Viral Video: ಮನೆ ಎದುರು ಲಾಲೂಪ್ರಸಾದ್ ಯಾದವ್ ಪಾದ ತೊಳೆದ ಮಗ ತೇಜ್ ಪ್ರತಾಪ್ | Tej Pratap Yadav Washing his Father RJD Leader Lalu Prasad Yadav Feet Video Viral After Day Of High Drama

Viral Video: ಮನೆ ಎದುರು ಲಾಲೂಪ್ರಸಾದ್ ಯಾದವ್ ಪಾದ ತೊಳೆದ ಮಗ ತೇಜ್ ಪ್ರತಾಪ್

ಅಪ್ಪ ಲಾಲೂಪ್ರಸಾದ್ ಯಾದವ್ ಕಾಲನ್ನು ತೊಳೆದ ತೇಜ್ ಪ್ರತಾಪ್

ಪಾಟ್ನಾ: ಮೇವು ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರೂವರೆ ವರ್ಷಗಳ ಹಿಂದೆ ಜೈಲು ಶಿಕ್ಷೆಗೊಳಗಾಗಿದ್ದ ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಆರ್​ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಭಾನುವಾರ ತಮ್ಮ ಮನೆಗೆ ವಾಪಾಸ್ ಬಂದಿದ್ದಾರೆ. ಲಾಲೂ ಪ್ರಸಾದ್ ಯಾದವ್ ತಮ್ಮ ಹೆಂಡತಿ ವಾಸವಿದ್ದ ಮನೆಗೆ ತೆರಳುತ್ತಿದ್ದರು. ಆದರೆ, ತನ್ನನ್ನು ಅಮ್ಮನ ಮನೆಯೊಳಗೆ ಹೋಗಲು ಬಿಡುತ್ತಿಲ್ಲ ಎಂದು ಭಾನುವಾರ ರಾತ್ರಿ ಒಂದೂವರೆ ಗಂಟೆಗಳ ಕಾಲ ಮನೆ ಮುಂದೆ ಧರಣಿ ಕುಳಿತ ತೇಜ್ ಪ್ರತಾಪ್ ಯಾದವ್ ನನ್ನ ತಂದೆ ಲಾಲೂಪ್ರಸಾದ್ ಎರಡು ನಿಮಿಷಗಳವರೆಗಾದರೂ ನಮ್ಮ ಮನೆಗೆ ಬಂದು ಆಶೀರ್ವಾದ ಮಾಡಿದ್ದರೆ ಚೆನ್ನಾಗಿರುತ್ತಿತ್ತು. ಆದರೆ, ಅವರು ಅಮ್ಮನ ಮನೆಗೆ ಹೋಗುತ್ತಿರುವುದರಿಂದ ಅವರ ಜೊತೆ ಸಮಯ ಕಳೆಯಲು ಹೋಗಿದ್ದೆ. ಅದಕ್ಕೂ ಅವಕಾಶ ಕೊಡಲಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಅಷ್ಟರಲ್ಲಿ ಲಾಲೂಪ್ರಸಾದ್ ಯಾದವ್ ಹಾಗೂ ರಾಬ್ರಿ ದೇವಿ ಕಾರಿನಲ್ಲಿ ತೇಜ್ ಪ್ರತಾಪ್ ಯಾದವ್ ಅವರ ಮನೆಗೆ ಬಂದಿದ್ದರಿಂದ ತಣ್ಣಗಾದ ತೇಜ್ ಪ್ರತಾಪ್ ಯಾದವ್ ಕಾರಿನಿಂದ ಇಳಿಯುತ್ತಿದ್ದ ಅಪ್ಪನ ಪಾದ ತೊಳೆದು, ನಮಸ್ಕಾರ ಮಾಡಿ ಹೈಡ್ರಾಮಾಕ್ಕೆ ಕಾರಣರಾದರು.

ಆದರೆ, ಕಾರಿನಿಂದ ಕೆಳಗೆ ಇಳಿಯದ ಲಾಲೂಪ್ರಸಾದ್ ಯಾದವ್ ತಮ್ಮ ಹೆಂಡತಿಯೊಂದಿಗೆ ತಮ್ಮ ಮನೆಗೆ ಹೋದರು. ಲಾಲೂಪ್ರಸಾದ್ ಯಾದವ್ ಅವರ ಮಕ್ಕಳಾದ ತೇಜ್ ಪ್ರತಾಪ್ ಯಾದವ್ ಹಾಗೂ ತೇಜಸ್ವಿ ಯಾದವ್ ಅವರ ನಡುವೆ ಆರ್​ಜೆಡಿ (ರಾಷ್ಟ್ರೀಯ ಜನತಾದಳ) ಉತ್ತರಾಧಿಕಾರಿ ಸ್ಥಾನಕ್ಕಾಗಿ ರೇಸ್ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ತೇಜ್ ಪ್ರತಾಪ್ ಯಾದವ್ ತನ್ನ ತಂದೆ ಲಾಲೂ ಪ್ರಸಾದ್ ಯಾದವ್ ಅವರ ಪಾದಗಳನ್ನು ತೊಳೆದು, ತನ್ನ ಹೆಗಲ ಮೇಲಿದ್ದ ಟವೆಲ್​ನಲ್ಲಿ ಕಾಲುಗಳನ್ನು ಒರೆಸಿ ಎಲ್ಲರ ಗಮನ ಸೆಳೆಯಲು ಪ್ರಯತ್ನಿಸಿದರು. ಇದು ಲಾಲೂ ಪ್ರಸಾದ್ ಯಾದವ್ ಅವರಿಗೂ ಕೊಂಚ ಮುಜುಗರ ಉಂಟುಮಾಡಿತು.

ಆರ್‌ಜೆಡಿ ಮುಖ್ಯಸ್ಥ ಲಾಲೂಪ್ರಸಾದ್ ಯಾದವ್ ತಮ್ಮ ಹಿರಿಯ ಮಗನ ರಾಜಕೀಯ ಸಾಮರ್ಥ್ಯದ ಬಗ್ಗೆ ನಿರಾಶೆಗೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿಯೇ ಅವರು ತೇಜ್ ಪ್ರತಾಪ್ ಮನೆ ಬಾಗಿಲಿಗೆ ಬಂದರೂ ಮನೆಯೊಳಗೆ ಹೋಗಲಿಲ್ಲ. ತೇಜ್ ಪ್ರತಾಪ್ ತಮ್ಮ ಮನೆ ಎದುರು ಧರಣಿ ನಡೆಸುತ್ತಿದ್ದಾರೆಂದು ಗೊತ್ತಾಗಿದ್ದರಿಂದ ಅವರು ಅಲ್ಲಿಗೆ ಬಂದು ಹೋದರು ಎನ್ನಲಾಗಿದೆ.

ಲಾಲೂಪ್ರಸಾದ್ ಯಾದವ್ ಅವರನ್ನು ಸ್ವಾಗತಿಸುವ ಪೋಸ್ಟರ್​ಗಳಲ್ಲಿ ತನ್ನ ಫೋಟೋ ಇಲ್ಲದಿದ್ದುದನ್ನು ಕಂಡು ಕೋಪಗೊಂಡ ತೇಜ್ ಪ್ರತಾಪ್ ಯಾದವ್, “ಇನ್ನು ಮುಂದೆ ನನಗೂ ಆರ್‌ಜೆಡಿಯೊಂದಿಗೆ ಯಾವುದೇ ಸಂಬಂಧವಿಲ್ಲ. ಆದರೆ, ನಾನು ನಿಷ್ಠಾವಂತ ಮಗ ಎಂಬುದರಲ್ಲಿ ಅನುಮಾನವಿಲ್ಲ” ಎಂದು ಹೇಳಿದ್ದರು.

ಲಾಲೂ ಪ್ರಸಾದ್ ಯಾದವ್ ತನ್ನ ಮನೆಗೆ ಬರಲಿದ್ದಾರೆ ಎಂದು ಗೊತ್ತಾದ ಕೂಡಲೇ ಮನೆಯ ಎದುರು ಗೇಟ್​ ಬಳಿಯ ಜಾಗವನ್ನು ತಾನೇ ಪೊರಕೆಯಿಂದ ಗುಡಿಸಿದ ತೇಜ್ ಪ್ರತಾಪ್ ಯಾದವ್ ಎಲ್ಲರ ಗಮನವನ್ನು ತನ್ನತ್ತ ತಿರುಗಿಸಿಕೊಂಡರು. ಬಳಿಕ ಲಾಲೂಪ್ರಸಾದ್ ಅವರಿದ್ದ ಕಾರು ಮನೆಯೆದುರು ಬಂದ ನಂತರ ತೇಜ್ ಪ್ರತಾಪ್ ಮೊದಲು ಹಾಲಿನಲ್ಲಿ ಅಪ್ಪನ ಪಾದಗಳನ್ನು ತೊಳೆಯಲು ಪ್ರಯತ್ನಿಸಿದರು. ಆದರೆ ತಾಯಿ ರಾಬ್ರಿ ದೇವಿ ಹಾಗೆ ಮಾಡದಂತೆ ಸನ್ನೆ ಮಾಡಿದ ಮೇಲೆ ನೀರಿನಿಂದ ತನ್ನ ತಂದೆಯ ಪಾದಗಳನ್ನು ತೊಳೆದು, ಟವೆಲ್​ನಿಂದ ಒರೆಸಿ, ನಮಸ್ಕಾರ ಮಾಡಿದರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ತೇಜ್ ಪ್ರತಾಪ್, ನನ್ನ ತಂದೆ ನನಗೆ ದೇವರು. ಎರಡು ನಿಮಿಷವಾದರೂ ನನ್ನ ತಂದೆ ಇಲ್ಲಿಗೆ ಬರಬೇಕು ಎಂಬುದು ನನ್ನ ಬೇಡಿಕೆಯಾಗಿತ್ತು, ನಾನು ಈಗ ಅರ್ಧ ಯುದ್ಧದಲ್ಲಿ ಗೆದ್ದಿದ್ದೇನೆ. ನನಗೆ ಕುಟುಂಬ ಮತ್ತು ಜನರು ಮುಖ್ಯ. ಯಾರು ಏನು ಹೇಳುತ್ತಾರೆಂದು ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ತಂದೆ ಇಲ್ಲಿಗೆ ಬರಬಾರದೆಂದು ಹುನ್ನಾರ ಮಾಡಿದವರಿಗೆ ಇದರಿಂದ ಕಪಾಳಮೋಕ್ಷವಾದಂತಾಗಿದೆ ” ಎಂದು ಹೇಳಿದ್ದಾರೆ.

4 ಮೇವು ಹಗರಣ ಪ್ರಕರಣಗಳಲ್ಲಿ ಜಾಮೀನು ಪಡೆದಿರುವ ಲಾಲೂ ಪ್ರಸಾದ್ ಯಾದವ್ ಈ ವರ್ಷದ ಆರಂಭದಲ್ಲಿ ಜೈಲಿನಿಂದ ಬಿಡುಗಡೆಯಾದ ನಂತರ ಮಗಳು ಮತ್ತು ಸಂಸದೆ ಮಿಸಾ ಭಾರ್ತಿ ಅವರ ದೆಹಲಿ ನಿವಾಸದಲ್ಲಿದ್ದರು. ಬಿಹಾರದ ಎರಡು ಕ್ಷೇತ್ರಗಳಿಗೆ ಅಕ್ಟೋಬರ್ 30ರಂದು ಉಪಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅವರು ತಮ್ಮ ಸ್ವಗೃಹಕ್ಕೆ ವಾಪಾಸ್ ಬಂದಿರುವುದು ಚರ್ಚೆಗೆ ಕಾರಣವಾಗಿದೆ.

2017ರ ಡಿಸೆಂಬರ್‌ನಿಂದ ಜೈಲಿನಲ್ಲಿದ್ದ 72 ವರ್ಷದ ಲಾಲೂ ಯಾದವ್ ಜಾರ್ಖಂಡ್‌ನ ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಸ್ಪತ್ರೆಯಲ್ಲಿಯೇ ಹೆಚ್ಚಿನ ಜೈಲು ಶಿಕ್ಷೆಯನ್ನು ಅನುಭವಿಸಿದ್ದರು. ಅವರ ಆರೋಗ್ಯ ಹದಗೆಟ್ಟ ನಂತರ ಅವರನ್ನು ಜನವರಿಯಲ್ಲಿ ದೆಹಲಿಗೆ ಸ್ಥಳಾಂತರಿಸಲಾಗಿತ್ತು. 2 ದಶಕಗಳ ಅವಧಿಯಲ್ಲಿ ಮೇವು ಖರೀದಿಯಲ್ಲಿ ಸುಮಾರು 900 ಕೋಟಿ ರೂ. ಹಗರಣ ನಡೆದಿದೆಯೆಂದು ಆರೋಪವಿದೆ. 1990-96 ಅವಧಿಯಲ್ಲಿ ಈ ಹಗರಣ ನಡೆದಿದ್ದು ಬಿಹಾರದಲ್ಲಿ ಪಶುಗಳಿಗೆ ಮೇವು ಹಾಗೂ ಔಷಧಿ ಪೂರೈಸೋದಾಗಿ ಚಾಯ್ಬಾಸ ಜಿಲ್ಲೆಯ ಸರ್ಕಾರೀ ಖಜಾನೆಯಿಂದ ನೂರಾರು ಕೋಟಿ ರೂಪಾಯಿಗಳನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಆದರೆ ಬಿಡುಗಡೆಯಾದ ಅನುದಾನದ ಹಣವನ್ನು ಮೂಲ ಉದ್ದೇಶಕ್ಕೆ ಬಳಸದೆ ಲಾಲು ಪ್ರಸಾದ್‌ ಯಾದವ್‌ ಸೇರಿದಂತೆ ಹಲವು ಸರ್ಕಾರದ ಪ್ರಭಾವಿಗಳು ನುಂಗಿ ಹಾಕಿದ್ದರು ಎಂಬ ಆರೋಪದಲ್ಲಿ ಲಾಲೂಪ್ರಸಾದ್ ಯಾದವ್ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು.

ಇದನ್ನೂ ಓದಿ: ಬಹುಕೋಟಿ ಮೇವು ಹಗರಣದಲ್ಲಿ ಲಾಲೂ ಪ್ರಸಾದ್ ಯಾದವ್​ಗೆ ಬಿಗ್ ರಿಲೀಫ್​; ಹೈಕೋರ್ಟ್​ನಿಂದ ಜಾಮೀನು, ಜೈಲುವಾಸ ಅಂತ್ಯ

ಮೂರು ವರ್ಷಗಳ ನಂತರ ಪಾಟ್ನಾಕ್ಕೆ ಮರಳಿದ ಲಾಲು ಪ್ರಸಾದ್ ಯಾದವ್

 

TV9 Kannada

Leave a comment

Your email address will not be published. Required fields are marked *