Viral Video: ಆ್ಯಂಬುಲೆನ್ಸ್​ ಶುಲ್ಕ ಭರಿಸಲಾಗದೆ 90 ಕಿ.ಮೀ ಬೈಕ್​ನಲ್ಲೇ ಮಗನ ಶವವನ್ನು ಹೊತ್ತೊಯ್ದ ತಂದೆ! | No ambulance Andhra Pradesh man carries son Deadbody on bike for 90 km


Viral Video: ಆ್ಯಂಬುಲೆನ್ಸ್​ ಶುಲ್ಕ ಭರಿಸಲಾಗದೆ 90 ಕಿ.ಮೀ ಬೈಕ್​ನಲ್ಲೇ ಮಗನ ಶವವನ್ನು ಹೊತ್ತೊಯ್ದ ತಂದೆ!

ಮಗನ ಹೆಣವನ್ನು ಬೈಕ್​ನಲ್ಲಿ ತೆಗೆದುಕೊಂಡು ಹೋಗುತ್ತಿರುವ ತಂದೆ

ತಿರುಪತಿ: ಹೆಗಲ ಮೇಲೆ ಹೊತ್ತು, ಮುದ್ದಾಡಿ ಸಾಕಿದ ಮಗ ಹೆಣವಾಗಿ ಮಲಗಿದ್ದ. ಆತನ ಶವವನ್ನು ಮನೆಗೆ ತೆಗೆದುಕೊಂಡು ಹೋಗಿ ಸಂಸ್ಕಾರ ಮಾಡಲು ಆ್ಯಂಬುಲೆನ್ಸ್​ ವ್ಯವಸ್ಥೆ ಮಾಡಿಕೊಡಿ ಎಂದು ಆಸ್ಪತ್ರೆಯ ಸಿಬ್ಬಂದಿ ಬಳಿ ಎಷ್ಟೇ ಬೇಡಿಕೊಂಡರೂ ಆ್ಯಂಬುಲೆನ್ಸ್​ ಬರಲೇ ಇಲ್ಲ. ಕೊನೆಗೆ ಏನು ಮಾಡುವುದೆಂದು ತೋಚದೆ ಆ ವ್ಯಕ್ತಿ ತನ್ನ ಮಗನ ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿ, ಬೈಕ್​ನಲ್ಲಿ ಇಟ್ಟುಕೊಂಡು 90 ಕಿ.ಮೀ. ದೂರದ ತಮ್ಮ ಮನೆಗೆ ಸಾಗಿಸಿರುವ ಮನಕಲಕುವ ಘಟನೆಯೊಂದು ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದಿದೆ.

ತಿರುಪತಿ ಮೂಲದ ವ್ಯಕ್ತಿಯೊಬ್ಬರು ಶ್ರೀ ವೆಂಕಟೇಶ್ವರ ರಾಮನಾರಾಯಣ ರುಯಿಯಾ ಸರ್ಕಾರಿ ಜನರಲ್ (RUIA) ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ತನ್ನ ಮಗನ ಶವವನ್ನು ಮನೆಗೆ ತೆಗೆದುಕೊಂಡು ಹೋಗಲು ಆ್ಯಂಬುಲೆನ್ಸ್​ ವ್ಯವಸ್ಥೆ ಮಾಡಲು ಆಸ್ಪತ್ರೆ ಸಿಬ್ಬಂದಿಗೆ ಮನವಿ ಮಾಡಿದ್ದರು. ಆದರೆ, ಯಾವುದೇ ಆ್ಯಂಬುಲೆನ್ಸ್​ ವ್ಯವಸ್ಥೆಯಾಗಲಿಲ್ಲ. ಕೊನೆಗೊಂದು ಆಂಬ್ಯುಲೆನ್ಸ್ ಬಂದರೂ ಅದರ ಚಾಲಕ ಆ ಹೆಣವನ್ನು ಸಾಗಿಸಲು ಭಾರೀ ಹಣ ಬೇಕೆಂದು ಬೇಡಿಕೆಯಿಟ್ಟಿದ್ದರಿಂದ ಆ ವ್ಯಕ್ತಿ ಬೈಕ್​ನಲ್ಲಿ ತನ್ನ ಮಗನ ಮೃತದೇಹವನ್ನು ಸಾಗಿಸಿದ್ದಾರೆ.

ತಿರುಪತಿಯ RUIA ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ಅನ್ನಮಯ್ಯ ಜಿಲ್ಲೆಯ ಚಿಟ್ವೇಲ್ ಮಂಡಲ್ ಗ್ರಾಮದ 10 ವರ್ಷದ ಬಾಲಕ ಚಿಕಿತ್ಸೆ ನಂತರ ಸಾವನ್ನಪ್ಪಿದ್ದಾನೆ. ಆತನ ಮೃತದೇಹವನ್ನು ಶವಸಂಸ್ಕಾರಕ್ಕಾಗಿ ತನ್ನ ಗ್ರಾಮಕ್ಕೆ ಸ್ಥಳಾಂತರಿಸಲು ಬಾಲಕನ ತಂದೆ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲು ಪ್ರಯತ್ನಿಸಿದಾಗ, ಆಂಬ್ಯುಲೆನ್ಸ್ ಚಾಲಕ ಮತ್ತು ಕರ್ತವ್ಯದಲ್ಲಿದ್ದ ಆಸ್ಪತ್ರೆ ಸಿಬ್ಬಂದಿ ಆತನಿಂದ ಭಾರೀ ಮೊತ್ತಕ್ಕೆ ಬೇಡಿಕೆಯಿಟ್ಟರು ಎಂದು ಆರೋಪಿಸಲಾಗಿದೆ.

ಆ ವ್ಯಕ್ತಿ ಬಹಳ ಬಡವನಾಗಿದ್ದರಿಂದ ಆಸ್ಪತ್ರೆಯವರು ಕೇಳಿದ ಭಾರೀ ಶುಲ್ಕವನ್ನು ಭರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ, ಮಗನ ಶವವನ್ನು ಬೈಕ್​ನಲ್ಲಿ ಇಟ್ಟುಕೊಂಡು ತಮ್ಮ ಗ್ರಾಮಕ್ಕೆ ಹೋಗಿದ್ದಾರೆ.

ಈ ಘಟನೆಯ ವೀಡಿಯೋವನ್ನು ಹಂಚಿಕೊಂಡಿರುವ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಟ್ವೀಟ್ ಮಾಡಿದ್ದಾರೆ. “ತಿರುಪತಿಯ RUIA ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಮುಗ್ಧ ಪುಟ್ಟ ಜೇಸವಾ ಕುಟುಂಬದ ಸ್ಥಿತಿಯನ್ನು ನೋಡಿ ನನಗೆ ಬಹಳ ನೋವುಂಟಾಗಿದೆ. ಅವರ ತಂದೆ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುವಂತೆ ಆಸ್ಪತ್ರೆಯ ಅಧಿಕಾರಿಗಳಿಗೆ ಮನವಿ ಮಾಡಿದರು. ಆದರೆ, ಆ್ಯಂಬುಲೆನ್ಸ್​ನವರು ಕೇಳಿದಷ್ಟು ಹಣ ಭರಿಸಲಾಗದೆ ಅವರು ತಮ್ಮ ಮಗನ ಹೆಣವನ್ನು ಬೈಕ್​ನಲ್ಲಿ ಸಾಗಿಸಬೇಕಾಯಿತು ಎಂದು ಟ್ವೀಟ್ ಮಾಡಿದ್ದಾರೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಆಸ್ಪತ್ರೆಯಲ್ಲಿ ರಾತ್ರಿ ಕರ್ತವ್ಯದಲ್ಲಿದ್ದ ಎಲ್ಲಾ ಸಿಬ್ಬಂದಿ ಮತ್ತು ಸೆಕ್ಯುರಿಟಿಯನ್ನು ಕರೆದು ಈ ವಿಷಯದ ಬಗ್ಗೆ ತನಿಖೆ ನಡೆಸಲಾಗಿದೆ. ಪ್ರತಿಪಕ್ಷ ತೆಲುಗು ದೇಶಂ ಪಕ್ಷ (ಟಿಡಿಪಿ) ಈ ಘಟನೆಯ ಬಗ್ಗೆ ಆಡಳಿತಾರೂಢ ವೈಎಸ್‌ಆರ್‌ಸಿಪಿಯನ್ನು ತರಾಟೆಗೆ ತೆಗೆದುಕೊಂಡಿದೆ. ತಿರುಪತಿಯಿಂದ ಸುಮಾರು 90 ಕಿಲೋಮೀಟರ್ ದೂರದಲ್ಲಿರುವ ತನ್ನ ಗ್ರಾಮಕ್ಕೆ ಬೈಕ್​ನಲ್ಲಿ ತನ್ನ 10 ವರ್ಷದ ಮಗನ ಮೃತದೇಹವನ್ನು ಹೊತ್ತೊಯ್ಯುವಂತೆ ಮಾಡಿದ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

TV9 Kannada


Leave a Reply

Your email address will not be published. Required fields are marked *