Viral Video : ಉಕ್ರೇನಿಯನ್ ಯೋಧ ಮತ್ತವನ ಗೆಳತಿಯ ಈ ಅಪೂರ್ವ ಕ್ಷಣಗಳು… | Ukrainian Rescuer Proposes to His Girlfriend Amid Siren Wails, Melts Hearts Online


Trending : ಯುದ್ಧಾನಂತರ ವಿಷಾದ, ದುಃಖ, ತುಮುಲಕ್ಕೆ ಬಿದ್ದ ಮನಸ್ಸುಗಳಿಗೆ ಬೇಕಿರುವುದು ‘ನಮ್ಮವರು’ ಎಂಬ ಪ್ರೀತಿ, ಭರವಸೆ. ಈ ದಿಕ್ಕಿನತ್ತ ಉಕ್ರೇನಿಯನ್ ಯೋಧರು ತಮ್ಮ ಬದುಕಿನ ಪುಟಗಳನ್ನು ಸುಂದರವಾಗಿಸಿಕೊಳ್ಳುವತ್ತ ಸಾಗುತ್ತಿದ್ದಾರೆ.

Viral Video : ಉಕ್ರೇನಿಯನ್ ಯೋಧ ಮತ್ತವನ ಗೆಳತಿಯ ಈ ಅಪೂರ್ವ ಕ್ಷಣಗಳು...

ಉಕ್ರೇನಿಯನ್ ಯೋಧ ತನ್ನ ಗೆಳತಿಗೆ ಪ್ರೇಮ ನಿವೇದನೆ ಮಾಡಿದ ಕ್ಷಣ.

Viral Video : ರಷ್ಯಾ-ಉಕ್ರೇನ್ ಯುದ್ಧದ ಸಂಘರ್ಷ, ಸಾವುನೋವುಗಳ ವಿಷಾದದ ಮಧ್ಯೆಯೇ ಕೆಲ ಸಂತೋಷದ ಕ್ಷಣಗಳು ಅರಳಲಾರಂಭಿಸಿವೆ. ಇದರಿಂದಾಗಿ ಆ ನೆಲದಲ್ಲಿ ಬದುಕಿನ ಬಗ್ಗೆ ಭರವಸೆ ಹುಟ್ಟಲಾರಂಭಿಸಿದೆ. ವೈರಲ್ ಆಗುತ್ತಿರುವ ಈ ಕೆಳಗಿನ ಪೋಸ್ಟ್​ನಲ್ಲಿ ಉಕ್ರೇನಿಯನ್ ಯೋಧನೊಬ್ಬನು ಮಂಡಿಯೂರಿ ಕುಳಿತು ಗುಲಾಬಿಯನ್ನು ತನ್ನ ಗೆಳತಿಗೆ ಕೊಟ್ಟು ಪ್ರೇಮನಿವೇದನೆ ಮಾಡಿಕೊಳ್ಳುತ್ತಾನೆ. ಅದನ್ನು ಸ್ವೀಕರಿಸುವ ಗೆಳತಿ ಅಚ್ಚರಿ, ಖುಷಿಯಿಂದ ಹನಿಗಣ್ಣಾಗುತ್ತಾಳೆ. ಭಾವುಕರಾದ ಅವರಿಬ್ಬರೂ ತಬ್ಬಿಕೊಂಡು ಮುತ್ತು ಕೊಟ್ಟುಕೊಳ್ಳುತ್ತ ವಿಶ್ವಾಸ, ಭರವಸೆಯನ್ನು ಪರಸ್ಪರ ಗಟ್ಟಿ ಮಾಡಿಕೊಳ್ಳುತ್ತಾರೆ. ಹಿನ್ನೆಲೆಯಲ್ಲಿ ಸೈರನ್​ ಮೊಳಗುತ್ತದೆ. ಖುಷಿಯ ತೀವ್ರಭಾವವನ್ನು ಹಿಡಿದಿಟ್ಟಿರುವ ಈ ಕ್ಷಣಗಳು ಯಾರನ್ನೂ ಮೃದುಗೊಳಿಸುವಂಥವು. ಇದ್ದುದರಲ್ಲಿಯೇ ತುಸು ಸಂಭ್ರಮ ಸೃಷ್ಟಿಯಾಗಲೆಂದು ಅವನ ಸ್ನೇಹಿತರು ಬಲೂನುಗಳನ್ನು ಹಿಡಿದು ನಿಂತಿರುವುದನ್ನು ನೋಡಿದಾಗ ಬರೆಯಲು ಪದಗಳಿಲ್ಲ.

ಉಕ್ರೇನಿಯನ್ ಸಚಿವಾಲಯದ ಆಂತರಿಕ ವ್ಯವಹಾರಗಳ ಸಲಹೆಗಾರ ಆ್ಯಂಟನ್ ಗೆರಾಶ್ಚೆಂಕೊ ಅವರ ಟ್ವಿಟರ್​ ಖಾತೆಯಲ್ಲಿರುವ ಈ ವೀಡಿಯೋದ ಒಕ್ಕಣೆಯಲ್ಲಿ, “ಇದು ಈ ಹೊತ್ತಿನ ವಾಸ್ತವ; ಜನರನ್ನು ರಕ್ಷಿಸಿದ ನಂತರ ನಾವು ಯುದ್ಧ ಮತ್ತು ಸಂತುಲಿತ ಬದುಕಿನ ಬಗ್ಗೆ ಹಾಸ್ಯ ಮಾಡುತ್ತಿರುತ್ತೇವೆ. ನೀವೇ ನೋಡಿ ಈ ಯೋಧ ಅಪಾಯದಿಂದ ಹೊರಬಂದು ಬದುಕಿನ ಖುಷಿಯನ್ನು ಅನುಭವಿಸುತ್ತಿದ್ದಾನೆ. ಹಾದು ಹೋಗುತ್ತಿರುವ ಸೈರನ್​ ಕೇಳಿಸುತ್ತಿದೆಯೇ? ದುಃಖವು ಕರಗಿ ಆನಂದವನ್ನು ಇದು ಸೂಚಿಸುತ್ತಿದೆ.’’

ಅನೇಕರು ಈ ಟ್ವೀಟ್​ ಹಂಚಿಕೊಂಡಿದ್ದಾರೆ. ಈ ಜೋಡಿಗೆ ಶುಭ ಹಾರೈಸಿದ್ದಾರೆ. ಈ ಸಂದರ್ಭವನ್ನು ಸುರಕ್ಷಿತವಾಗಿ ನಿಭಾಯಿಸಿದ್ದಕ್ಕೆ ಅಗ್ನಿಶಾಮಕ ದಳದವರಿಗೆ ನೆಟ್ಟಿಗರು ಅಭಿನಂದನೆ ತಿಳಿಸಿದ್ದಾರೆ. ಬಹುಮುಖ್ಯವಾಗಿ, ಸೈರನ್​ ಮೊಳಗಿರುವುದು ಈ ಸನ್ನಿವೇಶಕ್ಕೆ ವಿಶೇಷ ಅರ್ಥವನ್ನು ಕಲ್ಪಿಸಿಕೊಳ್ಳಲು ವಿವಿಧ ಆಯಾಮವನ್ನು ನೀಡಿರುವುದನ್ನು ಸೂಕ್ಷ್ಮವಾಗಿ ಗಮನಿಸಿ.

TV9 Kannada


Leave a Reply

Your email address will not be published. Required fields are marked *