Virat Kohli: ಕಳಪೆ ಫಾರ್ಮ್​ನಲ್ಲಿರುವ ಕೊಹ್ಲಿಗೆ ಬಿಸಿಸಿಐನಿಂದಲೂ ಬರೆ! ಟಿ20 ತಂಡಕ್ಕೆ ವಿರಾಟ್ ಆಯ್ಕೆ ಅನುಮಾನ? | IPL 2022 virat kohli bad form big concern for team india selectors bcci


Virat Kohli: ಕಳಪೆ ಫಾರ್ಮ್​ನಲ್ಲಿರುವ ಕೊಹ್ಲಿಗೆ ಬಿಸಿಸಿಐನಿಂದಲೂ ಬರೆ! ಟಿ20 ತಂಡಕ್ಕೆ ವಿರಾಟ್ ಆಯ್ಕೆ ಅನುಮಾನ?

ಕೊಹ್ಲಿ

ವಿರಾಟ್ ಕೊಹ್ಲಿ (Virat Kohli) ತಮ್ಮ 71ನೇ ಅಂತರಾಷ್ಟ್ರೀಯ ಶತಕವನ್ನು ಯಾವಾಗ ಬಾರಿಸುತ್ತಾರೆ ಎಂಬ ಪ್ರಶ್ನೆ ಈ ಹಿಂದೆ ಪ್ರತಿಯೊಬ್ಬ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನಸ್ಸಿನಲ್ಲಿತ್ತು. ಆದರೆ ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ಪ್ರಾರಂಭವಾದ ತಕ್ಷಣ, ಈ ದಿಗ್ಗಜ ಆಟಗಾರ ಯಾವಾಗ ಸ್ಕೋರ್ ಮಾಡುತ್ತಾರೆ ಎಂದು ಎಲ್ಲರೂ ಕಾಯುತ್ತಿದ್ದಾರೆ. ವರ್ಷಗಳ ಕಾಲ ಐಪಿಎಲ್ ಅನ್ನು ಆಳಿದ ವಿರಾಟ್ ಕೊಹ್ಲಿ ಇಂದು ರನ್​ಗಾಗಿ ಹಾತೊರೆಯುತ್ತಿದ್ದಾರೆ. ಕಳೆದ ಐದು ಪಂದ್ಯಗಳ ಬಗ್ಗೆ ಮಾತನಾಡುವುದಾದರೆ, ವಿರಾಟ್ ಕೊಹ್ಲಿ ಕೇವಲ 21 ರನ್ ಗಳಿಸಿದ್ದಾರೆ, ಇದರಲ್ಲಿ 2 ಸೊನ್ನೆಗಳು ಸೇರಿವೆ. ವಿರಾಟ್ ಕೊಹ್ಲಿಯ ಕಳಪೆ ಫಾರ್ಮ್ ನಂತರ ಬಿಸಿಸಿಐ (BCCI) ಕೂಡ ಆತಂಕಕ್ಕೆ ಒಳಗಾಗಿದೆ. ಕಳಪೆ ಫಾರ್ಮ್‌ನಿಂದ ಬಳಲುತ್ತಿರುವ ವಿರಾಟ್ ಕೊಹ್ಲಿಯನ್ನು ಭಾರತ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆಯೇ ಎಂಬ ಪ್ರಶ್ನೆ ಈಗ ಎಲ್ಲರಲ್ಲೂ ಮೂಡಿದೆ.

ಇನ್ಸೈಡ್ ಸ್ಪೋರ್ಟ್ ವರದಿ ಪ್ರಕಾರ, ವಿರಾಟ್ ಕೊಹ್ಲಿಯ ಕಳಪೆ ಫಾರ್ಮ್ ನೋಡಿ, ಬಿಸಿಸಿಐ ಕೂಡ ಅವರ ಬಗ್ಗೆ ಚಿಂತಿಸಲಾರಂಭಿಸಿದೆ. ವರದಿಯ ಪ್ರಕಾರ, ಬಿಸಿಸಿಐ ಅಧಿಕಾರಿಯೊಬ್ಬರು ಮಾತನಾಡಿ, ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್‌ಗೆ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ ಆದರೆ ಈಗ ಅವರ ಫಾರ್ಮ್ ತುಂಬಾ ಕಳವಳಕಾರಿಯಾಗಿದೆ. ವಿರಾಟ್ ಫಾರ್ಮ್ ಬಿಸಿಸಿಐ ಮತ್ತು ಆಯ್ಕೆಗಾರರನ್ನು ಕಾಡುತ್ತಿದೆ. ಹೀಗಾಗಿ ವಿರಾಟ್ ಕೊಹ್ಲಿ ಫಾರ್ಮ್ ಅನ್ನು ಆಯ್ಕೆಗಾರರು ವೀಕ್ಷಿಸುತ್ತಿದ್ದಾರೆ. ಆದರೆ ನಾವು ಆಯ್ಕೆಯ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಅಲ್ಲದೆ ವಿರಾಟ್ ಜೊತೆಗೆ ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ಇತರ ಆಟಗಾರರ ಆಯ್ಕೆಯ ಬಗ್ಗೆ ಆಯ್ಕೆಗಾರರು ನಿರ್ಧರಿಸುತ್ತಾರೆ ಎಂದು ತಿಳಿಸಿದ್ದಾರೆ.

ವಿರಾಟ್ ಕೊಹ್ಲಿಯನ್ನು ಕೈಬಿಡಬಹುದೇ?
ಪ್ರತಿ ದೊಡ್ಡ ಕ್ರಿಕೆಟಿಗನ ಜೀವನದಲ್ಲಿ ಕೆಟ್ಟ ಸಮಯ ಬರುತ್ತದೆ. ಆಗ ಆ ಆಟಗಾರನು ಸ್ವಲ್ಪ ಸಮಯ ತಂಡದಿಂದ ಹೊರಗುಳಿಯಬೇಕಾಗುತ್ತದೆ. ಕಳಪೆ ಫಾರ್ಮ್‌ನಲ್ಲಿರುವ ವಿರಾಟ್‌ಗೂ ಅದೇ ಶಿಕ್ಷೆ ತಪ್ಪಿದ್ದಲ್ಲ. ದೊಡ್ಡ ವಿಷಯವೆಂದರೆ ಟೀಮ್ ಇಂಡಿಯಾ ಕೂಡ ಕೊಹ್ಲಿ ಬದಲಿಗಿನ ಆಯ್ಕೆಗಳನ್ನು ಹೊಂದಿದೆ. ಅದರಲ್ಲೂ ಟಿ20 ಕ್ರಿಕೆಟ್​ನಲ್ಲಿ ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್​ರಂತಹ ಆಟಗಾರರ ಆಗಮನದಿಂದ ಭಾರತ ತಂಡಕ್ಕೆ ಸಾಕಷ್ಟು ಲಾಭವಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ ನಡೆಯಲಿದೆ
ಐಪಿಎಲ್ ಬಳಿಕ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಬೇಕಿದೆ. ಈ ಸರಣಿಯಲ್ಲಿ ಭಾರತದ ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಬಹುದು ಎಂದು ಊಹಿಸಲಾಗಿದೆ. ಅಂದಹಾಗೆ, ವಿರಾಟ್ ಕೊಹ್ಲಿ ಮಾತ್ರವಲ್ಲ, ರೋಹಿತ್ ಶರ್ಮಾ ಕೂಡ ಉತ್ತಮ ಫಾರ್ಮ್‌ನಲ್ಲಿಲ್ಲ. ರೋಹಿತ್ ನಾಯಕತ್ವದ ಮುಂಬೈ ಇಂಡಿಯನ್ಸ್ ಕೂಡ ತಾನು ಆಡಿರುವ ಮೊದಲ 8 ಪಂದ್ಯಗಳಲ್ಲೂ ಸೋತಿದೆ. ಹೀಗಾಗಿ ಐಪಿಎಲ್ ನಂತರ ಭಾರತ ಟಿ20 ತಂಡದಲ್ಲಿ ಕೆಲವು ಹೊಸ ಮುಖಗಳು ಬರುವುದನ್ನು ನಾವು ಕಾಣಬಹುದಾಗಿದೆ. ಅಲ್ಲದೆ ಇದೇ ವರ್ಷ T20 ವಿಶ್ವಕಪ್ 2022 ಆಸ್ಟ್ರೇಲಿಯಾದಲ್ಲಿ ನಡೆಯಲಿದೆ, ಆದ್ದರಿಂದ ಆಟಗಾರರು ತಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡಬೇಕಾಗುತ್ತದೆ.

TV9 Kannada


Leave a Reply

Your email address will not be published. Required fields are marked *