರೂ. ಖರ್ಚು ಮಾಡಿ ಶ್ರೀ ಕೃಷ್ಣನ ದೇವಸ್ಥಾನವನ್ನು ಕಟ್ಟಿಸಿದ್ದಾರೆ. ಮುಸ್ಲಿಂ ಉದ್ಯಮಿಯ (Muslim Businessman) ಈ ಕಾರ್ಯ ಭಾರೀ ಚರ್ಚೆಯಾಗುತ್ತಿದೆ. ಹಾಗೇ, ಮೆಚ್ಚುಗೆಗೂ ಪಾತ್ರವಾಗಿದೆ.

ಜಾರ್ಖಂಡ್‌ನ ದುಮ್ಕಾದ ಮಹೇಶ್‌ಬಥನ್‌ನಲ್ಲಿ ಉದ್ಯಮಿ ನೌಶಾದ್ ಶೇಖ್ ತಮ್ಮ ಸ್ವಂತ ಖರ್ಚಿನಿಂದ ದೇವಸ್ಥಾನವೊಂದನ್ನು ಕಟ್ಟಿಸಿದ್ದಾರೆ. ಈ ಕೃಷ್ಣ ಮಂದಿರ ನಿರ್ಮಾಣಕ್ಕೆ ಸುಮಾರು 42 ಲಕ್ಷ ರೂ. ಖರ್ಚು ಮಾಡಿದ್ದಾರೆ. ಅವರು ಶ್ರೀಕೃಷ್ಣನಿಂದ ಪ್ರಭಾವಿತರಾಗಿದ್ದರಿಂದ ಈ ದೇವಸ್ಥಾನವನ್ನು ಕಟ್ಟಿಸಿದ್ದಾರೆ ಎನ್ನಲಾಗಿದೆ.

ಮುಸ್ಲಿಮನಾಗಿದ್ದರೂ ಹಿಂದೂ ದೇವಸ್ಥಾನವನ್ನು ಏಕೆ ಕಟ್ಟಿದ್ದೀರಿ? ಎಂಬ ಪ್ರಶ್ನೆಗೆ ಉತ್ತರಿಸಿದ ಶೇಖ್, ಎಲ್ಲರಿಗೂ ದೇವರು ಒಬ್ಬನೇ. ಆದ್ದರಿಂದ, ಒಬ್ಬೊಬ್ಬರು ದೇವಸ್ಥಾನ, ಮಸೀದಿ ಅಥವಾ ಚರ್ಚ್‌ನಲ್ಲಿ ಪೂಜಿಸುತ್ತಾರೆ. ನಾವು ಎಲ್ಲಿ ಪೂಜಿಸುತ್ತೇವೆ ಎಂಬುದು ಮುಖ್ಯವಲ್ಲ, ನಾವು ಎಷ್ಟು ಭಕ್ತಿಯನ್ನು ಹೊಂದಿದ್ದೇವೆ ಎಂಬುದು ಮುಖ್ಯ.

ಈ ಪ್ರದೇಶದಲ್ಲಿ ವಾಸಿಸುವ ಹೆಚ್ಚಿನ ಜನರು ಹಿಂದೂಗಳಾಗಿರುವುದರಿಂದ ಅವರಿಗಾಗಿ ಕೃಷ್ಣನ ದೇವಾಲಯವನ್ನು ನಿರ್ಮಿಸಲು ಶೇಖ್ ಯೋಚಿಸಿದರು. ಸೋಮವಾರ ದೇವಸ್ಥಾನದ ‘ಪ್ರಾಣ-ಪ್ರತಿಷ್ಠೆ’ ನಡೆದಿದ್ದು, ಎಲ್ಲಾ ಸಮುದಾಯದ ಜನರು ಈ ದೇವಸ್ಥಾನಕ್ಕೆ ಆಗಮಿಸಿ, ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ಕೃಷ್ಣ ಪರಮಾತ್ಮನೇ ನನ್ನ ಕನಸಿನಲ್ಲಿ ಬಂದು ತನಗಾಗಿ ದೇವಸ್ಥಾನವನ್ನು ನಿರ್ಮಿಸಲು ಪ್ರೇರೇಪಣೆ ನೀಡಿದ್ದಾನೆ ಎಂದು ಆ ಮುಸ್ಲಿಂ ಉದ್ಯಮಿ ಶೇಖ್ ತಿಳಿಸಿದ್ದಾರೆ.

3 ವರ್ಷಗಳಲ್ಲಿ ಈ 42 ಲಕ್ಷ ರೂ. ವೆಚ್ಚದ ಕೃಷ್ಣನ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿದೆ. ಮುಸ್ಲಿಂ ಉದ್ಯಮಿ ಕಟ್ಟಿಸಿದ ಈ ದೇವಸ್ಥಾನದಲ್ಲಿ ಹಿಂದೂ ಪದ್ಧತಿಯಂತೆ 150 ಬ್ರಾಹ್ಮಣರಿಂದ ‘ಪ್ರಾಣ-ಪ್ರತಿಷ್ಠೆ’ ನೆರವೇರಿಸಲಾಯಿತು. ಮುಸಲ್ಮಾನರಾಗಿದ್ದರೂ ಶೇಖ್ ಮಂದಿರ ನಿರ್ಮಾಣ ಮಾಡಿರುವುದು ಸ್ಥಳೀಯ ನಿವಾಸಿಗಳಿಗೆ ಸಂತಸ ನೀಡಿದೆ.

TV9 Kannada


Leave a Reply

Your email address will not be published. Required fields are marked *