Virat Kohli: ಔಟಾ ಅಥವಾ ನಾಟೌಟಾ? ಹೊಸ ಚರ್ಚೆಗೆ ಕಾರಣವಾದ ವಿರಾಟ್ ಕೊಹ್ಲಿಯ ಔಟ್..! | IPL 2022: Virat Kohli walks off in rage after given out lbw against Mumbai Indians


Virat Kohli: ಔಟಾ ಅಥವಾ ನಾಟೌಟಾ? ಹೊಸ ಚರ್ಚೆಗೆ ಕಾರಣವಾದ ವಿರಾಟ್ ಕೊಹ್ಲಿಯ ಔಟ್..!

Virat Kohli

ಶನಿವಾರ ಮುಂಬೈ ಇಂಡಿಯನ್ಸ್ ವಿರುದ್ಧ RCB ಏಳು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಆದರೆ ಈ ಗೆಲುವಿನ ಬೆನ್ನಲ್ಲೇ ಇದೀಗ ಹೊಸ ಚರ್ಚೆಯೊಂದು ಶುರುವಾಗಿದೆ. ಏಕೆಂದರೆ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿಯನ್ನು ಔಟ್ ನೀಡಿದ ಅಂಪೈರ್ ತೀರ್ಪಿನ ಬಗ್ಗೆ ಪ್ರಶ್ನೆಗಳೆದ್ದಿದೆ. ಪಂದ್ಯದ 19ನೇ ಓವರ್​ ವೇಳೆ ವಿರಾಟ್ ಕೊಹ್ಲಿ 35 ಎಸೆತಗಳಲ್ಲಿ 48 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದರು. ಇನ್ನೇನು ಪಂದ್ಯ ಮುಗಿಯಲು 8 ರನ್​ಗಳ ಅವಶ್ಯಕತೆಯಿದ್ದಾಗ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಚೆಂಡನ್ನು ಯುವ ಸ್ಪಿನ್ನರ್ ಡೆವಾಲ್ಡ್ ಬ್ರೆವಿಸ್ ಕೈಗೆ ನೀಡಿದ್ದರು. ಮೊದಲ ಎಸೆತದಲ್ಲೇ ಕೊಹ್ಲಿಯನ್ನು ಎಲ್​ಬಿ ಬಲೆಗೆ ಬೀಳಿಸಿದ ಬ್ರೆವಿಸ್ ಬಲವಾದ ಮನವಿ ಮಾಡಿದ್ದರು.

ಇತ್ತ ಆನ್‌ಫೀಲ್ಡ್ ಅಂಪೈರ್ ಕೆಎನ್ ಅನಂತಪದ್ಮನಾಭನ್ ನೇರವಾಗಿ ಔಟ್ ಎಂದು ತೀರ್ಪು ನೀಡಿದ್ದರು. ತಕ್ಷಣವೇ ವಿರಾಟ್ ಕೊಹ್ಲಿ ರಿವ್ಯೂ ತೆಗೆದುಕೊಂಡರು. 3ನೇ ಅಂಪೈರ್ ಪರಿಶೀಲನೆ ವೇಳೆ ಚೆಂಡು ಬ್ಯಾಟ್‌ನ ಅಂಚು ಮತ್ತು ಪ್ಯಾಡ್‌ಗೆ ಹತ್ತಿರವಾಗಿತ್ತು. ಟಿವಿ ಅಂಪೈರ್ ಉಲ್ಲಾಸ್ ಗಂಧೆ ಅವರು ಚೆಂಡು ಬ್ಯಾಟ್ ಮತ್ತು ಪ್ಯಾಡ್‌ಗೆ ಒಂದೇ ಸಮಯದಲ್ಲಿ ತಗುಲುತ್ತಿರುವುದು ಕಂಡುಕೊಂಡಿದ್ದಾರೆ. ಇತ್ತ ಔಟ್ ಎಂದು, ಅತ್ತ ನಾಟೌಟ್ ಎಂದು ತೀರ್ಪು ನೀಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ 3ನೇ ಅಂಪೈರ್ ಇದ್ದರು.

ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ಸಾಫ್ಟ್ ಡಿಸೀಷನ್ ಮೊರೆ ಹೋಗಲಾಗುತ್ತದೆ. ಅಂದರೆ ಫೀಲ್ಡ್ ಅಂಪೈರ್ ನೀಡಿದ ತೀರ್ಪನ್ನು ಎತ್ತಿ ಹಿಡಿಯಲಾಗುತ್ತದೆ. ಹೀಗಾಗಿ ಗೊಂದಲಕ್ಕೀಡಾಗಿದ್ದ ವಿರಾಟ್ ಕೊಹ್ಲಿಯ ಎಲ್​ಬಿಡಬ್ಲ್ಯೂ ಅನ್ನು ಮೂರನೇ ಅಂಪೈರ್ ಫೀಲ್ಡ್​ ಅಂಪೈರ್​ಗೆ ತಮ್ಮ ತೀರ್ಪನ್ನು ಮುಂದುವರೆಸುವಂತೆ ಔಟ್ ನೀಡಲು ತಿಳಿಸಿದ್ದಾರೆ.

ಕ್ರಿಕೆಟ್​ ನಿಯಮದ ಪ್ರಕಾರ “ಪಾಯಿಂಟ್ 36.1.3 ಅನ್ನು ನಿರ್ಣಯಿಸುವಲ್ಲಿ, ಚೆಂಡು ಸ್ಟ್ರೈಕರ್ ವ್ಯಕ್ತಿಯ ಪ್ಯಾಡ್ ಹಾಗೂ ಬ್ಯಾಟ್​ಗೆ ಏಕಕಾಲದಲ್ಲಿ ತಾಗಿದರೆ, ಇದನ್ನು ಮೊದಲು ಬ್ಯಾಟ್ ಅನ್ನು ಮುಟ್ಟಿದ ಚೆಂಡು ಎಂದು ಪರಿಗಣಿಸಲಾಗುತ್ತದೆ”. ಹೀಗಾಗಿ ವಿರಾಟ್ ಕೊಹ್ಲಿಯನ್ನು ಔಟ್ ಎಂದು ತೀರ್ಪು ನೀಡಲಾಗಿದೆ.

ಇತ್ತ ಅಂಪೈರ್ ಔಟ್ ಎಂದು ತೀರ್ಪು ನೀಡುತ್ತಿದ್ದಂತೆ ಕಿಂಗ್ ಕೊಹ್ಲಿ ಆಕ್ರೋಶಗೊಂಡಿದ್ದಾರೆ. ಮೈದಾನದಿಂದ ಹೊರನಡೆಯುವ ವೇಳೆ ಬ್ಯಾಟ್ ಬೀಸುತ್ತಾ ವಿರಾಟ್ ಕೊಹ್ಲಿ ಅಂಪೈರ್ ತೀರ್ಪಿನ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ.

ಇದೀಗ ವಿರಾಟ್ ಕೊಹ್ಲಿಯ ಈ ಆಕ್ರೋಶಭರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಷ್ಟೇ ಅಲ್ಲದೆ ಫೀಲ್ಡ್ ಅಂಪೈರ್ ನೀಡಿದ ತೀರ್ಪಿನ ಬಗ್ಗೆ ವಿರಾಟ್ ಕೊಹ್ಲಿ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಮೊದಲ ವಿಕೆಟ್​​ಗೆ ಅರ್ಧಶತಕದ ಜೊತೆಯಾಟ ಆಡಿದರು. ಇಶಾನ್ ಕಿಶನ್ ಮತ್ತು ರೋಹಿತ್ ಶರ್ಮಾ ತಲಾ 26 ರನ್ ಗಳಿಸಿ ಔಟಾದರು. ನಂತರ ಬಂದ ಸ್ಟಾರ್ ಬ್ಯಾಟರ್​ಗಳೆಲ್ಲ ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿಕೊಂಡರು. ಆದರೆ, ಏಳನೇ ವಿಕೆಟ್‌ಗೆ ಸೂರ್ಯಕುಮಾರ್ ಯಾದವ್ (68*) ಜತೆ ಕೈಜೋಡಿಸಿದ ಜಯದೇವ್ ಉನಾದ್ಕಟ್ ಸಮಯೋಚಿತ ಆಟವಾಡಿ ಬೆಂಬಲವನ್ನು ನೀಡಿದರು. ಪರಿಣಾಮ ಮುಂಬೈ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 151 ರನ್ ಕಲೆಹಾಕಿತು.

ಗೆಲ್ಲಲು ಸಾಧಾರಣ ಸವಾಲು ಪಡೆದ ಆರ್‌ಸಿಬಿ ತಂಡವು ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ನಾಯಕ ಫಾ ಡುಪ್ಲೆಸಿಸ್‌ (16) ಮತ್ತು ಅನುಜ್‌ ರಾವತ್‌ ಮೊದಲ ವಿಕೆಟಿಗೆ 8.1 ಓವರ್‌ಗಳಲ್ಲಿ 50 ರನ್‌ ಪೇರಿಸಿದರು. ನಂತರ ವಿರಾಟ್ ಕೊಹ್ಲಿ (48)-ರಾವತ್ (66) ಭರ್ಜರಿ ಆಟವಾಡಿದರು. ಇದರಿಂದ ರಾಯಲ್ ಚಾಲೆಂಜರ್ಸ್​ ಬೆಂಗಳೂರು 18.3 ಓವರ್​ನಲ್ಲೇ 152 ರನ್ ಬಾರಿಸಿ ಜಯ ಸಾಧಿಸಿತು.

TV9 Kannada


Leave a Reply

Your email address will not be published. Required fields are marked *