ಪ್ರವಾಸಿಗರ ಗುಂಪೊಂದು ಸಮುದ್ರದ ಮಧ್ಯದಲ್ಲಿ ಪುಟ್ಟ ಹಕ್ಕಿಯೊಂದಿಗೆ ಸ್ನೇಹ ಬೆಳೆಸಿ ಅದರೊಂದಿಗೆ ಸಮಯ ಕಳೆಯುವ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹರಿಬಿಡಲಾಗಿದ್ದು, ಈ ನಿಷ್ಕಲ್ಮಶ ಸ್ನೇಹಕ್ಕೆ ನೆಟ್ಟಿಗರು ಮನಸೋತಿದ್ದಾರೆ.

ವೈರಲ್ ವೀಡಿಯೊ
ಸ್ನೇಹಕ್ಕೆ ಯಾವುದೇ ಗಡಿ ಇಲ್ಲ. ಮನುಷ್ಯ ಮನುಷ್ಯರೊಂದಿಗೆ ಸ್ನೇಹ ಮಾಡುವುದು ಮಾತ್ರವಲ್ಲದೆ ಪ್ರಾಣಿಗಳ ಜೊತೆಗೂ ಸ್ನೇಹ ಮಾಡಿಕೊಳ್ಳುತ್ತಾರೆ. ಆ ಮುಗ್ಧ ಜೀವಿಗಳ ಸ್ನೇಹ ಪವಿತ್ರವಾದದ್ದು. ಅವುಗಳು ಯಾವುದೇ ಸ್ವಾರ್ಥ ಭಾವನೆಯಿಲ್ಲದೆ ಮನುಷ್ಯರ ಜೊತೆಗೆ ಸ್ನೇಹ ಮಾಡಿಕೊಳ್ಳುತ್ತವೆ. ನಾಯಿ, ಬೆಕ್ಕು ಇತರ ಪ್ರಾಣಿಗಳು ಮನುಷ್ಯರ ಜೊತೆಗೆ ಸ್ನೇಹ ಮಾಡಿಕೊಳ್ಳುವುದನ್ನು ಸಾಮಾನ್ಯವಾಗಿ ನಾವೆಲ್ಲರೂ ನೋಡಿರುತ್ತೇವೆ. ಆದರೆ ಪಕ್ಷಿಗಳು ಮನುಷ್ಯರ ಜೊತೆಗೆ ಸ್ನೇಹ ಮಾಡಿಕೊಳ್ಳುವುದನ್ನು ನೀವು ಎಂದಾದರೂ ನೋಡಿದ್ದೀರಾ? ಹೆಚ್ಚಾಗಿ ಪಕ್ಷಿಗಳು ಮನುಷ್ಯರನ್ನು ಕಂಡರೆ ಹಾರಿ ಹೋಗುತ್ತವೆ. ಆದರೆ ಇಲ್ಲೊಂದು ಪುಟ್ಟ ‘ವಾರ್ಬ್ಲರ್’ ಹಕ್ಕಿಯೊಂದು ಮನುಷ್ಯರ ಜೊತೆಗೆ ಸ್ನೇಹ ಮಾಡಿಕೊಳ್ಳುವ ಅದ್ಭುತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದೆ.
ಈ ವೀಡಿಯೋವನ್ನು ಡೊಮೆನಿಕ್ ಬಿಯಾಗಿನಿ (@dolphindronedom) ಎನ್ನುವವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಾಗೂ ಸಮುದ್ರದ ಮಧ್ಯದಲ್ಲಿ ನಾವು 50 ಮೈಲಿಗಳಷ್ಟು ದೂರದಲ್ಲಿ ಪುಟ್ಟ ಸ್ನೇಹಿತನನ್ನು ಮಾಡಿಕೊಂಡ ಕಥೆ ಇಲ್ಲಿದೆ ಎಂದು ಬರೆದುಕೊಂಡಿದ್ದಾರೆ. ಒಂದಿಷ್ಟು ಪ್ರವಾಸಿಗರು ಸಮುದ್ರದ ಮಧ್ಯದಲ್ಲಿ ದೋಣಿಯಲ್ಲಿ ವಿಹರಿಸುತ್ತಿರುತ್ತಾರೆ. ಗಾಳಿಯ ರಭಸಕ್ಕೆ ಅಲ್ಲಿಗೆ ಬಂದ ಪುಟ್ಟ ವಲಸೆ ಹಕ್ಕಿಯೊಂದು ಪ್ರವಾಸಿಗರ ಹೆಗಲ ಮೇಲೆ, ತಲೆಯ ಮೇಲೆ ಕುಳಿತುಕೊಳ್ಳುತ್ತಾ ಅವರ ಜೊತೆ ಸ್ನೇಹ ಬೆಳೆಸಿಕೊಳ್ಳುತ್ತದೆ. ಹಕ್ಕಿಯ ಸ್ನೇಹಪರತೆಯನ್ನು ಕಂಡು ಅವರೆಲ್ಲರಿಗೂ ಸಂತೋಷವಾಗುತ್ತದೆ. ಆ ಹಕ್ಕಿಯನ್ನು ಸುರಕ್ಷಿತ ಸ್ಥಳದಲ್ಲಿ ಬಿಡಬೇಕು ಎನ್ನುವ ಉದ್ದೇಶದಿಂದ ಪ್ರವಾಸಿಗರ ಗುಂಪಿನಲ್ಲಿದ ಮಹಿಳೆಯೊಬ್ಬರು ಆ ಹಕ್ಕಿಯನ್ನು ಟೋಪಿಯಲ್ಲಿ ಜೋಪಾನವಾಗಿ ಇಟ್ಟುಕೊಂಡು, ದೋಣಿಯಿಂದ ಇಳಿದು, ನಂತರ ಮರಗಿಡಗಳಿರುವ ಪ್ರದೇಶಕ್ಕೆ ಹೋಗಿ, ಅಲ್ಲಿದ್ದ ಒಂದು ಗಿಡದ ಮೇಲೆ ಹಕ್ಕಿಯನ್ನು ಕೂರಿಸಲು ಪ್ರಯತ್ನಪಡುತ್ತಾರೆ. ಆದರೆ ಮೊದಮೊದಲು ಆ ಹಕ್ಕಿ ಅವರ ಕೈಯಿಂದ ಇಳಿಯಲು ಒಲ್ಲೆ ಎಂದಿತು. ನಂತರ ಹೇಗಾದರೂ ಗಿಡದ ಮೇಲೆ ಕುಳಿತುಕೊಳ್ಳುತ್ತದೆ, ಆ ಮಹಿಳೆ ಅಲ್ಲಿಂದ ಹೋಗುವಾಗ ಅವರನ್ನೇ ಇಣುಕಿ ನೋಡುವ ಸುಂದರ ದೃಶ್ಯವನ್ನು ಈ ವೀಡಿಯೋದಲ್ಲಿ ಕಾಣಬಹುದು.