Viral Video: ಡಾನ್ಸ್ ಮಾಡುತ್ತಿದ್ದಾಗ ನರ್ತಕರ ಮೇಲೆ ಕಳಚಿಬಿದ್ದ ದೈತ್ಯ ವಿಡಿಯೋ ಪರದೆ; ವೈರಲ್ ವಿಡಿಯೋ ಇಲ್ಲಿದೆ | Viral Video hong kong pop band mirror performance giant video screen fell on dancers while they were dancing


ಹಾಂಗ್ ಕಾಂಗ್ ಬಾಯ್‌ಬ್ಯಾಂಡ್ ಮಿರರ್ ಡಾನ್ಸ್ ತಂಡದ ಸದಸ್ಯರು ವೇದಿಕೆಯಲ್ಲಿ ಡಾನ್ಸ್ ಮಾಡುತ್ತಿದ್ದಾಗ ದೈತ್ಯ ವಿಡಿಯೋ ಪ್ಯಾನೆಲ್ ಕಳಚಿಬಿದ್ದ ಭಯಾನಕ ಘಟನೆಯೊಂದು ನಡೆದಿದೆ. ಗಾಯಗೊಂಡ ಓರ್ವನ ಸ್ಥಿತಿ ಗಂಭೀರವಾಗಿದ್ದು, ಮತ್ತೋರ್ವನ ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ.

ವೈರಲ್ ವಿಡಿಯೋ: ಹಾಂಗ್ ಕಾಂಗ್ ಪಾಪ್ ಬ್ಯಾಂಡ್ ಕಾರ್ಯಕ್ರಮದ ವೇಳೆ ನೃತ್ಯ ಮಾಡುತ್ತಿದ್ದ ನರ್ತಕರ ಮೇಲೆ ದೈತ್ಯ ವಿಡಿಯೋ ಪ್ಯಾನೆಲ್ ಕಳಚಿಬಿದ್ದ ಘಟನೆಯೊಂದು ನಡೆದಿದೆ. ಪ್ರಸಿದ್ಧ ಮಿರರ್‌ ಬಾಯ್‌ಬ್ಯಾಂಡ್‌ ಪ್ರದರ್ಶನ ನೀಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡಿದ್ದು, ಮತ್ತೋರ್ವನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಯಿಂದ ಭೀತಿಗೊಳಗಾದ ಪ್ರೇಕ್ಷಕರು ಕಿರುಚಾಡಿದ್ದು, ಉಳಿದ ಕಲಾವಿದರು ಸಹಾಯಕ್ಕೆ ದಾವಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗುತ್ತಿದೆ.

ವೈರಲ್ ವಿಡಿಯೋದಲ್ಲಿ ಕಾಣುವಂತೆ, 10ಕ್ಕೂ ಹೆಚ್ಚು ನರ್ತಕರಿರುವ ತಂಡವೊಂದು ವೇದಿಕೆಯಲ್ಲಿ ಡಾನ್ಸ್ ಮಾಡುತ್ತಿರುತ್ತದೆ. ಈ ವೇಳೆ  ವೇದಿಕೆ ಮೇಲೆ ಅಳವಿಡಿಸಿದ್ದ ವಿಡಿಯೋ ಪರದೆ ಇದ್ದಕ್ಕಿದ್ದಂತೆ ಕಳಚಿಬೀಳುತ್ತದೆ. ಹೀಗೆ ಬಿದ್ದ ಪರದೆ ಓರ್ವ ನರ್ತಕನ ಮೈಮೇಲೆಯೇ ಬೀಳುತ್ತದೆ. ಈ ದೃಶ್ಯಾವಳಿಯನ್ನು ನೋಡಿದಾಗ ಮೈ ಜುಮ್ ಎನ್ನುತ್ತದೆ. ಇನ್ನು ಪ್ರತ್ಯಕ್ಷವಾಗಿ ನೋಡಿದವರಿಗೆ ಹೇಗಾಗಿರಬಹುದು? ಪರದೆ ಮೈಮೇಲೆ ಬೀಳುತ್ತಿದ್ದಂತೆ ಪ್ರೇಕ್ಷಕರು ಭಯದಿಂದ ಜೋರಾಗಿ ಕಿರುಚಾಡುವುದನ್ನು ವಿಡಿಯೋದಲ್ಲಿ ಕೇಳಿಸಬಹುದು.

ಘಟನೆಯಲ್ಲಿ ಒಟ್ಟು ಇಬ್ಬರು ನರ್ತಕರು ಗಾಯಗೊಂಡಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಪೊಲೀಸರು, ಕ್ವೀನ್ ಎಲಿಜಬೆತ್ ಆಸ್ಪತ್ರೆಗೆ ಕಳುಹಿಸಿದಾಗ ನರ್ತಕರು ಪ್ರಜ್ಞೆ ಹೊಂದಿದ್ದರು ಎಂದು ಹೇಳಿದ್ದಾರೆ. ನರ್ತಕರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದ್ದು, ಮತ್ತೊಬ್ಬರ ಆರೋಗ್ಯ ಸ್ಥಿರವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಘಟನೆಗೆ ವಿಷಾದ ವ್ಯಕ್ತಪಡಿಸಿದ ಹಾಂಗ್ ಕಾಂಗ್ ಮುಖ್ಯ ಕಾರ್ಯನಿರ್ವಾಹಕ ಜಾನ್ ಲೀ, ಗಾಯಾಳುಗಳಿಗೆ ಸಾಂತ್ವನ ಹೇಳಿದ್ದಾರೆ. ಡಾನ್ಸರ್‌ಗಳು, ವೇದಿಕೆಯ ಮೇಲಿನ ಸಿಬ್ಬಂದಿ ಹಾಗೂ ಸಾವರ್ಜನಿಕರ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನ ನೀಡುವಂತೆ ಸ್ಥಳೀಯ ಆಡಳಿತಕ್ಕೆ ತಿಳಿಸಿದ್ದಾರೆ. ಅಲ್ಲದೆ ಘಟನೆ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.

ಕೌಲೂನ್‌ನಲ್ಲಿರುವ ಹಾಂಗ್ ಕಾಂಗ್ ಕೊಲಿಜಿಯಂನಲ್ಲಿ ನಡೆದ ಸಂಗೀತ ಕಾರ್ಯಕ್ರಮವನ್ನು ಪಿಸಿಸಿಡಬ್ಲ್ಯೂ ಲಿಮಿಟೆಡ್‌ನಿಂದ ನಿಯಂತ್ರಿಸಲ್ಪಡುವ ಮೇಕರ್‌ವಿಲ್ಲೆ ಆಯೋಜಿಸಿದೆ. ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ ಪಿಸಿಸಿಡಬ್ಲ್ಯೂ, ಗಾಯಾಳುಗಳು ಮತ್ತು ಅವರ ಕುಟುಂಬಗಳಿಗೆ ಸಾಂತ್ವನ  ಸೂಚಿಸಿದೆ. ಕಂಪನಿಯು ಗಾಯಾಳುಗಳಿಗೆ ವೈದ್ಯಕೀಯ ವೆಚ್ಚವನ್ನು ಭರಿಸಲಿದೆ ಎಂದು ಕಂಪನಿಯ ಪ್ರತಿನಿಧಿ ಹೇಳಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *