ಪ್ರಯಾಣಿಕರು ವಿಮಾನ ತಳ್ಳುತ್ತಿರುವ ದೃಶ್ಯ
ನೇಪಾಳದಲ್ಲಿ ರನ್‌ವೇಯಲ್ಲಿ ಡಿಢೀರ್ ಕೆಟ್ಟು ನಿಂತ ವಿಮಾನವನ್ನು ರನ್‌ವೇಯಿಂದ ದೂರ ತಳ್ಳಲು ಪ್ರಯಾಣಿಕರ ಗುಂಪೊಂದು ಹರಸಾಹಸ ಪಡುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral video) ಆಗಿದೆ. ನೇಪಾಳದ ವಿಮಾನ ನಿಲ್ದಾಣದಲ್ಲಿ (Airport) ನಡೆದಿರುವ ಈ ಘಟನೆ ಜನರಲ್ಲಿ ಅಚ್ಚರಿ ಮೂಡಿಸಿದೆ. ಟೈರ್ ಸ್ಟೋಟಗೊಂಡು ರನ್‌ವೇಯಲ್ಲಿ ತಾರಾ ವಿಮಾನ ನಿಂತಿತ್ತು. ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಾರಾ ಏರ್‌ಲೈನ್ಸ್‌ಗೆ ಸೇರಿದ ವಿಮಾನದ ಈ ವಿಡಿಯೋವನ್ನು ಸಾಮ್ರಾಟ್ ಎಂಬ ವ್ಯಕ್ತಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ಬಸ್ ಅಥವಾ ಲಾರಿಯನ್ನು ಈ ರೀತಿಯಾಗಿ ತಳ್ಳುವ ದೃಶ್ಯವನ್ನು ನಾವು ನೋಡಿದ್ದೇವೆ. ಆದರೆ ಈ ರೀತಿ ವಿಮಾನವನ್ನು ಪ್ರಯಾಣಿಕರು ಸೇರಿ ತಳ್ಳಿರುವುದು ಸಾಮಾನ್ಯರಲ್ಲಿ ಆಶ್ಚರ್ಯ ಸೃಷ್ಟಿಸಿದೆ. ಈ ವಿಡಿಯೋದ ಪ್ರಾರಂಭದಲ್ಲಿ ಪ್ರಯಾಣಿಕರು ವಿಮಾನವನ್ನು ನಿಂತ ಸ್ಥಳದಿಂದ ದೂರ ತಳ್ಳಲು ಪ್ರಯತ್ನಿಸುತ್ತಾರೆ. ರನ್‌ವೇಯಲ್ಲಿ ಇಂತಹ ಸನ್ನಿವೇಶವನ್ನು ನೋಡಿದರೆ ನಿಜಕ್ಕೂ ಅಚ್ಚರಿಯಾಗುವುದು ಸಾಮಾನ್ಯ.
ವಿಮಾನದ ಹಿಂಭಾಗದ ಟೈರ್ ರನ್‌ವೇಯಲ್ಲಿ ಸಿಡಿದಿದೆ. ಇದು ಪ್ರಯಾಣಿಕರನ್ನು ಕೆಳಗಿಳಿಸಲು ಮತ್ತು ಲ್ಯಾಂಡಿಂಗ್ ಸ್ಟ್ರಿಪ್‌ನಿಂದ ವಿಮಾನವನ್ನು ತಳ್ಳಲು ಪ್ರೇರೇಪಿಸಿದೆ ಎಂದರೆ ತಪ್ಪಾಗಲಾರದು. ನೇಪಾಳದ ಬಾಜುರಾ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
सायद हाम्राे नेपालमा मात्र होला ! pic.twitter.com/fu5AXTCSsw
— Samrat (@PLA_samrat) December 1, 2021
airplane;
ಸದ್ಯ ಈ ವಿಡಿಯೋಗೆ 50 ಸಾವಿರಕ್ಕೂ ಹೆಚ್ಚು ವ್ಯೂವ್ಸ್ ಬಂದಿದ್ದು, ಹೆಚ್ಚಿನವರು ಕಮೆಂಟ್ ಮೂಲಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲವರು ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಿದರೆ, ಇತರರು ವಿಮಾನವನ್ನು ಹಾರಿಸುವ ಮೊದಲು ಅಧಿಕಾರಿಗಳು ಹೇಗೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂಬ ಕುರಿತು ಕಮೆಂಟ್ ಮಾಡಿದ್ದಾರೆ.