Virat Kohli: ಟಾಸ್ ಗೆಲ್ಲಲು ಟಿಪ್ಸ್ ನೀಡ್ತೀರಾ? ಕೊಹ್ಲಿಯ ಕಾಲೆಳೆದ ವಾಸಿಂ ಜಾಫರ್ | Any tips for toss? Wasim Jaffer’s hilarious Kohli Williamson meme


Virat Kohli: ಟಾಸ್ ಗೆಲ್ಲಲು ಟಿಪ್ಸ್ ನೀಡ್ತೀರಾ? ಕೊಹ್ಲಿಯ ಕಾಲೆಳೆದ ವಾಸಿಂ ಜಾಫರ್

Kohli-Williamson

ಭಾನುವಾರ (ನವೆಂಬರ್ 14) ದುಬೈನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ 2021ರ ಫೈನಲ್ ಪಂದ್ಯಕ್ಕಾಗಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ಸಜ್ಜಾಗಿ ನಿಂತಿದೆ. ಉಭಯ ತಂಡಗಳು ಇದುವರೆಗೆ ಟಿ20 ವಿಶ್ವಕಪ್ ಗೆದ್ದಿಲ್ಲ. ಹೀಗಾಗಿ ಯಾರೇ ಗೆದ್ದರೂ ಟಿ20 ವಿಶ್ವಕಪ್​ನಲ್ಲಿ ಹೊಸ ಚಾಂಪಿಯನ್ ಹೊರಹೊಮ್ಮಲಿದೆ. ಆದರೆ ಪಂದ್ಯ ದುಬೈನಲ್ಲಿ ನಡೆಯುತ್ತಿರುವುದರಿಂದ ಟಾಸ್ ಕೂಡ ನಿರ್ಣಾಯಕ. ಇದನ್ನೇ ಪ್ರಸ್ತಾಪಿಸಿ ಇದೀಗ ಟೀಮ್ ಇಂಡಿಯಾ ಮಾಜಿ ಆಟಗಾರ ವಾಸಿಂ ಜಾಫರ್ ಭಾರತ ತಂಡದ ಮಾಜಿ ಟಿ20 ನಾಯಕ ವಿರಾಟ್ ಕೊಹ್ಲಿ ಅವರ ಕಾಲೆಳೆದಿದ್ದಾರೆ.

ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಜೊತೆ ಕೂತಿರುವ ವಿರಾಟ್ ಕೊಹ್ಲಿಯ ಫೋಟೋ ಹಂಚಿಕೊಂಡಿರುವ ಜಾಫರ್, ಅದರಲ್ಲಿ ಕೊಹ್ಲಿ ವಿಲಿಯಮ್ಸನ್​ಗೆ ಬೆಸ್ಟ್ ಆಫ್ ಲಕ್ ಹೇಳುತ್ತಿರುವುದನ್ನು ಬರೆದುಕೊಂಡಿದ್ದಾರೆ. ಇದೇ ಸಂಭಾಷಣೆಯ ಫೋಟೋ ಮೀಮ್ಸ್​ನಲ್ಲಿ ಕೇನ್ ವಿಲಿಯಮ್ಸನ್​​ ಕೊಹ್ಲಿ ಬಳಿ ಟಾಸ್ ಗೆಲ್ಲಲು ಏನಾದರೂ ಸಲಹೆ ನೀಡುತ್ತೀರಾ ಎಂದು ಕೇಳುತ್ತಿರುವುದನ್ನು ಚಿತ್ರಿಸಲಾಗಿದೆ. ಇತ್ತ ವಾಸಿಂ ಜಾಫರ್ ಹಂಚಿಕೊಂಡಿರುವ ಈ ಮೀಮ್ಸ್ ಇದೀಗ ಭಾರೀ ವೈರಲ್ ಆಗಿದೆ.

ಹೀಗೆ ವೈರಲ್ ಆಗಲು ಮುಖ್ಯ ಕಾರಣ, ಟಾಸ್ ವಿಷಯದಲ್ಲಿ ವಿರಾಟ್ ಕೊಹ್ಲಿ ನತದೃಷ್ಟ ನಾಯಕ ಎಂದು ಬಿಂಬಿತರಾಗಿರುವುದು. ಈ ಬಾರಿಯ ವಿಶ್ವಕಪ್​ನಲ್ಲಿ ಭಾರತ ಮೊದಲ ಎರಡು ಪಂದ್ಯಗಳಲ್ಲೂ ಟಾಸ್ ಸೋತಿತ್ತು. ಆ ಪಂದ್ಯಗಳು ನಡೆದಿರುವುದು ಕೂಡ ದುಬೈನಲ್ಲೇ ಎಂಬುದು ವಿಶೇಷ.

ಇನ್ನು ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಅತೀ ಹೆಚ್ಚು ಬಾರಿ ಟಾಸ್ ಸೋತಿದೆ ಎಂಬುದಕ್ಕೆ ಅಂಕಿ ಅಂಶಗಳೇ ಸಾಕ್ಷಿ. ಏಕೆಂದರೆ ಕೊಹ್ಲಿ ಟೀಮ್ ಇಂಡಿಯಾವನ್ನು 48 ಟಿ20 ಪಂದ್ಯಗಳಲ್ಲಿ ಮುನ್ನಡೆಸಿದ್ದು, ಈ ವೇಳೆ ಟಾಸ್ ಗೆದ್ದಿದ್ದು ಕೇವಲ 21 ಬಾರಿ ಮಾತ್ರ. ಇನ್ನು ಏಕದಿನ ಪಂದ್ಯಗಳ ಅಂಕಿ ಅಂಶ ತೆಗೆದುಕೊಂಡರೂ ಕೊಹ್ಲಿ 95 ಪಂದ್ಯಗಳಲ್ಲಿ 40 ಬಾರಿ ಮಾತ್ರ ಟಾಸ್ ಗೆದ್ದಿದ್ದಾರೆ. ಹಾಗೆಯೇ 63 ಟೆಸ್ಟ್ ಪಂದ್ಯಗಳಲ್ಲಿ ಕೊಹ್ಲಿ ಟಾಸ್ ಗೆದ್ದಿದ್ದು ಕೇವಲ 27 ಬಾರಿ ಮಾತ್ರ. ಇದನ್ನೆ ಮೀಮ್ಸ್​ನಲ್ಲಿ ಕೇನ್ ವಿಲಿಯಮ್ಸನ್​ ಮೂಲಕ ಪರೋಕ್ಷವಾಗಿ ಪ್ರಸ್ತಾಪಿಸಿ ಕೊಹ್ಲಿಯನ್ನು ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ ವಾಸಿಂ ಜಾಫರ್.

ಇದನ್ನೂ ಓದಿ: Explained: ನ್ಯೂಜಿಲೆಂಡ್-ಆಸ್ಟ್ರೇಲಿಯಾ ಮತ್ತೊಂದು ಭಾರತ-ಪಾಕಿಸ್ತಾನ್…ಆದರೆ

ಇದನ್ನೂ ಓದಿ: Team India: ಟೀಮ್ ಇಂಡಿಯಾದ ಈ ಜೋಡಿ ವಿಶ್ವಕಪ್ ಗೆದ್ದು ಕೊಡಲಿದೆ ಎಂದ ಮಾಜಿ ಕ್ರಿಕೆಟಿಗ

ಇದನ್ನೂ ಓದಿ: Team India: ಟೀಮ್ ಇಂಡಿಯಾದ ಮುಂದಿನ ಸರಣಿಗಳ ವೇಳಾಪಟ್ಟಿ ಹೀಗಿದೆ

(Any tips for toss? Wasim Jaffer’s hilarious Kohli-Williamson meme)

 

TV9 Kannada


Leave a Reply

Your email address will not be published. Required fields are marked *